ಬಹಿರಂಗ
ನಿಜವಾದ ಧರ್ಮ ಸಮಾಜಕ್ಕೆ ಆಧಾರವಾಗಿರುತ್ತೆ : ಎಲ್ಲರೂ ಓದಲೇ ಬೇಕಾದ ಡಾ.ಬಿ.ಆರ್. ಅಂಬೇಡ್ಕರ್ ಬರಹ
ವಿಧಿನಿಷೇಧಗಳ ಧರ್ಮವನ್ನು ನಾನು ಖಂಡಿಸುತ್ತಿದ್ದೇನೆ ಅಂದ ಕೂಡಲೇ ಧರ್ಮವೇ ಬೇಡವೆಂಬುದು ನನ್ನ ಅಭಿಪ್ರಾಯವಲ್ಲ. ತದ್ವಿರುದ್ದವಾಗಿ ಬರ್ಕ್ ಹೇಳಿದ ಮಾತಿಗೆ ನಾನು ದನಿಗೂಡಿಸುತ್ತೇನೆ, “ನಿಜವಾದ ಧರ್ಮವು ಸಮಾಜಕ್ಕೆ ಆಧಾರವಾಗಿರುತ್ತದೆ, ನಿಜವಾದ ನಾಗರಿಕ ಸರಕಾರಕ್ಕೂ ಅದೇ ಅಡಿಗಲ್ಲು” . ಆದುದರಿಂದ ಈ ವಿಧಿನಿಷೇಧಗಳನ್ನು ರದ್ದುಪಡಿಸಿದಾಗ ಅವುಗಳ ಜಾಗದಲ್ಲಿ ತತ್ತಗಳ ಧರ್ಮ ನೆಲಸಬೇಕೆಂದು ನಾನು ಬಯಸುತ್ತೇನೆ. ಧರ್ಮ ಅಗತ್ಯವೆಂದು ನನಗೆ ಮನವರಿಕೆಯಾಗಿದೆ. ಈ ಧರ್ಮದಲ್ಲಿ ಸುಧಾರಣೆಗಳಾಗಬೇಕು. ಅವು ಯಾವುವೆಂಬುದರ ರೂಪುರೇಷೆಗಳನ್ನು ನಿಮಗೆ ಒದಗಿಸಬೇಕಾಗಿದೆ. ಸುಧಾರಿತ ಧರ್ಮದಲ್ಲಿ ಈ ಮುಂದೆ ಹೇಳುವ ಅಂಶಗಳು ಪ್ರಧಾನವಾಗಿರಬೇಕು.
ಅಂಶಗಳು
- ಸಮಸ್ತ ಹಿಂದೂಗಳಿಗೆ ಅನ್ವಯಿಸುವ ಹಾಗೂ ಸಮಸ್ತ ಹಿಂದೂಗಳಿಗೆ ಸಮ್ಮತವಾದ ಒಂದೇ ಒಂದು ಪ್ರಮಾಣಭೂತವಾದ ಧರ್ಮಗ್ರಂಥವಿರಬೇಕು. ಅಂದರೆ ಧರ್ಮಗ್ರಂಥಗಳೆಂದು ಈವರೆಗೆ ಭಾವಿಸಲಾದ ವೇದಗಳು, ಶಾಸ್ತ್ರಗಳು, ಪುರಾಣಗಳು ಧರ್ಮಗ್ರಂಥಗಳಲ್ಲವೆಂದು ಕಾನೂನಿಂದ ರದ್ದುಪಡಿಸಬೇಕು. ಮತ್ತು ಈ ಗ್ರಂಥಗಳ ಆಧಾರದಿಂದ ಯಾವುದೇ ಆಚಾರ, ತತ್ವ, ವ್ರತ ಮೊದಲಾದವುಗಳನ್ನು ಯಾರಾದರೂ ಬೋಧಿಸಿದರೆ ಅದನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಬೇಕು.
- ಹಿಂದೂಗಳಲ್ಲಿರುವ ಪೌರೋಹಿತ್ಯ ಅಥವಾ ಧರ್ಮಾಧಿಪತ್ಯವನ್ನು ರದ್ದುಪಡಿಸುವುದು ಲೇಸು . ಆದರೆ ಇದು ಅಸಾಧ್ಯವೆಂದು ತೋರುವುದರಿಂದ ಕನಿಷ್ಟಪಕ್ಷ ಅದು ಅನುವಂಶಿಕವಾಗಿರುವುದನ್ನಾದರೂ ನಿಷೇಧಿಸಬೇಕು. ಪುರೋಹಿತ ಅಥವಾ ಧರ್ಮಾಧಿಪತಿಯಾಗಲು ಪ್ರತಿಯೊಬ್ಬ ಹಿಂದೂವಿಗೂ ಸಮಾನವಾದ ಹಕ್ಕು ಇರತಕ್ಕದ್ದು. ಸರಕಾರವು ಗೊತ್ತುಪಡಿಸುವ ಒಂದು ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರಕಾರದಿಂದ ಸನ್ನದು ಪಡೆಯದೇ ಇದ್ದವರು ನಡೆಸುವ ಧಾರ್ಮಿಕ ಕಾರ್ಯ ಶಾಸನಬದ್ದವಲ್ಲವೆಂದು ಸಾರಿ ಸರಕಾರವು ಅಂಥ ಜನರನ್ನು ದಂಡಿಸತಕ್ಕದ್ದು.
- ಧರ್ಮಾಧಿಪತಿಯು ಸರಕಾರಿ ಸೇವಕನಾಗಬೇಕು ಮತ್ತು ಇತರ ಪ್ರಜೆಗಳಂತೆ ದೇಶದ ಕಾನೂನುಗಳಿಗೆ ಬದ್ಧನಾಗಿರಬೇಕು. ನೀತಿ, ನಂಬಿಕೆಗಳು, ಪೂಜೆ ಮೊದಲಾದ ವಿಷಯಗಳಲ್ಲಿ ಸರಕಾರ ಅವನನ್ನು ವಿಚಾರಿಸಿ ಶಿಸ್ತಿನ ಕ್ರಮ ಕೈಗೊಳ್ಳಲು ಸಂಪೂರ್ಣ ಅವಕಾಶವಿರತಕ್ಕದ್ದು.
- ಐ.ಸಿ.ಎಸ್ ಅಧಿಕಾರಿಗಳ ಸಂಖ್ಯೆಯನ್ನು ನಿಯಂತ್ರಿಸುವ ರೀತಿಯಲ್ಲೇ ಪುರೋಹಿತರ ಸಂಖ್ಯೆಯನ್ನು ಅವಶ್ಯಕತೆಗೆ ಅನುಗುಣವಾಗಿ ಒಂದು ಮಿತಿಯೊಳಗೆ ಇಟ್ಟುಕೊಳ್ಳಬೇಕು. ಇದು ತುಂಬ ತೀವ್ರವಾದ ಬದಲಾವಣೆಯೆನ್ನಿಸಬಹುದು. ಆದರೆ ನನ್ನ ದೃಷ್ಟಿಯಿಂದ ಇದರಲ್ಲಿ ಕ್ರಾಂತಿಕಾರಕವಾದುದೇನೂ ಇಲ್ಲ. ದೇಶದಲ್ಲಿ ಪ್ರತಿಯೊಂದು ವೃತ್ತಿಗೂ ಕ್ರಮಬದ್ದತೆಯಿದೆ , ಎಂಜಿನಿಯರುಗಳು ನಿರ್ದಿಷ್ಟ ಪ್ರಾವಿಣ್ಯವನ್ನು ತೋರಲೇಬೇಕು, ಡಾಕ್ಟರು ಪ್ರಾವೀಣ್ಯವನ್ನು ತೋರಲೇಬೇಕು, ವಕೀಲರು ಪ್ರಾವಿಣ್ಯವನ್ನು ತೋರಲೇಬೇಕು.
ಹೀಗೆ ಖಚಿತಪಡಿಸಿಕೊಂಡ ಮೇಲೆಯೇ ಇವರೆಲ್ಲರಿಗೆ ತಮ್ಮತಮ್ಮ ವೃತ್ತಿಗಳನ್ನು ಆರಂಭಿಸಲು ಅನುಮತಿ ದೊರೆಯುತ್ತದೆ. ತಮ್ಮ ವೃತ್ತಿಯನ್ನು ನಡೆಸಿಕೊಂಡು ಹೋಗುವ ಕಾಲದಲ್ಲೆಲ್ಲ ಈ ಜನರು ದೇಶದ ಕಾನೂನುಗಳನ್ನು ಪಾಲಿಸತಕ್ಕದ್ದು ಮತ್ತು ತಮ್ಮತಮ್ಮ ವೃತ್ತಿಗಳು ವಿಧಿಸುವ ನೀತಿನಿಯಮಾವಳಿಯನ್ನೂ ಪಾಲಿಸತಕ್ಕದ್ದು. ನಿರ್ದಿಷ್ಟ ಪ್ರಾವೀಣ್ಯವನ್ನು ಪಡೆಯದೆಲೆ ಕೈಗೊಳ್ಳಬಹುದಾದ ಏಕೈಕ ವೃತ್ತಿಯೆಂದರೆ ಧರ್ಮಗುರುವಿನ ಅಥವಾ ಪುರೋಹಿತನ ವೃತ್ತಿ , ಈ ಕಸುಬಿಗೆ ನಿಗದಿಪಡಿಸಿದ ಒಂದು ನಿಯಮಾವಳಿಯಿಲ್ಲ. ಈ ವೃತ್ತಿಯನ್ನು ನಡೆಸುವ ವ್ಯಕ್ತಿ ಮಾನಸಿಕವಾಗಿ ಪೆದ್ದನಾಗಿರಬಹುದು, ದೈಹಿಕವಾಗಿ ಗುಹ್ಯರೋಗಗಳಿಂದ ಬಳಲುತ್ತಿರಬಹುದು, ನೈತಿಕವಾಗಿ ಪಾಪಿಯೂ ಆಗಿರಬಹುದು.
ಹೀಗಿದ್ದರೂ ಧಾರ್ಮಿಕ ಉತ್ಸವಾದಿಗಳಲ್ಲಿ ಅಧಿಕಾರಿಯಾಗಿ ಭಾಗವಹಿಸಲು , ಹಿಂದೂ ದೇವಸ್ಥಾನಗಳ ಪವಿತ್ರತಮ ಗರ್ಭಗುಡಿಯನ್ನು ಪ್ರವೇಶಿಸಲು , ದೇವರನ್ನು ಮುಟ್ಟಿ ಪೂಜಿಸಲು ಅವನು ಯೋಗ್ಯನೆಂದು ಪರಿಗಣಿಸಲ್ಪಡುತ್ತಾನೆ. ಪುರೋಹಿತ ವರ್ಗದಲ್ಲಿ ಹುಟ್ಟಿದರೆ ಸಾಕು ಅವನಿಗೆ ಪೌರೋಹಿತ್ಯದ ಯೋಗ್ಯತೆ ತಾನಾಗಿ ಬಂದುಬಿಟ್ಟಿರುತ್ತದೆಯೆಂಬ ರೂಢಿ ಹಿಂದೂಗಳಲ್ಲಿ ಇದೆ. ಹಿಂದೂಗಳಲ್ಲಿರುವ ಈ ಪುರೋಹಿತ ವರ್ಗ ಕಾನೂನಿಗಾಗಲೀ ನೀತಿನಿಯಮಕ್ಕಾಗಲೀ ಒಳಪಟ್ಟಿಲ್ಲ. ಅದಕ್ಕೆ ಹಕ್ಕುಗಳುಂಟು ಕರ್ತವ್ಯಗಳಿಲ್ಲ. ನಾನು ಈ ಮೊದಲು ಸೂಚಿಸಿದಂತೆ ಈ ವರ್ಗವನ್ನು ಕಾನೂನುಗಳಿಂದ ಅಗತ್ಯವಾಗಿ ನಿಗ್ರಹಿಸತಕ್ಕದ್ದು. ಹೀಗೆ ಮಾಡಿದರೆ ಜನರನ್ನು ತಪ್ಪುದಾರಿಗೆಳೆಯುವ ಅವರ ಕುಚೇಷ್ಟೆಗೆ ತಡೆಯುಂಟಾಗುವುದು. ಎಲ್ಲರಿಗೂ ಧರ್ಮಾಧಿಪತ್ಯದ ಹಕ್ಕು ಸಮಾನವಾದಲ್ಲಿ ಅದು ಪ್ರಜಾಪ್ರಭುತ್ವಕ್ಕೆ ಅನುಗುಣವಾಗುವುದು , ಇದರಿಂದ ನಿಶ್ಚಿತವಾಗಿಯೂ ಬ್ರಾಹ್ಮಣತ್ವ ನಾಶವಾಗುವುದು ಮತ್ತು ಜಾತಿನಾಶಕ್ಕೂ ಹಾದಿಯಾಗುವುದು.
ಯಾಕೆಂದರೆ ಜಾತಿಯೆಂಬುದು ಬ್ರಾಹ್ಮಣತ್ವದ ಒಂದು ವಿಷವಾಗಿ ಹಿಂದೂತ್ವವನ್ನು ಆವರಿಸಿದೆ. ಬ್ರಾಹ್ಮಣತ್ವವನ್ನು ನಾಶ ಮಾಡಿದರೆ ಹಿಂದೂತ್ವ ಬದುಕಿ ಉಳಿದೀತು. ಈ ಸುಧಾರಣೆಗೆ ಯಾರಿಂದಲೂ ವಿರೋಧ ಬರಬೇಕಾಗಿಲ್ಲ . ಆರ್ಯಸಮಾಜಗಳು ಕೂಡ ಇದನ್ನು ಸ್ವಾಗತಿಸಬೇಕು. ಏಕೆಂದರೆ ಅವರು ಪ್ರತಿಪಾದಿಸುವ ಗುಣಕರ್ಮ ತತ್ವವೇ ಇಲ್ಲಿ ಅನ್ವಯವಾಗುತ್ತದೆ. ನೀವು ಅದನ್ನು ಮಾಡಿ ಅಥವಾ ಬಿಡಿ, ಆದರೆ ಧರ್ಮಕ್ಕೆ ಒಂದು ತಾತ್ವಿಕ ತಳಹದಿಯನ್ನು ಒದಗಿಸತಕ್ಕದ್ದು. ಸಮಾನತೆ , ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ಸಮ್ಮತವಾದ ಅಂದರೆ ಪ್ರಜಾಪ್ರಭುತ್ವಕ್ಕನುಗುಣವಾದ ಅಡಿಪಾಯ ಅವಶ್ಯವಾಗಿದೆ.
ಈ ವಿಷಯದಲ್ಲಿ ನಾನು ಅಧಿಕಾರವಾಣಿಯಿಂದ ಮಾತಾಡಲಾರೆ. ಆದರೆ ಇಂತಹ ತಳಹದಿಗಾಗಿ ನೀವು ವಿದೇಶಿ ಮೂಲಗಳಿಂದ ಕೈಗಡ ತರಬೇಕಾಗಿಲ್ಲ, ಉಪನಿಷತ್ತುಗಳಿಂದ ಇಂತಹ ತತ್ವಗಳನ್ನು ನೀವು ಪಡೆಯಬಹುದು, ಉಪನಿಷತ್ತುಗಳಲ್ಲಿ ಅನುಪಯುಕ್ತವಾದ ಅಂಶಗಳನ್ನು ಬಿಟ್ಟು ಬೆಲೆಯುಳ್ಳದ್ದನ್ನು ಎತ್ತಿಕೊಂಡು ಹೊಸದೊಂದು ತಾತ್ವಿಕ ಅಡಿಪಾಯವನ್ನು ನೀವು ನಿರ್ಮಿಸಬಲ್ಲಿರೋ ಏನೋ ನಾನು ಹೇಳಲಾರೆ ; ಇಷ್ಟು ಮಾತ್ರ ನಿಜ, ಜೀವನದ ಮೂಲಭೂತ ಗ್ರಹಿಕೆಯಲ್ಲಿ ಪರಿವರ್ತನೆಯಾಗಬೇಕು. ಜೀವನ ಮೌಲ್ಯಗಳು ಸಂಪೂರ್ಣವಾಗಿ ಬದಲಾಗಬೇಕು. ಜೀವನ ಪೂರ್ತಿಯಾಗಿ ಹೊಸದಾಗಬೇಕು. ಮಾನವನ ಮತ್ತು ವಿಷಯಗಳ ಬಗೆಗಿನ ದೃಷ್ಟಿಕೋನವೇ ಅಮೂಲಾಗ್ರವಾಗಿ ಬದಲಾಗಬೇಕು.
ಆದರೆ ಹೊಸ ಜೀವ ಮೃತದೇಹವನ್ನು ಪ್ರವೇಶಿಸದು. ಹೊಸ ಜೀವಕ್ಕೆ ಹೊಸ ದೇಹವೇ ಬೇಕು. ಹೊಸ ದೇಹ ತಾಳುವುದಕ್ಕೆ ಮುನ್ನ ಹಳೆಯ ದೇಹ ಬಿಟ್ಟು ಹೋಗಲೇಬೇಕು. ಹೊಸ ಜೀವ ಅಸ್ತಿತ್ವಕ್ಕೆ ಬರುವ ಮುನ್ನ ಹಳೆಯ ದೇಹ ನಾಶವಾಗಿಹೋಗಬೇಕು. ಶಾಸ್ತ್ರಗಳ ಅಧಿಕಾರವನ್ನೂ, ಶಾಸ್ತ್ರಾಧಾರದ ಧರ್ಮವನ್ನೂ ನಾಶಗೊಳಿಸಬೇಕೆಂದು ನಾನು ಹೇಳುವಾಗ ಅದಕ್ಕೆ ಈ ಮೇಲೆ ವಿವರಿಸಿದ ಅರ್ಥವೇ ಇದೆ.
-ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬರಹಗಳು – ಭಾಷಣಗಳು : ಸಂಪುಟ – 1
ಇದನ್ನೂ ಓದಿ |
https://suddidina.com/column/bahiranga/dr-b-r-ambedkar-writings-13/
ಸುದ್ದಿದಿನ.ಕಾಂ|ವಾಟ್ಸಾಪ್|9986715401