ಅಂತರಂಗ

ಕಪ್ಪು-ಬಿಳಿ ಅಮೆರಿಕನ್ನರ ನಡುವಿನ ಅಸಮಾನತೆ

Published

on

  • ನಾಗರಾಜ ನಂಜುಂಡಯ್ಯ

1983 ರಿಂದ 2016 ರ ನಡುವೆ, ಕಪ್ಪು ಅಮೆರಿಕನ್ನರ ಕುಟುಂಬದ ಸರಾಸರಿ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ. ಆದರೆ, ಇದೇ ಸಮಯದಲ್ಲಿ ಬಿಳಿ ಅಮೆರಿಕನ್ ಕುಟುಂಬದ ಸರಾಸರಿ ಸಂಪತ್ತು, ಶೇ.33 ರಷ್ಟು ಹೆಚ್ಚಾಗಿದೆ. 2017ರಲ್ಲಿ ಪ್ಯೂ (ಪಿ.ಇ.ಡಬ್ಲ್ಯೂ) ಅಧ್ಯಯನ ಸರಾಸರಿ ಬಿಳಿಯ ಕುಟುಂಬಗಳ ಆದಾಯ ಕರಿಯ ಕುಟುಂಬಗಳ ಆದಾಯದ 10 ಪಟ್ಟು ಎಂದಿದೆ. ಈ ಹಿನ್ನೆಲೆಯಲ್ಲಿ ಗುಲಾಮಗಿರಿ ಪ್ರಾರಂಭವಾಗಿ 400 ವರ್ಷಗಳ ಆಚರಣೆಯ ಸುತ್ತ ಈ ಕುರಿತು ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ. 2014ರಲ್ಲೇ 250 ವರ್ಷಗಳ ಗುಲಾಮಗಿರಿಗೆ ಕರಿಯರಿಗೆ ಪರಿಹಾರ ಒದಗಿಸಬೇಕು ಎಂದು ವಾದಿಸುವ ತಾ ನೆಹಿಸಿ ಕೋಟ್ಸ್ ಎನ್ನುವವರ ವರದಿ ಪ್ರಕಟವಾಯಿತು. ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಕೊರಿ ಬುಕರ್ ಕರಿಯರಿಗೆ ಪರಿಹಾರ ಒದಗಿಸುವ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿದ್ದಾರೆ. ಇತರ ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಎಲಿಜಬೆತ್ ವಾರೆನ್ ಮತ್ತು ಬರ್ನಿ ಸ್ಯಾಂಡರ್ಸ್ ಅದನ್ನು ಬೆಂಬಲಿಸಿ, ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.

ನಾನೂರು ವರ್ಷಗಳ ಹಿಂದೆ, ಅಂದರೆ, 1619ರ ಆಗಸ್ಟ್ ತಿಂಗಳಲ್ಲಿ 20 ಸೆರೆಯಾಳುಗಳನ್ನು ಹೊತ್ತ ಹಡಗು ಆಫ್ರ್ರಿಕಾದಿಂದ ವರ್ಜೀನಿಯಾದ ಹಡಗುದಾಣದಲ್ಲಿ ಬಂದು ನಿಂತಿತು. ಮುಂದೆ ಇದೇ ಅಮೆರಿಕಾದ ಗುಲಾಮಗಿರಿಯ ಉಗಮಕ್ಕೆ ಕಾರಣವಾಯಿತು. ಆದರೆ, 1620 ರಲ್ಲಿ “ಮೇ” ಫ್ಲವರ್” ಹಡಗಿನಲ್ಲಿ, ಬಂದಿಳಿದ 102 ಪ್ರಯಾಣಿಕರ ಆಗಮನವನ್ನೇ ಈಗಲೂ ಯುಎಸ್ ನ ಗುಲಾಮಗಿರಿ ಪದ್ದತಿಯ ಆರಂಭವೆಂದೇ ಬಹಳಷ್ಟು ಅಮೆರಿಕನ್ನರಿಗೆ ಪರಿಚಯಿಸಲಾಗಿದೆ. ಆದರೆ, ಇದಕ್ಕೆ ಒಂದು ವರ್ಷದ ಹಿಂದೆಯೇ 20 ಆಪ್ರಿಕನ್ನರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಅಪಹರಿಸಿ ತಂದು, ಅಂದು ಅಮೆರಿಕಾವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷರಿಗೆ ಒಪ್ಪಿಸಿದ್ದೇ ಗುಲಾಮ ಪದ್ದತಿಗೆ ಮೂಲ ಕಾರಣವಾಯಿತು ಎಂಬುದು ವಾಸ್ತವತೆ.

ಅಮೆರಿಕಾದ ಬಂಡವಾಳಶಾಹಿ ಆರ್ಥಿಕತೆಯ ಸೃಷ್ಟಿಗೆ ಗುಲಾಮರ ಶ್ರಮವೇ ಬೆನ್ನೆಲುಬು ಎಂದರೆ ಅತಿಶಯೋಕ್ತಿಯಾಗಲಾರದು. ಇಂದು ಅಮೆರಿಕಾವು ವಿಶ್ವದ ಪ್ರಮುಖ ಆರ್ಥಿಕತೆಯಾಗಿ ಬೆಳೆಯಲು ಮತ್ತು ಉಳಿಯಲು ಅವಕಾಶ ಮಾಡಿಕೊಟ್ಟಿದ್ದೆ ಈ ಗುಲಾಮರ ಶ್ರಮ. ಆದರೆ, ಈ ಆಫ್ರಿಕನ್ ಗುಲಾಮ ಕಾರ್ಮಿಕರಿಗೆ ಅವರ ಪಾಲಿನ ಸಂಪತ್ತನ್ನು ಮಾತ್ರ ಸೂಕ್ತವಾಗಿ ಇಲ್ಲಿಯವರೆವಿಗೂ ಪಾವತಿಸಲೇ ಇಲ್ಲವೆಂಬುದು ಕೂಡ ಅಷ್ಟೆ ಸತ್ಯ. ಆದಾಗ್ಯೂ, ಅಮೆರಿಕದ ಆರ್ಥಿಕತೆ, ಈಗಲೂ ಹೆಚ್ಚಾಗಿ ಇವರ ಕೆಲಸದ ಮೇಲೆಯೇ ಹೆಚ್ಚಾಗಿ ಅವಲಂಬಿತವಾಗಿದೆ ಎಂಬುದು ವಾಸ್ತವ.

ಪ್ರಸ್ತುತ ಸಂಪತ್ತಿನ ವಿಭಜನೆಯಲ್ಲಿ ಅಪಾರ ಜನಾಂಗೀಯ ಅಸಮಾನತೆಯನ್ನು ಕಾಣಬಹುದು. ಕಳೆದ ನಾಲ್ಕು ವರ್ಷಗಳಿಂದೀಚೆಗೆ ಈ ಸಂಪತ್ತಿನ ಜನಾಂಗೀಯ ವ್ಯತ್ಯಾಸ ಮತ್ತಷ್ಟು ಹೆಚ್ಚಾಗಿರುವುದು ಮತ್ತು ಅದರ ಮುಂದುವರಿದ ಪ್ರವೃತ್ತಿಗಳು ಅಸಮಾನತೆಯ ಅಂತರದ ವಿಸ್ತರಣೆಯನ್ನು ಇನ್ನೂ ಪ್ರತಿಬಿಂಬಿಸುತ್ತಲೇ ಇವೆ.

ಶೇ.37 ಕರಿಯ ಕುಟುಂಬಗಳ ಸಂಪತ್ತು ನಕಾರಾತ್ಮಕ !

ಜನವರಿ 15, 2019 ರಂದು ಡಾ. ಮಾರ್ಟಿನ್ ಲೂಥರ್ ಕಿಂಗ್( ಜೂನಿಯರ್)ರವರ 90 ನೇ ಜನ್ಮ ದಿನದ ಪ್ರಯುಕ್ತ “ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್” ನಡೆಸಿದ ಒಂದು ಸಮೀಕ್ಷೆಯ ವರದಿಯು ” ಅಮೆರಿಕದ ಸಂಪತ್ತು ಬಿಳಿ ಅಮೆರಿಕನ್ನರ ಕುಟುಂಬಗಳಲ್ಲಿ ಹೇಗೆ ಹೆಚ್ಚು ಸಾಂದ್ರೀಕರಿಸಿದೆ ಮತ್ತು ಕಪ್ಪು ಆಪ್ರಿಕನ್ ಕುಟುಂಬಗಳ ಸಂಪತ್ತಿನ ಪಾಲನ್ನು ಹೇಗೆ ವಂಚಿಸಲಾಗಿದೆ” ಎಂಬ ವಾಸ್ತವ ಚಿತ್ರಣವನ್ನು ಹೊರ ಹಾಕಿದೆ.

ಮಾರ್ಟಿನ್ ಲೂಥರ್ ಕಿಂಗ್ (ಜೂನಿಯರ್) ಕರಿಯರ ಮಾನವೀಯ ಹಕ್ಕುಗಳಿಗಾಗಿ ಜೀವನ ಪಯರ್ಂತ ಹೋರಾಟ ನಡೆಸಿದವರು. ಕೊನೆಗೆ ಇವರು ಕೊಲ್ಲಲ್ಪಟ್ಟರು. ಕರಿಯರ ವಿರುದ್ದ ಕ್ರೌರ್ಯಕ್ಕೆ ಮಾರ್ಟಿನ್ನರ ಕೊಲೆ ಕನ್ನಡಿ ಹಿಡಿದ ಹಾಗೆ.

ವಸಾಹತುಶಾಹಿಯಿಂದ ವಿಮುಕ್ತಿಗೊಂಡು ಯು.ಎಸ್. ಹೊಸದಾಗಿ ಸ್ಥಾಪನೆಯಾದ ನಂತರ, ಸುಮಾರು 250 ವರ್ಷಗಳ ಕಾಲ ಅವ್ಯಾಹತವಾಗಿ ನಡೆದಿದ್ದ ಗುಲಾಮಗಿರಿಯು ಅಧಿಕೃತವಾಗಿ 1865ರಲ್ಲಿ ಕೊನೆಗೊಂಡಿತು. ಆದರೆ ಕರಿಯರ ವಿರುದ್ಧ ಅಸಮಾನತೆಯ ಆಚರಣೆಯ ಕ್ರೌರ್ಯಗಳನ್ನು – ಜಿಮ್ ಕ್ರೌ ಕಾನೂನು, ರೆಡ್ ಲೈನಿಂಗ್ ಹಾಗೂ ವ್ಯಾಪಕ ಬಂಧÀನಗಳು – ಮುಂತಾದ ಅನೇಕ ಸಾರ್ವಜನಿಕ ನೀತಿಗಳ ಮೂಲಕ ಮುಂದುವರಿಸಲಾಯಿತು.

1983 ರಿಂದ 2016 ರ ನಡುವೆ, ಕಪ್ಪು ಅಮೆರಿಕನ್ನರ ಕುಟುಂಬದ ಸರಾಸರಿ ಸಂಪತ್ತು ಅರ್ಧಕ್ಕಿಂತಲೂ ಹೆಚ್ಚು ಇಳಿಕೆಯನ್ನು ಕಂಡಿದೆ. ಆದರೆ, ಇದೇ ಸಮಯದಲ್ಲಿ ಬಿಳಿ ಅಮೆರಿಕನ್ ಕುಟುಂಬದ ಸರಾಸರಿ ಸಂಪತ್ತು, ಶೇ.33 ರಷ್ಟು ಹೆಚ್ಚಾಗಿರುವುದನ್ನು ಈ ವರದಿ ದಾಖಲಿಸಿದೆ. ಇದು ಆಪ್ರಿಕನ್ ಅಮೆರಿಕನ್ ರಿಂದ ಮತ್ತು ಇತರೆ ದೇಶಗಳಿಂದ ವಲಸೆ ಬಂದು ನೆಲೆಸಿರುವ ಬಡ ಕಾರ್ಮಿಕರ ಶ್ರಮದಿಂದ ಯುಎಸ್ ನ ಆರ್ಥಿಕ ಅಭಿವೃದ್ಧಿ ವೃದ್ದಿಯಾಗುತ್ತಿರುವುದನ್ನು ಪ್ರತಿ ಬಿಂಬಿಸುತ್ತದೆ ಎಂದು ವರದಿಯು ಪ್ರಸ್ತಾಪಿಸಿದೆ. ಕಪ್ಪು ಅಮೆರಿಕನ್ನರ ಸಂಪತ್ತು ಕುಸಿಯುತ್ತಿರುವ ಈ ವರ್ಷಗಳಲ್ಲೇ, ಒಂದು ಕೋಟಿ ಡಾಲರುಗಳಿಗಿಂತ ಹೆಚ್ಚು ಸಂಪತ್ತು ಇರುವ ಕುಟುಂಬಗಳ ಸಂಖ್ಯೆ 8.56 ಪಟ್ಟು ಹೆಚ್ಚಳವಾಗಿದೆ. ಇದರ ಪರಿಣಾಮದಿಂದಾಗಿ, ಇನ್ನೊಂದು ತುದಿಯಲ್ಲಿ ಈಗ ಶೇ.37 ರಷ್ಟು ಕಪ್ಪು ಕುಟುಂಬಗಳ ಸರಾಸರಿ ಸಂಪತ್ತು ಶೂನ್ಯ ಅಥವಾ ನಕಾರಾತ್ಮಕವಾಗಿದೆ (ಅಂದರೆ ಅವರ ಆಸ್ತಿಗಿಂತ ಹೆಚ್ಚು ಸಾಲ ಇದೆ) ಎನ್ನಲಾಗಿದೆ. ಶೇ.15 ರಷ್ಟು ಬಿಳಿ ಅಮೆರಿಕನ್ನರ ಕುಟಂಬಗಳು ಮಾತ್ರ ಈ ಸ್ಥಿತಿಯಲ್ಲಿವೆ.

ಸಂಪತ್ತಿನ ಈ ವಿಷಮ ಜನಾಂಗೀಯ ವಿಭಜನೆಯು ಎಲ್ಲಾ ಅಮೆರಿಕನ್ನರ ಮೇಲೆ ಹಾಗೂ ಒಟ್ಟಾರೆ ಯಾಗಿ ಅಮೆರಿಕಾದ ಆರ್ಥಿಕತೆಯ ಮೇಲೆಯೂ ಗಾಡವಾದ ದುಷ್ಪರಿಣಾಮ ಬೀರಿದೆ. ಕಪ್ಪು ಜನಸಂಖ್ಯೆ ಹೆಚ್ಚಾದಂತೆ ಅಮೆರಿಕದ ಕುಟುಂಬಗಳ ಸರಾಸರಿ ಸಂಪತ್ತು ಕೂಡ ಕುಸಿದಿದೆ. 1983ರಲ್ಲಿ 84,111 ಡಾಲರ್ ಇದ್ದ ಸರಾಸರಿ ಸಂಪತ್ತು 2016ರಲ್ಲಿ 81,704 ಡಾಲರಿಗೆ ಕುಸಿದಿದೆ. 1983ರಲ್ಲಿ 6 ಅಮೆರಿಕನ್ ಕುಟುಂಬಗಳಲ್ಲಿ 1 ಕುಟುಂಬ ನಕಾರಾತ್ಮಕ ಸಂಪತ್ತು ಅನುಭವಿಸುತ್ತಿದ್ದು, 2016ರಲ್ಲಿ 5 ಕುಟುಂಬಗಳಲ್ಲಿ 1 ಕುಟುಂಬ ಆ ಸ್ಥಿತಿಯಲ್ಲಿದೆ. ಹಾಗೆಯೇ, ಕರಿಯರ ಸಂಪತ್ತಿನ ಸವೆತದ ಸುತ್ತ ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಗಳು ಕರಿಯರ ಸೋಮಾರಿತನ, ಶಿಕ್ಷಣದಲ್ಲಿ ಹಿಂದುಳಿದಿರುವಿಕೆ ಮತ್ತು ನಿರಾಸಕ್ತಿ, ಕೆಲಸದ ಮತ್ತು ಇತರ ನೈತಿಕತೆಯ ಅಭಾವದ ಸುತ್ತ ಗಿರಕಿ ಹೊಡೆಯುತ್ತವೆ. ಅಂದರೆ ಜಗತ್ತಿನ ಎಲ್ಲೆಡೆಗೆ ಆಗುವಂತೆ ದಮನಿತರ ಶೋಚನೀಯ ಪರಿಸ್ಥಿತಿಗೆ ಅವರೇ ಕಾರಣ ಎನ್ನುವ ಸಾಮಾನ್ಯ ಉಳ್ಳವರ ಕಥನ. ಇದು ಮಿಥ್ಯೆ ಎಂದು ಹಲವು ಅಧ್ಯಯನಗಳು ತೋರಿಸುತ್ತವೆ. ಕಾಲೇಜು ಶಿಕ್ಷಣ ಪಡೆದ ಕರಿಯ ಕುಟುಂಬಗಳು ಹೈಸ್ಕೂಲ್ ಶಿಕ್ಷಣ ಪಡೆದ ಬಿಳಿಯ ಕುಟುಂಬಗಳಿಗಿಂತ ಕಡಿಮೆ ಸರಾಸರಿ ಸಂಪತ್ತು ಹೊಂದಿವೆ. ಏಕ-ಪೋಷಕ ಬಿಳಿ ಕುಟುಂಬಗಳು, ಕರಿಯ ದ್ವಿ-ಪೋಷಕ ಕುಟುಂಬಕ್ಕಿಂತ ಎರಡು ಪಟ್ಟು ಹೆಚ್ಚು ಶ್ರೀಮಂತರಾಗಿದ್ದಾರೆ.

ಒಟ್ಟಾರೆಯಾಗಿ, ಕರಿಯ-ಬಿಳಿಯ ಕುಟುಂಬಗಳ ಸಂಪತ್ತಿನ ಅಂತರ ಕರಿಯರ ವೈಯಕ್ತಿಕ ಗುಣಲಕ್ಷಣಗಳಿಂದಾಗಿ ಅಲ್ಲ. ಗುಲಾಮಗಿರಿ ಪ್ರಾರಂಭವಾಗಿ 400 ವರ್ಷಗಳಲ್ಲಿ ಕರಿಯ ಅಮೆರಿಕನ್ನರಿಗೆ ಸಂಪನ್ಮೂಲಗಳನ್ನು ನಿರಂತರವಾಗಿ ನಿರಾಕರಿಸಿರುವುದು ಕಾರಣ ಎಂದು ಈ ವರದಿಯಲ್ಲಿ ಗುರುತಿಸಿಲಾಗಿದೆ. ಮೊದಲ ಗುಲಾಮರನ್ನು ಆಪ್ರಿಕಾದಿಂದ ಒತ್ತಾಯಪೂರ್ವಕವಾಗಿ ಅಪಹರಿಸಿಕೊಂಡು ಬಂದದ್ದು, ಅವರಿಂದ ಅಮ್ಯೂಲ್ಯವಾದ ಶ್ರಮವನ್ನು ಉಚಿತವಾಗಿ ಮಾಡಿಸಿಕೊಳ್ಳಲೆಂದೆ’ ಎಂದು ಇನ್ಸ್ಟಿಟ್ಯೂಟ್ ಫಾರ್ ಪಾಲಿಸಿ ಸ್ಟಡೀಸ್ ತನ್ನ ವರದಿಯಲ್ಲಿ ಒತ್ತಿ ಹೇಳಿದೆ. ಉದ್ಯೋಗ, ಆದಾಯ, ಮನೆ ಮಾಲಿಕತ್ವ, ಷೇರ್ ಮಾಲಿಕತ್ವ, ಉದ್ಯಮ ಶೀಲತೆ ಮತ್ತು ಇತರೆ ಎಲ್ಲಾ ಆರ್ಥಿಕ ಸೂಚಕಗಳು ಸಂಪತ್ತಿನ ವಿಷಮ ಜನಾಂಗೀಯ ವಿಭಜನೆಯನ್ನು ಸ್ಪಷ್ಟವಾಗಿ ತೋರಿಸುತ್ತವೆ.

ಈ ಜನಾಂಗೀಯ ವಿಭಜನೆಯನ್ನು ನಿಜವಾದ ಅರ್ಥದಲ್ಲಿ ನಿವಾರಿಸಲು, ಐತಿಹಾಸಿಕವಾಗಿ ಬಿಳಿ ಅಮೆರಿಕನ್ ಸಮುದಾಯಗಳು ಸ್ವಾಧೀನ ಪಡಿಸಿಕೊಂಡಿರುವ ಬೃಹತ್ ಸಂಪತ್ತಿನ್ನಷ್ಟೇ ದೊಡ್ಡ ಪ್ರಮಾಣದಲ್ಲಿ ಕರಿಯ ಸಮುದಾಯಗಳಿಗೆ ಪರಿಹಾರ ಒದಗಿಸಬೇಕು ಅಥವಾ ಸಂಪತ್ತಿನ ವರ್ಗಾವಣೆ/ಹೂಡಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರನ್ನೂ ಒಳಗೊಂಡ ಆಮೂಲಾಗ್ರ ಸಂರಚನಾತ್ಮಕ ಬದಲಾವಣೆಯ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕೆ ದೃಢವಾದ ರಾಜಕೀಯ ಇಚ್ಛಾಶÀಕ್ತಿ ಇರಬೇಕಾಗುತ್ತದೆ. ಆಗ ಮಾತ್ರ ಆಫ್ರಿಕನ್ ಅಮೆರಿಕನ್ ರಿಗೆ ಅಂತಿಮವಾಗಿ ನ್ಯಾಯ ಒದಗಿಸಲು ಸಾಧ್ಯ. 400 ವರ್ಷಗಳ ಗುಲಾಮಗಿರಿಯ ಪರಿಣಾಮಗಳನ್ನು ತಾತ್ಕಾಲಿಕ ಬ್ಯಾಂಡ್-ಏಡ್ ಗಳು ನಿವಾರಿಸಲು ಸಾಧ್ಯವಿಲ್ಲ, ಎಂದು ವರದಿ ಹೇಳುತ್ತದೆ. “ಈ ದೇಶದಲ್ಲಿ ಅಮೆರಿಕನ್ನರು ಎಂದರೆ ಬಿಳಿಯರು ಮಾತ್ರ, ಉಳಿದವರು ಗುಲಾಮರು ಅಷ್ಟೇ” ಎಂಬ ಪ್ರಸಿದ್ಧ ಕರಿಯ ಲೇಖಕಿ ಟೋನಿ ಮಾರಿಸನ್ ಅವರ ಮಾತು ಸದ್ಯಕ್ಕಂತೂ ಸತ್ಯವೆನಿಸುತ್ತದೆ.

ಈ ಹಿನ್ನೆಲೆಯಲ್ಲಿ ಗುಲಾಮಗಿರಿಯ ಪ್ರಾರಂಭವಾಗಿ 400 ವರ್ಷಗಳ ಆಚರಣೆಯ ಸುತ್ತ ಈ ಕುರಿತು ತೀವ್ರ ರಾಜಕೀಯ ಚರ್ಚೆ ಆರಂಭವಾಗಿದೆ. 2014ರಲ್ಲೇ 250 ವರ್ಷಗಳ ಗುಲಾಮಗಿರಿಗೆ ಕರಿಯರಿಗೆ ಪರಿಹಾರ ಒದಗಿಸಬೇಕು ಎಂದು ವಾದಿಸುವ ತಾ ನೆಹಿಸಿ ಕೋಟ್ಸ್ ಎನ್ನುವವರ ವರದಿ ಪ್ರಕಟವಾಯಿತು. 2017ರಲ್ಲಿ ಪ್ಯೂ (ಪಿ.ಇ.ಡಬ್ಲ್ಯೂ) ಅಧ್ಯಯನ ಸರಾಸರಿ ಬಿಳಿಯ ಕುಟುಂಬಗಳ ಆದಾಯ ಕರಿಯ ಕುಟುಂಬಗಳ ಆದಾಯದ 10 ಪಟ್ಟು ಎಂದಿದೆ. ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಸೆನೆಟರ್ ಕೊರಿ ಬುಕರ್ ಕರಿಯರಿಗೆ ಪರಿಹಾರ ಒದಗಿಸುವ ಬಗ್ಗೆ ಒಂದು ಮಸೂದೆಯನ್ನು ಮಂಡಿಸಿದ್ದಾರೆ. ಇತರ ಡೆಮೊಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿಗಳಾದ ಎಲಿಜಬೆತ್ ವಾರೆನ್ ಮತ್ತು ಬರ್ನಿ ಸ್ಯಾಂಡರ್ಸ್ ಅದನ್ನು ಬೆಂಬಲಿಸಿ, ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ.

ಅಮೆರಿಕದ ಗುಲಾಮಗಿರಿಯ ಸ್ಥೂಲ ಚರಿತ್ರೆ

1619 : ವರ್ಜೀನಿಯಾಕ್ಕೆ 20 ಆಫ್ರಿಕರನ್ನು ಹೊತ್ತ ಹಡಗಿನ ಆಗಮನ; ಡಚ್ ವ್ಯಾಪಾರಿಯಿಂದ ಅವರನ್ನು ಗುಲಾಮರಾಗಿ ಮಾರಾಟ; ಗುಲಾಮಗಿರಿಯ ಆರಂಭ.

1619-1810 : ಆಫ್ರಿಕನ್ನರನ್ನು ಅಪಹರಿಸಿ ಅಟ್ಲಾಂಟಿಕ್ ಸಾಗರದ ಮೇಲೆ ಹಡಗಿನಲ್ಲಿ ಸಾಗಾಣಿಕೆ ಮಾಡಿ ಗುಲಾಮರಾಗಿ ಅಮೆರಿಕದಲ್ಲಿ ಮಾರಾಟ ಮಾಡುವ ವಾಪಾರ ಮುಂದುವರೆಯಿತು. 1700 ರಲ್ಲಿ ಹತ್ತು ಸಾವಿರದಷ್ಟಿದ್ದ ಗುಲಾಮರ ಸಂಖ್ಯೆ, 1760 ಹೊತ್ತಿಗೆ 2 ಲಕ್ಷಕ್ಕೆ ಹತ್ತಿರವಾಗಿ, 1810ರ ಹೊತ್ತಿಗೆ 3 ಲಕ್ಷ ದಾಟಿತ್ತು.

1661 : ಮೇರಿಲ್ಯಾಂಡಿನಲ್ಲಿ ಕರಿಯ ಗುಲಾಮರು ಮತ್ತು ಬಿಳಿಯರ ನಡುವೆ ಮದುವೆ ನಿಷೇಧಿಸುವ ಮೊದಲ ಕಾನೂನು: ಮುಂದೆ ಇಂತಹ ಕಾನೂನುಗಳು ಹೆಚ್ಚಿನ ಉತ್ತರ ಅಮೆರಿಕದ ಬ್ರ್ರಿಟಿಷ್ ವಸಾಹತುಗಳಲ್ಲಿ ಬಂದವು.

1960ರಲ್ಲೂ ಇನ್ನೂ ಯು.ಎಸ್. ನ 20 ರಾಜ್ಯಗಳಲ್ಲಿ ಇಂತಹ ಕಾನೂನುಗಳು ಇದ್ದವು. 2000ದಲ್ಲಿ ಅಲಬಾಮಾ ಇಂತಹ ಕಾನೂನು ತೆಗೆದು ಹಾಕಿದ ಕೊನೆಯ ರಾಜ್ಯವಾಯಿತು.

1776-1790 : ‘ಮಾನವರೆಲ್ಲ ಹುಟ್ಟಿನಿಂದ ಸಮಾನರು’ ಎಂದ ಅಮೆರಿಕನ್ ಸ್ವಾತಂತ್ರ್ಯ ಘೋಷಣೆ ಕರಿಯ ಗುಲಾಮರಿಗೆ ¯ಗಾವಾಗಲಿಲ್ಲ. ಗುಲಾಮರ ಸಾಗಾಣಿಕೆ ಮುಂದುವರೆಯಿತು, ಅದರಲ್ಲೂ ವಿಶೇಷವಾಗಿ ದಕ್ಷಿಣದ ಹತ್ತಿ ಬೆಳೆಯುವ ಪ್ರಾಂತ್ಯಗಳಲ್ಲಿ ದೊಡ್ಡ ಸಂಖ್ಯೆಯ ಕರಿಯ ಗುಲಾಮರನ್ನು ನೆಲೆಸಲಾಯಿತು. 1790 ಜನಗಣತಿಯ ಪ್ರಕಾರ ಇಂತಹ 3 ಪ್ರಾಂತ್ಯಗ¼ಲ್ಲಿ ಕರಿಯ ಗುಲಾಮರ ಸಂಖ್ಯೆ 18 ಲಕ್ಷ ದಾಟಿತ್ತು. ಆ ಪ್ರಾಂತ್ಯಗಳ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚಿತ್ತು.

1808 : 18ನೇ ಶತಮಾನದಲ್ಲಿ ಬ್ರಿಟಿಷರು ನಡೆಸಿದ ವ್ಯಾಪಕ ಆಫ್ರಿಕನ್ ಗುಲಾಮರ ವ್ಯಾಪಾರದಲ್ಲಿ 6 ಲಕ್ಷ ಕರಿಯರನ್ನು ಅಮೆರಿಕಾಕ್ಕೆ ಸಾಗಿಸಲಾಯತು. 1808ರಲ್ಲಿ ಗುಲಾಮರ ವ್ಯಾಪಾರವನ್ನು (ಗುಲಾಮಗಿರಿಯನ್ನಲ್ಲ, ಗುಲಾಮರ ವ್ಯಾಪಾರವನ್ನು ಮಾತ್ರ) ನಿಷೇಧಿಸುವ ವರೆಗೆ ಅದು ಭಾರಿ ಪ್ರಮಾಣದಲ್ಲಿ ಮುಂದುವರೆಯಿತು.

1860 : ಕರಿಯ ಗುಲಾಮರು ಮತ್ತು ಅವರ ಸಂತತಿಯೆಲ್ಲಾ ಸೇರಿ 1860ರ ಜನಗಣತಿಯ ಹೊತ್ತಿಗೆ ಕರಿಯರ ಸಂಖ್ಯೆ 40 ಲಕ್ಷಕ್ಕೆ (ಒಟ್ಟು ಜನಸಂಖ್ಯೆಯ ಶೇ. 13) ಏರಿತ್ತು.

1865-68 : ಅಮೆರಿಕದ ಆಂತರಿಕ ಯುದ್ಧದಲ್ಲಿ ಗುಲಾಮಗಿರಿ ಸಹ ಒಂದು ವಿಷಯವಾಗಿತ್ತು. ಆದರೆ ಅದೇ ಮುಖ್ಯವಾಗಿರಲಿಲ್ಲ. ದಕ್ಷಿಣದ ಪ್ರಾಂತ್ಯಗಳ ಪ್ರತ್ಯೇಕತೆ ಮುಖ್ಯ ವಿಷಯವಾಗಿತ್ತು. ಆದರೆ ಯುದ್ಧ ನಂತರ ಕರಿಯರ ಮೇಲಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಯಿತು. ಅಮೆರಿಕದಲ್ಲಿ ಆಗ ನೆಲೆಸಿದ್ದ ಮತ್ತು ಅಲ್ಲೇ ಹುಟ್ಟಿದ್ದ ಕರಿಯರಿಗೆ ನಾಗರಿಕ ಹಕ್ಕು ಕೊಡಲಾಯಿತು.

1870–1964 : ಜಿಮ್ ಕ್ರೋ ಕಾನೂನುಗಳು ಎಂದು ಕರೆಯಲಾಗುವ ಕಾನೂನುಗಳು ಹೆಚ್ಚಿನ ದಕ್ಷಿಣದ ಪ್ರಾಂತ್ಯಗಳಲ್ಲಿ ಜಾರಿಗೆ ಬಂತು. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಕರಿಯರು ಮತ್ತು ಬಿಳಿಯರು ಒಟ್ಟಿಗೆ ಇರುವಂತಿಲ್ಲ ಎಂಬುದು ಈ ಕಾನೂನುಗಳ ಸಾರಾಂಶ. ಇದರ ಪ್ರಕಾರವೇ ಸಾರ್ವಜನಿಕ ಸಾರಿಗೆಯಲ್ಲಿ, ಹೊಟೆಲುಗಳಲ್ಲಿ ಎಲ್ಲೆಲ್ಲೂ ಕರಿಯರನ್ನು ಪ್ರತ್ಯೇಕಿಸಲಾಗಿತ್ತು. ಇಂತಹ ಒಂದಲ್ಲ ಒಂದು ಕಾನೂನು ಒಂದಲ್ಲ ಒಂದು ಪ್ರಾಂತ್ಯದಲ್ಲಿ 1964ರವರೆಗೂ ಜಾರಿಯಲ್ಲಿದ್ದವು. 1958ರಲ್ಲಷ್ಟೇ ಯು.ಎಸ್. ಮಿಲಿಟರಿಯಲ್ಲಿ ಕರಿಯರ ಪ್ರತ್ಯೇಕ ಘಟಕಗಳನ್ನು ವಿಸರ್ಜಿಸಲಾಯಿತು. ಹಲವು ದಕ್ಷಿಣದ ಪ್ರಾಂತ್ಯಗಳಲ್ಲಿ ಒಂದಲ್ಲ ಒಂದು ಕಾರಣ ಕೊಟ್ಟು ಕರಿಯರ ಮತದಾನದ ಹಕ್ಕನ್ನು ಮೊಟಕುಗೊಳಿಸಲಾಗುತ್ತಿತ್ತು. ಈಗಲೂ ಅದು ಕೆಲವು ಪ್ರಾಂತ್ಯಗಳಲ್ಲಿ ಹೊಸ ರೂಪಗಳಲ್ಲಿ ಮುಂದುವರೆದಿದೆ.

(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version