ದಿನದ ಸುದ್ದಿ
ದೇಶದಲ್ಲಿ ಪ್ರವಾಹ ನಿರ್ವಹಣೆ ಸನ್ನದ್ಧತೆ ; ಗೃಹ ಸಚಿವ ಅಮಿತ್ ಶಾ ಪರಿಶೀಲನೆ
ಸುದ್ದಿದಿನಡೆಸ್ಕ್:ದೇಶದಲ್ಲಿ ಪ್ರವಾಹ ಪರಿಸ್ಥಿತಿಯ ಸೂಕ್ತ ನಿರ್ವಹಣೆಗಾಗಿ ನದಿಗಳ ನೀರಿನ ಮಟ್ಟದ ಮುನ್ಸೂಚನೆ ವ್ಯವಸ್ಥೆಯನ್ನು ಉನ್ನತೀಕರಿಸಲು ಪ್ರಯತ್ನಿಸಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಭಾರತೀಯ ಹವಾಮಾನ ಇಲಾಖೆ ಹಾಗೂ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಿದ್ದಾರೆ.
ನವದೆಹಲಿಯಲ್ಲಿ ನಿನ್ನೆ ಪ್ರವಾಹ ನಿರ್ವಹಣೆಯ ಸನ್ನದ್ಧತೆಯನ್ನು ಪರಿಶೀಲಿಸಲು ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ದೇಶದಲ್ಲಿ ಪ್ರವಾಹದ ಅಪಾಯ ತಗ್ಗಿಸಲು ಸಮಗ್ರ ಹಾಗೂ ದೂರದೃಷ್ಟಿಯ ನೀತಿ ರೂಪಿಸಲು ದೀರ್ಘಾವಧಿಯ ಕ್ರಮಗಳನ್ನು ಪರಿಶೀಲಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ದೇಶದ ವಿಪತ್ತು ನಿರ್ವಹಣೆ ಶೂನ್ಯ ಅಪಘಾತ ವಿಧಾನದೊಂದಿಗೆ ಮುನ್ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿದರು. ದೇಶದ ಎಲ್ಲಾ ಪ್ರಮುಖ ಅಣೆಕಟ್ಟುಗಳ ಪ್ರವಾಹ ಗೇಟ್‌ಗಳು ಸುಸ್ಥಿತಿಯಲ್ಲಿವೆ ಎಂದು ಖಚಿತಪಡಿಸಿಕೊಳ್ಳಲು ಅವರು ನಿರ್ದೇಶನ ನೀಡಿದರು.
ಸಿಡಬ್ಲ್ಯುಸಿಯ ಪ್ರವಾಹ ಮೇಲ್ವಿಚಾರಣಾ ಕೇಂದ್ರಗಳು ದೇಶದ ಅವಶ್ಯಕತೆಗಳಿಗೆ ಮತ್ತು ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿರಬೇಕು ಎಂದು ಅವರು ಹೇಳಿದರು.
ದೇಶಾದ್ಯಂತ ಮುಂಗಾರು ಚುರುಕುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ವಹಣೆಗೆ ಸರ್ಕಾರ ಸಜ್ಜಾಗುತ್ತಿದೆ. ಪ್ರತಿವರ್ಷ ಮುಂಗಾರು ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದ ಭಾರಿ ಪ್ರಮಾಣದಲ್ಲಿ ಜೀವಹಾನಿ ಹಾಗೂ ಆಸ್ತಿ-ಪಾಸ್ತಿ ಹಾನಿ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ರಾಷ್ಟ್ರೀಯ ನೈಸರ್ಗಿಕ ವಿಕೋಪ ಪರಿಹಾರ ತಂಡವನ್ನು ಸಜ್ಜುಗೊಳಿಸಲು ಸೂಚಿಸಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಎನ್‌ಡಿಎಂಎ ಕಾಲ ಕಾಲಕ್ಕೆ ನೀಡುವ ಸಲಹೆಗಳನ್ನು ಪಾಲಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿರುವ ಅವರು, ಸಂಭವಿಸಿದ ಪ್ರವಾಹದ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆಯೂ ಸಂಬಂಧಪಟ್ಟ ಸಂಸ್ಥೆಗಳಿಗೆ ನಿರ್ದೇಶಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಭಾಯಿಸಲು ಮತ್ತು ಕೃಷಿ ನೀರಾವರಿ, ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಬ್ರಹ್ಮಪುತ್ರ ನದಿಯ ನೀರನ್ನು ತಿರುಗಿಸಲು ಈಶಾನ್ಯ ರಾಜ್ಯದಲ್ಲಿ ಕನಿಷ್ಠ 50ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸುವಂತೆ ಸಚಿವ ಅಮಿತ್ ಶಾ ಸಲಹೆ ನೀಡಿದ್ದಾರೆ. ಪ್ರವಾಹ ಮತ್ತು ನೀರಿನ ನಿರ್ವಹಣೆಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋ ಒದಗಿಸಿದ ಉಪಗ್ರಹ ಚಿತ್ರಣಗಳನ್ನು ಬಳಸಿಕೊಳ್ಳುವಂತೆಯೂ ಅವರು ಸೂಚಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಸಿಆರ್ ಪಾಟೀಲ್, ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ಕೇಂದ್ರ ಗೃಹ ಕಾರ್ಯದರ್ಶಿ, ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243