ಅಂಕಣ

ಅನ್ನಕ್ಕೆ ಯಾವ ಧರ್ಮ..? ಮತ್ತು ಇತರೆ ಕವಿತೆಗಳು

Published

on

~ವಿಜಯ್ ನವಿಲೇಹಾಳು

ನನ್ನ ಮನವ, ಹಸಿದ ತೋಳಗಳಂತೆ ಕಿತ್ತು ತಿಂದು ಅದೆಷ್ಟೋ ದಿನಗಳಿಂದ ಎದೆನಡುಗಿಸುತ್ತ ರಣಕೇಕೆ ಹಾಕುತ್ತಿರುವ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ

ಮಾರಮ್ಮನ ಜಾತ್ರೆಯ ಪ್ರಸಾದ,
ಮೊಹರಮ್ ನ ಚೋಂಗಿ ಕೂಡಿ ಉಂಡು
ಅಡುಗೆ ರುಚಿಯೂ; ಮಾಯಾ ದೀವಿಗೆಯನು
ತಿಕ್ಕಿದಾಗ ಬರುವ ಜೀನಿಯಂತೆ ಅದ್ಭುತ ವಾಗಿತ್ತು

ಪಂಕ್ತಿಯಲ್ಲಿ ಹಿಂದುವೋ, ಮುಸಲ್ಮಾನನೋ, ಕ್ರಿಶ್ಚಿಯನ್ನನೋ, ಯಾರಾದರೇನು? ಅನ್ನಕ್ಕೆ ಯಾವ ಧರ್ಮ ?

ಈಗ ಅಲ್ಲೆಲ್ಲೊ ಯಾರೋ ಕೆಲವರು ಜಾತಿ ಧರ್ಮದ ವಿಷವನು ಹನಿ ಹನಿ ಉಣಬಡಿಸಿ ಊರಿಗೂರಿಗೆ ದ್ವೇಷದ ನಶೆಯೇರಿಸಿದ್ದಾರೆ

ಈಗೀಗ ಅವರ ಹಸಿವು ನೀಗುತ್ತಿರುವುದು ಕ್ರೌರ್ಯದ ಕತ್ತಿಯಿಂದ ಜಿನಿಗುತ್ತಿರುವ ರಕ್ತದಿಂದ

ನಾನೆಂದು ಕವಿತೆ ಬರೆದವನಲ್ಲ ಎದೆಯೊಳಗಿನ ನೋವಿನ ಪದಗಳನು ಜೋಡಿಸುತ್ತಿರುವೆ ಅಷ್ಟೇ.

ಇತರೆ ಕವಿತೆಗಳು

೧..
ಅವಳ ಮಾತುಗಳು ಅಲ್ಪ ಪ್ರಾಣಗಳಂತೆ
ಕಿವಿಗಳಿಗೆ ನಾಟುತ್ತವೆ
ಅವಳ ಮೌನ ಮಹಾ ಪ್ರಾಣಗಳಂತೆ
ಸೀದ ಹೃದಯಕ್ಕೆ ಅಪ್ಪಳಿಸುತ್ತವೆ
ಅವಳ ಮಾತು ಮತ್ತು ಮೌನದ ಕೊನೆಯಲಿ
ನಾನು ಅನುನಾಸಿಕದಂತೆ.
೨..
ಮಡಿವಂತಿಕೆಯೇ ಶ್ರೇಷ್ಟ ಮೈಲಿಗೆಯು ಅನಿಷ್ಟ ಅಂದುಕೊಂಡಿದ್ದರೆ ಊರಾಚೆಗಿನ ಕಲ್ಲು ಬಂಡೆ ವಿಗ್ರಹವಾಗುತ್ತಿರಲಿಲ್ಲ.
೩..
ಅವಳು ಅಣು ಅಣುವಾಗಿ ಹೃದಯದ
ಆಳವನು ಸೇರಿಕೊಂಡು ಬೇರು ಬಿಟ್ಟಳು
ಅವಳ ಒಲವಿನ ಆಕ್ರಮಣಕೆ
ನಾ ಮರುಮಾತುಗಳಾಡದೆ ಹೆಪ್ಪುಗಟ್ಟಿದೆ. (ಕವಿ:ವಿಜಯ್ ನವಿಲೇಹಾಳು)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version