ದಿನದ ಸುದ್ದಿ
ರಾಷ್ಟ್ರಪತಿ ಚುನಾವಣೆಗೆ ಅಧಿಸೂಚನೆ ಪ್ರಕಟ ; ವಿವಿಧ ರಾಜಕೀಯ ಪಕ್ಷಗಳ ಸಮಾಲೋಚನೆ ಆರಂಭ
ಸುದ್ದಿದಿನ ಡೆಸ್ಕ್ : ರಾಷ್ಟ್ರಪತಿ ಚುನಾವಣೆಗೆ ಇಂದು ಅಧಿಸೂಚನೆ ಹೊರಡಿಸಲಾಗಿವೆ. ದೇಶದ 16ನೇ ರಾಷ್ಟ್ರಪತಿಯ ಆಯ್ಕೆಯ ಪ್ರಕ್ರಿಯೆಗೆ ಚಾಲನೆ ದೊರೆತಿದೆ.
ಈ ತಿಂಗಳ 29ರವರೆಗೆ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸಬಹುದು. ರಾಷ್ಟ್ರಪತಿ ಚುನಾವಣೆಗೆ ಮುಂದಿನ ತಿಂಗಳು 18 ರಂದು ಮತದಾನ ನಡೆಯಲಿದ್ದು, ಜುಲೈ 21 ರಂದು ಮತ ಎಣಿಕೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಮುಂದಿನ ತಿಂಗಳ 24 ರಂದು ಮುಕ್ತಾಯವಾಗಲಿದೆ.
ಸಂವಿಧಾನದ ಪ್ರಕಾರ ಅನುಪಾತದ ಪ್ರಾತಿನಿಧ್ಯದ ವ್ಯವಸ್ಥೆಗೆ ಅನುಗುಣವಾಗಿ ರಾಷ್ಟ್ರಪತಿ ಚುನಾವಣೆಯನ್ನು ರಹಸ್ಯ ಮತದಾನದ ಮೂಲಕ ನಡೆಸಲಾಗುವುದು ಎಂದು ನಮ್ಮ ಬಾತ್ಮಿದಾರರು ವರದಿ ಮಾಡಿದ್ದಾರೆ.
ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಮಂಡಲದ ಚುನಾಯಿತ ಸದಸ್ಯರು ಮತದಾರರಾಗಿರುತ್ತಾರೆ. ಸಂಸತ್‌ನ 776ಸದಸ್ಯರು 4 ಸಾವಿರದ 33 ಶಾಸಕರು ಮತದಾರರಾಗಿದ್ದು, ಮತದ ಮೌಲ್ಯ 10 ಲಕ್ಷ 86 ಸಾವಿರದ 431 ಎಂದು ಚುನಾವಣಾ ಆಯೋಗ ತಿಳಿಸಿದೆ.
ರಾಜ್ಯಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಅವರು ರಾಷ್ಟ್ರಪತಿ ಚುನಾವಣೆಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ಮುಂಬರುವ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ವರಿಷ್ಠ ಜೆ.ಪಿ.ನಡ್ಡಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ವಿವಿಧ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ನಡೆಸುವ ಅಧಿಕಾರವನ್ನು ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಮಧ್ಯೆ, ದೆಹಲಿಯಲ್ಲಿ ಇಂದು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರ ನೇತೃತ್ವದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಮಾತುಕತೆ ಆರಂಭವಾಗಿದೆ ಎಂದು ವರದಿಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243