ಅಂತರಂಗ

ಅನಾರೋಗ್ಯ ಮನಸುಗಳ ಪರಿವರ್ತನೆಗೆ ಶ್ರಮಿಸುತ್ತಿರುವ ಆರೋಗ್ಯಧಾಮ

Published

on

ತ್ತಡದ ಜೀವನದಿಂದಾಗಿ ಇಂದು ಅದೆಷ್ಟೊ ಮಂದಿ ಮನೋದೌರ್ಬಲ್ಯಕ್ಕೆ ತುತ್ತಾಗಿ ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಣ ಹಾಗೂ ವ್ಯಕ್ತಿತ್ವ ಆರೋಗ್ಯ ಸೇರಿದಂತೆ ಎಲ್ಲವನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಂಥವರನ್ನು ಸರಿಪಡಿಸಿ ಮತ್ತೇ ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಆರೋಗ್ಯವಂತ ವ್ಯಕ್ತಿಗಳನ್ನಾಗಿ ರೂಪಿಸಲು ಶ್ರಮಿಸುತ್ತಿದೆ ದಾವಣಗೆರೆ ದೇವರಾಜ ಅರಸು ಬಡಾವಣೆಯ ಹೊಸಕೋರ್ಟ್ ಹತ್ತಿರವಿರುವ ಆರೋಗ್ಯಧಾಮ ನಶಾಮುಕ್ತಿ ಕೇಂದ್ರ. ನಶಾಮುಕ್ತಿ ಕೇಂದ್ರದಲ್ಲಿ ಪ್ರತಿದಿನ ಬೆಳಗ್ಗೆ 7 ರಿಂದ 8ರವರೆಗೆ ಹಾಗೂ 6.30 ರಿಂದ 7.30ರವರೆಗೆ ರಾಜಯೋಗ ತರಬೇತಿ ನಡೆಯುತ್ತದೆ. ಮಾನಸಿಕ ಕಾಯಿಲೆ ಇದ್ದವರಿಗೆ ಹಾಗೂ ದುಶ್ಚಟಗಳಿಗೆ ಬಲಿಯಾದವರಿಗೆ ಹೋಮಿಯೋಪತಿಕ್ ಮೆಡಿಸನ್ ಸಹ ನೀಡಲಾಗುತ್ತಿದೆ. ಈ ಮೆಡಿಸನ್ ಬಾಂಬೆಯಲ್ಲಿರುವ ಈಶ್ವರೀ ವಿಶ್ವವಿದ್ಯಾಲಯದ ಶಾಖೆಯಿಂದ ಈ ಕೇಂದ್ರಕ್ಕೆ ರವಾನೆಯಾಗುತ್ತಿದೆ. ತಂಬಾಕು, ಗುಟಕಾ, ಆಲ್ಕೋಹಾಲ್, ಬೀಡಿ, ಸಿಗರೇಟ್, ಡ್ರಗ್ಸ್ ಇತ್ಯಾದಿ ದುಶ್ಚಟಗಳಿಗೆ ಒಳಗಾದವರಿಗೆ ತಿಳಿ ಹೇಳುವ ಜೊತೆ ಅದರಿಂದ ಉಂಟಾಗುವ ದುಷ್ಪರಿಣಾಮವನ್ನು ಆಡಿಯೋ ವೀಡಿಯೋ ಮುಖಾಂತರ ಮನವರಿಕೆ ಮಾಡಿಕೊಟ್ಟು ದುಶ್ಚಟಗಳಿಂದ ಅವರು ಮುಕ್ತಿ ಹೊಂದುವಂತೆ ಪ್ರಯತ್ನಿಸಲಾಗುತ್ತಿದೆ. ಆರೋಗ್ಯವಂತರಾಗಿ ಅವರು ತಮ್ಮ ಜೀವನ – ಹಣ ಇತ್ಯಾದಿಯನ್ನು ಒಳ್ಳೆಯ ಕಾರ್ಯಗಳಿಗೆ ಬಳಸಿಕೊಂಡು ಸತ್ಪಾತ್ರಕ್ಕೆ ಅಣಿಯಾಗುವಂತೆ ತರಬೇತಿ ನೀಡಲಾಗುತ್ತದೆ. ಕೌನ್ಸಲಿಂಗ್ ಮೂಲಕ ದುಶ್ಚಟಗಳಿಗೆ ಒಳಗಾಗಿರುವವರ ಮನ ಪರಿವರ್ತನೆಗಾಗಿ ಶ್ರಮಿಸಲಾಗುತ್ತಿದೆ.

ಜಗತ್ತಿನ ಅತಿ ಹೆಚ್ಚು ಮೃತ್ಯು ಪ್ರಮಾಣದಲ್ಲಿ ಸಾವಿಗೆ ತಂಬಾಕು 2ನೇ ಮುಖ್ಯ ಕಾರಣವಾಗಿದೆ. ಪ್ರತಿವರ್ಷ ಸುಮಾರು 50ಲಕ್ಷ ಜನ ವಿಶ್ವದಲ್ಲಿ ಹಾಗೂ ಭಾರತದಲ್ಲಿ ಹತ್ತು ಲಕ್ಷಜನ ತಂಬಾಕಿಗೆ ಬಲಿಯಾಗುತ್ತಿದ್ದಾರೆ. ಅಲ್ಲದೆ ತಂಬಾಕಿನಿಂದ 25ಕ್ಕೂ ಹೆಚ್ಚು ಕಾಯಿಲೆಗಳು ಹರಡುತ್ತಿವೆ. ಅದರಲ್ಲಿ ಕ್ಯಾನ್ಸರ್ ಜೀವ ಘಾತುಕ ರೋಗವಾಗಿದೆ. ತಂಬಾಕಿನಲ್ಲಿ 4 ಸಾವಿರಕ್ಕಿಂತಲೂ ಹೆಚ್ಚು ರಾಸಾಯನಿಕ ಪದಾರ್ಥಗಳಿರುತ್ತವೆ. ಪ್ರತಿವರ್ಷ 25 ಸಾವಿರ ಕೋಟಿ ರೂ ತಂಬಾಕಿಗಾಗಿ ಖರ್ಚಾಗುತ್ತಿದೆ. ಇದರ ರೋಗಕ್ಕೆ ತುತ್ತಾದವರನ್ನುಗುಣಪಡಿಸಲು ಸರ್ಕಾರ 27 ಸಾವಿರ ಕೋಟಿಗೂ ಹೆಚ್ಚು ಹಣ ಖರ್ಚು ಮಾಡುತ್ತಿದೆ.

ತಂಬಾಕು, ಗಾಂಜಾ, ಅಂಫಿಟಾಮಿನ್ ಇತ್ಯಾದಿಗಳು ಉತ್ತೇಜಕ ಪದಾರ್ಥಗಳಾಗಿವೆ. ಸಾರಾಯಿ, ನಿದ್ರೆ ಮಾತ್ರೆಗಳು ಮನುಷ್ಯರನ್ನು ಶಿಥಿಲಗೊಳಿಸುತ್ತವೆ. ಮಾದಕ ವಸ್ತುಗಳು ಭ್ರಮೆಯನ್ನುಂಟು ಮಾಡುತ್ತವೆ. ಇದರಿಂದಾಗಿ ಮಾನವರು ತಮ್ಮ ವಿವೇಚನೆ, ಆಲೋಚನೆ, ತಾರ್ಕಿಕ ಶಕ್ತಿ, ವ್ಯಕ್ತಿತ್ವ, ಹಣ ಸೇರಿದಂತೆ ಎಲ್ಲವನ್ನು ಕಳೆದುಕೊಳ್ಳುತ್ತಾರೆ. ಇದು ದುರಂತವಲ್ಲವೇ? ಇದನ್ನು ತಡೆಯುವ ಕಾರ್ಯವನ್ನು ಯಾರಾದರೂ ಮಾಡಲೇಬೇಕಲ್ಲವೇ ? ಹಾಗಾಗಿಯೇ, ಆರೋಗ್ಯಕರ ಸಮಾಜದ ನಿರ್ಮಾಣದ ಗುರಿಹೊತ್ತು ಹತ್ತಾರು ವರ್ಷಗಳಿಂದ ತನ್ನ ಅಳಿಲು ಸೇವಾಕಾರ್ಯದಲ್ಲಿ ತೊಡಗಿದೆ ಈ ಕೇಂದ್ರ.

ಪ್ರಸ್ತುತ ಒತ್ತಡದ ಜೀವನ ಹಾಗೂ ಪೈಪೋಟಿಗೆ ಸಿಲುಕಿರುವ ನಮ್ಮ ಮಾನವ ಸಮುದಾಯ ವೈಟನರ್‍ನ ನಶೆ, ಔಷಧಿಗಳ ನಶೆ, ಅಫೀಮು, ಚೆರಸ್, ಗಾಂಜಾ, ಹೆರಾಯಿನ್, ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವ ಚಟ, ಅತಿಯಾದ ಆಹಾರವನ್ನು ಬಳಸುವ ಚಟ ಇತ್ಯಾದಿ ಹೊಸ ಹೊಸ ನಶಾವಸ್ತುಗಳ ಸೇವನೆಗೆ ತುತ್ತಾಗುತ್ತಿದೆ. ಇದುವರೆಗೂ ಸುಮಾರು ಸಾವಿರಕ್ಕೂ ಅಧಿಕ ಮಂದಿ ಆರೋಗ್ಯಧಾಮದ ಈ ಸೇವೆಯ ಪ್ರಯೋಜನ ಪಡೆದಿದ್ದಾರೆ. ಅದರಲ್ಲಿ ಹಲವರು ಪೂರ್ಣ ಪ್ರಮಾಣದಲ್ಲಿ ದುಶ್ಚಟಗಳಿಂದ ಮುಕ್ತರಾಗಿದ್ದಾರೆ. ಇನ್ನೂ ಕೆಲವರು ತರಬೇತಿ ಹಂತದಲ್ಲಿದ್ದಾರೆ. ಇಲ್ಲಿ ಪ್ರಥಮ ಹಂತದಲ್ಲಿ 3 ತಿಂಗಳವರೆಗೆ ಮೆಡಿಸನ್ ನೀಡಲಾಗುತ್ತದೆ. ವಾರಕ್ಕೊಮ್ಮೆ ಬಂದು ಮೆಡಿಸನ್ ತೆಗೆದುಕೊಂಡು ಹೋಗುವ ವ್ಯವಸ್ಥೆ ಮಾಡಲಾಗಿದೆ. ಜೊತೆಯಲ್ಲಿ ಯೋಗ, ಧ್ಯಾನ, ಕೌನ್ಸಲಿಂಗ್ ಮತ್ತು ಮುಕ್ತ ವಾತಾವರಣ ಒದಗಿಸಿದೆ.
ದುಶ್ಚಟಕ್ಕೆ ಒಳಗಾದವರು ತಾವಾಗಿಯೇ ವೈಯುಕ್ತಿಕವಾಗಿ ಬರುವವರ ಸಂಖ್ಯೆ ಕಡಿಮೆ. ವ್ಯಸನಿಗಳ ಪರವಾಗಿ ಅವರ ಕುಟುಂಬದವರು ಬಂದು ಔಷಧಿ ಅಥವಾ ಮಾರ್ಗದರ್ಶನವನ್ನು ಪಡೆದು ಹೋಗಿ ಅವರನ್ನು ಗುಣಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಶಾಲಾ – ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವಕಾರ್ಯಕ್ರಮ, ಬೀದಿ ನಾಟಕ ಸ್ಪರ್ಧೆ, ಆಡಿಯೋ ವೀಡಿಯೋ ಪ್ರದರ್ಶನದ ಮೂಲಕ ದುಶ್ಚಟಗಳ ದುಷ್ಪರಿಣಾಮ ಹಾಗೂ ನಶಾಮುಕ್ತಿಯ ಜೀವನದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.

ಈ ಕೇಂದ್ರಕ್ಕೆ ರಾಜ್ಯಾದ್ಯಂತ ಎಲ್ಲೆಡೆಯಿಂದಲೂ ನಶಾಮುಕ್ತಿಗಾಗಿ ಬರುತ್ತಿದ್ದಾರೆ. ಬೆಂಗಳೂರು ಮತ್ತು ದಾವಣಗೆರೆ ಸೇರಿದಂತೆ ಎರಡೂ ಕಡೆ ಮಾತ್ರ ಈಶ್ವರೀ ವಿಶ್ವವಿದ್ಯಾಲಯದ ನಶಾಮುಕ್ತಿ ಕೇಂದ್ರಗಳಿವೆ.
ಬೆಳೆಯುವ ಸಿರಿ ಮೊಳೆಕೆಯಲ್ಲಿ ಎಂಬಂತೆ ಚಿಕ್ಕ ಮಕ್ಕಳನ್ನು ಉತ್ತಮ ಸಂಸ್ಕಾರಕ್ಕೆ ತೊಡಗಿಸಿದಲ್ಲಿ ಮಾತ್ರ ಭವಿಷ್ಯದಲ್ಲಿ ಆರೋಗ್ಯವಂತ ಸುಸ್ಥಿರ, ಸದೃಢ, ಭಾರತದ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ, ಯುವಜನತೆ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದೆಂಬ ಸದುದ್ದೇಶದಿಂದ ಬಾಲ್ಯದಿಂದಲೇ ಅವರಿಗೆ ಉತ್ತಮ ಸಂಸ್ಕಾರಗಳ ತರಬೇತಿ ನೀಡುವ ಸಲುವಾಗಿ ಆರೋಗ್ಯಧಾಮದಲ್ಲಿ ಪ್ರತೀ ವರ್ಷ ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಲಾಗುತ್ತಿದೆ.
ವರ್ತನಾಶಾಸ್ತ್ರ, ರಾಷ್ಟ್ರೀಯ ಭಾವೈಕ್ಯತೆ, ವಚನಗಳ ಸ್ಪರ್ಧೆ, ಧ್ಯಾನ, ಯೋಗ, ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುವ ಚಟುವಟಿಕೆಗಳು ಸೇರಿದಂತೆ ಇತರೆ ಪಠ್ಯೇತರ ಚಟುವಟಿಕೆಗಳ ಆಯೋಜನೆ ಸಹ ಮಾಡಲಾಗುತ್ತಿದೆ. ಬಡವರು, ಶ್ರಮಿಕ ವರ್ಗದವರು, ಮಧ್ಯಮ ವರ್ಗದವರು, ದುರ್ಬಲ ಮನಸ್ಸಿನವರು ಹೆಚ್ಚಾಗಿ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಭಾರತದ ಬಹು ಸಂಖ್ಯಾತರು ಇವರೇ. ಇವರಿಂದಲೇ ಭಾರತದ ಅಭ್ಯುದಯ. ಆದ್ದರಿಂದ ಇವರನ್ನು ನಾವು ಆರೋಗ್ಯವಂತ ಜೀವನ ನಡೆಸಲು ಹಚ್ಚಬೇಕು. ಅದಕ್ಕಾಗಿ ನಾವೆಲ್ಲರೂ ಜೊತೆಗೂಡಿ ಶ್ರಮಿಸಬೇಕು ಎಂಬುದು ಈ ಕೇಂದ್ರದ ಸದಾಶಯ.

ಸುದ್ದಿದಿನ.ಕಾಂ|ವಾಟ್ಸಾಪ್| 9986715401

Leave a Reply

Your email address will not be published. Required fields are marked *

Trending

Exit mobile version