ಅಂತರಂಗ

ಕಾಯಕಲ್ಪಕ್ಕಾಗಿ ಕಾದಿರುವ ಅಣಬೇರು ಐತಿಹಾಸಿಕ ಕೋಟೆ

Published

on

ಅಣಬೇರು ಐತಿಹಾಸಿಕ ಕೋಟೆ

ದಾವಣಗೆರೆ ನಿವಾಸಿಯಾಗಿರುವ ಕವಿಮಿತ್ರ ಅಣಬೇರು ತಾರೇಶ್ ಅವರು ನಿನ್ನೆ ರಾತ್ರಿ ಫೋನಾಯಿಸಿ – ಸರ್, ನಮ್ಮೂರಲ್ಲೊಂದು ಪ್ರಾಚೀನ ಕಾಲದ ಕೋಟೆಯೊಂದಿದೆ. ನೀವು ಆಸಕ್ತಿ ತೋರೋದಾದ್ರೆ ಯಾವತ್ತಾದ್ರೂ ಒಂದು ದಿನ ಅಲ್ಲಿಗೆ ಭೇಟಿ ಕೊಟ್ಟು ಬರೋಣವೇ” ಎಂದರು. “ಯಾವತ್ತಾದ್ರೂ ಯಾಕೆ ನಾಳೆಯೇ ಹೋಗೋಣ” ಅಂದೆ. ಸರಿ, ಭಾನುವಾರ ನಮ್ಮ ಇಡೀ ದಿನ ಅಣಬೇರು ಗ್ರಾಮದ ಆ ಕೋಟೆಯ ಸುತ್ತ ಕಳೆಯಿತು.

ಕಣ್ಣಿಗೆ ಕಂಡ ಕೋಟೆಯ ಚಿತ್ರಣ

ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲ್ಲೂಕಿಗೆ ಸೇರಿದ ಅಣಬೇರು ಗ್ರಾಮ ದಾವಣಗೆರೆ ನಗರದಿಂದ ಬಾಡ ಮಾರ್ಗದಲ್ಲಿ ಸುಮಾರು ೩೧ ಕಿಮೀ ಅಂತರದಲ್ಲಿದೆ. ಬಸ್ ನಿಲ್ದಾಣದ ಬಳಿಯೇ ಒಂದು ಕೆರೆ, ಅನತಿ ದೂರದಲ್ಲೆ ಒಂದೆರಡು ದೇವಸ್ಥಾನ, ಹಾಗೆಯೇ ಅಲ್ಲೆ ನಿಂತು ನೋಡಿದರೆ ಎದುರಿಗೆ ಕಾಣುವಂತೆ ಈ ಕೋಟೆ ನಿಂತಿದೆ. ಸುಮಾರು ೪ ಅಡಿ ದಪ್ಪ,50 – 6೦ ಅಡಿ ಎತ್ತರ ಹಾಗೂ ದುಂಡಾಗಿ ಬತೇರಿ ವಿನ್ಯಾಸದಲ್ಲಿ ಕಲ್ಲಿನಿಂದ ಆ ಕೋಟೆಯನ್ನು ಕಟ್ಟಲಾಗಿದೆ. ಕೋಟೆಯ ಮೇಲ್ಬಾಗದಲ್ಲಿ ದಕ್ಷಿಣಾಭಿಮುಖವಾಗಿ ಒಂದೇ ಒಂದು ೪ ಅಡಿ ಎತ್ತರದ ತೆರೆದ ಬಾಗಿಲು ಮಾತ್ರ ಇದೆ. ಹತ್ತಲು ಮೆಟ್ಟಿಲುಗಳಿಲ್ಲ. ಒಂದು – ಮತ್ತೊಂದು ಕಲ್ಲಿನ ಆಸರೆ ಪಡೆದೇ ಹತ್ತಬೇಕು.

ಕೋಟೆಯ ಸುತ್ತ ಹಲವು ಕಥೆ

ಆ ಕೋಟೆಯ ರಹಸ್ಯ ಬೇಧಿಸುತ್ತಾ ಊರು – ಕೇರಿ ಅಡ್ಡಾಡಿ, ಗ್ರಾಮದ ಹತ್ತಾರು ಜನರ ಬಳಿ ಮಾಹಿತಿಗಾಗಿ ತಡಕಾಡಿದೆವು. ಆದರೆ ಆ ಕೋಟೆಯನ್ನು ಕಟ್ಟಿದರ‍್ಯಾರು ಎಂಬ ಬಗ್ಗೆ ಈವರೆಗೆ ಗ್ರಾಮದ ೫-೬ ತಲೆಮಾರಿನ ಹಿರಿಯರು ಸೇರಿದಂತೆ ಯಾರಿಗೂ ನಿಖರ ಮಾಹಿತಿ ಇಲ್ಲ. ಅಲ್ಲದೆ, ಕೋಟೆಯ ಚರಿತ್ರೆ ತಿಳಿಸುವ ಯಾವುದೇ ಶಿಲಾ ಶಾಸನ, ಹಸ್ತಪ್ರತಿ ಅಥವಾ ತಾಮ್ರಪತ್ರವಾಗಲಿ ಲಭ್ಯವಿಲ್ಲವಿಂತೆ. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮಗೆ ಗೊತ್ತಿರುವ ಆ ಕೋಟೆಯ ಕಥೆ ಹೇಳಿದರು.
“ಇದು ಬ್ರಿಟಿಷರ ಕಾಲದ ಕೋಟೆ. ಬಹುಶಃ ಅವರು ತಮ್ಮ ಶಸ್ತ್ರಾಸ್ತ್ರಗಳನ್ನು ಇಡಲು ಈ ಕೋಟೆ ಕಟ್ಟಿಸಿರಬಹುದು ಎಂದು ಗ್ರಾಮದ ಒಂದಿಬ್ಬರು ಹೇಳಿದರು. ಇನ್ಯಾರೋ – “ಇಲ್ಲಿಂದ 5-6 ಕಿಮೀ ಸಮೀಪದಲ್ಲೇ ಇರುವ ಮಾಯಕೊಂಡ ಗ್ರಾಮದಲ್ಲಿ ಮದಕರಿ ನಾಯಕನ ಸಮಾಧಿ ಇದೆ. ಇದಕ್ಕೂ ಅದಕ್ಕೂ ನಂಟಿರಬಹುದು. ಈ ಕೋಟೆ ಅವನ ಕಾಲದ್ದೇ ಇರಬಹುದು. ಅಥವಾ ಇಲ್ಲಿಗೆ 12 ಕಿಮೀ ಸಮೀಪದಲ್ಲಿರುವ ಸಂತೆಬೆನ್ನೂರು ಪುಷ್ಕರಣಿ ಕಟ್ಟಿಸಿದವರೇ ಇದನ್ನು ಸಹ ಕಟ್ಟಿಸಿರಬಹುದು” ಎಂದರು.  ಮತ್ಯಾರೋ – “ಇದು ಸುಮಾರು 200 ವರ್ಷಗಳಿಗಿಂತಲೂ ಹಳೆಯದಾದ ಪ್ರಾಚೀನ ಕೋಟೆ. ಇದನ್ನು ಒಂದೇ ರಾತ್ರಿಯಲ್ಲಿ ಕಟ್ಟಲಾಗಿತ್ತಂತೆ. ಹಿಂದೆ ಹಗಲು ದರೋಡೆಕೋರರಿಂದ ರಕ್ಷಣೆ ಪಡೆಯುವ ಸಲುವಾಗಿ ರೈತರು, ತಾವು ಬೆಳೆದ ದವಸ – ಧಾನ್ಯದೊಂದಿಗೆ ಈ ಕೋಟೆಯಲ್ಲಿ ರಕ್ಷಣೆ ಪಡೆಯುತ್ತಿದ್ದರಂತೆ” ಎಂದು ಹೇಳಿದರು.
ಇದು ರಾಜ – ಮಹಾರಾಜರ ಕಾಲದಲ್ಲಿ ಶತ್ರುಗಳ ಬರುವಿಕೆಯ ವೀಕ್ಷಣೆಗಾಗಿ ಹಾಗೂ ಸೈನಿಕರು ಗುಪ್ತವಾಗಿ ಅಡಗಿ ಅವರ ದಾಳಿಯನ್ನು ನಿಯಂತ್ರಿಸುವ ಸಲುವಾಗಿ ಕಟ್ಟಿರುವ ಕೋಟೆಯಿರಬಹುದು ಎಂದು ಕೆಲವರು ತಿಳಿಸಿದರು.

ಈ ದಿನಗಳು

ಪ್ರಸ್ತುತ ನಾಲ್ಕಾರು ತಲೆಮಾರುಗಳಿಂದ ಆ ಕೋಟೆಯ ಸುತ್ತ ಊರು ದೊಡ್ಡದಾಗಿ ಬೆಳೆದು ನಿಂತಿದೆ. ಊರು ಬೆಳೆದಂತೆ ಆ ಕೋಟೆಗೂ ಧಾರ್ಮಿಕ ನಂಟು ಅಂಟಿಕೊಂಡಿದೆ. ಅಲ್ಲೀಗ ಭರಮಪ್ಪನ ಪೂಜೆ ನಡೆಯುತ್ತಿದೆ. ಹಬ್ಬ – ಹರಿದಿನ, ಜಾತ್ರೆ, ಮದುವೆಯ ಮೆರವಣಿಗೆ ಅಥವಾ ಊರಿನ ಯಾವುದೇ ಕಾರ್ಯಕ್ರಮಗಳ ಸಂದರ್ಭದಲ್ಲೂ ಆ ಕೋಟೆಗೆ ಕಾಯಿ ಹೊಡೆಯುವ ಪದ್ಧತಿಯನ್ನು ಗ್ರಾಮಸ್ತರು ರೂಢಿಸಿಕೊಂಡಿದ್ದಾರೆ. ಆ ಕೋಟೆಯ ಸುತ್ತ ಹಾಗೊಮ್ಮೆ – ಈಗೊಮ್ಮೆ ಭಯಂಕರವಾದ ಹಾವೊಂದು ಕಾಣಿಸಿಕೊಳ್ಳುತ್ತದೆ. ಪ್ರಾಯಶಃ ಆ ಕೋಟೆಯ ಒಳಗೆ ನಿಧಿ ಇರಬಹುದೇನೋ. ಅದರ ರಕ್ಷಣೆಯನ್ನು ಮಾಡುತ್ತಿರಬಹುದು. ಆದರೆ, ಈವರೆಗೂ ಆ ಹಾವಿನಿಂದ ಇಲ್ಲಿನ ಜನತೆಗೆ ಯಾವುದೇ ತೊಂದರೆಯಾಗಿಲ್ಲ. ಆದರೆ ಮುಂದೆಯೂ ಹೀಗೆಯೇ ನಡೆಯುತ್ತದೆ ಎಂದು ಹೇಳಲು ಬರುವುದಿಲ್ಲ, ಅಲ್ಲವೇ ಎಂದು ಕೆಲವರು ಆತಂಕ ವ್ಯಕ್ತಪಡಿಸಿದರು.
ಆ ಕೋಟೆಯ ಒಳಭಾಗ ಬಾಗಿಲಿನವರೆಗೂ ಮಣ್ಣಿನಿಂದ ಆವೃತವಾಗಿರುವ ಬಗ್ಗೆಯೂ ಹಲವಾರು ಊಹಾಪೋಹಗಳು, ಅಂತೆ -ಕಂತೆಯ ಕಥೆಗಳೇ ಕೇಳಿಬಂದವು ಹೊರತು ನಿಜಾಂಶ ಯಾರಿಗೂ ಗೊತ್ತಿರಲಿಲ್ಲ.

ಕೊನೆಯ ಮಾತು 

ಜನಮಾನಸದ ಆ ಕಥೆಗಳು ಅದೇನೆ ಇರಲಿ. ಇದೊಂದು ಐತಿಹಾಸಿಕ ಕೋಟೆ. ಇತಿಹಾಸ ಸಂಶೋಧಕರು ಈ ಕೋಟೆಯ ಕುರಿತು ಸಂಶೋಧಿಸಿ ಜನತೆಗೆ ಸ್ಪಷ್ಟ ಮಾಹಿತಿ ನೀಡಿ, ಪರಿಚಯ ಮಾಡಿಕೊಡಬೇಕಿದೆ. ಇಲ್ಲಿ ಈವರೆಗೂ ಯಾವುದೇ ಉತ್ಖನನ, ಊಳೆತ್ತುವಿಕೆ, ಜೀರ್ಣೋದ್ಧಾರದಂತಹ ಯಾವುದೇ ಕಾಯಕಲ್ಪ ಯೋಜನೆಗಳನ್ನು ಹಮ್ಮಿಕೊಂಡಿಲ್ಲ. ಈ ಕುರಿತು ಹಿಂದಿನ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ನಿರ್ಲಕ್ಷö್ಯ ತೋರಿದ್ದಾರೆ. ಹಾಗಾಗಿ ಈಗಲಾದರೂ ಈ ಐತಿಹಾಸಿಕ ಕೋಟೆಗೆ ಒಂದಷ್ಟು ಬೆಳಕು ಸಿಗಲಿ ಎಂಬುದಾಗಿ ಗ್ರಾಮದ ಗೌಡ್ರು ಚಂದ್ರಪ್ಪ, ಆನಂದಪ್ಪ, ಹನುಂತಪ್ಪ, ಕರಿಬಸಪ್ಪ ಸೇರಿದಂತೆ ಗ್ರಾಮದ ಕೆಲವರು ಆಶಯ ವ್ಯಕ್ತಪಡಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version