ನೆಲದನಿ
ನೆಲದನಿಗೆ ಮಿಡಿವ ಮನ : ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಅವರ ಸಂಕಥನ
‘ಕಥಾ ಕಣಜ’ ಎಂಬ ಕೃತಿ ಜಾನಪದ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೀರ್ತಿ ಮಲ್ಲಿಕಾರ್ಜುನ ಕಲಮರಹಳ್ಳಿಯವರದ್ದು
ಭಾರತದ ನೆಲಮೂಲ ಬದುಕಿನೊಳಗೆ ವಿವಿಧ ತೆರನಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕವೊಂದು ತೆರೆದುಕೊಂಡು ಬಂದಿದೆ. ಇಂತಹ ನೆಲಮೂಲ ಬದುಕಿನೊಳಗೆ ಬೆರೆತ ಈ ಸಾಹಿತ್ಯ ಮತ್ತು ಸಾಂಸ್ಕøತಿಕ ಸೊಬಗು ಶ್ರಮಿಕ ಬದುಕಿನ ಭಾಗವಾದ ಕಾರಣದಿಂದಾಗಿ ಹಲವಾರು ಶತಮಾನಗಳ ಕಾಲ ತೆರೆಮರೆಯಲ್ಲಿಯೇ ತನ್ನ ಅಸ್ಮಿತೆಯನ್ನು ಕಾಯ್ದುಕೊಂಡು ಬಂದಿದೆ. ರಾಜಪ್ರಭುತ್ವದ ಕಾಲದಲ್ಲಿ ಅಧಿಕಾರ ಮತ್ತು ಘನತೆಯ ದಾಹ ಹೊತ್ತ ಶಿಷ್ಟ ಸಾಹಿತ್ಯದ ಎದುರು ಈ ನೆಲೆದ ಜೀವದನಿಯಾದ ಜನಪದವು ಬಡತನ ಮತ್ತು ಶ್ರಮಿಲೋಕದ ಆಶ್ರಯ ಪಡೆದು ನಿತ್ಯ ಹೊಸತನವನ್ನು ಕಾಯ್ದುಕೊಂಡು ಬಂದಿದೆ. ಹೀಗೆ ಸಾವಿರಾರು ವರ್ಷಗಳ ಚಾರಿತ್ರಿಕ ಇತಿಹಾಸವನ್ನು ಹೊಂದಿರುವ ಜಾನಪದವನ್ನು ಮುಖ್ಯವಾಹಿನಿಗೆ ತಂದು ಅದರ ಆಳ ಅಗಲ ಹಾಗೂ ಅದರಲ್ಲಿ ಅಂತರ್ಗತವಾಗಿರುವ ಜೀವಪರವಾದ ಆಶಯಗಳನ್ನು ಎತ್ತಿಹಿಡಿಯುವಲ್ಲಿ ಹಲವಾರು ವಿದ್ವಾಂಸರು ಅವಿರತ ಶ್ರಮವನ್ನು ವ್ಯಕ್ತಪಡಿಸಿದ್ದಾರೆ. ಇಂತಹ ನೆಲಮೂಲ ಬದುಕಿನ ಪ್ರತೀಕವಾದ ಸಾಹಿತ್ಯ ಹಾಗೂ ಸಾಂಸ್ಕøತಿಕ ಲೋಕವನ್ನು ಜಗತ್ತಿಗೆ ಪರಿಚಯಿಸಿದ ವಿದ್ವಾಂಸರನ್ನು ಹಾಗೂ ಅವರ ಈ ಕಾರ್ಯವನ್ನು ನೆಲದನಿ ಎಂಬ ರೂಪದಲ್ಲಿ ವ್ಯಕ್ತಪಡಿಸಲಾಗಿದೆ. ಇಂತಹ ನೆಲದನಿಗಳ ಸಾಲಿನಲ್ಲಿ ಡಾ.ಮಲ್ಲಿಕಾರ್ಜುನ್ ಕಲಮರಳ್ಳಿಯವರು ಒಬ್ಬರಾಗಿದ್ದಾರೆ.
ಶ್ರೀಯುತ ಮಲ್ಲಿಕಾರ್ಜುನ ಕಲಮರಹಳ್ಳಿಯವರು ಚಳ್ಳಕೆರೆ ತಾಲ್ಲೂಕಿನ ಕಲಮರಹಳ್ಳಿ ಎಂಬ ಗ್ರಾಮದಲ್ಲಿ ಶ್ರೀ ಕೆಂಪಯ್ಯ ಹಾಗೂ ತಿಪ್ಪಮ್ಮ ದಂಪತಿಗಳ ಮಗನಾಗಿ 05 ಮೇ1958 ರಂದು ಜನಿಸಿದರು. ಕನ್ನಡದ ನೆಲಮೂಲ ಸಂಸ್ಕøತಿಯ ಪ್ರತೀಕವಾದ ಕಾಡುಗೊಲ್ಲ ಸಮುದಾಯದಲ್ಲಿ ಜನಿಸಿದ ಶ್ರೀಯುತರು, ಬಾಲ್ಯದ ದಿನಗಳಿಂದಲೂ ಜನಪದದ ಸೊಗಡನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಹೀಗಾಗಿ ಇವರಿಗೆ ಜನಪದ ಸಾಹಿತ್ಯ ಹಾಗೂ ಸಾಂಸ್ಕøತಿಕ ಲೋಕದೊಂದಿಗೆ ಕರುಳು ಬಳ್ಳಿಯ ನಂಟಿದೆ. ಶ್ರೀಯತರಲ್ಲಿ ಜಾನಪದದ ಆಸಕ್ತಿ ಹಾಗೂ ಕಾಳಜಿಯು ಆಳವಾಗಿ ಪ್ರಭಾವ ಬೀರಲು ಮತ್ತು ಪ್ರೇರಣೆಯಾಗಲು ಕಾರಣವೆಂದರೆ, ಅದು ಅವರು ಬೆಳೆದು ಬಂದ ಪರಿಸರದಲ್ಲಿನ ಜಾನಪದದ ಸಿರಿವಂತಿಕೆ. ಬುಡಕಟ್ಟು ಸಮುದಾಯಗಳಲ್ಲಿ ದಟ್ಟವಾಗಿ ಬೆಳೆದು ನಿಂತಿರುವ ಜಾನಪದವನ್ನು ಸಿರಿಯಜ್ಜಿಯಂತಹ ಹಲವಾರು ಮಹಿಳೆಯರು ಕರಗತ ಮಾಡಿಕೊಂಡು ಅದರ ಪಾಲನೆ ಮತ್ತು ಪೋಷಣೆ ಮಾಡಿಕೊಂಡು ಬಂದಿದ್ದರು. ಇಂತಹ ಸಿರಿಗಳು ಪ್ರತಿಯೊಂದು ಬುಡಕಟ್ಟು ಹಟ್ಟಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕಂಡುಬರುತ್ತವೆ. ಇಂತಹ ಸಿರಿಗಳ ನಡುವೆ ಬೆಳೆದ ಮಲ್ಲಿಕಾರ್ಜುನ ಕಲಮರಹಳ್ಳಿಯವರು ಜಾನಪದದ ಭಾಗವಾಗಿಯೇ ತಮ್ಮನ್ನು ತೊಡಗಿಸಿಕೊಂಡು ಬಾಲ್ಯದ ಬದುಕನ್ನು ಕಳೆದವರಾಗಿದ್ದಾರೆ. ಶ್ರೀಯುತರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪಕ್ಕದ ಕಾಪರಹಳ್ಳಿಯಲ್ಲಿ, ಪ್ರೌಢ ಶಿಕ್ಷಣವನ್ನು ಬೆಳಗೆರೆಯಲ್ಲಿ ಪಡೆದರು. ನಂತರದಲ್ಲಿ ಪದವಿ ಶಿಕ್ಷಣವನ್ನು ಸರ್ಕಾರಿ ಕಲಾ ಕಾಲೇಜು ಹಾಗೂ ಬಿ.ಇಡಿ ಪದವಿಯನ್ನು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ, ಚಿತ್ರದುರ್ಗದಲ್ಲಿ ಪೂರೈಸಿದರು. ಈ ಹಂತದವರೆಗೆ ತನ್ನ ಪ್ರಾದೇಶಿಕ ಪರಿಸರದಲ್ಲಿಯೇ ಬೆಳೆದ ಶ್ರೀಯುತರು ಸುತ್ತಮುತ್ತಲಿನ ಗ್ರಾಮಗಳಲ್ಲಿ ನೆಲೆಯೂರಿರುವ ಜಾನಪದ ಕಲೆಗಳಲ್ಲಿ ವಿಶೇಷವಾದ ಆಸಕ್ತಿ ತಾಳಿ ಕಲಾ ನೈಪುಣ್ಯತೆಯನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಕೋಲಾಟ ಮತ್ತು ಬಯಲಾಟದ ಕಲಾವಿದರಾಗಿಯೂ ತಮ್ಮನ್ನು ಗುರುತಿಸಿಕೊಂಡರು. ಹಾಗೆಯೇ ಸಾಮಾಜಿಕ ನಾಟಕ ಮತ್ತು ಆಧುನಿಕ ರಂಗಭೂಮಿ ಕ್ಷೇತ್ರದಲ್ಲಿಯೂ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸುವ ಮೂಲಕ ತಮ್ಮ ಶಿಕ್ಷಣವನ್ನು ಮುಂದುವರೆಸಿದರು.
ಶ್ರೀಯುತರು ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡಲು ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಪ್ರವೇಶ ಪಡೆದುಕೊಳ್ಳುವವರೆಗೂ ಜಾನಪದವನ್ನು ಶೈಕ್ಷಣಿಕ ಶಿಸ್ತಿಗೆ ಒಳಪಡಿಸುವ ಮಾದರಿಯನ್ನು ಅರಿತಿರಲಿಲ್ಲ. ತಮ್ಮ ಬದುಕಿನ ಸಹಜ ಭಾಗವಾಗಿ ಜನಪದವನ್ನು ತಮ್ಮೊಳಗೆ ಕರಗತ ಮಾಡಿಕೊಂಡು ಬಂದಿದ್ದರು. ಆದರೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಇವರಲ್ಲಿ ಅಂತರ್ಗತವಾಗಿದ್ದ ಜಾನಪದದ ಸೊಗಡು ಹಾಗೂ ಕಸುವನ್ನು ಹೊರಹಾಕುವುದಕ್ಕೆ ವೇದಿಕೆಯೊಂದು ಲಭಿಸಿತು. ಬಾಲ್ಯದ ದಿನಗಳಿಂದಲೂ ಜನಪದ ಲೋಕದಲ್ಲಿಯೇ ಬೆಳೆದ ಇವರಿಗೆ ಈ ಪ್ರಕಾರವನ್ನು ಶೈಕ್ಷಣಿಕ ಶಿಸ್ತಿನಲ್ಲಿ ಅಧ್ಯಯನ ಮಾಡಬೇಕೆಂಬ ಆಸಕ್ತಿಯಿಂದಾಗಿ ಜಾನಪದ ಡಿಪ್ಲೊಮೋ ಪದವಿಯನ್ನು ಆಯ್ದುಕೊಂಡು ಅಧ್ಯಯನ ಮುಂದುವರೆಸಿದರು. ಆಗ ಇವರ ಗುರುಗಳಾದ ಜಿ.ಶಂ.ಪರಮಶಿವಯ್ಯ ಅವರ ಒತ್ತಾಸೆಯಂತೆ ತಮ್ಮ ಗ್ರಾಮೀಣ ಪರಿಸರದಲ್ಲಿ ನೆಲೆಯೂರಿರುವ ಜಾನಪದ ಕಥೆಗಳನ್ನು ಸಂಪ್ರಬಂಧವಾಗಿ ವಿಶ್ವವಿದ್ಯಾಲಕ್ಕೆ ಸಲ್ಲಿಸಿದರು. ಈ ಸಂಪ್ರಬಂಧದಲ್ಲಿ ಹೆಸರಾಂತ ಜಾನಪದ ಕಥೆಗಾರನಾದ ಈರ ಬಡಪ್ಪನಿಂದ ಕಥೆಗಳನ್ನು ಕೇಳಿಸಿಕೊಂಡು, ಆ ಕಥೆಗಳನ್ನು ದೇಶಿ ಸೊಗಡಿನ ಯಥಾ ಭಾಷೆಯಲ್ಲಿ ನೈಜತೆಯೊಂದಿಗೆ ಕಟ್ಟಿಕೊಟ್ಟರು. ಆದ್ದರಿಂದ ಇದೊಂದು ಹೊಸ ಪ್ರಯೋಗವಾಗಿ ಜಾನಪದ ಲೋಕದಲ್ಲಿ ವಿಶಿಷ್ಟತೆಯನ್ನು ಪಡೆದುಕೊಂಡಿತು. ಹೆಸರಾಂತ ಜಾನಪದ ವಿದ್ವಾಂಸರಾದ ಜಿ.ಶಂ.ಪರಮಶಿವಯ್ಯ ಅವರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದುಕೊಂಡ ಈ ಸಂಪ್ರಬಂಧವು ‘ಕಲಮರಹಳ್ಳಿಯ ಕಥೆಗಳು’ ಎಂಬ ಪುಸ್ತಕ ರೂಪವನ್ನು ಪಡೆದುಕೊಂಡಿತು. ಈ ಕೃತಿಗೆ ಜಿ.ಶಂ.ಪ ಅವರೇ ಸ್ವತಃ ಆಸಕ್ತಿ ತಳೆದು ಮುನ್ನುಡಿಯನ್ನು ಸಹ ಬರೆದುಕೊಟ್ಟರು. 1986 ರಲ್ಲಿ ಈ ಕೃತಿಗೆ ‘ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ’ಯು ಪ್ರಶಸ್ತಿಯನ್ನು ನೀಡಿ ಗೌರವಿಸಿತು. ನಂತರದಲ್ಲಿ ಇದೇ ಜಾನಪದ ಕಲಾವಿದರಾದ ಈರ ಬಡಪ್ಪ ಅವರ ಜೀವನ ಚರಿತ್ರೆಯನ್ನು ಅನಾವರಣಗೊಳಿಸುವ ನೆಲೆಯಲ್ಲಿ ‘ಕಥಾ ಕಣಜ’ ಎಂಬ ಕೃತಿಯನ್ನು ಜಾನಪದ ಸಾಹಿತ್ಯ ವಲಯಕ್ಕೆ ನೀಡಿದ ಕೀರ್ತಿಯು ಮಲ್ಲಿಕಾರ್ಜುನ ಕಲಮರಹಳ್ಳಿಯವರಿಗೆ ಸಲ್ಲುತ್ತದೆ. ಇದರ ಫಲವಾಗಿ ಕಥೆಗಾರ ಈರ ಬಡಪ್ಪನವರು ಕೂಡ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಜಾನಪದ ಲೋಕದೊಳಗೆ ಬೆಳೆದ ಪ್ರತಿಭೆಯೊಂದು ತನ್ನ ಸುತ್ತಮುತ್ತಲಿನ ಪರಿಸರದಲ್ಲಿ ನೆಲಯೂರಿರುವ ಜಾನಪದ ಸೊಗಡನ್ನು ಅಧ್ಯಯನಕ್ಕೆ ಒಳಪಡಿಸಿ, ಅದರಿಂದ ತನಗೆ ಮಾತ್ರ ಕೀರ್ತಿಯನ್ನು ತಂದುಕೊಳ್ಳದೆ, ಎಲೆ ಮರೆಯ ಕಾಯಿಯಂತಿರುವ ನಿಜವಾದ ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಿದೆ. ಇದು ಜಾನಪದ ಲೋಕದೊಳಗೆ ಮಿಂದೆದ್ದ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿಯಂತಹ ವಿಶಿಷ್ಟ ವ್ಯಕ್ತಿತ್ವಗಳಿಗೆ ಮಾತ್ರ ಸಾಧ್ಯವಾಗುವ ಕೆಲಸ. ಇದರ ಹಿಂದೆ ಶ್ರೀಯುತರ ಶ್ರಮವು ಅಪಾರವಾಗಿದೆ. ತನ್ನ ಪರಿಸರ, ಸಮುದಾಯ, ಸಂಸ್ಕøತಿ, ಆಚಾರ ವಿಚಾರಗಳ ಮೇಲಿನ ಒಲವು ಇವರನ್ನು ಈ ಹಂತಕ್ಕೆ ಕೊಂಡೊಯ್ದಿದೆ. ಜಾನಪದದ ಆಗರವಾಗಿರುವ ಕಾಡುಗೊಲ್ಲ ಸಮುದಾಯವನ್ನು ಶೈಕ್ಷಣಿಕ ಶಿಸ್ತಿನ ಬಹುತ್ವದ ನೆಲೆಯಲ್ಲಿ ಸಂಶೋಧನೆಗೊಳಪಡಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ. ಇದರ ಫಲವಾಗಿಯೇ ‘ಕಾಡುಗೊಲ್ಲ ಕಾವ್ಯಗಳಲ್ಲಿ ಸಾಂಸ್ಕøತಿಕ ಸಂಘರ್ಷ’ ಎಂಬ ಮಹಾಪ್ರಬಂಧವನ್ನು ಕುವೆಂಪು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಷರೇಟ್ ಪದವಿಯನ್ನು ಪಡೆದುಕೊಂಡಿರುತ್ತಾರೆ. ಶ್ರೀಯುತರು ಸಾಹಿತ್ಯ ಮತ್ತು ಸಾಂಸ್ಕøತಿಕ ವಲಯದಲ್ಲಿ ವಿಶಿಷ್ಟವಾದ ಸೇವೆಯನ್ನು ಸಲ್ಲಿಸಿದ್ದಾರೆ. ಆ ಮೂಲಕವಾಗಿ ಬುಡಕಟ್ಟು ಸಂಸ್ಕøತಿಗಳ ಅಸ್ಮಿತೆಯನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದಾರೆ. ಇಷ್ಟೇ ಅಲ್ಲದೆ ವಿದ್ಯಾರ್ಥಿಗಳ ನೆಚ್ಚಿನ ಗುರುಗಳಾಗಿ, ಮಾರ್ಗದರ್ಶಕರಾಗಿ ತಮ್ಮ ಸೇವೆಯನ್ನು ಸಲ್ಲಿಸಿರುತ್ತಾರೆ. ಶೈಕ್ಷಣಿಕ ವಲಯದಲ್ಲಿ ಹಲವಾರು ಹುದ್ದೆ ಹಾಗೂ ಜವಬ್ದಾರಿಗಳನ್ನು ನಿರ್ವಹಿಸಿಕೊಂಡು ಬಂದಿರುತ್ತಾರೆ. ಶ್ರೀಯುತರು ಉತ್ತಮ ವಾಗ್ಮಿಯು ಮಾತ್ರವಲ್ಲದೆ ಸೃಜನಶೀಲ ಕವಿಯೂ ಹೌದು. ಇವರ ‘ಕಾಡು ಹಕ್ಕಿಯ ಹಾಡು’ ಕವನ ಸಂಕಲನವು ಇವರೊಳಗಿನ ಕವಿ ಗುಣವನ್ನು ಅನಾವರಣಗೊಳಿಸುತ್ತದೆ. ಶ್ರೀಯುತರ ಈ ಬಹುಮುಖಿ ವ್ಯಕ್ತಿತ್ವವನ್ನು ಪರಿಗಣಿಸಿ ಹಲವಾರು ಸನ್ಮಾನ ಮತ್ತು ಪ್ರಶಸ್ತಿಗಳು ಇವರ ಮುಡಿಗೇರಿವೆ. ಅವುಗಳೆಂದರೆ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ ಪುಸ್ತಕ ಬಹುಮಾನ (1986). ಸಂಕ್ರಮಣ ಕಾವ್ಯ ಬಹುಮಾನ (1988). ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ (2008) ಇತ್ಯಾದಿಯಾಗಿ ಹಲವಾರು ಸನ್ಮಾನಗಳು ಇವರಿಗೆ ಲಭಿಸಿವೆ. ಪ್ರಸ್ತುತದಲ್ಲಿ ಶೈಕ್ಷಣಿಕ ಕ್ಷೇತ್ರದ ಪ್ರಾಂಶುಪಾಲರ ಹುದ್ದೆಯಿಂದ ನಿವೃತ್ತಿ ಪಡೆದು ತಮ್ಮ ಶ್ರೀಮತಿ ಕುಸುಮಲತಾ, ಮಕ್ಕಳಾದ ಸೃಜನ್ ಹಾಗೂ ಸಿಂಚನ ಜೊತೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಈ ಸಮಯದಲ್ಲಿ ಅವರಿಂದ ಜಾನಪದ ಸಾಹಿತ್ಯ ಲೋಕ ಮತ್ತಷ್ಟು ಶ್ರೀಮಂತಗೊಳ್ಳಲಿ ಎಂಬುದು ನಮ್ಮ ಕನಸು.