ಅಂತರಂಗ

ಸದಾ ಒಲವಿನ ದೀವಿಗೆ ಹಚ್ಚಬಯಸುವ ಕವಿಯತ್ರಿ ಸುನೀತ ಪ್ರಕಾಶ್

Published

on

ಕೆಲವರ ವೃತ್ತಿ ಮತ್ತು ಪ್ರವೃತ್ತಿಗಳನ್ನು ಗಮನಿಸಿದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಒಂದಕ್ಕೊಂದು ಸಂಬಂಧವೇ ಇರದ ಎರಡು ದೋಣಿಗಳ ಪಯಣ ಅವರದ್ದು. ಆದರೂ, ಕೆಲವರು ಎರಡರಲ್ಲೂ ಸಮನ್ವಯ ಸಾಧಿಸಿ ಯಶಸ್ಸು ಪಡೆಯುತ್ತಾರೆ. ಆ ಕೆಲವರ ಸಾಲಿನಲ್ಲಿ ಕಂಡುಬರುವ ದಾವಣಗೆರೆಯ ಸುನೀತ ಪ್ರಕಾಶ್ ನಿಜಕ್ಕೂ ಅಚ್ಚರಿ ಮೂಡಿಸುತ್ತಾರೆ.

ನಿದಿರೆಗೆಡಿಸಿದ ಹವ್ಯಾಸ

ಸುಮಾರು 18 ವರ್ಷಗಳಿಂದ ಸುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುನೀತ ಪ್ರಕಾಶ್ ಅವರದ್ದು ಮನೆ, ಕುಟುಂಬ, ಹೆತ್ತವರ ಆರೈಕೆ ಹಾಗೂ ರೋಗಿಗಳ ಸೇವೆ ಸೇರಿದಂತೆ ಹಗಲಿರುಳು ಬಿಡುವಿಲ್ಲದ ಕಾರ್ಯತತ್ಪರತೆ. ಇಂತಹ ಅವಿರತ ಕಾಯಕದ ನಡುವೆ ಆಯಾಗಿ ಒಂದಷ್ಟು ವಿಶ್ರಾಂತಿ ಸಿಕ್ಕರೆ ಸಾಕು ನಿದ್ದೆಗೆ ಜಾರಿ ಬಿಡಬೇಕೆನ್ನಿಸುವುದು ಯಾರಿಗಾದರೂ ಸಹಜವೇ ಸರಿ. ಆದರೆ, ಈಗ್ಗೆ ಕಳೆದ 6 – 8 ತಿಂಗಳ ಹಿಂದಯಷ್ಟೇ ಇದ್ದಕ್ಕಿದ್ದಂತೆ ಮನದ ಮೂಲೆಯಲ್ಲಿ ಹುಟ್ಟಿಕೊಂಡ ಹವ್ಯಾಸವೊಂದು ನಿದ್ದೆ ಮಾಡಲು ಸಹ ಬಿಡದಂತೆ ಅವರನ್ನು ಕಾಡತೊಡಗಿತು. ಆ ಹವ್ಯಾಸಕ್ಕೆ ಸೋತು ಶರಣಾದ ಅವರಿಗೆ ಅಂದಿನಿಂದ ಬಿಡುವಿಲ್ಲದ ವೃತ್ತಿಯ ಜೊತೆ ಕವಿತೆ ಕಟ್ಟುವ ಕಾಯಕವು ಪ್ರವೃತ್ತಿಯಾಯಿತು. ಅಷ್ಟೇ ಅಲ್ಲ, ಎಡಬಿಡದೆ ಕಾಡಿದ ತನ್ನೊಳಗಿನ ಆ ಕಾವ್ಯಕನ್ನಿಕೆಗೆ ಕೆಲವೇ ದಿನಗಳಲ್ಲಿ ಹೊತ್ತಿಗೆಯ ರೂಪ ಕೊಟ್ಟು “ಒಲವಿನ ದೀವಿಗೆ”ಯನ್ನು ಹಚ್ಚುವಲ್ಲಿಯೂ ಸಹ ಯಶಸ್ವಿಯಾದರು ಸುನೀತ.

ಒಲವಿನ ದೀವಿಗೆ

ಅನುಭವಗಳೇ ಭಾವಲಹರಿಯಾಗಿ ಹೊರಹೊಮ್ಮಿ, ಕವಿತಾ ಗುಚ್ಛವಾಗಿ ಹೆಣೆದಿರುವ ಸುನೀತ ಪ್ರಕಾಶ್‍ರವರ ಚೊಚ್ಚಲ ಕವನ ಸಂಕಲನ – ಒಲವಿನ ದೀವಿಗೆ 2018ರ ಮೇ ತಿಂಗಳಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಲೋಕಾರ್ಪಣೆಗೊಂಡಿತು. ಇದು ತಮ್ಮ ಮೊದಲ ಕೃತಿಯಾದರೂ ಅನುಭವದ ಮೂಸೆಯೊಳಗಿನ ಭಾವ ಬೆಸುಗೆಯ ಗಂಭೀರ ಕವಿತೆಗಳ ಕಾರಣ ಈಗಾಗಲೇ ಹಲವು ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಸುನೀತ. ಹತ್ತಾರು ವರ್ಷಗಳಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ಮಗ್ನರಾಗಿರುವ ಅದೆಷ್ಟೋ ನಮ್ಮ ನಡುವಿನ ಕವಿ – ಕವಿಯತ್ರಿಯರು ಹಲವು ವರ್ಷಗಳ ನಂತರವೂ ಇನ್ನೂ ಪ್ರಾಥಮಿಕ ಹಂತದಿಂದ ಹೊರಬಂದಿರುವುದಿಲ್ಲ. ಅದೆನೋ ದುಗುಡ – ದುಮ್ಮಾನ, ಅವ್ಯಕ್ತ ಭಯ ಅವರನ್ನು ಆವರಿಸಿರುತ್ತದೆ. ಕೃತಿ ಹೊರ ತರುವ ಮನಸ್ಸಿರಲಿ ತಾವು ಬರೆದ ಕವನದ ಪ್ರಕಟಣೆಗೂ ಸಹ ಅಂಜುತ್ತಿರುತ್ತದೆ ಹಲವರ ಮನಸ್ಸು. ಆ ಕಾರಣಕ್ಕಾಗಿಯೇ, ಪರರ ವಿಚಾರ – ವಿಮರ್ಶೆಯ ಬಗ್ಗೆ ಎಳ್ಳಷ್ಟೂ ಯೋಚಿಸದೆ ತನ್ನೊಳಗೆ ಮೊಳಕೆ ಒಡೆದ ಆ ಕವಿತೆಗಳಿಗೆ ಅತಿ ಕಡಿಮೆ ಅವಧಿಯಲ್ಲಿಯೇ ಕೃತಿಯ ರೂಪ ಕೊಡುವ ನಿರ್ಧಾರ ತೆಗೆದುಕೊಂಡು ಆ ಸಂಕಲ್ಪದಲ್ಲಿ ಯಶಸ್ವಿಯೂ ಆದ ಸುನೀತ ವಿಭಿನ್ನ ಎನಿಸುತ್ತಾರೆ. ಮೂಲತಃ ಚನ್ನಗಿರಿ ತಾಲ್ಲೂಕಿನ ಮಧುರ ನಾಯಕನಹಳ್ಳಿಯ ಶಿವಪ್ಪ ಮತ್ತು ರತ್ನಮ್ಮ ದಂಪತಿಗಳ ಪುತ್ರಿಯಾಗಿರುವ ಸುನೀತ ಪ್ರಕಾಶ್ ಸುಮಾರು 10 ವರ್ಷಗಳಿಂದ ದಾವಣಗೆರೆ ಆಶ್ರಯ ಆಸ್ಪತ್ರೆಯಲ್ಲಿ ಸುಶ್ರೂಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ಸೇವೆ ಮಾಡುವುದರಲ್ಲಿ ಅವರಿಗೆ ಅತ್ಯಂತ ಪ್ರೀತಿ. ರೋಗಿಗಳಿಗೆ ಧೈರ್ಯ ತುಂಬಿ, ಸಾಂತ್ವಾನಿಸಿ, ಬಹುಬೇಗ ಅವರನ್ನು ಗುಣಮುಖರನ್ನಾಗಿಸುವ ಕಾರ್ಯದಲ್ಲಿ ಸುನೀತ ಅವರಿಗೆ ಎಲ್ಲಿಲ್ಲದ ಸಂತೋಷ. ಅಂತೆಯೇ, ಆ ಚಿಕಿತ್ಸಕ ಗುಣ ಅವರ ಕವಿತೆಗಳಲ್ಲೂ ಕಂಡುಬರುತ್ತದೆ.

ಕಾವ್ಯ ನಡಿಗೆ

ಕಾವ್ಯದ ಮೂಲಕ ಸದಾ ಒಲವಿನ ಹಣತೆ ಹಚ್ಚಲು ಬಯಸುವ ಸುನೀತ ಅವರ ಬಹುಪಾಲು ಕವಿತೆಗಳಲ್ಲಿ ಸಾಮಾಜಿಕ ಕಳಕಳಿ ಹಾಗೂ ಸಂದೇಶ ಅಡಗಿದೆ. ಜೀವನಾನುಭವ, ಹೆತ್ತವರ ಋಣ, ಗುರುವಿನ ಮಹಿಮೆ, ಕೃತಜ್ಞತೆ, ಕರ್ತವ್ಯ ಪ್ರಜ್ಞೆ, ನಾಗರೀಕತೆ, ಸೇವೆಯ ಮಹತ್ವ, ಕಾಯಕ ನಿಷ್ಠೆ, ಹೆಣ್ಣಿನ ಸ್ಥಾನಮಾನ ಮತ್ತು ಜವಬ್ದಾರಿಗಳು, ಹಿರಿಯರ ಬಗೆಗಿನ ಪ್ರೀತ್ಯಾದಾರ, ಮತದಾನದ ಜಾಗೃತಿ, ಪರಿಸರ ಕಾಳಜಿ, ಸಾಮಾಜಿಕ ಕಳಕಳಿಯಂತಹ ಹತ್ತು ಹಲವು ವಿಷಯಗಳ ಜೊತೆ ಮುಗ್ಧ – ಸ್ನಿಗ್ಧ ಪ್ರೀತಿಯ ನಿವೇದನೆಯ ಅವರ ಕವಿತೆಗಳು ಓದುಗರ ಮನಮುಟ್ಟುವ ಜೊತೆ ಮತ್ತೆ – ಮತ್ತೆ ಓದಬೇಕೆಂಬ ಹಂಬಲವನ್ನುಂಟು ಮಾಡುತ್ತವೆ.
ತನ್ನ ಈ ಸಾಹಿತ್ಯಿಕ ಪಯಣಕ್ಕೆ ಶುಭ ಕೋರಿ ಸಲಹೆ, ಸೂಚನೆ, ಸಹಾಯ – ಸಹಕಾರ ನೀಡಿ ಮಾರ್ಗದರ್ಶನದೊಂದಿಗೆ ಸಹಕರಿಸುತ್ತಿರುವ ಖ್ಯಾತ ಪತ್ರಕರ್ತರಾದ ಜಿ.ಎಂ.ಆರ್.ಆರಾಧ್ಯರವರು, ತಮ್ಮ ಕುಟುಂಬ ವರ್ಗ, ಆಶ್ರಯ ಆಸ್ಪತ್ರೆಯ ಮುಖ್ಯಸ್ಥರಾದ ಡಾ.ಮುದೇಗೌಡ್ರು ಶಿವಕುಮಾರ್ ಅವರನ್ನು ಒಳಗೊಂಡಂತೆ ಸರ್ವ ಸ್ನೇಹಿತರನ್ನು ಸಹ ಕೃತಜ್ಞತೆಯ ಭಾವದಿಂದ ಸ್ಮರಿಸಿ ವಂದಿಸುತ್ತಾರೆ ಸುನೀತ.

ಶುಭಾರೈಕೆ

ಸದಾ ಸೇವೆಗಾಗಿ ತುಡಿವ ಮನದ, ಹಸನ್ಮುಖಿ ಹಾಗೂ ಗಂಭೀರ ಚಿಂತಕಿಯೂ ಆಗಿರುವ ಸುನೀತ ಪ್ರಕಾಶ್ ಅವರ ಕಾವ್ಯ ಕೃಷಿ ನಿರಂತರ ಸಾಗಲಿ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರಿಗೊಂದು ಚಿರವಾದ ಸ್ಥಾನ ಹಾಗೂ ಗೌರವ ಸಿಗುವಂತಹ ಎತ್ತರಕ್ಕೆ ಅವರು ಏರಲಿ ಎಂದು ನಾವು ಶುಭ ಹಾರೈಸೋಣ.

– ಗಂಗಾಧರ ಬಿ.ಎಲ್ ನಿಟ್ಟೂರ್
ಮೊ.ಸಂ| 8867702396

Leave a Reply

Your email address will not be published. Required fields are marked *

Trending

Exit mobile version