ನೆಲದನಿ
ಗುಂಡು ಚೌಡಿಕೆ ಕಲಾವಿದೆ ರಾಮವ್ವ ಜೋಗತಿ ಬದುಕಿನ ಸುತ್ತ
ಭಾರತವು ವಿವಿಧ ಸಾಂಸ್ಕøತಿಕ ನೆಲೆಗಳ ಆಗರ. ಇಲ್ಲಿ ಏಕ ಪ್ರಕಾರವಾದ ಯಾವೊಂದು ಸಾಂಸ್ಕøತಿಕ ಅಂಶಗಳು ಕಂಡುಬರುವುದಿಲ್ಲ. ಪ್ರತಿಯೊಂದು ಸಂಸ್ಕøತಿ, ಆಚಾರ, ವಿಚಾರ, ನಂಬಿಕೆ, ಆಚರಣೆಗಳು ತಮ್ಮದೆ ಆದ ವಿಶಿಷ್ಟತೆಯೊಳಗೆ ಬೆಳೆದು ಬಂದಿವೆ. ವಿವಿಧತೆಯಲ್ಲಿ ಏಕತೆಯನ್ನು ಸಾಧಿಸುತ್ತ ಬಂದ ಭಾರತದ ಮಣ್ಣಿನೊಳಗೆ ವೈದಿಕ ಸಂಸ್ಕøತಿಯೊಂದು ಈ ನಾಡಿನ ನೆಲೆಮೂಲದ ಸಾಂಸ್ಕøತಿಕ ವೈಶಿಷ್ಟ್ಯತೆಯನ್ನು ನಗಣ್ಯವೆಂದು ಪರಿಭಾವಿಸಿ, ಇವುಗಳ ಸಮಾಜದ ಮುಂಚೂಣಿಗೆ ಬಾರದಂತೆ ನೊಡಿಕೊಂಡ ಕಾಲಘಟ್ಟದುದ್ದಕ್ಕೂ ಜನಸಾಮಾನ್ಯರ ಮನೆ ಮತ್ತು ಮನದಂಗಳದಲ್ಲಿ ಅಚ್ಚಳಿಯದೆ ತನ್ನ ಅನನ್ಯತೆಯನ್ನು ಕಾಯ್ದುಕೊಂಡಿದೆ. ವೈದಿಕ ನೆಲೆಯ ಶಿಷ್ಟ ಸಾಹಿತ್ಯದೆದುರು ನೆಲೆಮೂಲ ಬದುಕಿನ ಜನಪದ ಸಾಹಿತ್ಯವು ಜೀವಪರವಾದ ಆಶಯಗಳನ್ನು ಮೈಗೂಡಿಸಿಕೊಂಡು ಆಯಾ ಕಾಲದ ಚಾರಿತ್ರಿಕ ಬಿಕ್ಕಟ್ಟುಗಳನ್ನು ಮೀರುವ ಮತ್ತು ಒಳಗೊಳ್ಳುವ ಮೂಲಕ ತನ್ನದೆ ಆದ ವಿಶಿಷ್ಟತೆಯನ್ನು ಪಡೆದುಕೊಂಡಿದೆ. ಇಂತಹ ಜನಪದ ಸಾಹಿತ್ಯ ಹಾಗೂ ವಿವಿಧ ಪ್ರಕಾರಗಳನ್ನು ವಿವಿಧ ಪ್ರಕಾರದ ಕಲಾವಿದರು ತಮ್ಮ ಬದುಕಿನ ಭಾಗವಾಗಿ ಮುಂದುವರೆಸಿಕೊಂಡು ಬಂದಿದ್ದಾರೆ. ಇಂತಹ ವಿಶಿಷ್ಟ ಜನಪದ ಕಲೆಗಳಲ್ಲಿ ಚೌಡಿಕೆ (ಗುಂಡು ಚೌಡಿಕೆ) ಕಲೆಯೂ ಒಂದಾಗಿದೆ. ಜನಪದ ಕಲಾ ಪ್ರಕಾರಗಳಲ್ಲಿ ವಿಶೇಷವಾಗಿ ಕಂಡುಬರುವ ಚೌಡಿಕೆಯ ಮೂಲಕವೆ ಗುರುತಿಸಿಕೊಂಡಿರುವ ಜನಪದ ಕಲಾವಿದೆ ರಾಮವ್ವ ಜೋಗುತಿಯ ಬದುಕಿನ ಒಂದಿಷ್ಟು ಅನುಭವಗಳನ್ನು ಕಟ್ಟಿಕೊಡುವ ಆಶಯವನ್ನು ಪ್ರಸ್ತುತ ಲೇಖನವು ಒಳಗೊಂಡಿದೆ.
ಭಾರತೀಯ ಸಾಂಸ್ಕøತಿಕ ಲೋಕದೊಳಗಿನ ಬಹುತ್ವದೊಳಗೆ ‘ಜೋಗತಿ’ ಪರಂಪರೆಯು ಒಂದಾಗಿದೆ. ಈ ಜೋಗತಿ ಪರಂಪರೆಯೊಳಗೆ ‘ಗಂಡು ಜೋಗತಿ’ ಪರಂಪರೆಯ ವಿಶಿಷ್ಟ ಲೋಕವೊಂದು ನಮ್ಮೊಳಗಿದೆ. ಈ ಗಂಡು ಜೋಗತಿ ಪರಂಪರೆಯು ಧಾರ್ಮಿಕ ನಂಬಿಕೆ ಹಾಗೂ ದೀಕ್ಷೆಯೊಂದಿಗೆ ತನ್ನ ಜೀವನವನ್ನು ಸಾಗಿಸಿಕೊಂಡು ಬಂದಿರುವ ಬಗೆಗೆ ಹಲವಾರು ನಿದರ್ಶನಗಳು ನಮಗೆ ಕಂಡುಬರುತ್ತವೆ. ಈ ಗಂಡು ಜೋಗತಿ ಪರಂಪರೆಗೆ ಸೇರಿದ ರಾಮವ್ವ ಜೋಗತಿಯು ಬಳ್ಳಾರಿ ಜಿಲ್ಲೆ, ಹೊಸಪೇಟೆ ತಾಲ್ಲೂಕಿನ ಗೊಲ್ಲರಹಳ್ಳಿ ಎಂಬ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಶ್ರೀ ಮರಿಸೋಮಪ್ಪ ಹಾಗೂ ಶ್ರೀಮತಿ ಹನುಮವ್ವ ದಂಪತಿಗಳ ನಾಲ್ಕನೇ ಮಗನಾಗಿ ಜನಿಸಿದರು. ರಮೇಶ ಎಂಬ ಹೆಸರಿನಿಂದ ಗುರುತಿಸಿಕೊಂಡ ಇವರು ಬಾಲ್ಯದ ಶಿಕ್ಷಣವನ್ನು ಸ್ವಗ್ರಾಮದಲ್ಲೂ, ಪ್ರೌಢ ಶಿಕ್ಷಣವನ್ನು ಹೊಸಪೇಟೆಯಲ್ಲಿ ಪಡೆದರು. ಬಾಲ್ಯದ ದಿನಗಳಿಂದಲೂ ಹೆಚ್ಚಾಗಿ ಹೆಣ್ಣು ಮಕ್ಕಳೊಂದಿಗೆ ಬೆರೆಯುವ ಹವ್ಯಾಸವನ್ನು ಹೊಂದಿದ್ದ. ಹೀಗೆ ಬೆಳೆಯುವ ಮೂಲಕವಾಗಿ ಕೆಲವೊಂದು ಹೆಣ್ಣಿನ ಗುಣ ಸ್ವಭಾವಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡ ರಮೇಶನಿಗೆ ತನ್ನೊಳಗೆ ಪುರುಷತ್ವ ಮರೆಯಾಗಿ, ಹೆಣ್ತವು ಮನೆ ಮಾಡಿಕೊಂಡಿತು. ಪ್ರೌಢ ಶಿಕ್ಷಣ ಅಂತ್ಯಗೊಂಡ ತರುವಾಯದಲ್ಲಿ ವ್ಯಾಪಾರ ಮಾಡಬೇಕೆಂದು ಹಲವಾರು ಕೆಲಸ ಕಾರ್ಯಗಳಲ್ಲಿ ಮಗ್ನನಾದ ರಮೇಶನಿಗೆ ಯಾವುದೇ ಕೆಲಸ ಮಾಡಿದರು ಕೂಡ ಅದರಿಂದ ಸೂಕ್ತವಾದ ಲಾಭ ಸಿಗದೆ ನಷ್ಟವನ್ನು ಅನುಭವಿಸುವಂತಾಯಿತು. ಈ ವೇಳೆಗಾಗಲೆ ಹೆಣ್ತನವೊಂದು ರಮೇಶನೊಳಗೆ ಪ್ರಬಲವಾಗತೊಡಗಿತು. ತನ್ನೆಲ್ಲ ವ್ಯಾಪಾರದ ನಷ್ಟಕ್ಕೆ ದೇವರ ಶಾಪವೆಂಬುದು ಕೆಲವರ ನಂಬಿಕೆಯಾಗಿತ್ತು. ಆದರೆ ಇದೇ ವೇಳೆಗೆ ರಮೇಶನಿಗೆ ಮದುವೆ ಮಾಡಬೇಕೆಂದು ಮನೆಯವರೆಲ್ಲ ನಿರ್ಧರಿಸಿದಾಗ ತನ್ನೊಳಗೆ ಮರೆಯಾಗಿದ್ದ ಪುರುಷತ್ವದ ಬಗೆಗೆ ಹೇಳಿಕೊಳ್ಳಲಾಗದೆ ನಯವಾಗಿಯೇ ಈ ಮದುವೆಯನ್ನು ನಿರಾಕರಿಸುತ್ತಾನೆ. ಆದರೆ ಮನೆಯವರ ಒತ್ತಡಕ್ಕೆ ಒಳಗಾಗಿ ಮದುವೆಯನ್ನು ಮಾಡಿಕೊಂಡ ರಮೇಶ ಆ ಹೆಣ್ಣಿನೊಂದಿಗೆ ಸಾಂಸಾರಿಕ ಜೀವನ ನಡೆಸಲು ಸಾಧ್ಯವಾಗದೆ ಮನೆಯಿಂದ ಹೊರನಡೆದು 1996ರಲ್ಲಿ ‘ಕಾಳವ್ವ ಜೋಗತಿ’ಯ ಬಳಿ ಜೋಗತಿ ದೀಕ್ಷೆಯನ್ನು ಪಡೆದು ಸೀರೆಯುಟ್ಟು ರಮೇಶ ಎಂಬುವವನು ಸಂಪೂರ್ಣವಾಗಿ ರಾಮವ್ವನಾಗಿ ಗುರುತಿಸಿಕೊಳ್ಳುತ್ತಾ ಹೋದರು.
ಸಾಂಸಾರಿಕ ಬದುಕಿನಿಂದ ದೂರ ಸರಿದು ಜೋಗತಿ ದೀಕ್ಷೆ ಪಡೆದ ತರುವಾಯದಲ್ಲಿ ಕುಟುಂಬದ ಸದಸ್ಯರ ವಿರೋಧಕ್ಕೆ ಗುರಿಯಾಗುತ್ತಾರೆ. ಈ ಸಂದರ್ಭದಲ್ಲಿ ಇವರನ್ನು ಮನೆಯಿಂದ ಹೊರಗೆ ಹಾಕಲಾಗುತ್ತದೆ. ಆಗ ಕೊಪ್ಪಳದ ಸಮೀಪದಲ್ಲಿರುವ ಕಿನ್ನಾಳದಲ್ಲಿ ಸ್ವಲ್ಪದಿನ ಕಾಲಕಳೆದ ತರುವಾಯದಲ್ಲಿ ಹಗರಿಬೊಮ್ಮನಹಳ್ಳಿ ಸಮೀಪದ ಹಂಸಾಗರದಲ್ಲಿ ಸುಮಾರು ಹದಿನೈದು ವರ್ಷಗಳ ಕಾಲ ಕಾಳಮ್ಮ ಜೋಗತಿಯ ಆಸರೆಯಲ್ಲಿ ಜೀವನ ಸಾಗಿಸುತ್ತಾರೆ. ಹೀಗೆ ಹೆಣ್ತನ ಪಡೆದು ದೀಕ್ಷೆ ತೆಗೆದುಕೊಂಡ ರಾಮವ್ವ ಜೋಗತಿಗೆ ಕಾಳವ್ವ ಜೋಗತಿಯೇ ಗುರುವಾಗಿ, ತಾಯಿ ತಂದೆಯರಾಗಿ ಅಭಯ ನೀಡುತ್ತಾರೆ. ರಾಮವ್ವನಿಗೆ ತನ್ನಲ್ಲಿ ಅಂತರ್ಗತವಾಗಿ ನೆಲೆಯೂರಿದ್ದ ಜನಪದ ಕಲೆಯನ್ನು ಧಾರೆಯೆರೆಯುವ ಮೂಲಕವಾಗಿ ಕಾಳವ್ವ ಜೋಗತಿಯು ದೇವಿ ಹಾಡುಗಳನ್ನು ಹಾಡಲು ಶೃತಿ ನುಡಿಸುವಂತೆ ತರಬೇತಿ ನೀಡುತ್ತಾಳೆ. ತನ್ನ ಗುರುವಾದ ಕಾಳವ್ವ ಜೋಗತಿಯು ದೇವಿಯ ಪದಗಳನ್ನು ಹಾಡುತಿದ್ದರೆ, ರಾಮವ್ವ ಶೃತಿ ಬಾರಿಸುತಿದ್ದಳು. ಈ ಸಂದರ್ಭದಲ್ಲಿ ಕಾಳವ್ವನ ಮತ್ತೊಬ್ಬ ಶಿಷ್ಯೆಯಾದ ಹೊನ್ನೂರಮ್ಮ ಆಗ ಗುಂಡು ಚೌಡಿಕೆಯನ್ನು ನುಡಿಸುತ್ತಿದ್ದರು. ಆದರೆ ಹೊನ್ನೂರಮ್ಮ ಈ ತಂಡದಿಂದ ಮರಳಿದ ತರುವಾಯದಲ್ಲಿ ಚೌಡಿಕೆ ನುಡಿಸುವ ಕಲೆಯನ್ನು ರಾಮವ್ವ ಜೋಗತಿ ಕರಗತ ಮಾಡಿಕೊಂಡು, ನಂತರದಲ್ಲಿ ನಾಟಕ ಪ್ರದರ್ಶನದಲ್ಲೂ ತಮ್ಮನ್ನು ತೊಡಗಿಸಿಕೊಂಡರು.
ತನ್ನ ಕೌಟುಂಬಿಕ ಪರಿಸರದಿಂದ ದೂರ ಸರಿದ ತರುವಾಯದಲ್ಲಿ ಕಾಳವ್ವ ಜೋಗುತಿಯೇ ಆಸರೆಯಾಗಿ ನಿಂತರು. ಈ ಸಂದರ್ಭದಲ್ಲಿ ಕಾಳವ್ವ ಜೋಗತಿಯ ಮತ್ತೊಬ್ಬ ಹೆಸರಾಂತ ಶಿಷ್ಯೆಯಾದ ಕಲಾವಿದೆ ಮಂಜಮ್ಮ ಜೋಗತಿಯ ಆಪ್ತತೆಯು ಇಲ್ಲಿ ಲಭಿಸಿತು. ಹೀಗೆ ಸಮಾನ ಮನಸ್ಥಿತಿಯ ಒಂದೆಡೆ ಸೇರಿ 1997 ರಿಂದ ಪೌರಾಣಿಕ ನಾಟಕಗಳನ್ನು ಪ್ರದರ್ಶನ ಮಾಡುವತ್ತ ತಮ್ಮ ಗಮನವನ್ನು ಹರಿಸಿದರು. ಆರಂಭಿಕ ಹಂತದಲ್ಲಿ ಕಾಳವ್ವ ಜೋಗತಿಯ ಮಾರ್ಗದರ್ಶನದಂತೆ ಶೃತಿ ಮತ್ತು ಗುಂಡು ಚೌಡಿಕೆಯನ್ನು ಹಿಡಿದು ಇಬ್ಬರೆ ಹಾಡುವ ಮೂಲಕವಾಗಿ ಪುರಾಣದ ಎಲ್ಲಾ ಪಾತ್ರಗಳನ್ನು ತೋರ್ಪಡಿಸುತ್ತಿದ್ದರು. ಆದರೆ ಬದಲಾದ ಕಲಾಕ್ಕೆ ತಕ್ಕಂತೆ ಕೆಲವು ಬದಲಾವಣೆಗಳೊಂದಿಗೆ ಹೊಸ ಮಾರ್ಪಾಡುಗಳನ್ನು ಮಾಡಿಕೊಂಡು ಪ್ರತ್ಯೇಕವಾಗಿ ಬಣ್ಣ ಹಾಕುವ ಮೂಲಕವಾಗಿ ಪೌರಾಣಿಕ ಪಾತ್ರಗಳನ್ನು ಪ್ರದರ್ಶನ ಮಾಡುವಂತಹ ವಿಶಿಷ್ಟ ಮತ್ತು ಜನಪ್ರಿಯ ಪ್ರಕಾರದತ್ತ ತಮ್ಮ ಚಿತ್ತವನ್ನು ಕೇಂದ್ರಿಕರಿಸಿದರು. ಆಗ ರಾಮವ್ವ ಜೋಗುತಿಯು ಸಹ ಪುರಾಣ ಪಾತ್ರಗಳಾದ ಶಿವ, ಕಾರ್ತಿವಿರ್ಯಾರ್ಜುನ, ಕುರುಬರ ಬೀರಣ್ಣ, ಮಡಿವಾಳ ಮಾಚಯ್ಯ, ಬ್ರಹ್ಮ, ದೇವೇಂದ್ರ ಮುಂತಾದ ಪಾತ್ರಗಳಿಗೆ ಬಣ್ಣ ಹಾಕುವ ಮೂಲಕವಾಗಿ ಕಲಾ ಲೋಕಕ್ಕೆ ತಮ್ಮದೇ ಆದ ಕಾಣಿಕೆಯನ್ನು ನೀಡಿದ್ದಾರೆ. ಕಾಳವ್ವ ಜೋಗತಿ ಹಾಗೂ ಮಂಜಮ್ಮ ಜೋಗತಿಯ ತಂಡದ ಸದಸ್ಯಳಾಗಿ ಮುನ್ನಡೆದ ರಾಮವ್ವ ಜೋಗತಿಯು ಹಲವಾರು ಪುರಾಣ ಪಾತ್ರಗಳ ಮೂಲಕವಾಗಿ ಜನಮಾನಸದಲ್ಲಿ ತನ್ನ ಕಲಾಭಿನಯವನ್ನು ನೆಲೆಯೂರುವಂತೆ ಮಾಡಿರುತ್ತಾರೆ.
ರಾಮವ್ವ ಜೋಗತಿಯು ತನ್ನಲ್ಲಿ ಸ್ವಾಭಾವಿಕವಾಗಿ ಮನೆ ಮಾಡಿಕೊಂಡ ಹೆಣ್ತನದಿಂದಾಗಿ ಕುಟುಂಬದಿಂದ ಹೊರದೂಡಲ್ಪಟ್ಟರು. ಆದರೆ ಕಾಳವ್ವ ಜೋಗತಿ ಮತ್ತೇ ಈ ತಾಯಿಯನ್ನು ಕುಟುಂಬದೊಂದಿ ಬೆರೆಯುವಂತೆ ಅವರ ಮನೆಯವರಿಗೆ ತಿಳಿ ಹೇಳಿ ಕುಟುಂಬದೊಂದಿಗೆ ಇವರ ಬಾಂದವ್ಯವು ಮತ್ತೇ ಚಿಗುರುವಂತೆ ಮುಂದಾಳತ್ವವಹಿಸಿಕೊಂಡು ಯಶಸ್ವಿಯಾದರು. ಆ ನಂತರದಲ್ಲಿ ರಾಮವ್ವನನ್ನು ಅತಿಯಾಗಿ ದ್ವೇಷಿಸುತಿದ್ದ ತಂದೆ ತಮ್ಮ ಮಗನನ್ನು ಅಮ್ಮನೆಂದು ಸ್ವೀಕರಿಸಿದರು. ಕೊನೆಗಾಲದಲ್ಲಿ ತಂದೆಯ ಹಾರೈಕೆಯ ಮಹತ್ತರ ಜವಬ್ದಾರಿಯನ್ನು ರಾಮವ್ವ ನಿರ್ವಹಿಸಿದರು. ಇಂದು ತಮ್ಮ ಅಣ್ಣ ಅತ್ತಿಗೆಯು ಬಿಟ್ಟು ಇಹಲೋಕ ತ್ಯಜಿಸಿದ ಮಕ್ಕಳಿಗೆ ಪ್ರೀತಿಯ ಅಮ್ಮನಾಗಿ ಅವರ ಪಾಲನೆ ಮತ್ತು ಪೋಷಣೆಯ ಜವಬ್ದಾರಿಯನ್ನು ರಾಮವ್ವ ಜೋಗತಿಯು ನಿರ್ವಹಿಸುತ್ತಿದ್ದಾರೆ. ಕುಟುಂಬದೊಂದಿಗೆ ಅತಿಯಾದ ಜವಬ್ದಾರಿ ಹಾಗೂ ಬಾಂದವ್ಯವನ್ನು ಹೊಂದಿದ್ದರು ಸಹ ಇವರು ಕಾಳವ್ವ ಜೋಗತಿಯು ಹುಟ್ಟುಹಾಕಿದ ಈ ಕೂಡು ಕುಟುಂಬದಿಂದ ದೂರ ಸರಿದಿಲ್ಲ. ಕಾಳವ್ವನ ನಂತರ ಮಂಜವ್ವ ಜೋಗತಿಯನ್ನೆ ತನ್ನ ಗುರುವಾಗಿ, ತಂದೆ ತಾಯಿಯಾಗಿ ನಂಬಿಕೊಂಡು ತಮ್ಮ ಕಲಾ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ.
ರಾಮವ್ವ ಜೋಗತಿಯು ಈ ಜೋಗತಿ ತಂಡದೊಂದಿಗೆ ತನ್ನನ್ನು ಗುರುತಿಸಿಕೊಂಡು ಹಲವಾರು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕವಾಗಿ ತಮ್ಮ ಕಲಾ ಪ್ರತಿಭೆಯನ್ನು ಮುಂದುವರೆಸಿಕೊಂಡು ಬಂದಿದ್ದು, ಗುಂಡು ಚೌಡಿಕೆಯ ಪರಿಣಿತ ಕಲಾವಿದರಾಗಿ ನಮ್ಮ ಮುಂದೆ ನಿಂತಿದ್ದಾರೆ. ಜಾನಪದ ಸರಿಯಂತಿರುವ ಈ ತಾಯಿಯು ತನ್ನಲ್ಲಿರುವ ಈ ಕಲೆಯ ಜೊತೆಗೆ ಹಲವಾರು ಚೌಡಿಕೆ ಪದ ಮತ್ತು ಸೋಬಾನೆ ಪದಗಳನ್ನು ತನ್ನಲ್ಲಿ ಗರ್ಭೀಕರಿಸಿಕೊಂಡಿದ್ದಾರೆ. ಇವರ ಈ ಸಾಧನೆಗೆ 2016 ರಲ್ಲಿ ‘ಜಾನಪದ ಅಕಾಡೆಮಿ’ ಪ್ರಶಸ್ತಿ, 2017 ರಲ್ಲಿ ‘ಜಾನಪದ ಲೋಕ’ ಪ್ರಶಸ್ತಿ ಪ್ರಶಸ್ತಿಯು ಮಾತ್ರವಲ್ಲದೆ ನಾಡಿನ ವಿವಿಧ ಭಾಗದ ಸಂಘ ಸಂಸ್ಥೆಗಳಿಂದ ಹಲವಾರು ಸನ್ಮಾನಗಳನ್ನು ನೀಡಿ ಗೌರವಿಸಲಾಗಿದೆ.