ಭಾಮಿನಿ
ಅವಳು ಎಲ್ಲರಂತಲ್ಲ…!
ಅವಳು,ಸಂಪ್ರದಾಯಗಳನ್ನು ಆಚರಿಸುವುದಿಲ್ಲ , ಆದರೆ ಗೌರವಿಸುತ್ತಾಳೆ !!
ಹಣೆಗೆ ಕುಂಕುಮ ,ರೇಶಿಮೆ ಸೀರೆ , ಬೈ ತಲೆ ಬೊಟ್ಟು, ಕೈತುಂಬ ಬಳೆ ಮುಡಿಗೆ ಮಲ್ಲಿಗೆ ಒಂದಾ ಎರಡಾ . ಇವೆಲ್ಲವನ್ನು ಬಾಚಿ ಅಪ್ಪಿಕೊಂಡವರು ನಮ್ ಹುಡಿಗೀರು. ಆದರೆ ಅವಳಿಗೆ ಅದ್ಯಾವುದೂ ಇಷ್ಟ ಇಲ್ಲ. ಜೀನ್ಸ್ ತೊಟ್ಟರೆ ಅದೇ ಅವಳ ಕಂಫರ್ಟ್ ..ಬೇರೆ ಹುಡುಗಿಯರಂತೆ ನಾಚಿ ನೀರಾಗುವುದಿಲ್ಲ. ಕನ್ನಡಿ ಮುಂದೆ ಗಂಟೆ ಗಟ್ಟಲೇ ನಿಲ್ಲುವುದಿಲ್ಲ. ಆದರೂ ಅವಳಿಗೆ ಅವಳೇ ಅಪ್ರತಿಮ ಸುಂದರಿ ……..
ಹೊರಬಂದಾಗ ಗುಲಾಬಿ ಅರಳಿರುವುದ ಕಂಡು ಕಿತ್ತು ಮುಡಿಯಬೇಕು ಎಂದು ಕೊಳ್ಳುವುದಿಲ್ಲ. ಮುಳ್ಳಿನ ನಡುವೆಯೂ ಅರಳಿ ನಗುವ ನಿನ್ನ ಧೈರ್ಯ ಕ್ಕೊಂದು ಸಲಾಂ ಹೂವೇ ಎನ್ನುವಳು…. ಬಸ್ ನಲ್ಲಿ ಅಜ್ಜಿ ನಿಂತಿದ್ದರೆ ತನ್ನ ಸೀಟನ್ನು ಅಜ್ಜಿಗೆ ಬಿಟ್ಟು ಕೊಟ್ಟು ನಿನ್ನ ಸಂತಾನ ಸಾವ್ರ ಆಗ್ಲಿ ಎಂದು ಹೊಗಳಿಸಿ ಕೊಳ್ಳುವುದಿಲ್ಲ. ಬದಲಿಗೆ ತನಗಿಂತ ಭಾರದ ಸ್ಕೂಲ್ ಬ್ಯಾಗ್ ಹೊತ್ತ ಶಾಲಾ ಬಾಲಕಿಯನ್ನು ಕರೆದು ಕೂರಿಸಿ ಅವಳು ಥ್ಯಾಂಕ್ಯೂ ಅಕ್ಕ ಎಂದು ನಕ್ಕಾಗ ಆ ನಿಷ್ಕಲ್ಮಶ ನಗುವನ್ನು ಕಂಡು ಥ್ಯಾಂಕ್ಸ್ ಹೇಳಿದ ಗುಣವನ್ನು ಕಂಡು ಆ ಮಗುವಿನ ಗಲ್ಲ ಸವರಿ ಅವಳೂ ನಗುವಳು. ಎಲ್ಲರಂತೆ ಹೋಗುವಾಗ ಬರುವಾಗ , ಬಸ್ಸಿನಲ್ಲಿ ಕೂತಾಗ ,ನಿಂತಾಗೆಲ್ಲಾ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ತಾಂತ್ರಿಕ ಜಗತ್ತಿನೊಳಗೆ ವಾಸ್ತವಿಕ ಸುಂದರ ಜಗತ್ತನ್ನು ಮರೆಯುವುದಿಲ್ಲ. ಕಿಟಕಿ ಯಾಚೆ ಬೀಸುವ ತಂಗಾಳಿಗೆ ಮನಸೋತು ಮುಗುಳ್ನಗುತ್ತಾ ತಾನೇ ಹಾಡು ಹಾಡುತ್ತಾ ಪ್ರಯಾಣದ ಸುಖವನ್ನ ಅನುಭವಿಸುವಳು. ರೋಡ್ ಕ್ರಾಸ್ ಮಾಡುವಾಗ ಒಟ್ಟಿಗೆ ಕೈ ಹಿಡಿದು ರಸ್ತೆ ದಾಟುವ ಆ ಕಾಲದ ದಂಪತಿಗಳನ್ನು , ಎದ್ದೂ ಬಿದ್ದೂ ಜಗಳವಾಡುವ ಈ ಕಾಲದ ದಂಪತಿಗಳಿಗೂ ತುಲನೆ ಮಾಡಿ ಒಂದು ಕ್ಷಣ ನಕ್ಕರೂ ಒಂದೆರಡು ಕ್ಷಣ ಆ ಕುರಿತು ಗಂಭೀರ ಚಿಂತನೆ ಮಾಡುವಳು…..
ಎಲ್ಲರಂತೆ ರಕ್ತಸಂಬಂಧಗಳೊಂದಿಗೆ ಭಾವನಾತ್ಮಕ ನಂಟಿಗೆ ಅಂಟಿಕೊಳ್ಳದೇ , ಪ್ರಾಕ್ಟಿಕಲ್ ಜೀವನಕ್ಕೆ ಹೊಂದಿಕೊಂಡವಳು..ಎಲ್ಲರಂತೆ ಪ್ರೀತಿ ಹಿಂದೆ ಓಡದೇ ತನ್ನೆಲ್ಲಾ ಭಾವನೆಗಳಿಗೆ ಬೇಲಿ ಹಾಕಿ ತನ್ನ ಬಗ್ಗೆ ತಾನೇ ಹೆಮ್ಮೆ ಪಡುವಷ್ಟರ ಮಟ್ಟಿಗೆ ಬದುಕುತ್ತಾ ಅನುಭವಗಳಿಗಿಂತ ತಿಳುವಳಿಕೆಯೇ ಮುಖ್ಯ ಎಂದು ನಂಬಿದವಳು….ಮನಸಿನ ಮಾತುಗಳಿಗೆ ಕಿವಿಗೊಡದೇ ಬುದ್ಧಿ ಮಾತುಗಳಿಗೆ ಪ್ರಾಶಸ್ತ್ಯ ನೀಡುವಳು…ಶಾಸ್ತ್ರ ಸಂಪ್ರದಾಯಗಳನ್ನು ಆಚರಿಸುವ ಗೋಜಿಗೆ ಹೋಗದಿದ್ದರೂ ಹಬ್ಬ ಹರಿದಿನ ದಂತಹ ಆಚರಣೆಗಳು ದೂರವಿರುವ ಸಂಬಂಧಗಳನ್ನು ಹತ್ತಿರಕ್ಕೆ ತರುವುದನ್ನು , ಮರೆಯಾದವರನ್ನು ನೆನಪಿಸುವುದನ್ನು ಕಂಡು ಅವುಗಳಿಗೆ ಕೃತಜ್ಞತೆ ಸಲ್ಲಿಸುವಳು….ಎಂದಿಗೂ ಸಂಪ್ರದಾಯಗಳನ್ನು ಆಚರಿಸಿದವಳಲ್ಲ .ಆದರೆ ಗೌರವಿಸುವಳು…
ಯೌವನದಲ್ಲಿ ಎಲ್ಲರಂತೆ ಗಂಡ ಮನೆ ಮಕ್ಕಳು ಸಂಸಾರ ಎಂದು ಆಸೆ ಪಡಲಿಲ್ಲ. ಬದುಕಿನ ಸುಂದರ ಹಾದಿಯಲ್ಲಿ ಒಬ್ಬಳೇ ಸಾಗಲು ಬಯಸಿ, ಒಂಟಿತನದ ಸುಖವನ್ನು ಕಂಡುಕೊಂಡವಳು.. ಭಾವನೆಗಳ ಬಲೆಗೆ ಸಿಲುಕದೇ ಸ್ವತಂತ್ರ ಜೀವನ ವನ್ನು ಕಟ್ಟಿಕೊಳ್ಳಬೇಕೆಂದು ಹಂಬಲಿಸಿದವಳು…ಕೈಲಾಗದವರಿಗೆ ಸಹಾಯ ಮಾಡಿ ದೊಡ್ಡವಳೆನಿಸಿಕೊಳ್ಳಲಿಲ್ಲ..ಜೀವನದ ಸಣ್ಣ – ಸಣ್ಣ ಖುಷಿಗಳನ್ನೇ ದೊಡ್ಡದಾಗಿ ಅನುಭವಿಸುತ್ತಾ, ಮಧ್ಯರಾತ್ರಿಯ ನೀರವತೆಯ ಮೌನವನ್ನು ಏಕಾಂಗಿಯಾಗಿ ಆಸ್ವಾದಿಸುವಳು. ಜೊತೆಗೂಡಿ ಬದುಕುವುದು ಕಷ್ಟ ಎಂದುಕೊಳ್ಳಲಿಲ್ಲ, ಆದರೆ ಅದರಾಚೆಗಿನ ಸುಂದರ ಬದುಕೊಂದನ್ನು ಕಟ್ಟಿಕೊಳ್ಳಲು ಬಯಸಿದವಳು…ಕುರುಡರು ಕಿವುಡರು ಮೂಕರನ್ನು ಕಂಡು ಬೇರೆಯವರಂತೆ ಸಿಂಪತಿ ತೋರಿಸುವುದಿಲ್ಲ..ಅವರವರ ಪ್ರಪಂಚದಲ್ಲಿ ಅವರವರಿಗೆ ದಕ್ಕಿದ್ದರಲ್ಲೇ ಖುಷಿಯಾಗಿರುವ ಕೆಟ್ಟದನ್ನು ನೋಡದ, ಕೆಟ್ಟದನ್ನು , ಕೇಳದ ಆ ಜೀವಗಳ ಬಗ್ಗೆ ಪ್ರೀತಿ ಹೊಂದಿದವಳು.. ಆಧುನಿಕ ಜಗತ್ತಿನ ಯಾವುದೇ ಗಾಳಿ ಹಿಡಿಯದ ಆ ಮುಗ್ಧ ಭಾವಜೀವಿಗಳನ್ನು ಗೌರವಿಸುತ್ತಾ , ಅವರ ನಗುವಿನ ಮೇಲೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಮನದಲ್ಲೇ ಪ್ರಾರ್ಥಿಸುವಳು..ಏಕೆಂದರೆ ಅವರನ್ನು , ಅವರ ಮುಗುಳ್ನಗುವನ್ನು ಹತ್ತಿರದಿಂದ ಕಂಡು ಸಂತಸ ಎಂದರೆ ಏನೆಂಬುದನ್ನು ಅವರ ನೋಡಿ ಕಲಿತಳು…
ಅವಳೆಂದೂ ದೇವರ ಇರುವಿಕೆಯನ್ನು ಪ್ರಶ್ನಿಸುವುದಿಲ್ಲ. ದೇವಸ್ಥಾನಕ್ಕೆ ಹೋಗಿ , ಸಾವಿರಾರು ಭಕ್ತರನ್ನು ಕಂಡು ಇವರನ್ನೆಲ್ಲಾ ತನ್ನ ಕಪಿಮುಷ್ಠಿಯಲ್ಲಿಟ್ಟುಕೊಂಡ ಭಗವಂತನೆಂಬ ಅದ್ಭುತ ಪ್ರತಿಭೆಯನ್ನ ಕೊಂಡಾಡುತ್ತಾ ತನ್ನ ಇರುವಿಕೆಯ ನಂಬಿಕೆಯಲ್ಲಾದರೂ ಅಲ್ಪ ಸ್ವಲ್ಪ ಮನುಷ್ಯತ್ವ ವನ್ನು ಜನರಲ್ಲಿ ಉಳಿವಂತೆ ಮಾಡಿದ ದೇವರಿಗೆ ಕೈ ಎತ್ತಿ ಮುಗಿಯುವಳು.. ದಬ್ಬಾಳಿಕೆಯನ್ನು ಎಂದೂ ಸಹಿಸುವುದಿಲ್ಲ. ಅಸಮಾನತೆಯನ್ನು ಬೆಂಬಲಿಸುವುದಿಲ್ಲ . ದೌರ್ಜನ್ಯವನ್ನು ಕಂಡಾಗ ಕಣ್ಣಿದ್ದೂ ಕುರುಡರಂತೆ ನಟಿಸುವುದಿಲ್ಲ. ಪ್ರತಿಭಟಿಸುತ್ತಾಳೆ ತನ್ನದೇ ಮಾರ್ಗದಲ್ಲಿ.ಆಧುನಿಕ ಟ್ರೆಂಡ್ ಗಳು ವ್ಯಕ್ತಿಗತ ಖುಷಿಗಳನ್ನು ನೀಡಿದರೇ ಹಳೆಯ ಸಂಪ್ರದಾಯಗಳು ಕೌಟುಂಬಿಕ ಖುಷಿ ನೀಡುವವು ಎಂಬುದನ್ನು ಅಪ್ಪಿಕೊಂಡು , ಒಪ್ಪಿಕೊಂಡು ಎರಡಕ್ಕೂ ಸಮಾನ ಗೌರವ ನೀಡುತ್ತಾ ಬದಲಾವಣೆ ಜಗದ ನಿಯಮ ಎಂಬುದನ್ನು ಕಣ್ಣು ಮುಚ್ಚಿ ಒಪ್ಪಿಕೊಂಡವಳು.. ಕಾಣುವಂತೆ ಯಾರಿಗೂ ಸಹಾಯ ಮಾಡಲಿಲ್ಲ. ಅದು ಸಹಾಯವೆಂದುಕೊಳ್ಳದೇ ಕಾಣದ ಕೈಗಳಂತೆ ಹಿಂದೆ ನಿಂತು ತನ್ನ ಕರ್ತವ್ಯವೆಂದು ಭಾವಿಸಿ, ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವಳು.. ಸ್ವಪ್ರತಿಷ್ಠೆ , ಅಹಂಕಾರ, ಸಾಹಸ ಪ್ರವೃತ್ತಿ ಇವುಗಳನ್ನು ತನ್ನೊಳಗೆ ನೀರೆರೆದು ಪೋಷಿಸಿವಳು.
ಆಕಾಶಕ್ಕೆ ಏಣಿ ಹಾಕುವ ಕನಸು ಕಾಣಲಿಲ್ಲ. ಏಣಿ ಹಾಕಲು ಹೋಗಿ ಕಣ್ಮುಂದೆ ಇರುವ ಅದೆಷ್ಟೋ ಅದ್ಭುತಗಳನ್ನು ಅನುಭವಿಸುವ ಭಾಗ್ಯವನ್ನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. ನಕ್ಕು ನಗಿಸುವವರೇ ನಿಜವಾದ ಮನುಷ್ಯರು ಎಂದು ಹೇಳುತ್ತಾ ,ಅವರಿಗೆ ವಂದಿಸುತ್ತಾ ಇರುವಷ್ಟೂ ದಿನ ಅವರಿವರಂತೆ ಬದುಕಬೇಕು ಎಂದುಕೊಳ್ಳದೇ ತನ್ನಂತೆ ತಾನು ಬದುಕಬೇಕೆಂದುಕೊಂಡವಳು.. ಯಾಕೆಂದರೆ ಅವಳು ಎಲ್ಲರಂತಲ್ಲ…