ನೆಲದನಿ
ಕನ್ನಡ ಸಾಹಿತ್ಯದ ಬಂಡಾಯದ ಕಿಡಿ: ಅಲ್ಲಮಪ್ರಭು ಬೆಟ್ಟದೂರು ಬದುಕಿನ ಕಥನ
ಕನ್ನಡ ಸಾಹಿತ್ಯ ಪರಂಪರೆಯು ಸುದೀರ್ಘವಾದ ಐತಿಹಾಸಿ ಹಿನ್ನಲೆಯನ್ನು ಒಳಗೊಂಡಿದೆ. ಇಂತಹ ಕನ್ನಡ ಸಾಹಿತ್ಯ ಪರಂಪರೆಯು ಕಾಲದಿಂದ ಕಾಲಕ್ಕೆ ವರ್ತಮಾನದ ತುರ್ತಿಗೆ ಪೂರಕವಾದ ನೆಲೆಯಲ್ಲಿ ತನ್ನ ಆಶಯಗಳನ್ನು ಅಭಿವ್ಯಕ್ತಿಸುವ ನೆಲೆಯಲ್ಲಿ ಬೆಳೆದುಬಂದಿದೆ. ಕನ್ನಡ ಸಾಹಿತ್ಯವು ತನ್ನಲ್ಲಿ ಮಡಿವಂತಿಕೆಯನ್ನು ಕಾಪಾಡಕೊಳ್ಳದೆ ಸಮಾಜಮುಖಿಯಾಗಿ ಸ್ಪಂದಿಸುತ್ತ ಬಂದಿದೆ. ಇದರ ಫಲವಾಗಿ ಈ ಸಾಹಿತ್ಯ ಪ್ರಕಾರವು ಕ್ರಿಸ್ತಪೂರ್ವದಿಂದ ಸಮಕಾಲೀನ ಸಂದರ್ಭದವರೆಗೆ ಹಲವಾರು ಅವಸ್ಥಾಂತಗಳ ಮೂಲಕ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡು ಮುನ್ನಡೆದಿದೆ. ಹೀಗಾಗಿಯೇ ಪೂರ್ವದ ಹಳಹನ್ನಡ, ಹಳಗನ್ನಡ, ನಡುಗನ್ನಡ ಹಾಗೂ ಹೊಸಗನ್ನಡ ಎಂಬ ವಿವಿಧ ಕಾಲಘಟ್ಟಗಳನ್ನು ದಾಟುವ ಮೂಲಕ ತನ್ನ ಗಟ್ಟಿತನವನ್ನು ವಿಸ್ತರಿಸುತ್ತ ಶ್ರೀಮಂತ ಭಾಷೆಯಾಗಿ ಕಂಗೊಳಿಸುತ್ತಿದೆ. ಹೀಗೆ ಬೆಳೆದುಬಂದ ವಿವಿಧ ಅವಸ್ಥಾಂತರಗಳಲ್ಲಿ ನಮ್ಮ ಮುಂದಿರುವ ಹೊಸಗನ್ನಡವು ವಿಸ್ತ್ರøತ ಸ್ವರೂಪವನ್ನು ಪಡೆದುಕೊಂಡು ಮುನ್ನಡೆದಿದೆ. ಹೊಸಗನ್ನಡದಲ್ಲಿ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಹಾಗೂ ದಲಿತ ಸಾಹಿತ್ಯ ಎಂಬ ವಿಶಿಷ್ಟ ಪ್ರಕಾರಗಳ ಮೂಲಕವಾಗಿ ಕನ್ನಡ ಸಾಹಿತ್ಯವು ತನ್ನ ಅನನ್ಯತೆಯನ್ನು ಕಾಯ್ದುಕೊಂಡು ಬಂದಿದೆ. ಹೊಸಗನ್ನಡದ ಬಂಡಾಯ ಮತ್ತು ದಲಿತ ಸಾಹಿತ್ಯವು ವಿಶಿಷ್ಟವಾಗಿ ದನಿಯಿಲ್ಲದವರ ದನಿಯಾಗಿ, ನೆಲದ ನೋವುಗಳಿಗೆ ಸ್ಪಂದಿಸುವ ನೆಲೆಯಲ್ಲಿ ತನ್ನ ಗುಣ ಮತ್ತು ಸ್ವರೂಪಗಳಲ್ಲಿ ಬದಲಾವಣೆಯನ್ನು ಕಂಡುಕೊಂಡಿದೆ. ‘ಖಡ್ಗವಾಗಲಿ ಕಾವ್ಯ’ ಎಂಬ ಘೋಷವಾಕ್ಯದ ಮೂಲಕವಾಗಿ ಬಂಡಾಯ ಸಾಹಿತ್ಯವು ಸಾಮಾಜಿಕ ಅಸಮಾನತೆಯನ್ನು ವಿರೋಧಿಸಿ ಸಮಸಮಾಜದ ಕನಸ್ಸೊತ್ತು ಮುನ್ನಡೆಯಿತು. ಇಂತಹ ಬಂಡಾಯ ಸಾಹಿತ್ಯ ಪರಂಪರೆಗೆ ಕನ್ನಡದ ಹಲವಾರು ವಿಚಾರವಾದಿಗಳು ಹೆಗಲುಕೊಟ್ಟು ದುಡಿದಿದ್ದಾರೆ. ಅಂತಹ ವಿಚಾರವಾದಿಗಳಲ್ಲಿ ಅಲ್ಲಮಪ್ರಭು ಬೆಟ್ಟದೂರು ಅವರು ಒಬ್ಬರು.
ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬೆಟ್ಟದೂರು ಎಂಬ ಗ್ರಾಮದಲ್ಲಿ ಶ್ರೀ ಚನ್ನಬಸವಪ್ಪ ಶ್ರೀಮತಿ ಅಮರಮ್ಮ ಇವರ ಮಗನಾಗಿ ದಿನಾಂಕ: 30 ಜುಲೈ 1951 ರಂದು ಜನಿಸಿದರು. ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರ ಕೌಟುಂಬಿಕ ಹಿನ್ನೆಲೆಯನ್ನು ಗಮನಿಸಿದರೆ, ಇವರದು ಸಾಮಾಜಿಕ ಹೋರಾಟದಿಂದ ಬಂದ ಕುಟುಂಬವಾಗಿದೆ. ಶ್ರೀಯುತರ ತಂದೆಯವರಾದ ಶ್ರೀ ಚನ್ನಬಸವಪ್ಪನವರು ರೈತ ಹೋರಾಟಗಾರರು ಹಾಗೂ ಚಿಂತಕರಾಗಿದ್ದು, ವಚನ ಸಾಹಿತ್ಯ ಹಾಗೂ ಶರಣ ಚಳವಳಿಯ ಬಗೆಗೆ ವಿಶೇಷವಾದ ಆಸಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಶರಣರ ವಿಚಾರಗಳನ್ನು ಕುರಿತಂತೆ ‘ಸಕಲ ಜೀವ ಪ್ರೇಮ’, ‘ಸಲ್ಲಲಿತ ಸನ್ಮಾರ್ಗ’ ಎಂಬ ವೈಚಾರಿಕ ಕೃತಿಗಳನ್ನು ರಚಿಸಿದ್ದರು. ಈ ಸಲ್ಲಲಿತ ಸನ್ಮಾರ್ಗ ಎಂಬ ಕೃತಿಯೊಳಗೆ ಶರಣರ ಚಳವಳಿಯನ್ನು ‘ವಚನ ಧರ್ಮ’ ಎಂದು ಕರೆಯುವ ವಾಡಿಕೆಯನ್ನು ವಿರೋಧಿಸಿ, ವಚನ ಮಾರ್ಗ ಅಥವಾ ಶರಣ ಮಾರ್ಗ ಎಂದು ಪ್ರತಿಪಾದಿಸಿದ್ದಾರೆ. ಇವರು ರಚಿಸಿರುವ ಈ ಕೃತಿಗಳಿಗೆ ಹಲವಾರು ಪ್ರಶಸ್ತಿ ಹಾಗೂ ಗೌರವ ಪುರಸ್ಕಾರಗಳು ಕೂಡ ಲಭಿಸಿವೆ. ಹಾಗೆಯೇ ಶ್ರೀಯುತರ ಚಿಕ್ಕಪ್ಪನವರಾದ ಶ್ರೀ ಶಂಕರೆಗೌಡರು ನಂದಾಲಾಲ್ ಬಸು ಎಂಬ ಹೆಸರಾಂತ ಚಿತ್ರಕಲಾವಿದರ ಶಿಷ್ಯರಾಗಿ ಚಿತ್ರಕಲೆಯನ್ನು ಕರಗತಮಾಡಿಕೊಂಡಿದ್ದರು. ನಂತರದಲ್ಲಿ ಗಾಂಧೀಜಿಯವರು ತಮ್ಮ ಕೊನೆಯ ದಿನಗಳನ್ನು ಕಳೆಯುವ ಸಂದರ್ಭದಲ್ಲಿ ಅವರ ಜೊತೆಗಿದ್ದು, ಅವರ ಜೀವನ ಕುರಿತ ಭಿತ್ತಿಚಿತ್ರಗಳನ್ನು ರಚಿಸಿದ್ದವರು. ಹಾಗೆಯೇ ಇವರು ಲಾಲ್ ಬಹಾದ್ದೂರ್ ಶಾಸ್ತ್ರಿಗಳಿಗೆ ಅತ್ಯಂತ ಪ್ರಿಯವಾದವರು. ಇಷ್ಟೊಂದು ಹೆಸರು ಮಾಡಿದ್ದರು ಸಹ ಕಲಾಲೋಕದಿಂದ ವಿಮುಖರಾಗಿ ಕೃಷಿ ಕಾಯಕದಲ್ಲಿ ತಲ್ಲಿನರಾಗಿ ಬಸವ ಮಾರ್ಗದಲ್ಲಿ ‘ಕಾಯಕವೇ ಕೈಲಾಸ’ವೆಂದು ನಡೆದರು. ಇವರೆಲ್ಲರ ಪ್ರೇರಣೆ ಮತ್ತು ಪ್ರಭಾವಗಳು ಶ್ರೀಯುತ ಅಲ್ಲಮಪ್ರಭು ಅವರ ಮೇಲಾಗಿದ್ದವು. ಹೀಗಾಗಿ ಕಾಯಕ ಮಾರ್ಗ, ಹೋರಾಟ ಮಾರ್ಗಗಳು ಬಾಲ್ಯದ ದಿನಗಳಿಂದಲೂ ಇವರ ರಕ್ತದೊಳಗೆ ಕರಗತವಾಗಿದ್ದವು. ಬಾಲ್ಯದ ಸಂದರ್ಭದಲ್ಲಿ ತಮ್ಮ ಕುಟುಂಬದ ಹಿರಿಯರು ನಡುಗನ್ನಡದ ಪ್ರಭುಲಿಂಗಲೀಲೆ ಮತ್ತು ಕುಮಾರವ್ಯಾಸ ಭಾರತವನ್ನು ಹಾಡುತ್ತಿದ್ದರೆ, ಅವುಗಳನ್ನು ಓದುವ ಹವ್ಯಾಸವನ್ನು ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ಮೈಗೂಡಿಸಿಕೊಂಡಿದ್ದರು.
ಅಲ್ಲಮಪ್ರಭು ಬೆಟ್ಟದೂರು ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟದ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದರು. ಹೀಗಾಗಿ ಬಂಡಾಯ ಸಾಹಿತ್ಯ ಪ್ರಕಾರದ ಅಡಿಯಲ್ಲಿ ತಮ್ಮ ದನಿಯನ್ನು ಎತ್ತಿಹಿಡಿದರು. ಧಾರವಾಡದಲ್ಲಿ ಪದವಿ ಶಿಕ್ಷಣವನ್ನು ಅಧ್ಯಯನ ಮಾಡುವ ಸಂದರ್ಭದಲ್ಲಿ ಶ್ರೀಯುತ ಚಂಪಾ ಅವರ ಪ್ರೇರಣೆಗೊಳಗಾಗಿ ಜೆ.ಪಿ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಚಂಪಾ ಅವರು ಜೆ.ಪಿ ಚಳುವಳಿಯ ರಾಜ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸಿದರೆ, ಅಲ್ಲಮಪ್ರಭು ಅವರು ರಾಯಚೂರು ಭಾಗದಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಸಂಚಾಲಕರಾಗಿ ಚಳವಳಿಯನ್ನು ಮುನ್ನಡೆಸಿದರು. ಹಾಗೆಯೇ 1979 ರ ಅವಧಿಯಿಂದಲೂ ಬಂಡಾಯ ಸಾಹಿತ್ಯಕ್ಕೆ ಬೆನ್ನೆಲುಬಾಗಿ ನಿಂತ ಶ್ರೀಯುತರು ಹಲವಾರು ಜನಪರ ಮತ್ತು ಪ್ರಗತಿಪರ ಹೋರಾಟಗಳಲ್ಲಿ ತಮ್ಮ ಸಹಭಾಗಿತ್ವವನ್ನು ವ್ಯಕ್ತಪಡಿಸುತ್ತ ಬಂದಿದ್ದಾರೆ. ಇವರ ಪ್ರಮುಖ ಹೋರಾಟಗಳೆಂದರೆ, ‘ಕುದುರೆ ಮೋತಿ ಹೋರಾಟ’, ‘ಗೋಕಾಕ ಚಳವಳಿ’, ‘ಹೈದ್ರಾಬಾದ್ ಕರ್ನಾಟಕದ 371 ಜೆ’ ವಿಧಿಯ ಜಾರಿಗಾಗಿ ಹೋರಾಟ, ‘ಪ್ರತ್ಯೇಕ ಕೊಪ್ಪಳ ಜಿಲ್ಲಾ ಹೋರಾಟ’ ಹೀಗೆ ಹಲವಾರು ಜನಪರವಾದ ಚಳವಳಿಗಳ ಮೂಲಕವಾಗಿ ಸಮಸಮಾಜದ ಕನಸ್ಸೊತ್ತು ಮುನ್ನಡೆಯುತ್ತಿದ್ದಾರೆ. ಇವರ ಹೋರಾಟಗಳಲ್ಲಿ ‘ಕುದುರಿ ಮೋತಿ ಪ್ರಕರಣ’ವು ಅತ್ಯಂತ ಮಹತ್ವದ ಹೋರಾಟವಾಗಿದೆ. 11 ಜೂನ್ 1985 ರಲ್ಲಿ ಮಠಾಧೀಶನೊಬ್ಬ ತಳಸಮುದಾಯದ ಪಾರ್ವತಮ್ಮ ಮತ್ತು ಮುಸ್ಲಿಂ ಸಮುದಾಯದ ಹುಸೇನ್‍ಬಿ ಎಂಬುವವರನ್ನು ಅಪಮಾನಿಸಿ, ಬೆತ್ತಲಗೊಳಿಸಿ ಊರಿನ ತುಂಬ ಮೆರವಣಿಗೆ ಮಾಡಿಸಿದ್ದ. ಈ ಪ್ರಕರಣದ ಕುರಿತು ಸಮಗ್ರವಾದ ಮಾಹಿತಿಯನ್ನು ಕಲೆಹಾಕಿ, ಇದರ ವಿರುದ್ಧ ಹೋರಾಟವನ್ನು ಮಾಡಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಇವರು ಈ ಪ್ರಕರಣವನ್ನು ಗಂಭೀರವಾಗಿ ಕೈಗೆತ್ತಿಕೊಳ್ಳದಿದ್ದರೆ ಈ ಪ್ರಕರಣವನ್ನು ಮುಚ್ಚಿಹಾಕುವ ತಂತ್ರಗಳು ನಡೆದಿದ್ದವು. ಆದರೆ ಇಲ್ಲಿ ಅನ್ಯಾಯಕ್ಕೊಳಗಾದ ದಮನಿತ ಮತ್ತು ಅಸಹಾಯಕ ಸಮುದಾಯಗಳ ದನಿಯಾಗಿ ನಿಂತು ಹೋರಾಟ ಮಾಡಿದರು. ಇದರಿಂದ ಮೂಲಭೂತವಾದಿಗಳು ಹಾಗೂ ಉನ್ನತ ವರ್ಗದವರ ವಿರೋಧಕ್ಕೂ ಗುರಿಯಾಗಿ, ಮಠಾಧೀಶನ ಅನುಯಾಯಿಗಳಿಂದ ಹಲ್ಲೆಗಳು ಕೂಡ ಇವರ ಮೇಲೆ ನಡೆದವು. ಸಾಕಷ್ಟು ಪ್ರಾಣ ಬೆದರಿಕೆಗಳು ಕೇಳಿಬಂದವು. ಆದರೆ ಇದಾವುದನ್ನು ಲೆಕ್ಕಿಸದೆ ಜನಪರವಾದ ನೆಲೆಯಲ್ಲಿ ತಮ್ಮ ಹೋರಾಟವನ್ನು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದಾರೆ. ಇಂದಿಗೂ ತಮ್ಮ ಗುರುಗಳಾದ ಎಂ.ಎಂ ಕಲುಬುರ್ಗಿ, ಚಂಪಾ ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ಮುನ್ನಡೆಯುತ್ತಿದ್ದಾರೆ.
ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ಕೇವಲ ಹೋರಾಟಗಾರರು ಮಾತ್ರವಲ್ಲದೆ ಹೆಸರಾಂತ ಬಂಡಾಯ ಸಾಹಿತಿಗಳು ಹೌದು. ಸಾಮಾಜಿಕ ಅಸಮಾನತೆ, ಅಸ್ಪøಶ್ಯತೆ, ಕೋಮುವಾದ, ಜಾತಿವಾದದ ವಿರುದ್ಧವಾಗಿ ತಮ್ಮ ದನಿಯನ್ನು ಎತ್ತುವ ಮೂಲಕ ಸಮಸಮಾಜ ಮತ್ತು ಶಾಂತಿಯುತ ಸಮಾಜದ ಕನಸು ಕಂಡವರು. ಸುಮಾರು 80 ರ ದಶಕದಲ್ಲಿ ಭಾರತದ ರಾಜಕೀಯದಲ್ಲಿ ಉಂಟಾದ ಅರಾಜಕತೆಯ ವಿರುದ್ಧ ಬಂಡಾಯದ ನೆಲೆಯಲ್ಲಿ ಜೆ.ಪಿ ಚಳವಳಿಗೆ ಹೆಗಲು ಕೊಟ್ಟು ನಿಂತವರು. ಇವರ ಸಾಹಿತ್ಯಿಕ ಬರಹಗಳಲ್ಲೂ ಇದೇ ಬಂಡಾಯದ ದನಿ ಪ್ರಮುಖವಾಗಿ ಎದ್ದು ಕಾಣುತ್ತದೆ. ಹಾಗೆಯೇ ಕೋಮುವಾದವನ್ನು ಸೃಷ್ಟಿಸುತ್ತಿರುವ ಬಿಜೆಪಿ ಹಾಗೂ ಆರ್.ಎಸ್.ಎಸ್ ಸಿದ್ಧಾಂತಗಳನ್ನು ವಿರೋಧಿಸುವ ನೆಲೆಯಲ್ಲಿ 1980ರ ಸುಮಾರಿನಲ್ಲಿಯೇ ಬಂಡಾಯದ ಕಳಹಳೆಯನ್ನು ಮೊಳಗಿಸಿದ ಕೀರ್ತಿಯು ಶ್ರೀಯುತರಿಗೆ ಸಲ್ಲುತ್ತದೆ. ಅಂದು ವಾಜಪೇಯಿಯವರ ಅಧ್ಯಕ್ಷತೆಯಲ್ಲಿ ಸಿದ್ಧಗೊಂಡ ಬಿಜೆಪಿಯ ಸಂಘಪರಿವಾರ ನೀತಿಯನ್ನು ಅನಾವರಣಗೊಳಿಸುವ ಇವರ ಕವಿತೆಯೊಂದು ಹೀಗಿದೆ;
ವಾಜಪೇಯ ಭಾಜಪೇಯ
ಹೊಚ್ಚ ಹೊಸ ಪೇಯ
ಕುಡಿಯಿರಯ್ಯ, ಕುಡಿಯದಿದ್ದರೆ
ಮೂಗ ಹಿಡಿದು ಕುಡಿಸಲಾಗುವುದು
ಕೇಳಿರಯ್ಯ, ಕೇಳ್ ಈರಯ್ಯ…
ಎಂದು ಗುಡುಗುವ ಅಲ್ಲಮಪ್ರಭು ಅವರು, ಅಂದಿನ ಬಿಜೆಪಿ ಮತ್ತು ಆರ್.ಎಸ್.ಎಸ್ ಮೂಲಭೂತವಾದಿ ಧೋರಣೆಗಳನ್ನು ವಿಡಂಬಿಸುವ ಇವರ ಮತ್ತೊಂದು ಕವಿತೆ ಹೀಗಿದೆ;
ಕುಂಕುಮದ ಕಲಿಗಳು ದೇಶವಾಳುವರು ಕೇಳಿರಣ್ಣ
ತುಪ್ಪದ ತಲೆಗಳು ರಾಜ್ಯವಾಳುವರು ಕೇಳಿರಣ್ಣ
ಹತ್ತು ವರ್ಷದಾಗ ಮೀನು ಬೀಳುತಾವ ತಿಳಿಯಿರಣ್ಣ
ಎಂಬ ಕವಿತೆಯನ್ನು ಹಿಂದೆ ಶರಣರ ವಚನಗಳ ಆಶಯಗಳನ್ನು ಸಾರುವ ಜಂಗಮರ ಧಾಟಿಯಲ್ಲಿ ವ್ಯಕ್ತಪಡಿಸಿದ್ದರು. ಅಂದರೆ ಸುಮಾರು 80 ರ ದಶಕದಲ್ಲಿ ಸಾರಿದ ಇವರ ಕವಿತೆಯ ಆಶಯವು ಇಂದಿಗೆ ಸತ್ಯವಾಗಿದೆ. ಮುಂದೊಂದು ದಿನ ಬಿಜೆಪಿ ಅಧಿಕಾರಕ್ಕೆ ಬಂದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದನ್ನು ಅಂದೇ ಗ್ರಹಿಸಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ತರುವಾಯದಲ್ಲಿ ಕೋಮುವಾದ, ಭಯೋತ್ಪಾದನೆ, ವಿಚಾರವಾದಿಗಳ ಹತ್ಯೇ, ಅತ್ಯಾಚಾರದಂತಹ ಹೇಯ್ಯ ಕೃತ್ಯಗಳು ಸಹಜ ಕೃತ್ಯಗಳಂತೆ ನಡೆಯುತ್ತಿವೆ. ಸರ್ವಮಾನವರನ್ನು ಸಮಾನವಾಗಿ ಕಾಣುವ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂಬ ಘಂಟಾಘೋಷ ವಾಕ್ಯಗಳು ಎದೆಗಾರಿಕೆಯಿಂದ ಹೊರಬರುತ್ತಿವೆ. ಅಷ್ಟೇ ಅಲ್ಲದೆ ಸಂವಿಧಾನವನ್ನು ಸುಡುವುದರ ಮೂಲಕ ನಾವು ಸಂವಿಧಾನ ವಿರೋಧಿಗಳು ಎಂಬುದನ್ನು ಸಮರ್ಥಿಸಿಕೊಳ್ಳುವ ಪುಂಡಾಟಿಕೆಯನ್ನು ಬಿಜೆಪಿ ಮತ್ತದರ ಸಂಘಪರಿವಾರವು ಪ್ರದರ್ಶಿಸುತ್ತಿದೆ. ಆದ್ದರಿಂದ ಶ್ರೀಯುತ ಅಲ್ಲಮಪ್ರಭು ಅವರು ಅಂದು ನುಡಿದ ಕವಿವಾಣಿಯನ್ನು ಇದೊಂದು ಭವಿಷ್ಯವಾಣಿ ಎಂದರೆ ತಪ್ಪಾಗಲಾರದು. ಹೀಗೆ ಮೂಲಭೂತವಾದಿಗಳು ಮತ್ತು ಸನಾತನವಾದಿಗಳ ವಿರೋಧವನ್ನು ಕಟ್ಟಿಕೊಂಡೆ ಬಂಡಾಯ ಸಾಹಿತ್ಯ ಮತ್ತು ಜನಪರವಾದ ಚಳವಳಿಗಳನ್ನು ಮುಂದುವರೆಸಿಕೊಂಡು ಬಂದವರು. ಇವರ ಪ್ರಮುಖ ಕವನ ಸಂಕಲನಗಳೆಂದರೆ, ‘ಇದು ನನ್ನ ಭಾರತ’, ಕುದುರಿ ಮೋತಿ ಮತ್ತು ನೀಲಗಿರಿ’, ‘ಕೆಡಹಬಲ್ಲರು ಅವರು ಕಟ್ಟಬಲ್ಲೆವು ನಾವು’ ಇವು ಅವರ ಕವನ ಸಂಕಲನಗಳು. ‘ಗುಲಗಂಜಿ’ ಎಂಬ ಚುಟುಕು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇದರ ಜೊತೆಯಲ್ಲಿ ‘ತಳಮಳ’ ಎಂಬ ಪತ್ರಿಕೆಯಲ್ಲಿ ‘ಪ್ರಚಲಿತ’ ಎಂಬ ಅಂಕಣವನ್ನು ಬರೆದು, ಈ ಅಂಕಣಗಳನ್ನು ‘ವರ್ತಮಾನ’ ಎಂಬ ಕೃತಿಯ ಮೂಲಕ ಸಂಕಲಿಸಿದ್ದಾರೆ. ಇಷ್ಟೇ ಅಲ್ಲದೆ ಹಲವಾರು ಸಂಪಾದನ ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿಗೆ ಶ್ರೀಯುತರು ಪಾತ್ರರಾಗಿರುತ್ತಾರೆ. ಇವರ ಈ ಸಾಹಿತ್ಯ ಮತ್ತು ಹೋರಾಟದ ಹಾದಿಯನ್ನು ಗಮನಿಸಿ ಹಲವಾರು ಗೌರವ, ಪುರಸ್ಕಾರ ಮತ್ತು ಪ್ರಶಸ್ತಿಗಳು ಇವರ ಮುಡಿಗೇರಿವೆ. ಇವುಗಳಲ್ಲಿ ಕೆಲವು ಹೀಗಿವೆ; ಶಕ್ತಿನಗರದ ಕನ್ನಡ ಸಂಘದಿಂದ ‘ರಾಜ್ಯೋತ್ಸವ ಪ್ರಶಸ್ತಿ’, ಕರಾವಳಿಯ ಸಾಂಸ್ಕøತಿಕ ಸಂಘಟನೆಯಿಂದ ‘ಕರಾವಳಿ ಪ್ರಶಸ್ತಿ’, ಕೊಪ್ಪಳದ ಸ್ಥಳೀಯ ಸಂಘಟನೆಗಳಿಂದ ‘ಕನಕ ಪ್ರಶಸ್ತಿ’ಗಳು ಇವರ ಮುಡಿಗೇರಿವೆ. ಸಾಹಿತ್ಯದ ಮೇಲಿನ ವಿಶೇಷವಾದ ಕಾಳಜೀಯಿಂದಾಗಿ ಮತ್ತು ಸಾಹಿತಿಗಳಿಗೆ ಪ್ರೋತ್ಸಾಹಿಸುವ ಮೂಲಕ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕೆಂಬ ಕನಸ್ಸೊತ್ತು ಸಮಾನ ಮನಸ್ಕರೊಂದಿಗೆ ಸೇರಿ ‘ತಿರುಳ್ಗನ್ನಡ ಸಾಹಿತಿಗಳ ಸಹಕಾರ ಸಂಘ’ ಎಂಬ ಸಂಸ್ಥೆಯೊಂದನ್ನು ಕೊಪ್ಪಳ ಜಿಲ್ಲೆಯಲ್ಲಿ ಮೊದಲ ಭಾರಿಗೆ ಸ್ಥಾಪಿಸುವ ಮೂಲಕ ಸಾಹಿತ್ಯ ವಲಯಕ್ಕೆ ಮಾದರಿಯಾಗಿದ್ದಾರೆ. ಈ ಸಂಸ್ಥೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಹಕಾರಿ ಸಂಘದ ಮೂಲಕ ಕೃತಿ ಪ್ರಕಟಣೆ ಮಾಡುವ ಲೇಖಕರಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಕೈಗೊಳ್ಳಲಾಗಿದೆ.
ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿ ಕೊಪ್ಪಳದಲ್ಲಿ ಸೇವೆಸಲ್ಲಿಸಿ, ಪ್ರಾಂಶುಪಾಲರಾಗಿ ನಿವೃತ್ತಿಯನ್ನು ಪಡೆದುಕೊಂಡಿದ್ದಾರೆ. ಇದರ ಜೊತೆಯಲ್ಲಿ ಚಂಪಾ ಅವರು ‘ಕನ್ನಡ ಅಭಿವೃದ್ಧಿ ಪ್ರಾಧಿಕಾರ’ದ ಅಧ್ಯಕ್ಷರಾದ ಸಂದರ್ಭದಲ್ಲಿ ಅಲ್ಲಮಪ್ರಭು ಅವರು ಸದಸ್ಯರಾಗಿ, ನಂತರ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆಸಲ್ಲಿಸಿರುತ್ತಾರೆ. ಇಂದು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಮೂಲತಃ ಕೃಷಿಮೂಲ ಪರಂಪರೆಯಿಂದ ಬಂದವರಾಗಿದ್ದು, ‘ಕಾಯಕವೇ ಕೈಲಾಸ’ ಎಂಬ ಶರಣ ಮಾರ್ಗದಲ್ಲಿ ಮುನ್ನಡೆದವರು. ಹೀಗಾಗಿ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಆಸಕ್ತಿಯಿಂದಾಗಿ ಕೊಪ್ಪಳದ ಸಮೀಪದಲ್ಲಿ ಜಮೀನು ಖರೀದಿಸಿ ವ್ಯವಸಾಯಯಲ್ಲಿ ತಲ್ಲಿನರಾಗಿದ್ದಾರೆ. ಇವರ ಏಕೈಕ ಪುತ್ರರಾದ ಪುಟ್ಟರಾಜ್ ಪಾಟೀಲ್ ಅವರು ಕೂಡ ಸಾವಯವ ಕೃಷಿಯಲ್ಲಿ ತಲ್ಲಿನರಾಗಿದ್ದಾರೆ. ಪುಟ್ಟರಾಜ್ ಅವರು ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಜನಿಸಿದ ಕಾರಣದಿಂದಾಗಿ, ಅದೇ ಚಳವಳಿಯಲ್ಲಿ ತಲ್ಲಿನರಾಗಿದ್ದ ಅಲ್ಲಮಪ್ರಭು ಅವರು ತಮ್ಮ ಮಗನಿಗೆ ಗೋಕಾಕ್ ಚಳವಳಿಯ ಪ್ರಮುಖ ರುವಾರಿಗಳಾದ ಪಾಟೀಲ್ ಪುಟ್ಟಪ್ಪ, ರಾಜ್‍ಕುಮಾರ್ ಹಾಗೂ ಚಂದ್ರಶೇಖರ್ ಪಾಟೀಲ್ ಅವರ ಹೆಸರುಗಳನ್ನು ಸಂಯೋಜಿಸಿ ‘ಪುಟ್ಟರಾಜ್ ಪಾಟೀಲ್’ ಎಂದು ನಾಮಕರಣ ಮಾಡಿದ್ದಾರೆ. ಇದು ಶ್ರೀಯುತರು ತಮ್ಮ ಗುರುಪರಂಪರೆ ಮತ್ತು ಹೋರಾಟ ಮಾರ್ಗದೊಂದಿಗೆ ಇವರಿಗಿರುವ ನಂಟನ್ನು ಎತ್ತಿಹಿಡಿಯುತ್ತದೆ. ಇಂದು ಶ್ರೀಯುತ ಅಲ್ಲಮಪ್ರಭು ಬೆಟ್ಟದೂರು ಅವರು ತಮ್ಮ ಶ್ರೀಮತಿ ಮಂಜುಳಾ, ಮಗ ಪುಟ್ಟರಾಜ್ ಪಾಟೀಲ್ ಹಾಗೂ ಮೊಮ್ಮಕ್ಕಳೊಂದಿಗೆ ಸರಳವಾದ ಜೀವನ ನಡೆಸುತ್ತಿದ್ದಾರೆ. ಇದರ ಜೊತೆಗೆ ಸಮಾಜಿಕ ಕಾಳಜಿಯೊತ್ತು ಹೋರಾಟ ಹಾಗೂ ವೈಚಾರಿಕ ಚಿಂತನೆಯ ಬೀಜಗಳನ್ನು ನಾಡಿಗೆ ಬಿತ್ತರಿಸುತ್ತಿದ್ದಾರೆ. ಇವರ ಈ ಬದುಕು ಮತ್ತು ಹೋರಾಟ ಯಶಸ್ವಿನೆಡೆಗೆ ಸಾಗಲಿ ಎಂಬುದು ನಮ್ಮೆಲ್ಲರ ಹಾರೈಕೆ.