ಅಂತರಂಗ
ಕಲಾತ್ಮಕ ಬದುಕಿನ ಶ್ರಮಜೀವಿ ಮಂಜಪ್ಪ
ಆರಂಭಕ್ಕೂ ಮುನ್ನ
ಜೀವನವೇ ಹಾಗೆ…., ಕೆಲವರ ಬದುಕು ಅವರಿಷ್ಟದಂತೆ ಅವರ ಹಾದಿಯಲ್ಲಿ ಸಾಗುತ್ತದೆ. ಇನ್ನು ಕೆಲವರದು ಬದುಕು ನಡೆಸಿದ ಹಾದಿಯಲ್ಲೇ ಅವರು ಸಾಗಬೇಕಾಗುತ್ತದೆ. ಹಾಗೇ ಸಾಗುವ ಮಾರ್ಗದಲ್ಲಿ ಕೆಲವೇ ಕೆಲವರು ಮಾತ್ರ ತಮ್ಮ ಬದುಕನ್ನು ಸುಂದರ ಮತ್ತು ಕಲಾತ್ಮಕಗೊಳಿಸಿಕೊಳ್ಳುತ್ತಾರೆ. ಇಂತಹ ಕಲಾತ್ಮಕ ಬದುಕಿನ ಕಲಾ ಕುಸುರಿಯ ಸಾಲಿನಲ್ಲಿ ಕಂಡು ಬರುತ್ತಾರೆ ಬಹುಮುಖಿ ಪ್ರತಿಭಾವಂತರಾದ ದಾವಣಗೆರೆ ಬಿ.ಮಂಜಪ್ಪ.
ಬದುಕು – ಬವಣೆ
ದಾವಣಗೆರೆ ನಗರದ ಶ್ರೀಮತಿ ನಾಗರತ್ನಮ್ಮ, ಶ್ರೀ ಬಾಲಪ್ಪ ದಂಪತಿಗಳ ಪುತ್ರರಾಗಿ 1980 ರಲ್ಲಿ ಜನಿಸಿದ ಮಂಜಪ್ಪ ಬಾಲ್ಯದಿಂದಲೂ ಕಡು ಬಡತನದ ಬೇಗೆ ಅನುಭವಿಸಿದವರು. ತಮ್ಮಿಷ್ಟದಂತೆ, ತಾವು ಕಂಡ ಕನಸಿನಂತೆ ಬದುಕು ಕಟ್ಟಿಕೊಳ್ಳಲು ಹೆಣಗಾಡಿ ಕೊನೆಗೆ ಬದುಕು ಕರೆದುಕೊಂಡು ಹೋದ ಹಾದಿಯಲ್ಲಿಯೇ ಸಾಗುತ್ತಾ, ಪರೋಪಕಾರಿ – ಮಾದರಿ ಜೀವನ ನಡೆಸುತ್ತಿರುವ ಶ್ರಮಜೀವಿಯಾಗಿದ್ದಾರೆ.
ಅಂದು ಹೊತ್ತಿನೂಟಕ್ಕಾಗಿ ತಂದೆಯ ಜೊತೆ ಕೂಲಿ ಕೆಲಸ ಮಾಡುತ್ತಿದ್ದ ಮಂಜಪ್ಪ ಅವರ ಕುಟುಂಬಕ್ಕೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ಹರ ಸಾಹಸದ ಕೆಲಸವಾಗಿತ್ತು. ಆದರೂ ತಾವು ರಟ್ಟೆ ಮುರಿದು ದುಡಿದು ತಂದಿದ್ದರಲ್ಲೇ ಇತರರಿಗೂ ಅಷ್ಟಿಷ್ಟು ಹಂಚಿ ತಿನ್ನುವ ಪರೋಪಕಾರ ಮತ್ತು ಸಮಾಜ ಸೇವೆಯ ಗುಣಗಳು ಮಂಜಪ್ಪ ಅವರಿಗೆ ಬಾಲ್ಯದಲ್ಲೇ ಮೇಳೈಸಿದ್ದವು. ಆ ಒಳ್ಳೆಯತನಕ್ಕಾಗಿಯೋ ಅಥವಾ ಹಂಚಿಕೊಂಡು ತಿಂದವರ ಶುಭ ಹಾರೈಕೆಯ ಫಲವೋ ಅಂತೂ ಅವರಿಗೆ ಹೋದ ಕಡೆಯಲ್ಲೆಲ್ಲಾ ದುಡಿಯಲು ಯಾವುದಾದರೊಂದು ಕೆಲಸ ಇವರಿಗಾಗಿ ಕಾದಿರುತ್ತಿತ್ತು.
ವೃತ್ತಿ – ಪ್ರವೃತ್ತಿ
ಜೀವನ ನಿರ್ವಹಣೆಗಾಗಿ ಮೊದ ಮೊದಲು ಕಟ್ಟಡ – ಕಾಮಗಾರಿಗಳ ಗಾರೆ ಕೆಲಸ, ಕೂಲಿ ಕೆಲಸ ಆಶ್ರಯಿಸಿಕೊಂಡಿದ್ದ ಮಂಜಪ್ಪ ಅವರು ಹೊಲ – ಮನೆ – ಗದ್ದೆಯ ಕೆಲಸದಲ್ಲೂ ನಿಪುಣರೆನಿಸಿಕೊಂಡರು. ಅಲ್ಲದೆ ಯಾವ ಕ್ಷೇತ್ರವಾದರೂ ಸೈ ಎಂಬಂತೆ ತಮಗೆ ಯಾವ ಕೆಲಸ ಸಿಕ್ಕರೂ ಸಹ ಸೇವಾ ಭಾವನೆಯಿಂದ – ನಿಷ್ಠೆಯಿಂದ ದುಡಿದು ಬೇಷ್ ಎನಿಸಿಕೊಂಡರು.
ಡೆಕೋರೇಷನ್ – ಶಾಮಿಯಾನದ ಕೆಲಸ, ವೇದಿಕೆಗಳಿಗೆ ಹೂವಿನ ಅಲಂಕಾರ ಮಾಡುವುದು, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಸಾಮಾನುಗಳ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ, ಬಯೋ ಮಾಸ್ ಸೀಡ್ಸ್ ಮಾರಾಟ ಪ್ರತಿನಿಧಿ, ಮಹಂತಾ ಮೋಟಾರ್ಸ್‍ನ ಸೇಲ್ಸ್ ಎಕ್ಸಿಕ್ಯೂಟಿವ್, ಹೆಲ್ತ್‍ಕೇರ್ ಎಂಎನ್‍ಸಿ ಕಂಪನಿಯ ಏರಿಯಾ ಮ್ಯಾನೇಜರ್, ಹಾಗೂ ತೆರಿಗೆ ಸಲಹಗಾರರಾಗಿಯೂ ಸೇರಿದಂತೆ ಅವರು ದುಡಿದ ಕ್ಷೇತ್ರಗಳು ಒಂದಲ್ಲ ಎರಡಲ್ಲ…,
ಇಷ್ಟೇ ಅಲ್ಲದೆ ಅವರನ್ನು ಬದುಕಿನ ಪಯಣ ವಾಸ್ತು ಶಾಸ್ತ್ರದೆಡೆಗೂ ಕರೆದೊಯ್ಯಿತು. ಖ್ಯಾತ ಸರಳ ವಾಸ್ತು ತಜ್ಞರಾದ ಚಂದ್ರಶೇಖರ್ ಗುರೂಜಿಯವರ ಮಾರ್ಗದರ್ಶನದಲ್ಲಿ ಸಹಾಯಕ ವಾಸ್ತು ತಜ್ಞರಾಗಿ ರಾಜ್ಯಾದ್ಯಂತ ಅನೇಕೆಡೆ ಪಯಣಿಸಿ ಹಲವರ ಸಮಸ್ಯೆಗಳಿಗೆ ಪರಿಹಾರವೂ ಆದರು. ಅವರ ಸಮಾಜ ಸೇವೆ ಇಂದಿಗೂ ಮುಂದುವರೆಯುತ್ತಿದೆ.
ವಿದ್ಯಾಭ್ಯಾಸದ ಉತ್ಕಟ ಹಂಬಲ ಹೊಂದಿದ್ದ ಮಂಜಪ್ಪ ಹಲವು ಏಳು – ಬೀಳುಗಳ ನಡುವೆಯೂ ಬಿ.ಎ ಪದವಿ ಪಡೆದು, ನಿರಂತರ ಕಾಯಕದ ನಡುವೆಯೂ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶ್ರದ್ಧೆಯಿಂದ ಓದಲು ಆರಂಭಿಸಿದರು. ಆದರೆ, ಅತಿ ಹತ್ತಿರದ ಶೇಕಡವಾರು ಅಂಕಗಳಿಂದ ನೌಕರಿ ಪಡೆಯುವಲ್ಲಿ ವಿಫಲರಾದರೂ ಸಹ ಧೃತಿಗೆಡದೆ ಇನ್ನೂ ಆ ದಿಸೆಯಲ್ಲಿ ಪ್ರಯತ್ನಮುಖಿಯಾಗಿದ್ದಾರೆ.
ಬದುಕಿನ ಈ ಎಲ್ಲಾ ಏಣೀ – ಶ್ರೇಣಿಯ ಆಟ ಮತ್ತು ಪ್ರತಿಕೂಲ ವಾತಾವರಣವು ಒಂದೆಡೆ ಅವರಿಗೆ ಅನುಕೂಲವೇ ಆದಂತಾಯಿತು. ವಿವಿಧ ವೃತ್ತಿಗಳ ಅನುಭವ ಮತ್ತು ಪರಿಣಿತಿ ಹೊಂದಲು ಕೂಡ ಸಹಕಾರಿಯೇ ಆಯಿತು. ಬಿಡುವಿಲ್ಲದ ಕೆಲಸಗಳ ನಡುವೆಯೂ ದಿನಪತ್ರಿಕೆ, ಕಥೆ, ಸಾಹಿತ್ಯ, ಮೆಗಿಝಿನ್ಸ್, ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳು ಸೇರಿದಂತೆ ಒಟ್ಟಾರೆ ಓದುವುದೆಂದರೆ ಅವರಿಗೆ ಪ್ರೀತಿಯ ಹವ್ಯಾಸ. ಜೀವನದ ಇಷ್ಟೆಲ್ಲಾ ವೈಪರೀತ್ಯ ಮತ್ತು ತಿರುವುಗಳ ಮಧ್ಯೆ ಅವರನ್ನು ಇತರರು ಗುರುತಿಸಲು ಸಾಧ್ಯವಾಗುವಂತಹ ವೇದಿಕೆ ಕಲ್ಪಿಸಿಕೊಟ್ಟದ್ದು ಅವರಲ್ಲಿನ ನೃತ್ಯ ಕಲೆಯ ಹವ್ಯಾಸ. ನೋವು – ನಲಿವು, ದು:ಖ – ದುಮ್ಮಾನಗಳ ಮರೆವಿಗೂ ದಿವ್ಯವೌಷದವಾಗಿದ್ದುದಲ್ಲದೆ, ಅವರ ಎದೆಯೊಳಗಡಗಿದ್ದ ಕಲೆ ಮತ್ತು ಸಾಂಸ್ಕøತಿಕ ಸಿರಿವಂತಿಕೆಯನ್ನು ಹೊರ ಜಗತ್ತು ಗುರುತಿಸುವಂತಾಗಲು ಕಾರಣವಾದದ್ದು ಸಹ ಅದೇ ನೃತ್ಯ ಕಲೆಯೇ.
ನೃತ್ಯ ಪ್ರವೀಣ ಮತ್ತು ಪ್ರಾವೀಣ್ಯತೆ
ಯಾವ ನೃತ್ಯ ಪ್ರಕಾರವನ್ನಾದರೂ ಸಹ ಲೀಲಾಜಾಲವಾಗಿ ಪ್ರದರ್ಶಿಸಬಲ್ಲ ನೃತ್ಯ ಕಲೆ ಮಂಜಪ್ಪ ಅವರಿಗೊಲಿದಿದೆ. ವಿಶೇಷವಾಗಿ ಜನಪದ, ರಿಮಿಕ್ಸ್, ಸಿನಿಮಾ ಹಾಡುಗಳ ನೃತ್ಯದಲ್ಲಿ ಆಸಕ್ತಿ ಹೊಂದಿರುವ ಮಂಜಪ್ಪ ಅವರು ಅನೇಕ ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದು, ಅನೇಕ ಪ್ರಶಸ್ತಿ ಪುರಸ್ಕಾರಕ್ಕೂ ಭಾಜನರಾಗಿದ್ದಾರೆ. ತಮ್ಮ ಈ ನೃತ್ಯಕಲೆಗೆ ಶಿಸ್ತುಬದ್ಧತೆ ಮತ್ತು ಕ್ರಮಬದ್ಧತೆಯ ರೂಪ ಕೊಟ್ಟು ಉನ್ನತ ಹಂತಕ್ಕೇರಲು ಬೆನ್ನು ತಟ್ಟಿ ಪ್ರೋತ್ಸಾಹಿಸಿದ ತಮ್ಮ ನೃತ್ಯ ಗುರು ದಾವಣಗೆರೆಯ ಜೋಸೆಫ್ ಹಾಗೂ ಸ್ನೇಹಿತರನ್ನು ಸದಾ ತುಂಬು ಹೃದಯದಿಂದ ಸ್ಮರಿಸುತ್ತಾರೆ ಮಂಜಪ್ಪ.
1999-2000ನೇ ಇಸ್ವಿಯಲ್ಲಿ ತಮಿಳು ಚಾನಲ್ ಒಂದರ “ಕಲಾಮಗಳ್ ಸಭಾ” ಹೆಸರಿನ ಲೈವ್ ನೃತ್ಯ ಸ್ಪರ್ಧೆಗಾಗಿ ತರಬೇತಿ ಪಡೆಯುವ ಜೊತೆ ದಾವಣಗೆರೆ ಬಾಪೂಜಿ ಆಡಿಟೋರಿಯಂನಲ್ಲಿ ಅನೇಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ ಇವರ ನೃತ್ಯ ತಂಡ ಆ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಗುರುಗಳ ಮಾರ್ಗದರ್ಶನ ಹಾಗೂ ತಮ್ಮ ಸ್ನೇಹ ಬಳಗದ ಸಹಕಾರದಲ್ಲಿ “ಮೈಕಲ್ ಟ್ರೂಪ್” ಮೂಲಕ ದಾವಣಗೆರೆ ನಗರದಲ್ಲಿ ಆರಂಭವಾದ ಇವರ ನೃತ್ಯಕಲೆ ಅಂದಿನಿಂದ ಇಂದಿನವರೆಗೂ ರಾಜ್ಯಾದ್ಯಂತ ಸಾವಿರಾರು ಯಶಸ್ವಿ ಪ್ರದರ್ಶನ ಕಂಡಿದೆ. “ವ್ಯಾಲೆಂಟೈನ್ಸ್ ಡೇ ಸ್ಪೇಷಲ್” ಎಂಬ ಹೆಸರಿನಲ್ಲಿ ಇವರ ತಂಡ ನೀಡಿರುವ ಪ್ರದರ್ಶನಗಳು ಇಂದಿಗೂ ವೀಕ್ಷಕರ ಹೃದಯದಲ್ಲಿ ವಿಶೇಷ ಛಾಪು ಮೂಡಿಸಿವೆ.
ಪ್ರಸ್ತುತ ತಮ್ಮ ವೃತ್ತಿ ಬದುಕಿನ ನಿರ್ವಹಣೆಯ ಜೊತೆ ನೃತ್ಯ ಕಲೆಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಸಾಗುತ್ತಿರುವ ಮಂಜಪ್ಪ ಅವರು ಅನೇಕ ಕಾರ್ಯಕ್ರಮಗಳ ಆಯೋಜಕರಾಗಿ, ನೃತ್ಯ ತರಬೇತುದಾರಾಗಿ ಅನೇಕ ನೃತ್ಯಾಸಕ್ತರ ಕಲಾ ಪ್ರತಿಭೆಗೆ ಮಾರ್ಗದರ್ಶಿಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಪಯಣ ಸದಾ ಉನ್ನತಿಯ ಹಂತಕ್ಕೇರಲಿ, ಅವರ ಕಲಾ ಸಾಧನೆ ಮತ್ತು ಕಲಾ ನೈಪುಣ್ಯತೆ ಜನಮಾನಸದಲ್ಲಿ ಎಂದಿಗೂ ಅಚ್ಚ – ಹಸಿರಾಗಿರಲಿ ಎಂದು ನಾವು ಶುಭಕೋರೋಣ.