ಭಾಮಿನಿ
ಬದುಕಿ ಬಿಡಬೇಕು ನಮಗಲ್ಲವಾದರೂ ನಮ್ಮವರಿಗೋಸ್ಕರ..!
ನಮ್ಮನ್ನೇ ಹಚ್ಚಿಕೊಂಡ- ನೆಚ್ಚಿಕೊಂಡ ನಮ್ಮದೇ ಕಂದಮ್ಮಗಳಿಗಾಗಿ
ನಿನ್ನೆಯಷ್ಟೇ ಆತ್ಮೀಯ ಗೆಳತಿಯೊಬ್ಬಳು ಕಾಲ್ ಮಾಡಿದ್ದಳು.”ವಿಷಯ ಗೊತ್ತಾಯ್ತಾ ನಯನಾಳ ಅಪ್ಪ ಸೂಸೈಡ್ ಮಾಡಿಕೊಂಡ್ರು ಅಂದ್ಲು” ದುಃಖದಿಂದ. ಒಂದು ಕ್ಷಣ ದಿಗ್ಭ್ರಾಂತಳಾದೆ. ನಯನಾ ಇನ್ನು ಪಿಯುಸಿ ಓದುತ್ತಿರುವ ಹೂ ಮೃದು ಮನಸ್ಸಿನ 16 ರ ಬಾಲೆ. ಈ ಆಘಾತವನ್ನು ಅವಳು ಹೇಗೆ ಅರಗಿಸಿಕೊಂಡಿರಬಹುದು. ಒಂದು ಕ್ಷಣ ಅದನ್ನು ನೆನೆದು ಕಣ್ಣಲ್ಲಿ ನೀರಾಡಿತು.
ತಂದೆ ಎಂಬುದು ಬರೀ ಎರಡಕ್ಷರದ ಪದವಲ್ಲ, ಒಬ್ಬ ಸಾಧಾರಣ ವ್ಯಕ್ತಿಯಾಗಿ ತನ್ನವರ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತು ಸಂಸಾರದ ನೌಕೆಯನ್ನು ಸಾಗಿಸಬೇಕಾಗಿರುವ ಅಸಾಧಾರಣ ಧೀರ. ತನಗಿಂತ ತನ್ನ ಮಕ್ಕಳ ಯಶಸ್ಸಿಗೆ ಸದಾ ತುಡಿಯಬೇಕಿರುವ ಮಹಾಪುರುಷ. ಪ್ರತೀ ಮನೆಯ ಕಥಾ ನಾಯಕ. ಪ್ರತೀ ಮಗುವಿಗೂ ತಾಯಿ ಮೊದಲ ಗುರುವಾದರೆ, ತಂದೆ ಮೊದಲ ಹೀರೋ. ಮಕ್ಕಳಿಗೆ ಹೆತ್ತ ತಂದೆ-ತಾಯಿ ಯೇ ಸರ್ವಸ್ವ. ಅವರ ಹೊರತಾಗಿ ಪ್ರಪಂಚದಲ್ಲಿ ಯಾರೂ ಮುಖ್ಯರಲ್ಲ. ಜೀವನದಲ್ಲಿ ಯಾರೇ ಬಂದರೂ ಹೆತ್ತವರ ಜಾಗ ತುಂಬಲು ಎಂದಿಗೂ ಸಾಧ್ಯವಿಲ್ಲ. ಮಕ್ಕಳನ್ನು ಹುಟ್ಟಿಸಿ ,ಸಾಕಿ ಬೆಳೆಸಿ ,ರಕ್ಷಣೆ ಕೊಡುವುದರಿಂದ ಹಿಡಿದು ಕಡೆಗಾಲದವರೆಗೂ ಮಕ್ಕಳಿಗೆ ಹಾರೈಸಿ, ಹರಸ ಬೇಕಿರುವ ತಂದೆಯೇ ಯಾವುದೋ ಕಾರಣಕ್ಕೆ ನಡು ನೀರಲ್ಲಿ ಮಕ್ಕಳನ್ನು ತಬ್ಬಲಿ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದು, ಮಕ್ಕಳಿಗೆ ನಿತ್ಯ ನರಕದ ಬಾಗಿಲ್ಲನ್ನು ಹೆತ್ತ ತಂದೆಯೇ ತೆರೆಯುವುದು ಎಷ್ಟು ಸರಿ..?
ಅದೇಕೋ ಜವಾಬ್ದಾರಿ ಸ್ಥಾನದಲ್ಲಿ ಮೊದಲು ಎನಿಸಿರುವ ತಂದೆಯೇ ಆತ್ಮಹತ್ಯೆ ಸರತಿ ಸಾಲಿನಲ್ಲಿ ಮೊದಲು ನಿಲ್ಲುತ್ತಿರುವುದು ಚಿಂತೆಗೀಡು ಮಾಡುತ್ತದೆ. ಏಕೆಂದರೆ ಜವಾಬ್ದಾರಿ ಎಂದಾಕ್ಷಣ ಮೊದಲು ನೆನಪಾಗುವುದು ತಂದೆಯೇ. ಅಂತಹ ಜವಾಬ್ದಾರಿಯುತ ವ್ಯಕ್ತಿಯೇ ಆತ್ಮಹತ್ಯೆ ಎಂಬ ದುರುಳನ ಅತಿಥಿಯಾದರೆ. ತಂದೆಯನ್ನೇ ನೆಚ್ಚಿಕೊಂಡ ಹಚ್ಚಿಕೊಂಡ ಮಕ್ಕಳ-ಮಡದಿಯ ಪಾಡೇನು..?ಅಪಘಾತ, ಅನಾರೋಗ್ಯ ಮೊದಲಾದ ಆಕಸ್ಮಿಕ ಸಾವುಗಳು ನಮ್ಮ ಕೈಲಿಲ್ಲ ಒಪ್ಪಿಕೊಳ್ಳೋಣ. ಅವುಗಳು ವಿಧಿಲಿಖಿತ. ಈ ತರಹದ ಸಾವಿಗೆ ನಾವು ಹೊಣೆಗಾರರಲ್ಲ. ಆದರೆ ಆತ್ಮಹತ್ಯೆ ನಮ್ಮ ಕೈಗೊಂಬೆ ಅಲ್ಲವಾ…?
ಬದುಕಿನ ಸಂಕಷ್ಟಗಳಿಗೆ ಹೆದರಿ ಸಾಯುವ ಮೂಲಕ ಭಾವ-ಬಂಧನಗಳ ಕೊಂಡಿ ಕಳಚಿಕೊಳ್ಳುವುದು ಸರಿಯಲ್ಲ. ಜಯಿಸಬೇಕು ಇಲ್ಲೇ ಇದ್ದು, ಬದುಕಿದ್ದು. ಸಾಯುವ ಮುನ್ನ ಒಂದು ಬಾರಿ ನಿಮ್ಮನೇ ಹಚ್ಚಿಕೊಂಡ ನೆಚ್ಚಿಕೊಂಡ ನಿಮ್ಮದೇ ಕಂದಮ್ಮಗಳ ಬಗ್ಗೆ ಯೋಚಿಸಿ ನೋಡಿ, ನೀವಿಲ್ಲದ ಆ ಘನಘೋರವಾದ ನಿಮ್ಮದೇ ಮಕ್ಕಳ ಜೀವನವನ್ನು ಕಲ್ಪಿಸಿಕೊಳ್ಳಿ,ಅಷ್ಟಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವಂಥದ್ದೇನಾಗಿದೆ, ನಿಮ್ಮವರನ್ನೆಲ್ಲಾ ಬಿಟ್ಟು ಹೋಗುವಷ್ಟು ಕಠೋರ ನಿರ್ಧಾರ ತೆಗೆದುಕೊಳ್ಳುವಷ್ಟು ಮಟ್ಟಿಗೆ. ಅಷ್ಟಕ್ಕೂ ಪ್ರಪಂಚದಲ್ಲಿ ಯಾರೂ ಅನುಭವಿಸಲಾರದ ನೋವನ್ನು ನೀವು ಅನುಭವಿಸಿದ್ದೀರ..? ಮರಕ್ಕಿಂತ ಮರ ದೊಡ್ಡದೆಂಬಂತೆ ನಮಗಿಂತ ದೊಡ್ಡ ದೊಡ್ಡ ಕಷ್ಟಗಳನ್ನು ಎದುರಿಸುತ್ತಿರುವವರು ಸಾಕಷ್ಟಿದ್ದಾರೆ. ಹಾಗೆಂದು ಎಲ್ಲರೂ ಹೀಗೆ ಆತ್ಮಹತ್ಯೆ ಮಾಡಿಕೊಳ್ತಾರಾ..? ಇಲ್ಲ.. ಖಂಡಿತಾ ಇಲ್ಲ.
ಎಲ್ಲಾ ಕಷ್ಟಗಳ ಜಾಗವನ್ನು ಸುಖಗಳು ಬಂದು ಆಕ್ರಮಿಸುವ ದಿವ್ಯಘಳಿಗೆ ಬಂದೇ ಬರುತ್ತದೆ. ಬದುಕುವ ವಿಶ್ವಾಸ ,ತಾಳ್ಮೆಇರಬೇಕಷ್ಟೇ. ಗಂಡು ದಿಕ್ಕಿಲ್ಲದ ಅದೆಷ್ಟೋ ಮನೆಗಳಿಗೆ ತಂದೆಯೇ ಆಧಾರಸ್ತಂಭ. ಹೀಗಾಗಿ ಪಿತೃವಿಯೋಗ ಎಂಬುದು ಆ ಮಕ್ಕಳ ಪಾಲಿಗೆ ನರಕಕ್ಕಿಂತ ಮಿಗಿಲು. ತಂದೆಯ ರಕ್ಷಣಾ ಬೇಲಿಯಲ್ಲೇ ಹೂವಾಗಿ ಅರಳಬೇಕಾದ ಮಕ್ಕಳು ತಂದೆಯ ಆತ್ಮಹತ್ಯೆಯಿಂದ ಅರಳುವ ಮುನ್ನವೇ ಬಾಡಿ ಹೋಗಬಾರದು.
ಇಂದಿನ ಅನ್ನದ ಮಕ್ಕಳೇ ನಾಳೆಯ ಚಿನ್ನದ ಮಕ್ಕಳು ಎಂಬ ಮಾತೊಂದಿದೆ. ಅದು ಅಕ್ಷರಶಃ ಸತ್ಯ. ಹೀಗಾಗಿ ಆತ್ಮಹತ್ಯೆಯಂಥ ಕ್ರೂರ, ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಒಮ್ಮೆ ಯೋಚಿಸಿ ನಿಮ್ಮ ಪ್ರೀತಿಯ ಮಡದಿ- ಮಕ್ಕಳ ಬಗ್ಗೆ. ಕಷ್ಟಗಳು, ಕೆಲವೊಂದು ಪರಿಸ್ಥಿತಿಗಳು ನಮ್ಮನ್ನ ಸಾಯುವಂತೆ ಕೈ ಬೀಸಿ ಕರೆಯಬಹುದು. ಆದರೆ ದೂರಾಲೋಚನೆ ಮಾಡಿ ನೋಡಿ ನಾಳೆ ನಿಮ್ಮ ಮಗನೋ-ಮಗಳೋ ಯಾವುದೋ ಕ್ಷೇತ್ರದಲ್ಲಿ ಸಾಧನೆ ಮಾಡಿ ನೀವು ಹೆಮ್ಮೆ ಪಡುವಂತೆ ಮಾಡಬಹುದು. ಆ ಹೆಮ್ಮೆಯ ಪಟ್ಟ ನಿಮಗೆ ಬೇಡಬೇ..? ಆ ಸುಘಳಿಗೆಯನ್ನು ನೀವು ಕಣ್ತುಂಬಿಕೊಳ್ಳುವ ಸಲುವಾಗಿಯಾದರೂ ಬದುಕಿರಬೇಡವಾ…? ನಿಮ್ಮ ಕೈ ಯಿಂದ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕೊಡಲು ಸಾಧ್ಯವಾಗದೇ ಇರಬಹುದು. ಆದರೆ ನಿಮ್ಮ ಪ್ರೀತಿ, ಆಶೀರ್ವಾದ ಕೊಡಿ ಸಾಕು. ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಹೀಗಾಗಿ ನಾವು ಬದುಕಲೇ ಬೇಕು. ನಮಗಲ್ಲವಾದರೂ ನಮ್ಮವರಿಗೋಸ್ಕರ….
( -ಆಕಾಶಪ್ರಿಯ, ಪತ್ರಕರ್ತೆ, ಬೆಂಗಳೂರು)