ಅಂತರಂಗ
ಕುಲದೀಪ್ ನಯ್ಯರ್ : ಮರು ಓದಿನ ಅನಿವಾರ್ಯತೆ
ಇನ್ನೇನು ಫೋನ್ ಸಂಭಾಷಣೆ ಮುಕ್ತಾಯಗೊಳ್ಳಬೇಕು ಎನ್ನುವ ಹೊತ್ತಿಗೆ ಮಾತು ಕುಲದೀಪ್ ನಯ್ಯರ್ ಕುರಿತ ಪ್ರಸ್ತಾಪದ ಕಡೆಗೆ ಹೊರಳಿಕೊಂಡಿತು. ನನ್ನೊಂದಿಗೆ ಮಾತನಾಡುತ್ತಿದ್ದವರು ಕನ್ನಡದ ಖ್ಯಾತ ದಿನಪತ್ರಿಕೆಯೊಂದರಲ್ಲಿ ಕಾರ್ಯನಿರತನಾಗಿದ್ದ ಪತ್ರಕರ್ತ ಗೆಳೆಯ.
ಸದ್ಯದ ಪತ್ರಿಕಾರಂಗ ಕೆಲವು ವಿಲಕ್ಷಣ ವ್ಯಕ್ತಿತ್ವಗಳ ಕಾರಣಕ್ಕಾಗಿಯೇ ಹೇಗೆ ಕಲುಷಿಷತಗೊಳ್ಳುತ್ತಿದೆ ಎಂಬುದರ ಸುತ್ತ ಚರ್ಚೆ ನಡೆದಿತ್ತು. ಕುಲದೀಪ್ ನಯ್ಯರ್ ನಿಷ್ಠುರ ವ್ಯಕ್ತಿತ್ವದ ಬಗ್ಗೆ ಪ್ರಸ್ತಾಪಿಸಿದ ಆ ಗೆಳೆಯ ಅಂಥ ಹಿರಿಯ ಆದರ್ಶ ಜೀವಗಳೇ ಸದ್ಯದ ಪತ್ರಿಕಾರಂಗವನ್ನು ಸರಿಹಾದಿಯಲ್ಲಿ ಮುನ್ನಡೆಸಬಲ್ಲವು ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಿದನು.
ತಾನು ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಬೆಂಗಳೂರು ಕಛೇರಿಗೆ ನಯ್ಯರ್ ಭೇಟಿ ಕೊಟ್ಟ ವೇಳೆ ಸಂಪಾದಕರಿಗೆ ನೀಡಿದ ನಿಷ್ಠುರ ಸಲಹೆಯನ್ನು ನೆನಪಿಸಿಕೊಂಡನು. ಸಂಪಾದಕ, ಉಪ-ಸಂಪಾದಕರೊಂದಿಗಿನ ಸಭೆಯಲ್ಲಿ “ನೀವು ರೆಗ್ಯುಲರ್ ಆಗಿ ಏನನ್ನು ಬರೆಯುತ್ತೀರಿ?” ಎಂಬ ಪ್ರಶ್ನೆ ನಯ್ಯರ್ ಅವರಿಂದ ತೂರಿಬಂದಾಗ ಕೆಲವು ಹಿರಿಯರು ಮಾತ್ರ ರೆಗ್ಯುಲರ್ ಆಗಿ ಬರೆಯುತ್ತಿರುವುದಾಗಿ ತಿಳಿಸಿದ್ದರಂತೆ. ರೆಗ್ಯುಲರ್ ಆಗಿ ಬರೆಯದ ಹಿರಿಯರ ಕುರಿತು ಅಸಮಾಧಾನಗೊಂಡ ನಯ್ಯರ್ ಸಂಪಾದಕರೆಡೆಗೆ ಮುಖ ತಿರುಗಿಸಿ ಇಂಥವರನ್ನು ಇನ್ನೂ ಪತ್ರಿಕೆಯಲ್ಲಿ ಏಕೆ ಉಳಿಸಿಕೊಂಡಿದ್ದೀರಿ ಎಂದು ಕೇಳಿದ್ದರಂತೆ.
ಪತ್ರಕರ್ತರ ವೃತ್ತಿಬದ್ಧತೆ ಹೇಗಿರಬೇಕು ಎಂಬುದನ್ನು ಈ ಪ್ರಸಂಗ ಸ್ಪಷ್ಟಪಡಿಸುತ್ತದೆ. ಅಲ್ಲದೇ, ಕುಲದೀಪ್ ನಯ್ಯರ್ ಅವರ ವೃತ್ತಿಪರ ಶ್ರೇಷ್ಠತೆ ಏನೆಂಬುದನ್ನೂ ದೃಢೀಕರಿಸುತ್ತದೆ.
ಯಾವುದೇ ಕ್ಷೇತ್ರವೊಂದು ಹಿರಿಜೀವಗಳ ವೃತ್ತಿಪರ ಅನುಭವದ ಬೆಂಬಲದೊಂದಿಗೆ ಕ್ರಮಾನುಗತ ಬೆಳವಣಿಗೆಯನ್ನು ಕಂಡುಕೊಳ್ಳುತ್ತಿರುತ್ತದೆ. ವೃತ್ತಿಯನ್ನು ಆರಂಭಿಸಿದ ದಿನದಿಂದ ಹಿಡಿದು ಕೊನೆಯ ಕ್ಷಣಗಳವರೆಗೆ ವೃತ್ತಿನಿಷ್ಠ ನಿಲುವುಗಳೊಂದಿಗೆ ಕಾರ್ಯೋನ್ಮುಖವಾದ ಧ್ಯಾನಸ್ಥ ಶ್ರದ್ಧೆಯೇ ಮಾದರಿಗಳನ್ನು ರೂಪಿಸುತ್ತದೆ. ಅಂಥ ಮಾದರಿಗಳ ಹಾದಿಯಲ್ಲಿಯೇ ಹೊಸಪೀಳಿಗೆ ವೃತ್ತಿಪರ ಬದ್ಧತೆಯನ್ನು ಸಾಬೀತುಪಡಿಸಬೇಕಾಗುತ್ತದೆ. ಅದಕ್ಕನುಗುಣವಾಗಿ ಆ ನಿರ್ದಿಷ್ಟ ಕ್ಷೇತ್ರದಲ್ಲಿ ಪ್ರಯೋಗಗಳು ನಡೆಯುತ್ತವೆ. ಆ ಪ್ರಯೋಗಶೀಲತೆಗೆ ತಕ್ಕಂತೆಯೇ ವಲಯವೊಂದು ಸಮೃದ್ಧಗೊಳ್ಳುತ್ತದೆ. ಪತ್ರಿಕಾರಂಗವೂ ಹಾಗೆಯೇ.
ಹಿರಿಯ ಪತ್ರಕರ್ತರ ದೃಷ್ಟಿಕೋನಗಳು ಈ ರಂಗವನ್ನು ಪ್ರಬುದ್ಧಗೊಳಿಸಿವೆ. ಒಂದು ಕಾಲದಿಂದ ಮತ್ತೊಂದು ಕಾಲಕ್ಕೆ ಹೊರಳಿಕೊಳ್ಳುವಾಗ ಏರ್ಪಡುವ ಪಲ್ಲಟಗಳ ಸಾಕ್ಷಿಪ್ರಜ್ಞೆಗಳಾಗಿ ಅವು ಹೊಸ ಪೀಳಿಗೆಯ ಬರಹಗಾರರಿಗೆ ದಾರಿ ತೋರಿವೆ. ಕುಲದೀಪ್ ನಯ್ಯರ್ ಅಂಥ ದಿಗ್ದರ್ಶಕ ಪತ್ರಕರ್ತ.
ಕನ್ನಡವೂ ಸೇರಿದಂತೆ ಭಾರತದ ಪತ್ರಿಕಾರಂಗ ಕುಲದೀಪ್ ನಯ್ಯರ್ ಅವರನ್ನು ವರ್ತಮಾನದಲ್ಲಿ ಭಿನ್ನವಾಗಿ ಗ್ರಹಿಸಿಕೊಂಡು ಅಂಥ ಮಾದರಿಗಳ ಆಧಾರದಲ್ಲಿ ಹೊಸದೊಂದು ಸಕಾರಾತ್ಮಕ ಪಲ್ಲಟಗಳನ್ನು ಕಂಡುಕೊಳ್ಳುವ ಅನಿವಾರ್ಯತೆಯನ್ನು ಕಾಡಿಸಿಕೊಳ್ಳಬೇಕಿದೆ. ಕಳೆದ 18 ವರ್ಷಗಳಲ್ಲಿ ಕನ್ನಡದ ಪತ್ರಿಕಾ ಪರಂಪರೆಗೆ ತದ್ವಿರುದ್ಧದ ವಿಧ್ವಂಸಕ ನಡೆಗಳು ಇಲ್ಲಿಯ ಆರೋಗ್ಯಕರ ವಾತಾವರಣದ ಆವರಣವನ್ನು ಕಲುಕಿವೆ. ಈಗಲೂ ಕಲುಕುತ್ತಲೇ ಇವೆ. ಇಂಥ ಸಂದರ್ಭದಲ್ಲಿ ನಯ್ಯರ್ ಅವರ ವೃತ್ತಿಪರ ಕೊಡುಗೆಗಳು ಮರು ಓದಿಗೆ ಒಳಗಾಗಬೇಕಿದೆ.
ಹೊಸ ಪೀಳಿಗೆಯ ಪತ್ರಕರ್ತರು ನಯ್ಯರ್ ಅವರ ಮೌಲಿಕ ಬರಹಗಳೊಂದಿಗೆ ಸಂವಾದಿಸಿಕೊಳ್ಳಬೇಕಿದೆ. ಪ್ರಜಾವಾಣಿ ಅಂಕಣ ಬರಹಗಳ ಮೂಲಕ ಅವರ ಆಲೋಚನಾ ಕ್ರಮಗಳು ಕನ್ನಡಿಗರಿಗೆ ತಲುಪಿವೆ. ಈಗಾಗಲೇ ಆಗಿಹೋದ ಮತ್ತು ಸದ್ಯದ ಹಿರಿಯ ತಲೆಮಾರಿನವರಿಗೆ ನಯ್ಯರ್ ಅವರ ಬರಹದ ಸೊಗಡಿನ ಪರಿಚಯವಿದೆ. ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿಸಿನೆತ್ತರುಕ್ಕಿಸಿಕೊಳ್ಳುತ್ತಿರುವ ಯುವಸಮೂಹವು ನಯ್ಯರ್ ಬರಹ ಪ್ರತಿಭೆಯ ಶಕ್ತತೆ ಮತ್ತು ಅದರ ಸಾರ್ವಕಾಲಿಕ ಮೌಲಿಕತೆಯನ್ನು ಅರ್ಥೈಸಿಕೊಳ್ಳಲೇಬೇಕಿದೆ.
ಕಳೆದ ದಶಕದ ಆರಂಭಿಕ ವರ್ಷಗಳಲ್ಲಿ ಕನ್ನಡದಲ್ಲಿ ಹೊಸ ಪತ್ರಿಕೆಗಳು ಆರಂಭಗೊಂಡಾಗ ಹಿಂದಿನಂತೆಯೇ ಓದುಗ ಸಮೂಹ ಬೆಂಬಲಕ್ಕೆ ನಿಂತಿತು. ಆದರೆ, ಹೊಸ ಪತ್ರಿಕೆಗಳು ನೂತನ ಪ್ರಯೋಗಗಳ ಆಮಿಷವೊಡ್ಡಿ ಅಕ್ಷರಗಳ ಮೂಲಕ ವಿಧ್ವಂಸಕ ನಡೆಗಳನ್ನೂ ಪ್ರದರ್ಶಿಸಿದವು. ನಿರ್ದಿಷ್ಟ ರಾಜಕೀಯದೊಂದಿಗಿನ ಮೂಲಭೂತವಾದಿ ದೃಷ್ಟಿಕೋನ, ಧಾರ್ಮಿಕ ಸಾಂಪ್ರದಾಯಿಕತೆಯ ವಿಕೃತಿಗಳ ವೈಭವೀಕರಣ, ಮನುಷ್ಯ-ಮನುಷ್ಯರ ನಡುವೆ ಧರ್ಮಗಳ ನೆಪದಲ್ಲಿ ವಿಷಬೀಜ ಬಿತ್ತುವ ಹುನ್ನಾರ, ಅಹಿಂಸೆಯನ್ನು ಪ್ರತಿಪಾದಿಸಿದ್ದ ದಾರ್ಶನಿಕರ ಅಪವ್ಯಾಖ್ಯಾನ, ಹಿಂಸೆಯ ಪರವಾಗಿ ನಿಲ್ಲುವ ನಿಲುವುಗಳ ಪ್ರತಿಪಾದನೆಯೊಂದಿಗೆ ಆ ವಿಧ್ವಂಸಕ ನಡೆಗಳಿದ್ದವು. ಅವುಗಳು ಆಕರ್ಷಕ ಭಾಷಾ ಶೈಲಿ ಮತ್ತು ಪ್ರಚೋದಕ ಭಾವುಕ ಸ್ವರೂಪಗಳೊಂದಿಗೆ ಓದುಗರನ್ನು ಸೆಳೆದುಕೊಂಡವು. ಅವುಗಳೇ ಜನಪ್ರಿಯಗೊಂಡು ಮಾರುಕಟ್ಟೆಯಲ್ಲಿ ಆಕರ್ಷಣೀಯ ಎಂದೆನ್ನಿಸಿದವು.
ಈಗಿನ ಹೊಸ ಪೀಳಿಗೆ ಯುದ್ಧದ ಪರವಾಗಿ ವೀರಾವೇಶದ ನುಡಿಗಳನ್ನಾಡುತ್ತಿರುವುದಕ್ಕೆ, ನಮ್ಮ ಅಸ್ತಿತ್ವಕ್ಕೆ ಹಿಂಸೆ ಅನಿವಾರ್ಯ ಎಂಬ ವಿತಂಡವಾದವನ್ನು ಮುಂದಿಡುತ್ತಿರುವುದಕ್ಕೆ ಮತ್ತು ದೇಶಭಕ್ತಿಯ ನೆಪದಲ್ಲಿ ವಿಚಾರವಂತರನ್ನು ದ್ವೇಷಿಸುತ್ತಿರುವುದಕ್ಕೆ ಹೊಸ ಪತ್ರಿಕೆಗಳ ಈ ವಿಧ್ವಂಸಕ ನಡೆಗಳೇ ಕಾರಣ.
ಇದಕ್ಕೂ ಮೊದಲು ಪರಿಸ್ಥಿತಿ ಇಷ್ಟು ವಿಷಮವಾಗಿರಲಿಲ್ಲ. ಸಮಾಜ ಹೀಗೆ ವಿಷಮಗೊಳ್ಳದಂತೆ ಎಚ್ಚರಿಕೆಯ ಹಾದಿಯನ್ನು ತೋರುವ ಪ್ರಜ್ಞಾಶೀಲ ಬರಹಗಳು ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿದ್ದವು. ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನಯ್ಯರ್ ಅವರ ಅಂಕಣವು ಅಂಥ ಬರಹಗಳ ಸರಣಿಯಲ್ಲಿ ಪ್ರಸ್ತಾಪಿಸಲೇಬೇಕಾದ ಮಾದರಿಯಾಗಿ ಮುಖ್ಯವೆನ್ನಿಸುತ್ತದೆ. ಅಂತರರಾಷ್ಟ್ರೀಯ ರಾಜಕಾರಣವನ್ನು ಉದಾತ್ತ ದೃಷ್ಟಿಕೋನಗಳೊಂದಿಗೆ ವಿಶ್ಲೇಷಿಸುತ್ತಿದ್ದ ರೀತಿಯಿಂದಾಗಿ ಓದುಗರೊಳಗೆ ಅವರು ಯೋಚಿಸುವ ಸಂಯಮವನ್ನು ದಾಟಿಸುತ್ತಿದ್ದರು. ಎರಡು ದೇಶಗಳ ನಡುವೆ ನಡೆಯುವ ಸಂಘರ್ಷವನ್ನು ನೋಡುವ ಕ್ರಮಗಳು ಯಾವುದಾಗಿರಬೇಕು ಎಂಬುದನ್ನು ಅವರು ತೋರ್ಪಡಿಸುತ್ತಿದ್ದರು.
ವೈರತ್ವಕ್ಕಿಂತ ಸೌಹಾರ್ದದ ಮಾತುಕತೆಗಳು ಎರಡು ದೇಶಗಳನ್ನು ಶಾಂತಿಯ ಕಡೆಗೆ ಕರೆದೊಯ್ಯುತ್ತವೆ ಎಂಬ ಸತ್ಯವನ್ನು ಮನಗಾಣಿಸುತ್ತಿದ್ದರು. ಜಗತ್ತು ಮತ್ತು ದೇಶ – ಇವೆರಡನ್ನೂ ಮಾನವೀಯತೆ ಮತ್ತು ಶಾಂತಿಯ ಮೌಲ್ಯಗಳ ಕಣ್ಣಲ್ಲಿ ವ್ಯಾಖ್ಯಾನಿಸುವ ಅಪರೂಪದ ಬರಹಗಾರರಾಗಿ ಅವರು ಗಮನ ಸೆಳೆದಿದ್ದರು. ಈ ಕಾರಣಕ್ಕಾಗಿಯೇ ಅವರ ಬರಹಗಳ ಮರುಓದು ಅನಿವಾರ್ಯ ಎಂದೆನ್ನಿಸಿದೆ.
ಪತ್ರಿಕೆ ಮತ್ತು ಚಾನಲ್‍ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಕರು ಯುದ್ಧದ ಪರವಾಗಿ ವಾದಿಸುವ ಜಾಯಮಾನ ರೂಢಿಸಿಕೊಂಡಿದ್ದಾರೆ. ಅಧಿಕಾರರೂಢ ಪಕ್ಷದ ನಾಯಕರ ಆರಾಧನೆಯನ್ನೇ ವೃತ್ತಿಪರ ಧರ್ಮ ಎಂದುಕೊಂಡಿದ್ದಾರೆ. ಪಾಕಿಸ್ತಾನದಂಥ ರಾಷ್ಟ್ರ ಶತೃರಾಷ್ಟ್ರ ಎಂದುಕೊಂಡು ಅದರ ವಿರುದ್ಧ ಯುದ್ಧ ಆಗಲೇಬೇಕು, ಆಗಲೇ ಬುದ್ಧಿ ಕಲಿಸಬಹುದು ಎಂಬ ಹಠದ ಧೋರಣೆಗಳೊಂದಿಗಿದ್ದಾರೆ. ಬುದ್ಧಿ ಮತ್ತು ಜೀವ- ಇವೆರಡನ್ನೂ ನಿರಾಕರಿಸುವ ಮೂಲಭೂತವಾದಿ ಪಡೆಗಳನ್ನು ಹಿಂದೆಂದಿಗಿಂತಲೂ ಹೆಚ್ಚಾಗಿ ನೆಚ್ಚಿಕೊಳ್ಳುತ್ತಿದ್ದಾರೆ. ಭಾವೋನ್ಮಾದದಲ್ಲಿ ಹೊಸ ಆಲೋಚನೆಗಳನ್ನು ತಿರಸ್ಕರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ನಯ್ಯರ್ ಅವರಂತಹ ಪತ್ರಕರ್ತರು ಬರೆದ ಬರಹಗಳು ಅವರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತವೆ. ಆ ಬರಹಗಳ ಸಾರ್ವಕಾಲಿಕ ಶಕ್ತತೆಯೇ ನವಮನ್ವಂತರ ಸೃಷ್ಟಿಯ ಪ್ರಯೋಗಶೀಲತೆಗೆ ಪ್ರೇರಣೆ ನೀಡುತ್ತದೆ. ಇಲ್ಲದಿದ್ದರೆ ಪತ್ರಿಕೆಗಳು ಪೀಳಿಗೆಗಳ ದಾರಿ ತಪ್ಪಿಸುವ ಅಪಾಯಕಾರಿ ಕೃತ್ಯಗಳನ್ನು ಎಸಗುತ್ತವೆ. ಆ ಕೃತ್ಯ ಎಸಗುತ್ತಿರುವ ಕೆಲವು ಪತ್ರಿಕೆಗಳ ವಿಧ್ವಂಸಕ ನಡೆಗಳ ವಿರುದ್ಧ ನಿರಾಕರಣೆಯ ಆಂದೋಲನ ಜಾಗೃತಗೊಂಡು ಸಕಾರಾತ್ಮಕ ಮಾದರಿ ಪತ್ರಿಕಾರಂಗವನ್ನು ಕನ್ನಡದಲ್ಲಿ ಮರುಸ್ಥಾಪಿಸಲು ಕುಲದೀಪ್ ನಯ್ಯರ್ ಬರಹಗಳೂ ನೆರವಾಗುತ್ತವೆ. ಅಷ್ಟೇ ಅಲ್ಲ, ಅವುಗಳೊಂದಿಗಿನ ಆಪ್ತಸಂವಾದ ಕನ್ನಡದ ಪತ್ರಿಕಾಪ್ರಜ್ಞೆಗೆ ಹೊಸದೊಂದು ಸ್ವರೂಪವನ್ನೂ ತಂದುಕೊಡುತ್ತದೆ.
(ಲೇಖಕರು – ಡಾ.ಎನ್.ಕೆ.ಪದ್ಮನಾಭ, ಪ್ರಾಧ್ಯಾಪಕರು, ಎಸ್.ಡಿ.ಎಂ ಕಾಲೇಜು,ಉಜಿರೆ )