ಅಸಾಮಾನ್ಯಳು

ಸೇವೆಯಲ್ಲೇ ಸಂತೃಪ್ತಿ ಕಾಣುತ್ತಿರುವ ಮಹಾತಾಯಿ ಮಹಾದೇವಮ್ಮ

Published

on

ಇಂದಿನ ಮಕ್ಕಳು ನಾಳೆಯ ಪ್ರಜೆಗಳು. ದೇಶದ ಅಭ್ಯುದಯದ ಮೊಳಕೆ ಅವರಲ್ಲಿದೆ. ದೇಶದ ಪ್ರಗತಿಯ ಪ್ರತೀಕವಾಗಿರುವ ಇಂತಹ ಮಕ್ಕಳಿಗೆ ಅವಶ್ಯವಾಗಿ ಬೇಕಿರುವುದು ಪ್ರೀತಿ, ವಾತ್ಸಲ್ಯ ಮತ್ತು ಉತ್ತಮ ಪೋಷಣೆ. ಅಂತೆಯೇ ಅವರಿಗೆ ವಿದ್ಯಾಭ್ಯಾಸ ಕೊಟ್ಟು ಅವರನ್ನು ಸುಸಂಸ್ಕøತರನ್ನಾಗಿ ಮತ್ತು ಸತ್ಪ್ರಜೆಗಳನ್ನಾಗಿ ರೂಪಿಸುವುದು ಪ್ರತಿಯೊಬ್ಬ ತಂದೆ – ತಾಯಿಯರ ಕರ್ತವ್ಯ. ಆದರೆ, ಎಲ್ಲಾ ಮಕ್ಕಳಿಗೂ ಹೆತ್ತವರ ಪೋಷಣೆಯ ಭಾಗ್ಯ ಇರುವುದಿಲ್ಲ. ಸಮಾಜದಲ್ಲಿ ಅನೇಕ ಮಕ್ಕಳು ನಾನಾ ಕಾರಣದಿಂದ ಹೆತ್ತವರ ಪಾಲನೆ – ಪೋಷಣೆಯಿಂದ ವಂಚಿತರಾಗಿ ಬೀದಿಪಾಲಾಗುತ್ತಿರುವ ಘಟನೆಗಳು ಪ್ರತಿನಿತ್ಯ ನಡೆಯುತ್ತಲೇ ಇವೆ. ಇಂತಹ ಮಕ್ಕಳನ್ನು ಕಂಡು ಅಯ್ಯೋ ಪಾಪ ಎಂದು ಸಹನುಭೂತಿ ತೋರಿ ಸುಮ್ಮನಾಗುವವರ ಸಂಖ್ಯೆಯೇ ಹೆಚ್ಚು. ಅಂಥದ್ರಲ್ಲಿ ಇಂತಹ ಮಕ್ಕಳ ಬಗ್ಗೆಯೂ ಕಳಕಳಿ ತೋರಿ, ನಿಸ್ವಾರ್ಥ ಭಾವದಿಂದ ಅವರ ಪಾಲನೆ – ಪೋಷಣೆ ಮಾಡಿ ಅವರ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸುವವರು ಅಪರೂಪದಲ್ಲಿ ಅಪರೂಪವೇ ಸರಿ. ಈ ಅಪರೂಪದ ವ್ಯಕ್ತಿಗಳ ಸಾಲಿಗೆ ಸೇರುತ್ತಾರೆ ನಮ್ಮ ದಾವಣಗೆರೆಯ ಪುಟ್ಟಮ್ಮ ಅನಾಥಾಶ್ರಮದ ಸಂಸ್ಥಾಪಕಿ ಶ್ರೀಮತಿ ಮಹಾದೇವಮ್ಮ.

ಸೇವಾ ಸಾಂಗತ್ಯ

ಹಾವೇರಿ ಜಿಲ್ಲೆಯ ದೇವಿಗೆರೆ ಗ್ರಾಮದ ದಂಪತಿಗಳಾದ ಶ್ರೀ ನಿಂಗಪ್ಪ ಹಾಗೂ ಶ್ರೀಮತಿ ಪುಟ್ಟಮ್ಮ ಅವರದು ಸಾರ್ವಜನಿಕ ಸೇವಾ ಮನೋಭಾವನೆಯ ಕುಟುಂಬ. ಈ ದಂಪತಿಗಳ ಪುತ್ರಿಯಾಗಿ 07/03/1969ರಲ್ಲಿ ಜನಿಸಿದ ಮಹಾದೇವಮ್ಮನವರಲ್ಲೂ ಸಹ ಸಾಮಾಜಿಕ ಸೇವೆಯ ತುಡಿತ ಬಾಲ್ಯದಿಂದಲೂ ಸದಾ ಕಾಡುತ್ತಲೇ ಇತ್ತು. ಅದರ ಪರಿಣಾಮವಾಗಿಯೇ, “ ಅನಾಥ ಮಕ್ಕಳ ಸೇವೆಯೇ ಭಗವಂತನ ಸೇವೆ ” ಎಂಬ ಚಿಂತನೆಯೊಂದಿಗೆ ತಮ್ಮ ತಾಯಿಯ ಹೆಸರಲ್ಲಿ 1997ರಲ್ಲಿ “ದಾವಣಗೆರೆ ಮಹಾನಗರದಲ್ಲಿ ಶ್ರೀಮತಿ ಪುಟ್ಟಮ್ಮ ಅನಾಥಾಶ್ರಮ” ವನ್ನು ಸ್ಥಾಪಿಸಿದರು.
ಆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿ ಅಲ್ಲಿಂದ ಈವರೆಗೂ ಪ್ರತಿವರ್ಷ 25ಕ್ಕೂ ಅಧಿಕ ಅನಾಥ ಮಕ್ಕಳಿಗೆ ಆಶ್ರಯ ಕೊಟ್ಟು ತಾಯ್ಮಮತೆಯೊಂದಿಗೆ ಲಾಲನೆ – ಪಾಲನೆ ಮಾಡುತ್ತಾ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ.

1997 ರಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂದವಾಡ ರಸ್ತೆಯಲ್ಲಿದ್ದ ಒಂದು ಕಟ್ಟಡದಲ್ಲಿ 12 ಮಕ್ಕಳಿಗೆ ಆಶ್ರಯ ನೀಡುವುದರೊಂದಿಗೆ ಆರಂಭವಾದ ಈ ಆಶ್ರಮ ಸನ್ 2014ರಲ್ಲಿ ದಾವಣಗೆರೆ ಅಂಬೇಡ್ಕರ್ ವೃತ್ತದ ಸಮೀಪವಿರುವ ವಿಶಾಲವಾದ ಸುಸಜ್ಜಿತ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರವಾಯಿತು. ಪ್ರಸ್ತುತ ಚೇತನ ಹೊಟೇಲ್ ರಸ್ತೆಯಲ್ಲಿರುವ ಬಾಡಿಗೆ ಕಟ್ಟಡ ಒಂದರಲ್ಲಿ ಆಶ್ರಮದ ಸೇವಾ ಕಾರ್ಯ ಮುಂದುವರೆದಿದೆ.ಪ್ರಾರಂಭಿಕ ದಿನಗಳಲ್ಲಿ ಸರ್ಕಾರದ ಯಾವ ನೆರವು ಕೂಡ ಇಲ್ಲದೆ ಈ ಆಶ್ರಮವನ್ನು ಕಟ್ಟಿ ಬೆಳೆಸಿದ ರೀತಿ ಅಚ್ಚರಿಯೇ ಸರಿ. ಜನ ಸಾಮಾನ್ಯರು ತಮ್ಮ ಕುಟುಂಬದ ನಾಲ್ಕಾರು ಮಂದಿಗೆ ಊಟ – ವಸತಿ ಜೋಡಿಸುವುದೇ ಕಷ್ಟ. ಆದರೆ ತಮ್ಮ ಕುಟುಂಬಕ್ಕೆ ಒಂದಿನಿತು ಕೂಡ ಸಂಬಂಧವೇ ಇಲ್ಲದ ಹತ್ತಾರು ಮಕ್ಕಳ ಸಂಪೂರ್ಣ ಜೀವನ ನಿರ್ವಹಣೆಯ ಭಾರವನ್ನು ಹೊತ್ತು ಮುನ್ನಡೆಸುವುದೆಂದರೆ ಅದು ಅಂತಃಕರಣದ ಔನ್ನತ್ಯಕ್ಕೆ ಸಾಕ್ಷಿ ಮತ್ತು ಅದೊಂದು ಸಾಹಸದ ಕಾರ್ಯವೇ ಸರಿ. ಏನೆಲ್ಲಾ ಏಳು ಬೀಳು, ಬವಣೆಗಳ ನಡುವೆಯೂ ಸುದೀರ್ಘ ಕಾಲ ಈ ಆಶ್ರಮವು ತನ್ನ ಅಸ್ತಿತ್ವ ಉಳಿಸಿಕೊಂಡು ಧೀನರನ್ನು ಸಲಹಿದೆ ಎಂದರೆ ಅದಕ್ಕೆ ಮಹಾದೇವಮ್ಮನವರ ಅಂತರಂಗದ “ಧೀ” ಶಕ್ತಿಯೇ ಕಾರಣ. ಆರಂಭದಿಂದ ಈವರೆಗೂ ಶಿಸ್ತು, ಕ್ರಮಬದ್ಧತೆ, ಉತ್ತಮ ಸಂಸ್ಕಾರ, ಸದ್ಗುಣ, ಸಜ್ಜನಿಕೆ, ಜಾತ್ಯಾತೀತತೆ ಮತ್ತು ಸಹಬಾಳ್ವೆಯಂತಹ ಮೌಲ್ಯಗಳು ಹಾಗೂ ಸರಳ ಜೀವನ – ಉದಾತ್ತ ಚಿಂತನೆಗೆ ಆದ್ಯತೆ ಕೊಟ್ಟು ಮಕ್ಕಳನ್ನು ಪೊರೆಯುತ್ತಿರುವ ಈ ಆಶ್ರಮಕ್ಕೆ ಭೇಟಿಕೊಟ್ಟು ಕಣ್ಣಾರೆ ಕಂಡಿರುವ ಗಣ್ಯರು, ಅಧಿಕಾರಿಗಳು, ಸಾರ್ವಜನಿಕರು ಸೇರಿದಂತೆ ಸರ್ವರು ಕೂಡ ಈ ಆಶ್ರಮದ ಬಗ್ಗೆ ಗೌರವ ಮತ್ತು ಅಭಿಮಾನದ ಭಾವ ವ್ಯಕ್ತಪಡಿಸುತ್ತಿದ್ದಾರೆ.

ಆಶ್ರಮದ ಸೇವಾ ಕಾರ್ಯಗಳು

ಪುಟ್ಟಮ್ಮ ಆಶ್ರಮವು ತನ್ನನ್ನು ತಾನು ನಿತ್ಯ ನಿರಂತರ ನೂರಾರು ಜನಪರ – ಪ್ರಗತಿಪರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಅನಾಥ ಹಾಗೂ ನಿರ್ಗತಿಕ ಮಕ್ಕಳ ರಕ್ಷಣೆ, ಪೋಷಣೆ ಮತ್ತು ಪುನರ್ವಸತಿ, ಶಿಶು ಪಾಲನೆ, ಆರೋಗ್ಯ ಸೇವೆ, ಶಿಕ್ಷಣ ಸೇವೆ, ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆ, ಮಹಿಳಾ ಸಬಲೀಕರಣ, ವೃತ್ತಿಪರ ಶಿಕ್ಷಣ ಕೇಂದ್ರಗಳ ನಿರ್ವಹಣೆ, ವಯೋವೃದ್ಧರ ರಕ್ಷಣೆ ಮತ್ತು ಪೋಷಣೆ, ಗ್ರಾಮೀಣಾಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಇನ್ನಿತರೆ ಸೇವಾ ಕಾರ್ಯಗಳು ಅವಿರತ ಸಾಗುತ್ತಿವೆ. ಜಾಗೃತಿ ಶಿಬಿರ ಮತ್ತುಕಾರ್ಯಾಗಾರಗಳು ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿ ನೆರವಿನೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ಮಹಿಳಾ ಕಾನೂನು ಅರಿವು, ಸಂಘಟನಾ ಶಕ್ತಿ, ಸ್ವಾವಲಂಬನೆ, ಮಕ್ಕಳ ಲಾಲನೆ – ಪಾಲನೆ, ಪೌಷ್ಠಿಕ ಆಹಾರ ಲಿಂಗಭೇದತ್ವ ಸೇರಿದಂತೆ ಇತರೆ ವಿಷಯಗಳಿಗೆ ಸಂಬಂಧಿಸಿದ ವಿವಿಧ ಶಿಬಿರಗಳ ಮತ್ತು ಕಾರ್ಯಾಗಾರಗಳ ಆಯೋಜನೆ ಮೂಲಕ ಮಹಿಳಾ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.

ಸ್ವಸಹಾಯ ಗುಂಪುಗಳು

ಸಮಾಜದಲ್ಲಿರುವ ನಿರ್ಗತಿಕ ಮಹಿಳೆಯರು ಮತ್ತು ಪುರುಷರನ್ನು ಸ್ವ – ಸಹಾಯ ಗುಂಪುಗಳಡಿಯಲ್ಲಿ ಉಳಿತಾಯ ಗುಂಪುಗಳನ್ನಾಗಿ ರಚಿಸಿ ವಿವಿಧ ತರಬೇತಿಗಳನ್ನು ನೀಡಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲಾಗುತ್ತಿದೆ.

ಕಸೂತಿ ಮತ್ತು ಹೊಲಿಗೆ ತರಬೇತಿ

ಆಧುನಿಕ ಆಡಂಬರದ ವೇಷ – ಭೂಷಣ, ಉಡುಗೆ – ತೊಡುಗೆಗಳಿಗೆ ಮಾರು ಹೋಗುತ್ತಿರುವ ಯುವ ಪೀಳಿಗೆಗೆ ನಮ್ಮ ಮೂಲ ದೇಸಿ ಸಂಸ್ಕøತಿಯ ಅರಿವು ಮೂಡಿಸಲಾಗುತ್ತಿದೆ. ಅಲ್ಲದೆ, ದೇಸಿ ಸಂಸ್ಕøತಿ ಬಿಂಬಿಸುವ ಕಸೂತಿ ಮತ್ತು ಹೊಲಿಗೆಗೆ ಆದ್ಯತೆ ನೀಡಿ ತರಬೇತಿ ನೀಡಲಾಗುತ್ತಿದೆ.

ಪುನರ್ವಸತಿ ಮತ್ತು ಶಿಕ್ಷಣ

14 ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದನ್ನ ತಡೆಗಟ್ಟಲು ಹಾಗೂ ಬಾಲ ಕಾರ್ಮಿಕ ಪದ್ಧತಿಯ ನಿರ್ಮೂಲನೆ ಹಿನ್ನಲೆಯಲ್ಲಿ ಅಂತಹ ಮಕ್ಕಳ ಪೋಷಕರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಅವರನ್ನು ಶಿಕ್ಷಣ ವಾಹಿನಿಗೆ ತರುವ ಪ್ರಯತ್ನ ಆಶ್ರಮದಿಂದ ನಡೆಯುತ್ತಿದೆ.

ಜಾಗೃತಿ ಮೂಡಿಸುವ ಕಾರ್ಯಗಳಲ್ಲಿ ಭಾಗಿ

ಅನೇಕ ಮಕ್ಕಳು ಏಡ್ಸ್, ಪೋಲಿಯೋ, ಅಂಗವೈಕಲ್ಯ, ಅಂಧತ್ವ ಮುಂತಾದ ಮಾರಕ ಖಾಯಿಲೆಗೆ ತುತ್ತಾಗಿ ಬದುಕು ಕಳೆದುಕೊಳ್ಳುವುದನ್ನು ಕಂಡು ಮಮ್ಮಲ ಮರುಗಿರುವ ಈ ಆಶ್ರಮವು, ಖಾಯಿಲೆಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸರ್ಕಾರ ಪ್ರತಿವರ್ಷವೂ ಹಮ್ಮಿಕೊಳ್ಳುತ್ತಿರುವ ಜಾಗೃತಿ – ಜಾಥಾಗಳಲ್ಲಿ ಭಾಗಿಯಾಗಿ ಮತ್ತು ವೈಯುಕ್ತಿಕವಾಗಿಯೂ ಜನ ಜಾಗೃತಿ ಮೂಡಿಸುತ್ತಿದೆ.
ಹೆಚ್‍ಐವಿ ಸೋಂಕಿತ ಮಕ್ಕಳ ಆರೈಕೆ ಮತ್ತು ಬೆಂಬಲ :
ತಮ್ಮದಲ್ಲದ ತಪ್ಪಿಗೆ ಹೆಚ್‍ಐವಿ ಸೋಂಕಿನೊಂದಿಗೆ ಜೀವಿಸುತ್ತಿರುವ ಅನೇಕ ಮಕ್ಕಳಿಗೆ ಸಾಂತ್ವನ ನೀಡುತ್ತಿರುವ ಈ ಆಶ್ರಮವು ಅಂತಹ ಮಕ್ಕಳಿಗೆ ಧೈರ್ಯ ತುಂಬಿ ಆರೈಕೆ ಮಾಡುತ್ತಿದೆ. ಅವರಿಗೆ ಸಾಮಾಜಿಕ – ಮಾನಸಿಕ ಹಾಗೂ ನೈತಿಕ ಜೀವನದ ಬೆಂಬಲದ ಜೊತೆ ಸಂಪೂರ್ಣ ಉಚಿತ ಪೌಷ್ಠಿಕ ಆಹಾರದ ಬೆಂಬಲವನ್ನೂ ಕೂಡ ನೀಡುತ್ತಿದೆ. ಅಲ್ಲದೆ ಹತ್ತಿರದ ಎ.ಆರ್.ಟಿ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆಯನ್ನು ಸಹ ನೀಡಿಸಲಾಗುತ್ತಿದೆ.

ಸ್ವಂತ ಕಟ್ಟಡದಲ್ಲಿ ಆಶ್ರಮ ನಡೆಸುವ ಕನಸು

ವೈಯಕ್ತಿಕ ಸುಖ – ಸಂತೋಷಕ್ಕಿಂತಲೂ ಪರ ಹಿತಕ್ಕಾಗಿಯೇ ತಮ್ಮ ಜೀವನ ಮುಡುಪಾಗಿಟ್ಟಿರುವ ಮಹಾದೇವಮ್ಮನವರು ಸದಾ ಆಶ್ರಮದ ಮತ್ತು ಮಕ್ಕಳ ಏಳ್ಗೆಯ ಬಗ್ಗೆಯೇ ಚಿಂತಿಸುತ್ತಾರೆ. ಸ್ವಂತ ಕಟ್ಟಡದಲ್ಲಿ ಸುಸಜ್ಜಿತವಾಗಿ ತಮ್ಮ ಆಶ್ರಮವನ್ನು ನಡೆಸುವ ಕನಸು ಕಟ್ಟಿದ್ದಾರೆ.ಪ್ರಸ್ತುತ ದಾವಣಗೆರೆಯ ಕೊಂಡಜ್ಜಿ ರಸ್ತೆಯಲ್ಲಿರುವ ಶಿಬಾರದ ಬಳಿ 2015 ರಲ್ಲಿ ನಿರ್ಮಿಸಿರುವ ಕಟ್ಟಡದಲ್ಲಿ ಅನಾಥ ಮಕ್ಕಳ ವಸತಿಗೆ ಜಾಗದ ಕೊರತೆ ಇರುವ ಕಾರಣ ಅಲ್ಲಿ ಬಡ ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಕಂಪ್ಯೂಟರ್ ತರಬೇತಿ ಕೇಂದ್ರವನ್ನು ತೆರೆದಿದ್ದಾರೆ.

ಮುಗಿಸುವ ಮುನ್ನ

ಸುಮಾರು 20ಕ್ಕೂ ಅಧಿಕ ವರ್ಷಗಳಿಂದಲೂ ಅನಾಥ ಮಕ್ಕಳನ್ನು ಅತ್ಯಂತ ಕಾಳಜಿಯಿಂದ ಪ್ರೀತಿ, ವಾತ್ಸಲ್ಯ ನೀಡಿ ಹೆತ್ತವರಿಗಿಂತಲೂ ಮಿಗಿಲಾದ ಮಮತೆಯೊಂದಿಗೆ ಸಾಕುವ ಜೊತೆ ಸಮಾಜದ ಏಳ್ಗೆಗೂ ಅನೇಕ ಚಟುವಟಿಕೆ,ಕಾರ್ಯಕ್ರಮಗಳ ಆಯೋಜನೆ ಮೂಲಕ ಅವಿರತ ಸಾಮಾಜಿಕ ಕೊಡುಗೆ ನೀಡುತ್ತಿರುವ ಮಹಾದೇವಮ್ಮನವರನ್ನು ಸರ್ಕಾರ ಮತ್ತು ಸಂಘ – ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಿ ಗೌರವಿಸಬೇಕಿದೆ. ಅವರ ಅವಿರತ ಒಂಟಿ ಹೋರಾಟದ ಪರಿಶ್ರಮದ ಬದುಕಿಗೆ ಮತ್ತಷ್ಟು ಚೈತನ್ಯ ತುಂಬಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್| 9986715401

Leave a Reply

Your email address will not be published. Required fields are marked *

Trending

Exit mobile version