ಅಂತರಂಗ

ಪ್ರಜ್ಞಾವಂತಿಕೆಯ ಕವಿತೆಗಳ ಕಟ್ಟುತ್ತಿರುವ ಉದಯೋನ್ಮುಖ ಕವಿ ಅಣಬೇರು ತಾರೇಶ್

Published

on

ಕೆಲವರಿಗೆ ಮಾತ್ರ ಸೀಮಿತ ಎನಿಸಿದ್ದ ಸಾಹಿತ್ಯ ಕ್ಷೇತ್ರದ ಬಗ್ಗೆ ಇಂದು ಯುವ ಜನತೆ ಕೂಡ ಆಸಕ್ತಿ ತೋರುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆ. ಆದರೆ ತೋಚಿದ್ದನ್ನೆಲ್ಲಾ ಗೀಚುವ ಕಾರ್ಯಕ್ಕಿಂತ ಪ್ರಜ್ಞಾವಂತಿಕೆಯಿಂದ ಕವಿತೆ ಕಟ್ಟುವ ಕಾರ್ಯದಲ್ಲಿ ತೊಡಗಿರುವ ಯುವಜನರ ಸಂಖ್ಯೆ ವಿರಳವೇ ಸರಿ. ಈ ದಿಸೆಯಲ್ಲಿ ಅವಲೋಕಿಸಿದಾಗ ಭಾವತನ್ಮಯತೆಯ ಕವಿತೆಗಳಿಂದಲೇ ಓದುಗರ ಮನ ಸೆಳೆಯುವತ್ತ ಸಾಗಿರುವ ಅಣಬೇರು ಕೆ.ಪಿ ತಾರೇಶ್ ಎಂಬ ಉದಯೋನ್ಮುಖ ಕವಿ ನೆನಪಾಗುತ್ತಾರೆ.

ಕವಿತೆ ಕಟ್ಟುವುದೆಂದರೆ ಸುಮ್ಮನೆ ಅಲ್ಲ. ಕಟ್ಟಿದ್ದೆಲ್ಲ ಕವಿತೆಯಾಗಲ್ಲ, ಗೀಚಿದ್ದೆಲ್ಲವೂ ಬರಹವಾಗಲ್ಲ. ಅದೊಂದು ಆಂತರೀಕ ಪ್ರಜ್ಞೆ, ಸೂಕ್ಷ ಸಂವೇದನೆ. ಅಂತಹ ಸಂವೇದನಾಶೀಲ ಬರಹದತ್ತ ಮುಖ ಮಾಡಿರುವ ಅಣಬೇರು ತಾರೇಶ್ ಅವರು ಮೂಲತಃ ದಾವಣಗೆರೆ ತಾಲ್ಲೂಕಿನ ಅಣಬೇರು ಗ್ರಾಮದವರು. ಬೆಳೆದದ್ದು ಕಕ್ಕರಗೊಳಗೊಳ್ಳದಲ್ಲಿ. ಆರೋಗ್ಯ ಇಲಾಖೆಯ ನೌಕರರಾಗಿ ನಿವೃತ್ತರಾಗಿದ್ದ ದಿವಂಗತ ಕೆ.ಎನ್ ಪರಮೇಶ್ವರಪ್ಪ ಹಾಗೂ ಶ್ರೀಮತಿ ಗಂಗಮ್ಮ ಅವರ ಸುಪುತ್ರರು. ಪ್ರಸ್ತುತ 9 ವರ್ಷಗಳಿಂದ ದಾವಣಗೆರೆ ಜೆ.ಜೆ.ಎಂ ವೈದ್ಯಕೀಯ ಮಹಾವಿದ್ಯಾಲಯದ ಪ್ರಯೋಗಶಾಲಾ ತಂತ್ರಜ್ಞರಾಗಿ ಸೇವೆ ಸಲ್ಲಿಸುತ್ತಿದ್ದಾರೆ ತಾರೇಶ್.

1999-2000ನೇ ಇಸ್ವಿಯಲ್ಲಿ ಪ್ರೌಢಶಾಲಾ ಹಂತದಲ್ಲಿರುವಾಗಲೇ ಕಾಡಲು ಶುರು ಮಾಡಿದ ಕಾವ್ಯಾಸಕ್ತಿಗೆ ಮನಸೋತ ತಾರೇಶ್ ಏನು ಬರೆಯುತ್ತಿದ್ದೇನೆಂದು ಗೊತ್ತಿಲ್ಲದಿದ್ದರೂ, ಆಗೊಮ್ಮೆ ಈಗೊಮ್ಮೆ ಕವನ ಬರೆಯಲು ಕೂಡ ಆರಂಭಿಸಿದರು. ನೋಟ್ ಬುಕ್‍ನ ಕೊನೆಯ ಪುಟಗಳಲ್ಲಿ ಕನ್ನಡದ ಕೆಲವು ಸುಭಾಷಿತ, ನುಡಿಗಟ್ಟು, ಕವಿಗಳ ಹೆಸರು, ಕೆಲವು ಖ್ಯಾತ ಕವಿಗಳ ಕವಿತೆಗಳನ್ನು ಬರೆಯಲು ಮತ್ತು ಸಂಗ್ರಹಿಸಲು ಮಾಡಿದ ಪ್ರಯತ್ನ ಕೊನೆಗೆ ಸ್ವರಚಿತ ಕವನಗಳತ್ತ ಮುನ್ನಡಿ ಇಡುವಂತೆ ಮಾಡಿತು.
ದಾವಣಗೆರೆಯ ಸಾಂಸ್ಕøತಿಕ ಸಂಸ್ಥೆಯೊಂದರ ವತಿಯಿಂದ ಈಗಲೂ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಆಯೋಜಿಸಲಾಗುತ್ತಿರುವ ಮಕ್ಕಳ ಕವಿಗೋಷ್ಠಿ ಆಯ್ಕೆ ಪ್ರಕ್ರಿಯೆಯ ಸಂದೇಶ ಅಂದು ಅಂಚೆ ಮೂಲಕ ತಾರೇಶ್ ಅವರ ಪ್ರೌಢಶಾಲೆಗೂ ರವಾನೆಯಾಗಿತ್ತು. ಈ ವಿಷಯ ತಿಳಿಸಿ ಭಾಗವಹಿಸುವಂತೆ ಪ್ರೇರಣೆ ನೀಡಿ, ತಾವೇ ಖುದ್ದಾಗಿ ಆ ಆಯ್ಕೆ ಪ್ರಕ್ರಿಯೆಗೆ ತಾರೇಶ್ ಅವರನ್ನು ಕರೆದುಕೊಂಡು ಹೋಗಿದ್ದ ಆ ಶಾಲೆಯ ಸುಧಾಮಣಿ ಎಂಬ ಶಿಕ್ಷಕಿಯ ಕಳಕಳಿಯಿಂದಾಗಿ ಅವರಿಗೆ ವೇದಿಕೆಯಲ್ಲಿ ಕವನ ವಾಚಿಸುವ ಪ್ರಥಮ ಅವಕಾಶ ಲಭಿಸಿತ್ತು. ಅಲ್ಲಿಂದ ಆರಂಭಗೊಂಡ ತಾರೇಶ್ ಅವರ ಕಾವ್ಯಲೋಕದ ಪಯಣ ಇಂದು ಅವರನ್ನು ದಾವಣಗೆರೆಯ ಅನೇಕ ಪ್ರತಿಭಾವಂತ ಕವಿಗಳ ಸಾಲಿಗೆ ತಂದು ನಿಲ್ಲಿಸಿದೆ.

ದಾವಣಗೆರೆಯ ಹಿರಿಯ ಸಾಹಿತಿಗಳಾದ ಕೆ.ಎನ್ ಸ್ವಾಮಿ, ಶಿವಯೋಗಿ ಹಿರೇಮಠ್ ಸೇರಿದಂತೆ ಅನೇಕ ಪ್ರತಿಭಾವಂತ, ಸೃಜನಶೀಲ ಕವಿಗಳ ಒಡನಾಟದ ಪ್ರತಿಫಲವಾಗಿ ಜಿಲ್ಲೆ ಮತ್ತು ರಾಜ್ಯಮಟ್ಟದ ನೂರಾರು ವೇದಿಕೆಗಳಲ್ಲಿ ಭಾಗವಹಿಸಿ ಸಾಹಿತ್ಯಾಸಕ್ತರ ಗಮನ ಸೆಳೆದಿದ್ದಾರೆ. ಪ್ರಮುಖವಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕಾಗಿನೆಲೆ ಹಾಗೂ ಸವಣೂರುಗಳಲ್ಲಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿ ಸೇರಿದಂತೆ ಇತರೆಡೆ ತಮ್ಮದೇ ಆದ ವಿಶೇಷ ಶೈಲಿಯಲ್ಲಿ ನೈಜ ಕವಿತೆಗಳ ವಾಚನದ ಮೂಲಕ ಗುರುತಿಸಿಕೊಂಡಿರುವ ತಾರೇಶ್ ಕನ್ನಡ ಸಾರಸ್ವತ ಲೋಕಕ್ಕೆ ಎರಡು ವಿಶಿಷ್ಠ ಕವನ ಸಂಕಲನಗಳ ಕೊಡುಗೆಯನ್ನೂ ನೀಡಿದ್ದಾರೆ.

2016 ರ ಅಕ್ಟೋಬರ್ ತಿಂಗಳಲ್ಲಿ ಪ್ರಕಟವಾದ ತಾರೇಶ್ ಅವರ “ಮನದ ಮಾತು ಕವಿತೆಯಾದಾಗ” ಎಂಬ ಕವನ ಸಂಕಲನ ಪ್ರಥಮ ಕೃತಿಯಾದರೂ ಸಾಹಿತ್ಯ ವಲಯದಲ್ಲಿ ಸಂಚಲನ ಮೂಡಿಸಿತು. ತಾರೇಶ್ ಒಬ್ಬ ಭರವಸೆಯ ಯುವಕವಿ ಎಂದು ಸಾಹಿತ್ಯ ಕ್ಷೇತ್ರ ಅವರನ್ನು ಗುರುತಿಸುವಂತಾಯಿತು. ಆ ಪ್ರೇರಣೆಯ ಫಲವಾಗಿ 2018ರ ಜನವರಿಯಲ್ಲಿ ಲೋಕಾರ್ಪಣೆಯಾಗಿರುವ ಮತ್ತೊಂದು ಕೃತಿ “ನೆನಪು ಮಾಸುವ ಮುನ್ನ” ಅವರ ಪ್ರಬುದ್ಧ ಬರಹಕ್ಕೆ ಸಾಕ್ಷಿಯಾಗಿ ನಿಂತಿದೆ.

ತಾರೇಶ್ ಅವರ ಬಗೆಗೆ ಒಂದಿನಿತಾದರೂ ಈ ಅಂಕಣದಲ್ಲಿ ಹೇಳಬೇಕು, ಅವರ ಕುರಿತು ಒಂದಷ್ಟಾದರೂ ಬರೆಯಲೇ ಬೇಕೆಂಬಂತೆ ನನ್ನಲ್ಲಿ ಸೆಳೆತ ಉಂಟಾಗಿದ್ದಕ್ಕೆ ಕಾರಣ ಅವರ ಕೃತಿಯೊಳಗಿನ ಸಂವೇದನಾ ಶೀಲ ಕವಿತೆಗಳು ಹಾಗೂ ಅವರ ಚಿಂತನಾ ಲಹರಿ. ಇಲ್ಲ ಸಲ್ಲದ ಭಾವನೆ ಮತ್ತು ಕಲ್ಪನೆಗಳನ್ನು ವೈಭವೀಕರಿಸುವ ಗೋಜಿಗೆ ಹೋಗದೆ ನೈಜ ಬದುಕಿನ ಅನುಭವಗಳನ್ನು ಕಾವ್ಯವಾಗಿಸಲು ತೊಡಗಿರುವ ಅವರ ಪ್ರಯತ್ನ, ಗ್ರಾಮೀಣ ಭಾಷೆಯ ಬಳಕೆ, ಪ್ರೇಮ ನಿವೇದನೆ, ಮಾನಸಿಕ ಮತ್ತು ಸಾಮಾಜಿಕ ಸಂಗತಿಗಳ ತುಡಿತ – ತಲ್ಲಣ – ತುಮುಲಗಳ ಪ್ರತಿಬಿಂಬಿಸುವಿಕೆಯಲ್ಲಿನ ಪ್ರಜ್ಞಾವಂತಿಕೆ ನಿಜಕ್ಕೂ ಅವರ ಮತ್ತು ಅವರ ಕವಿತೆಗಳ ಬಗ್ಗೆ ಓದುಗರಲ್ಲಿ ಗೌರವ ಭಾವವನ್ನು ಮೂಡಿಸುತ್ತವೆ.ವಯೋಸಹಜ ಭಾವನೆಗಳ ಹಂಬಲ, ಚಡಪಡಿಸುವಿಕೆಯ ಜೊತೆ ಅದೆಲ್ಲವನ್ನೂ ಮೀರಿದ ನೆಲ, ಜಲ, ಭಾಷೆ, ಬದುಕು – ಬವಣೆ, ದೇಶಪ್ರೇಮದ ನೈಜ ತುಡಿತವನ್ನು ಸಹ ಕಟ್ಟಿಕೊಡುವ ಅವರ ಅನೇಕ ಸಶಕ್ತ ಕವಿತೆಗಳು ಯುಪೀಳಿಗೆಗೆ ದಾರಿ ದೀಪವಾಗಬಲ್ಲವು. ಪ್ರಬುದ್ಧ ಚಿಂತನೆಯ ಮೂಸೆಯಲ್ಲಿ ಕವಿತೆ ಕಟ್ಟುವ ಕಾರ್ಯದ ಜೊತೆ ಒಡೆದ ಮನಸುಗಳನ್ನು ಸಹ ಕವಿತೆಗಳ ಮೂಲಕ ಒಂದುಗೂಡಿಸುವ ಕಾರ್ಯದಲ್ಲಿ ತೊಡಗಿರುವ ತಾರೇಶ್ ಅವರಿಂದ ಇನ್ನಷ್ಟು ಉತ್ಕೃಷ್ಠ ಸಾಹಿತ್ಯ ಕೃಷಿ ನಡೆಯಲಿ. ಹೀಗಾಗಲೇ, ದಾವಣಗೆರೆ “ಮಕ್ಕಳ ಲೋಕ” – ಸಾಂಸ್ಕೃ ತಿಕ ಸಂಸ್ಥೆ ವತಿಯಿಂದ “ಕಾವ್ಯರತ್ನ” ಎಂಬ ಬಿರುದಿಗೆ ಭಾಜನವಾಗಿರುವ ತಾರೇಶ್ ಅವರು ಕನ್ನಡ ಸಾಹಿತ್ಯಲೋಕದಲ್ಲಿ ಎಂದಿಗೂ ಹೊಳೆಯುವ ರತ್ನವೇ ಆಗಿರಲಿ, ಅವರ ಹೆಸರು ಚಿರಸ್ಥಾಯಿಯಾಗಲಿ ಎಂದು ನಾವೆಲ್ಲಾ ಹಾರೈಸೋಣ. 

ಪಾವಗಡ ತಾಲ್ಲೂಕಿನ ಕೆ.ಟಿ ಹಳ್ಳಿಯಲ್ಲಿ ಶುಶ್ರೂಷಕಿಯಾಗಿ ರೋಗಿಗಳ ಸೇವೆ ಮಾಡುತ್ತಿರುವ ಜೊತೆಯಲ್ಲಿ, ತಾರೇಶ್ ಅವರ ಸಾಹಿತ್ಯ ಸೇವೆಗೆ ಪ್ರೇರಕ ಶಕ್ತಿಯೂ ಆಗಿ ಉತ್ತಮ ಕೃತಿಗಳ ರಚನೆಗೆ ಅವರನ್ನು ಸದಾ ಪ್ರೋತ್ಸಾಹಿಸುತ್ತಿರುವ ಅವರ ಧರ್ಮಪತ್ನಿ ಶ್ರೀಮತಿ ಎಸ್.ಜಿ ಶೀಲಾ ಅವರಿಗೂ ಈ ಮೂಲಕ ಅಭಿನಂದಿಸೋಣ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version