ಅಂತರಂಗ

ಮುಳ್ಳೆಲೆಯ ಮದ್ದಾಗಬಲ್ಲ ಸಶಕ್ತ ಕವಿ, ಕಲೆಗಾರ ಪಾಪುಗುರು

Published

on

ಮೊನ್ನೆ ಮೊನ್ನೆಯಷ್ಟೇ ಪರಿಚಿತನಾದರೂ ಹಲವು ವರ್ಷಗಳ ಗೆಳೆಯನೆಂಬಂತೆ ಆತ ಎದುರಿಗೆ ನಿಂತು ಆತ್ಮೀಯತೆಯಿಂದ “ಇದು ಇದೇ ಸೆಪ್ಟೆಂಬರ್ 30 ರಂದು ಭಾನುವಾರ ದಾವಣಗೆರೆ ಕುವೆಂಪು ಕನ್ನಡ ಭವನದಲ್ಲಿ ಲೋಕಾರ್ಪಣೆಯಾಗಲಿರುವ ನನ್ನ ಕೃತಿ. ಹೇಗಿದೆ ಒಮ್ಮೆ ನೋಡಿ” ಎಂದು ಕೈಗಿತ್ತಾಗ ಮೊದಲ ನೋಟದಲ್ಲೇ ಮನವದಕ್ಕೆ ಸೋತಿತ್ತು. ಶೀರ್ಷಿಕೆ ಮತ್ತು ಮುಖಪುಟವಂತೂ ಮುಖದ ಮೇಲೆ ಕುತೂಹಲದ ಗೆರೆಗಳನ್ನು ಮೂಡಿಸಿ ಬಿಟ್ಟವು… ಒಳಪುಟಗಳ ತೆರೆಯುತ್ತಾ ಹೋದಂತೆ ಕವಿಯ ಭಾವಲೋಕ – ಜೀವನಾನುಭವದ ರಸಪಾಕ ಕಣ್ಮುಂದೆ ಅನಾವರಣಗೊಂಡಂತೆ ಭಾಸವಾಯಿತು. ಆ ಹೊತ್ತಿಗಾಗಲೇ ಈ ಓದುಗ ಹೃದಯ ದಾವಣಗೆರೆಯ ಆ ಅವ್ಯಕ್ತ ಕವಿಯನ್ನು ಸಾಹಿತ್ಯ ಲೋಕದ ಅಗ್ರಮಾನ್ಯರ ಪಂಕ್ತಿಯಲ್ಲಿ ನಿಲ್ಲಿಸಿತ್ತು. ಕೃತಿಯೊಳಗಿನ ಅಂತಃಸತ್ವವೇ ಅದಕ್ಕೆ ಕಾರಣವಾಗಿತ್ತು. ಅಂತಹ ಸತ್ವವುಳ್ಳ ಕೃತಿಯ ಹೆಸರು “ಮುಳ್ಳೆಲೆಯ ಮದ್ದು”, ಕೃತಿಕಾರ ದಾವಣಗೆರೆ ಅಶೋಕ ನಗರದ ನಿವಾಸಿ ಪಾಪುಗುರು.

ಅದೇ ಕೃತಿಯ ಭಾವನುಡಿಯಲ್ಲಿ ಒಂದೆಡೆ ಹಿರಿಯ ಕವಿ ಮುದಲ್ ವಿಜಯ್ ಅವರು “ನಿರಂತರ ಸಾಹಿತ್ಯಭ್ಯಾಸದಿಂದ, ಜೀವನಾನುಭವಗಳಿಂದ ಸೆಳೆದುಕೊಂಡ ಸಾರವತ್ತಾದ ವಿಷಯಗಳನ್ನು ಒಂದು ಕಡೆ ಸಂಗ್ರಹಿಸಿ ಅದಕ್ಕೆ ಅಕ್ಷರಗಳ ಮೂಲಕ ರೂಪ ಕೊಡುವ ಶಕ್ತಿಯುಳ್ಳ ಒಬ್ಬ ಕವಿಯು ಸಾಹಿತ್ಯ ಲೋಕಕ್ಕೆ ವರದಾನವೆಂದರೆ ತಪ್ಪಾಗಲಾರದು” ಎಂದು ಹೇಳಿರುವ ಮಾತಿಗೆ ಪಾಪುಗುರು ಖಂಡಿತ ಮಾದರಿಯಾಗಿ ನಿಲ್ಲುತ್ತಾರೆ.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು. ರಸಾನುಭವಕ್ಕಿಂತ ಜೀವನಾನುಭವ ಮೇಲು. ಮಾತಿಗಿಂತ ಕೃತಿ ಮೇಲು. ಕೃತಿಗಿಂತ ಕಲೆಗಾರನ ವಾಸ್ತವ ಬದುಕು ಮಿಗಿಲು ಎಂಬಂತೆ ಪಾಪುಗುರು ಅವರ ಬದುಕಿನ ಒಳತೋಟಿಗಳ ಅವಲೋಕಿಸಿ ಹೇಳುವುದಾರೆ ಅವರೊಬ್ಬ ಕಾಯಕ ಜೀವಿ. ಕಡು ಬಡತನದ ಬೇಗೆಯಲ್ಲಿ ಬಸವಳಿದು ಬೆಂದು ಬದುಕು ಕಟ್ಟಿಕೊಳ್ಳುತ್ತಿರುವ ಶ್ರಮಜೀವಿ. ತಮ್ಮ ಬದುಕಿನ ಬವಣೆ ನೀಗಿಸಿಕೊಳ್ಳಲು ಮತ್ತು ಆಶ್ರಿತರ ಬದುಕಿಗೆ ಆಸರೆಯಾಗಲು ಪತ್ರಿಕಾ ವಿತರಕ ಮತ್ತು ಕಾರ್ಪೆಂಟರ್ ಆಗಿ ವೃತ್ತಿ ಜೀವನದಲ್ಲಿ ತೊಡಗಿರುವ ಅವರಿಗೆ, ಬಿಡುವಿಲ್ಲದ ಕಾಯಕದಲ್ಲೂ ಕಾವ್ಯ ಕನ್ನಿಕೆ ಒಲಿದಿದ್ದಾಳೆ. ಅಂತೆಯೇ, ಅದೆಷ್ಟೋ ಸೋಫಾ, ಮಂಚ, ವಾಲ್ ರೋಬ್, ಬಾಗಿಲು, ಗೋಡೆ, ಕಲಾಕೃತಿಗಳು ಅವರೊಳಗಿನ ಕಲಾವಂತಿಕೆಯ ಕೈ ಚಳಕ ಮತ್ತು ಕಾವ್ಯ ಕುಸುರಿಗೆ ಸಾಕ್ಷಿಯಾಗಿ ನಿಂತಿವೆ.

ತಂದೆಯ ಬಳುವಳಿಯಾಗಿ ಬಾಲ್ಯದಿಂದಲೂ ಓದಿನ ಹವ್ಯಾಸ ರೂಢಿಸಿಕೊಂಡು, ಬಿಡುವು ಸಿಕ್ಕಾಗಲೆಲ್ಲಾ ತನಗೆ ತೋಚಿದ್ದು ಗೀಚುತಿದ್ದ ಗುರು ಬಸವರಾಜರ ಕಾವ್ಯ ಕೃಷಿ ನಂತರದಲ್ಲಿ ಪ್ರಬುದ್ಧ ಮಾನಕ್ಕೇರಿತು. ಬರೆದಿದ್ದನ್ನು ಸಂಗ್ರಹಿಸಿಡುತ್ತಿದ್ದ ಅವರ ಕಾವ್ಯ ಪಯಣ ಮತ್ತು ಪ್ರಸಾರಕ್ಕೆ ಸಾಮಾಜಿಕ ಜಾಲತಾಣವಾದ ಫೇಸ್‍ಬುಕ್ ವೇದಿಕೆಯಾಯಿತು. ಅಲ್ಲಿ ಪಾಪುಗುರು ಎಂಬ ಕಾವ್ಯನಾಮದೊಂದಿಗೆ ತಮ್ಮ ಗಂಭೀರ ಚಿಂತನೆ, ಮಾರ್ಮಿಕ ನುಡಿಗಟ್ಟುಗಳು, ಆಳವಾದ ಅನುಭವಗಳಿಂದ ಕೂಡಿದ ಎಂಥವರನ್ನೂ ಸೆಳೆದು, ಓದಿಗಚ್ಚಿ ಚಿಂತನೆಗೆ ಗ್ರಾಸ ಒದಗಿಸಬಲ್ಲ ಸಶಕ್ತ ಕವಿತೆಗಳ ಕಾರಣದಿಂದಾಗಿ ಅಪಾರ ಓದುಗರು ಮತ್ತು ಮಿತ್ರರನ್ನು ಸಂಪಾದಿಸಿದರು. ಅಲ್ಲದೆ ನಾಡಿನ ಅನೇಕ ಸಾಹಿತ್ಯ ದಿಗ್ಗಜರಿಂದಲೂ ಗುರುತಿಸಿಕೊಂಡು ಅವರು ಸಹ ಬೆನ್ನು ತಟ್ಟಿ ಪ್ರೋತ್ಸಾಹಿಸಲು ಫೇಸ್‍ಬುಕ್ ಕಾರಣವಾಯಿತು. ಅಲ್ಲಿ ಅಪಾರ ಓದುಗರು, ಕವಿಗಳು, ಕಾದಂಬರಿಕಾರರು ಹಾಗೂ ವಿಮರ್ಶಕರಿಂದ ಚರ್ಚೆ ಮತ್ತು ವಿಮರ್ಶೆಗೆ ಒಳಪಟ್ಟ ಆಯ್ದ ಕವನಗಳನ್ನು ಹೊತ್ತು ಹೊರಬಂದಿರುವ ಅವರ ಚೊಚ್ಚಲ ಕೃತಿಯೇ “ಮುಳ್ಳೆಲೆಯ ಮದ್ದು” ಇದೇ ಸೆ.30 ರಂದು ಲೋಕಾರ್ಪಣೆಯಾಗುತ್ತಿದೆ.

ಬಹುಮುಖ ಪ್ರತಿಭೆಯ ಪಾಪುಗುರು ಅವರ ಈ ಕೃತಿ ತನ್ನ ವಿಶಿಷ್ಠ – ವಿಭಿನ್ನ ಆಯಾಮದಿಂದಾಗಿ ಬಿಡುಗಡೆಗೂ ಮುನ್ನವೇ ಸಾರಸ್ವತ ಲೋಕದಲ್ಲಿ ಸಂಚಲನ ಮೂಡಿಸಿದೆ. ಕೇವಲ 25 ಕವನಗಳನ್ನು ಒಳಗೊಂಡಿರುವ ಈ ಕೃತಿ ಆಯ್ದ ವಿಮರ್ಶಕರ ಅನಿಸಿಕೆ, ಅಭಿಪ್ರಾಯ,ವಿಮರ್ಶೆ ಮತ್ತು ಅವಲೋಕನವನ್ನು ಸಹ ಒಳಗೊಂಡಿದ್ದು, 156 ಪುಟಗಳಲ್ಲಿ ಮುದ್ರಣಗೊಂಡಿದೆ. ನಾಡಿನ ಹೆಸರಾಂತ ಜನಪರ ಕವಿ ಡಾ.ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ಮತ್ತು ಅವರ ಪ್ರತಿಷ್ಠಾನದಿಂದಲೇ ಈ ಕೃತಿ ಸಾರಸ್ವತ ಲೋಕಕ್ಕೆ ಅರ್ಪಣೆಯಾಗುತ್ತಿರುವುದು ಸಹ ಇದರ ಮತ್ತೊಂದು ವಿಶೇಷವಾಗಿದೆ.

ಅಂಕೆಗಿಂತಲೂ ಅರಿವು ಮುಖ್ಯ, ಸಂಖ್ಯೆಗಿಂತಲೂ ಸತ್ವ ಮುಖ್ಯ ಎಂಬಂತೆ ವಾಚ್ಯರ್ಥಕ್ಕಿಂತಲೂ ಸೂಚ್ಯರ್ಥಕ್ಕೆ ಮಹತ್ವ ನೀಡಿ, ಅಕ್ಷರಕ್ಕೆ ಅರಿವಿನ ಹೊದಿಕೆ ಹೊದಿಸಿ, ಭಾವ ರಸಕೆ ಜೀವನಾನುಭವದ ಪಾನಕ ಬೆರಸಿ ತಮ್ಮ ಗಂಭೀರ ಮತ್ತು ವಾಸ್ತವ ನೆಲೆಗಟ್ಟಿನ ಕವಿತೆಗಳ ಮೂಲಕ ಈಗಾಗಲೇ ಕನ್ನಡ ನಾಡಿನ ಭರವಸೆಯ ಕವಿಯಾಗಿ ಹೊರ ಹೊಮ್ಮಿರುವ ಪಾಪು ಗುರು ಅವರ ಈ ಮಾರ್ಮಿಕ ಮತ್ತು ಮಹತ್ವಪೂರ್ಣ ಕೃತಿ ಬಿಡುಗಡೆ ಸಮಾರಂಭಕ್ಕೆ ನಾಡಿನ ಸಾಹಿತ್ಯ ಲೋಕದ ಅನೇಕ ಹಿರಿ – ಕಿರಿಯ ಮಹನೀಯರು ಆಗಮಿಸುತ್ತಿರುವ ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲೆಯ ಕವಿ ಮಿತ್ರರು, ಸಾಹಿತ್ಯಾಸಕ್ತರು ಸಹ ಸಾಕ್ಷಿಯಾಗಿ ಹಾರೈಸುವಂತಾಗಲಿ.

– ಗಂಗಾಧರ ಬಿ.ಎಲ್ ನಿಟ್ಟೂರ್
ಮೊ.ಸಂ : 8867702396

Trending

Exit mobile version