ಲೋಕಾರೂಢಿ
ರಾಜಕಾರಣ ಮನೆಯಂಗಳದಲ್ಲಿರಲಿ, ಮನದಂಗಳದಲ್ಲಲ್ಲ…!
ಚುನಾವಣೆ ದಿನಾಂಕ ನಿಗದಿಯಾಯಿತು, ಚುನಾವಣಾ ನೀತಿಸಂಹಿತೆ ಜಾರಿಯಾಯಿತು, ಅಭ್ಯರ್ಥಿಗಳು ಘೋಷಣೆಗೊಂಡರು, ಮತಯಾಚನೆ ಆಯಿತು, ಮತದಾನವೂ ಆಯಿತು, ಸೋಲು-ಗೆಲುವು ಲೆಕ್ಕಾಚಾರ ಮುಗಿದು ಫಲಿತಾಂಶವೂ ಬಂತು, ಸರ್ಕಾರ ರಚನೆಯಾಯಿತು, ಉರುಳಿಬಿತ್ತು, ಈಗ ಮತ್ತೊಮ್ಮೆ ರಚನೆಯಾಗಲಿದೆ. ಪ್ರಾರಂಭದಿಂದ ‘ಆ’ ಪಕ್ಷವನ್ನು ಬೆಂಬಲಿಸುತ್ತಾ ಬಂದ ಈರಣ್ಣ, ಪಕ್ಕದ ಮನೆಯ ‘ಈ’ ಪಕ್ಷದ ರಾಮಣ್ಣನನ್ನು ಜನ್ಮಜನ್ಮದ ವೈರಿಯಂತೆ ದ್ವೇಷಿಸಿದ. ಚುನಾವಣೆ ಮುಗಿದು ಕೆಲದಿನಗಳಲ್ಲಿ ಈರಣ್ಣನ ಹೆಂಡತಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ತಕ್ಷಣಕ್ಕೆ ಸಹಾಯಕ್ಕೆ ಬಂದವನು ಇದೇ ‘ಈ’ ಪಕ್ಷದ ರಾಮಣ್ಣ. ಆಗ ಯಾವ ಪಕ್ಷವೂ ಈರಣ್ಣನನ್ನು ಏನಾಯಿತೆಂದು ಕೇಳಲಿಲ್ಲ. ಈರಣ್ಣನಿಗೆ ಅದು ಅರ್ಥವೂ ಆಗಲಿಲ್ಲವೆನ್ನಿ. ಇಂತಹ ಈರಣ್ಣರನ್ನು ನಮ್ಮ ಸುತ್ತಮುತ್ತ ಸಾಕಷ್ಟು ಜನರಲ್ಲಿ ಕಂಡಿರುತ್ತೇವೆ ನಾವು. ಅಸಲಿಗೆ ತಾವು ಬೆಂಬಲಿಸಿದ ಪಕ್ಷದಿಂದ ತನಗೆ ಯಾವ ರೀತಿ ಬೆಂಬಲ ದೊರೆಯಬಹುದೆಂಬ ಕನಿಷ್ಟ ಯೋಚನೆಯೂ ಅವರಲ್ಲಿ ಸುಳಿದಿರುವುದಿಲ್ಲ. ಹಾಗೆ ಸುಮ್ಮನೆ ಇಂತಹ ಈರಣ್ಣರನ್ನು ಮಾತನಾಡಿಸಿ ನೋಡಿ ಅವರ ಉತ್ತರದಲ್ಲಿ ಸಿದ್ಧಾಂತ, ಆದರ್ಶ, ಪಕ್ಷದ ಘನತೆ ಮೊದಲಾದವುಗಳಿರುತ್ತವೆ.
ಸಿದ್ಧಾಂತ, ಆದರ್ಶ ಎಲ್ಲವೂ ಒಳ್ಳೆಯದೇ. ಆದರೆ ಅದ್ಯಾವುದೋ ಪಕ್ಷವನ್ನು ಬೆಂಬಲಿಸುವ ಭರದಲ್ಲಿ ನಮ್ಮ ಸುತ್ತಮುತ್ತಲಿನವರೊಡನೆ ದ್ವೇಷ ಕಟ್ಟಿಕೊಳ್ಳುವುದು ಎಷ್ಟು ಸರಿ? ದಿನಬೆಳಗಾದರೆ ನೋಡಬೇಕಾದ, ಬೆರೆಯಬೇಕಾದ ವ್ಯಕ್ತಿಗಳ ಜೊತೆ ಕೇವಲ ರಾಜಕಾರಣದ ವಿಷಯಕ್ಕಾಗಿ ದ್ವೇಷ ಸಾಧಿಸುವವನ್ನು ಮೂರ್ಖ ಎನ್ನದೆ ಇನ್ನೇನು ಹೇಳಲಾದೀತು? ಯಾವ ರಾಜಕಾರಣ ನಮ್ಮ ನಡುವೆ ಸ್ನೇಹ-ಸೌಹಾರ್ದತೆಯನ್ನು ಬೆಳೆಸಬೇಕಿತ್ತೋ, ಯಾವ ರಾಜಕಾರಣ ಮೌಲ್ಯಗಳನ್ನು ಬಿತ್ತಬೇಕಿತ್ತೋ ಅಂತಹ ರಾಜಕಾರಣ ಸಮಾಜದ ಒಡಕಿಗೆ ಕಾರಣವಾಗಿರುವುದು ನಿಜಕ್ಕೂ ವಿಷಾದನೀಯ.ಸಾರ್ವಜನಿಕವಾಗಿ ನೀವು ನಿಮ್ಮ ಮನಸ್ಸಿನಲ್ಲಿರುವುದನ್ನು ಬಿಚ್ಚುನುಡಿಗಳಿಂದ ಹೇಳಿ, ಮರುಕ್ಷಣವೇ ಯಾವುದೋ ಒಂದು ಪಕ್ಷದ ಅಧಿಕೃತ ಏಜೆಂಟ್ ನೀವು ಎಂಬಂತೆ ಬಿಂಬಿಸಲಾಗುತ್ತದೆ. ಮರುಕ್ಷಣವೇ ನಿಮ್ಮ ಮಾತಿನ ಸತ್ಯಾಸತ್ಯತೆಯನ್ನು ಪರೀಕ್ಷಿಸದೇ, ಕೇವಲ ಪಕ್ಷದ ಹೆಸರಿನಿಂದ ನಿಮ್ಮನ್ನು ದ್ವೇಷಿಸುವ ನೂರಾರು ಮಂದಿ ಹುಟ್ಟಿಕೊಂಡುಬಿಡುತ್ತಾರೆ. ಇದು ಇತ್ತೀಚೆಗಿನ ರಾಜಕಾರಣದ ಸಣ್ಣ ಮಟ್ಟದ ಉದಾಹರಣೆಯಷ್ಟೆ.
ಆಡಳಿತ ಪಕ್ಷ ಹಾಗೂ ಪ್ರತಿಪಕ್ಷಗಳಲ್ಲಿರುವ ಜನಪ್ರತಿನಿಧಿಗಳು ತಮ್ಮ ಕೆಳಹಂತದ ಕಾರ್ಯಕರ್ತರಿಗೆ ನಿಜವಾದ ಪ್ರೇರಣೆಯಾಗಿರುತ್ತಾರೆ. ಅವರ ನಡೆನುಡಿಗಳನ್ನು ಕೆಳಹಂತದಲ್ಲಿರುವವರು ಅನುಸರಿಸಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಇದ್ಯಾವುದರ ಪರಿವೆಯೇ ಇಲ್ಲದಂತೆ ವರ್ತಿಸುವ ಜನಪ್ರತಿನಿಧಿಗಳ ಕನಿಷ್ಟ ವ್ಯಕ್ತಿತ್ವ ಕೆಳಹಂತದಲ್ಲಿ ಪ್ರತಿಫಲಿತವಾಗುತ್ತದೆಯಲ್ಲದೇ ಮತ್ತೇನಿಲ್ಲ. ಜನರ ಮುಗ್ಧತೆ ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ ನೋಡಿ, ಮೊನ್ನೆ ಮುಗಿದ ಚುನಾವಣೆ ವೇಳೆ ಗೌರಿಬಿದನೂರಿನಲ್ಲಿ ಜೆಡಿಎಸ್ ಕಾರ್ಯಕರ್ತನನ್ನು ಕಾಂಗ್ರೆಸ್‍ನ ಕಾರ್ಯಕರ್ತರು ಬರ್ಬರವಾಗಿ ಕೊಂದು ಹಾಕಿದರು ಎಂಬ ವರದಿ ಪತ್ರಿಕೆಗಳಲ್ಲಿ ಬಂದಿತ್ತು. ಆ ಹೊತ್ತು ಕಾಂಗ್ರೆಸ್-ಜೆಡಿಎಸ್ ನಡುವಿನ ಸಿಟ್ಟು-ಸೆಡವು ವ್ಯಕ್ತಿಯೊಬ್ಬನ ಪ್ರಾಣಹರಣದಲ್ಲಿ ಮುಕ್ತಾಯವಾಗಿತ್ತು. ಆದರೆ ವಿಪರ್ಯಾಸ ನೋಡಿ, ಅವೇ ಎರಡು ಪಕ್ಷಗಳು ಸೇರಿ ಇದೀಗ ಸರ್ಕಾರ ರಚಿಸುತ್ತಿವೆ. ಇದರರ್ಥ ಪಕ್ಷಗಳ ನಡುವಿನ ಅತಿರೇಕದ ದ್ವೇಷಗಳು ಮೇಲ್ಮಟ್ಟದ ಜನಪ್ರತಿನಿಧಿಗಳಲ್ಲಿರುವುದಿಲ್ಲ. ಮೇಲಿನ ಹಂತದಲ್ಲಿ ಎಲ್ಲರೂ ಸ್ನೇಹಿತರೇ. ಆದರೆ ಇದನ್ನೇ ಅವರು ಕೆಳಹಂತದವರಿಗೆ ಹೇಳಿಕೊಡುವುದಿಲ್ಲ, ಎಷ್ಟೆಂದರೂ ಇದು ರಾಜಕಾರಣ ನೋಡಿ.
ಒಂದು ಸರ್ಕಾರ ರಚನೆಯಾದಾಗ ಪ್ರತಿಪಕ್ಷಗಳನ್ನು ‘ವಿರೋಧ ಪಕ್ಷ’ ಎಂದು ಕರೆಯುವುದರೊಂದಿಗೆ ಕದನ ಆರಂಭವಾಗುತ್ತದೆ. ಸರ್ಕಾರವನ್ನು ರಚಿಸಿದ ಪಕ್ಷ ಆಡಳಿತ ಪಕ್ಷ ಎಂದಾದಾಗ ಪ್ರತಿಪಕ್ಷಗಳೂ ಸಹ ಆಡಳಿತ ಪಕ್ಷದಷ್ಟೇ ಮಹತ್ತರವಾದ ಜವಾಬ್ದಾರಿ ಹೊಂದಿರುತ್ತವೆ. ಜನರ ಸಮಸ್ಯೆಗಳನ್ನು ಆಡಳಿತ ಪಕ್ಷದ ಗಮನಕ್ಕೆ ತಂದು, ಚರ್ಚಿಸಿ, ತಪ್ಪುಒಪ್ಪುಗಳನ್ನು ವಿಶ್ಲೇಷಿಸಿ ಸರ್ಕಾರ ಸರಿಯಾದ ದಾರಿಯಲ್ಲಿ ಮುನ್ನಡೆಯುವಂತೆ ಮಾಡುವಲ್ಲಿ ಪ್ರತಿಪಕ್ಷಗಳ ಜವಾಬ್ದಾರಿ ದೊಡ್ಡದು. ಆದರೆ ಈ ‘ವಿರೋಧ ಪಕ್ಷ’ ಎಂದು ಕರೆಸಿಕೊಳ್ಳುತ್ತಿರುವ ಪ್ರತಿಪಕ್ಷಗಳು ಬರಿ ವಿರೋಧವನ್ನು ಮಾಡುವುದಕ್ಕೆ ಮಾತ್ರ ಸೀಮಿತವಾಗಿರುವುದಕ್ಕೆ ಏನನ್ನೋಣ? ಅಲ್ಲಿಂದ ಶುರುವಾದ ವಿರೋಧ ಪಕ್ಷ ಪಕ್ಷಗಳ ನಡುವಿನ ಜಗಳಕ್ಕೆ ಕಾರಣವಾಗುತ್ತದೆ. ಅದರ ಗರಿಷ್ಟ ಮಟ್ಟವನ್ನು ಕೆಳಹಂತದ ರಾಜಕಾರಣದಲ್ಲಿ ಕಾಣಬಹುದು. ಅದರ ಪರಿಣಾಮವೇ ಕಾರ್ಯಕರ್ತರ ಕೊಲೆ, ಹೊಡೆದಾಟ ಮೊದಲಾದವು.
ಪಕ್ಷ ನಿಷ್ಠೆ ಇರಲಿ, ತಪ್ಪೇನಲ್ಲ. ಆದರೆ ಅದಕ್ಕಿಂತಲೂ ಪ್ರಮುಖವಾದದ್ದು ಮನುಷ್ಯತ್ವ, ನಮ್ಮ ನಡುವಿನ ಸಂಬಂಧ. ದಿನ ಬೆಳಗಾದರೆ ನಾವು ಒಡನಾಡುವುದು ನಮ್ಮ ಸುತ್ತಮುತ್ತಲಿನವರೊಡನೆ. ನಮ್ಮ ಕಷ್ಟ-ನಷ್ಟಗಳಿಗಾಗುವವರು ಅವರೇ ಹೊರತು, ನಾವು ನಂಬಿ ನಡೆಯುವ ಪಕ್ಷಗಳಲ್ಲ. ನಮ್ಮ ರಾಜಕಾರಣ ನಮ್ಮ ನಡುವೆ ಅಂತರ ತರುವಂತಿರಬಾರದು. ನಾವು ನಂಬಿದ ಸಿದ್ಧಾಂತ ಆಡಳಿತಕ್ಕೆ ಬಂದರೆ ಒಳ್ಳೆಯದೇ, ಆದರೆ ಅದು ಬರಲಿಲ್ಲವೆಂದು ಬಂದವರನ್ನು ದ್ವೇಷಿಸುವುದು ಸರಿಯಲ್ಲ. ರಾಜಕಾರಣ ಮೌಲ್ಯಯುತವಾಗಿರಲಿ, ನೈತಿಕವಾಗಿರಲಿ. ಒಂದು ಪ್ರಬುದ್ಧ ಸಮಾಜ ರೂಪುಗೊಳ್ಳಲು ಇಂತಹ ಮನಃಸ್ಥಿತಿ ಅತ್ಯವಶ್ಯಕ. ರಾಜಕಾರಣ ನಮ್ಮ ನಡುವೆ ಸ್ನೇಹ ಮೂಡಿಸಲಿ, ಸೌಹಾರ್ದತೆ ಬೆಸೆಯಲಿ. ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಾಗಲಿ. ಅದಕ್ಕೇ ತಿಳಿದವರು ಹೇಳುವುದು, ರಾಜಕಾರಣ ಮನೆಯಂಗಳದಲ್ಲಿರಲಿ, ಮನದಂಗಳದಲ್ಲಲ್ಲ.