ಅಂತರಂಗ

ನಿಬ್ಬೆರಗು ಮೂಡಿಸುವ ಇನಿದನಿಯ ಗಾನ ಕೋಗಿಲೆ ಜೆ.ಕೆ ಶಿವಕುಮಾರ್

Published

on

ವ್ಹಾ ,,, ಅನ್ನಲೇಬೇಕು

ವಾಹ್…! ಈ ಪ್ರಪಂಚದಲ್ಲಿ ಎಂತೆಂಥಾ ಅದ್ಭುತ ಕಲಾವಿದರು ಇದ್ದಾರೆ. ಅವರ ಕಲಾವಂತಿಕೆಯನ್ನು ಕಣ್ಣಾರೆ ಕಾಣುವುದು ಸಹ ಸೌಭಾಗ್ಯವೇ ಸರಿ. ಅದೊಂದು ಕಲೆಯೊಳಗಿನ ಕಲಾತ್ಮಕತೆಯ ದಿವ್ಯ ದರ್ಶನ – ದಿಗ್ಧರ್ಶನ ಎಂದರೂ ಅಚ್ಚರಿ ಏನಿಲ್ಲ.
ಇಂತಹ ಅಚ್ಚರಿಯ ಮೂಡಿಸುವ ಅಪರೂಪದ ಕಲಾವಿದರ ತಡಕಾಟದಲ್ಲಿ ತೊಡಗುವವರ ಕಣ್ಣೆದುರು ಗಾಡ್ ಗಿಫ್ಟ್ ಮೂಲಕ ನಿಬ್ಬೆರಗು ಮೂಡಿಸುತ್ತಾರೆ ದೇವನಗರಿಯ ಸಂಗೀತ ಕಲಾವಿದರಾದ ಶ್ರೀ ಜೆ.ಕೆ ಶಿವಕುಮಾರ್.

ಒಂದಷ್ಟು

ವೃತ್ತಿಯಲ್ಲಿ ಅಕೌಂಟೆಂಟ್ ಆಗಿ ಸೇವೆ ಸಲ್ಲಿಸಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ಜೆ.ಕೆ ಶಿವಕುಮಾರ್ ಅವರು ದಾವಣಗೆರೆಯ ಪ್ರಸಿದ್ಧ ವರ್ತಕರಾದ ದಿ. ಜವಳಿ ಕೊಟ್ರಪ್ಪ ಅವರ 4ನೇ ಪುತ್ರರು. ಕೆ.ಟಿಜೆ ನಗರದ 16ನೇ ಕ್ರಾಸ್ ನಿವಾಸಿಯಾಗಿರುವ ಅವರು ಸುಮಾರು 35ಕ್ಕೂ ಅಧಿಕ ವರ್ಷಗಳಿಂದ ಹವ್ಯಾಸಿ ಕಲಾವಿದರಾಗಿ, ಸೃಜನಶೀಲ ಗಾಯಕರಾಗಿಯೂ ಸೇರಿದಂತೆ ಹತ್ತು ಹಲವು ಬಹುಮುಖ ಪ್ರತಿಭೆಯಿಂದ ರಾಜ್ಯಾದ್ಯಂತ ಇನಿದನಿಯ ಗಾನಕೋಗಿಲೆ ಎಂದೇ ಗುರುತಿಸಿಕೊಂಡಿದ್ದಾರೆ.

ಗಾಡ್ ಗಿಫ್ಟ್

ಹಾಡುವುದೆಂದರೆ ಸುಲಭದ ಮಾತಲ್ಲ. ಹೆಣ್ಣಿಗಾಗಲಿ ಗಂಡಿಗಾಗಲಿ ಅವರವರ ಧ್ವನಿಯಲ್ಲೇ ಆದರೂ, ಅದಕ್ಕೆ ಎಷ್ಟೇ ಪೂರ್ವಭ್ಯಾಸ ಇದ್ದರೂ ಸಂಗೀತ ಕಲೆ ಎಲ್ಲರಿಗೂ ಒಲಿಯುವಂತದ್ದಲ್ಲ. ಆದರೆ ಹೆಣ್ಣು ಮತ್ತು ಗಂಡು ಧ್ವನಿಯಲ್ಲಿ ಸರಾಗವಾಗಿ ಹಾಡಬಲ್ಲ ವಿಶಿಷ್ಟ ಕಲೆ ಶಿವಕುಮಾರ್ ಅವರಿಗೆ ಸಹಜವಾಗಿ, ಪ್ರಕೃತಿ ಮತ್ತು ದೇವರ ಕೊಡುಗೆಯಾಗಿ ಲಭಿಸಿದೆ. ಅವರು ಹಾಡಲು ನಿಂತರೆ ಪ್ರೇಕ್ಷಕರು ಮೂಕ ವಿಸ್ಮಿತರಾಗಿ ಆಲಿಸುತ್ತಾರೆ. ತಂತಾನೆ ಪ್ರೇಕ್ಷಕರಿಂದ ಹೊರಹೊಮ್ಮುವ ಕರತಾಡನ ಮುಗಿಲು ಮುಟ್ಟುತ್ತದೆ.
ಶಿವಕುಮಾರ್ ಅವರ ವಿಷಯದಲ್ಲಿ ಹೇಳಲೇಬೇಕಾದ ಅದ್ಭುತ ಸಂಗತಿ ಎಂದರೆ ಅವರು ಎಂದೂ ಸಂಗೀತ ಅಭ್ಯಾಸ ಮಾಡಿದವರಲ್ಲ. ಶಾಸ್ತ್ರೀಯವಾಗಿ ಕಲಿತವರಲ್ಲ. ರೇಡಿಯೋ, ಟೆಪ್‍ರೆಕಾರ್ಡರ್ ಟಿವಿಯಲ್ಲಿ ಹಾಡು ಕೇಳಿಸಿಕೊಳ್ಳುತ್ತಲೇ ಆ ಕಲೆಗೆ ಒಗ್ಗಿಕೊಂಡು – ಮೈಗೂಡಿಸಿಕೊಂಡವರು.


ಸುಮಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಖಾಸಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ವೇದಿಕೆಯಲ್ಲಿ ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಳ್ಳುತ್ತಿದ್ದ ಅವರು ನಂತರ ರಾಜ್ಯೋತ್ಸವದಂತಹ ಕಾರ್ಯಕ್ರಮಗಳಲ್ಲಿ ನಡೆಯುತ್ತಿದ್ದ ಆರ್ಕೆಸ್ಟ್ರಾಗಳಲ್ಲಿ ಹಾಡುವುದನ್ನು ರೂಢಿಸಿಕೊಂಡರು.
ಬಹುಮುಖ ಪ್ರತಿಭೆಯ ಗಾನಕೋಗಿಲೆ :
ಬೆಂಗಳೂರಿನ ಯಶವಂತಪುರದಲ್ಲಿ ಸವಾಲು ಎಂಬಂತೆ ಎದುರಾದ ಒಂದು ಪ್ರಸಂಗದಿಂದ ಅವರು ಹೆಣ್ಣು ಮತ್ತು ಗಂಡು ಧ್ವನಿಗಳೆರಡರಲ್ಲೂ ಹಾಡಲು ಪ್ರಾರಂಭಿಸಿದರು… ಹೀಗೆ ಆರಂಭವಾದ ಅವರ ಹಾಡುಗಾರಿಕೆಯ ಅಭಿಯಾನ ಇಂದಿಗೂ ಸಾಗುತ್ತಿದೆ. ಪ್ರಸ್ತುತ 57ರ ಹರೆಯದಲ್ಲೂ ಅವರ ಧ್ವನಿಯಲ್ಲಿ ಉಳಿದಿರುವ ಅದೇ ಮಾಧುರ್ಯ ಮತ್ತು ಉತ್ಸಾಹ ಪ್ರೇಕ್ಷಕ ವರ್ಗಕ್ಕೆ ಪವಾಡ ಸದೃಶ್ಯ ಎಂಬಂತೆ ಕಾಣುತ್ತಿದೆ. ಒಲವೇ ಜೀವನ ಸಾಕ್ಷಾತ್ಕಾರ…., ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ… ಎಂಬಿತ್ಯಾದಿ ಕನ್ನಡದ ಹಾಡುಗಳನ್ನು ಅವರು ಹಾಡುತ್ತಿದ್ದರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ.
ಗಾಯನ ಅಷ್ಟೇ ಅಲ್ಲದೆ ಮಿಮಿಕ್ರಿ, ಅಭಿನಯ, ಜೋಕ್ಸ್ ಕಟ್ಟಿಂಗ್ ಇತ್ಯಾದಿ ಹಲವು ಹವ್ಯಾಸವುಳ್ಳ ಶಿವಕುಮಾರ್ ಅವರ ವ್ಯಕ್ತಿತ್ವ ಸೂಜಿಗಲ್ಲಿನಂತದ್ದು. ತಮ್ಮ ಬಳಿ ಇರುವವರನ್ನು ಆತ್ಮೀಯತೆಯಿಂದ ನಕ್ಕು ನಗಿಸುವ ಅವರು ಎಲ್ಲರ ಮನದಲ್ಲಿ ಸದಾ ಹಸಿರಾಗಿ ಉಳಿದು ಬಿಡುತ್ತಾರೆ. ಅಂತೆಯೇ ಅವರ ಇನಿದನಿಯ ಗಾಯನವೂ ಕೂಡ…. ಗೀತೆಗಳ ಆಯ್ಕೆಯ ಅವರ ಸೂಕ್ಷ್ಮತೆಯೇ ಅದಕ್ಕೆ ಕಾರಣ. ಹೆಚ್ಚಾಗಿ ಅವರು ಸಾಮಾಜಿಕ ಕಳಕಳಿ, ನಾಡು-ನುಡಿ, ದೇಶ ಪ್ರೇಮ -ದೇಶಭಿಮಾನ ಮೆರೆಯುವಂತಹ ಹಾಡುಗಳಿಗೆಯೇ ಧ್ವನಿಯಾಗಿದ್ದಾರೆ.

ಒಂದು ವಿಷಾದ

ಕೇಳುಗರ ಹೃದಯವನ್ನು ತಲ್ಲಣಗೊಳಿಸಿ ಪುಳಕಿತರನ್ನಾಗಿಸುವಂತೆ ರೋಚಕವಾಗಿ ಹಾಡಬಲ್ಲ ಈ ಅದ್ಭುತ ಗಾಯಕ ಗಾಯನವನ್ನೇ ತಮ್ಮ ವೃತ್ತಿಯಾಗಿಸಿಕೊಂಡಿದ್ದಲ್ಲಿ ಇಂದು ಸಿನಿಮಾ ರಂಗದಲ್ಲಿ ಅತ್ಯುನ್ನತ ಗಾಯಕರ ಪಟ್ಟಿಯಲ್ಲಿ ಗುರುತಿಸಿಕೊಳ್ಳಬಹುದಿತ್ತು, ಅಂತೆಯೇ ಕೋಟಿಗಟ್ಟಲೆ ಹಣವನ್ನೂ ಸಂಪಾದಿಸಿಬಹುದಿತ್ತು.
ಅದರಲ್ಲೂ ಶಿವಕುಮಾರ್ ಅವರು ಬೆಂಗಳೂರಲ್ಲಿ ಹಲವು ವರ್ಷಗಳ ಕಾಲ ತಂಗಿದ್ದಾಗ ಸಿನಿಮಾ ರಂಗದ ಅನೇಕ ದಿಗ್ಗಜರ ಪರಿಚಯವೂ ಆಗಿತ್ತು. ಹಲವರಿಗೆ ಇವರ ಕಲೆಯ ವೈಶಿಷ್ಟ್ಯತೆಯೂ ತಿಳಿದಿತ್ತು. ಸ್ವಾಭಿಮಾನದ ಕಾರಣ ಇವರಂತೂ ಯಾರಲ್ಲೂ ಅವಕಾಶಕ್ಕಾಗಿ ಬೇಡಿ ನಿಲ್ಲಲಿಲ್ಲ. ಆದರೆ ಅವರಲ್ಲಿ ಯಾರೊಬ್ಬರೂ ಸಹ ಗುರುತಿಸಿ ಪ್ರೋತ್ಸಾಹಿಸುವ ಮನಸ್ಸು ಮಾಡಲಿಲ್ಲ. ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ ಎಂಬ ಒಂದೇ ಕಾರಣಕ್ಕಾಗಿ ಇವರ ಸಹಜ ಪ್ರತಿಭೆ ಮತ್ತು ಸಾಮಥ್ರ್ಯ ಬೆಳಕಿಗೆ ಬಾರದಾಯಿತು. ಕೈಗೆ ಬಂದ ಅದೆಷ್ಟೋ ಅವಕಾಶಗಳು ಸಹ ಕೈ ತಪ್ಪಿ ಹೋಗಿ ಮನಸ್ಸಿಗೆ ಘಾಸಿ ಕೂಡ ಮಾಡಿದ್ದವು. ಆದರೂ ಹಾಡುವುದು ಮಾತ್ರ ನಿಲ್ಲಲಿಲ್ಲ.

ಹ್ಯಾಟ್ಸಾಫ್

ಕಾಂಚಾಣ ಮತ್ತು ಕೀರ್ತಿಯ ಬೆನ್ನತ್ತಿ ಹೋಗದೆ, ಯಾವ ಸಂಭಾವನೆಯನ್ನೂ ಬಯಸದೆ ಕರೆದವರ ಆತ್ಮೀಯ ಆಹ್ವಾನಕ್ಕೆ ಒಲ್ಲೆನ್ನದೆ ಹೋಗಿ ಇತರರ ರಂಜಿಸುತ್ತಾ ಅದರಲ್ಲೇ ಆತ್ಮ ತೃಪ್ತಿ ಕಂಡುಕೊಳ್ಳುತ್ತಿರುವ ಶಿವಕುಮಾರ್ ಅವರ ವ್ಯಕ್ತಿತ್ವ ನಿಜಕ್ಕೂ ವಿಶೇಷವೇ ಸರಿ.
ಅಮೋಘ – ಅದ್ಭುತ ಕಲೆಗಳ ಸಾಕಾರ ಮೂರ್ತಿಯಂತಿರುವ ಶಿವಕುಮಾರ್ ಅವರದು ಸರಳತೆ, ಸಜ್ಜನಿಕೆಯೇ ಮೈದೆಳೆದಂತಿರುವ ವ್ಯಕ್ತಿತ್ವ. ತಮ್ಮ ಸಹೋದರ ಒಬ್ಬರಿಗೆ ಕಿಡ್ನಿ ದಾನ ಮಾಡುವ ಮೂಲಕ ಅವರ ಆರೋಗ್ಯದ ಕಾಳಜಿ ಹಾಗೂ ಸಹೃದಯತೆ ಮೆರದಿರುವ ಪುಣ್ಯಾತ್ಮ ಕೂಡ ಆಗಿದ್ದಾರೆ ಈ ಕಲಾವಿದ.

HATS OFF SIR

ಗಂಗಾಧರ ಬಿ.ಎಲ್ ನಿಟ್ಟೂರ್
ಮೊ.ಸಂ : 8867702396

Leave a Reply

Your email address will not be published. Required fields are marked *

Trending

Exit mobile version