ದಿನದ ಸುದ್ದಿ
ವಿಶಾಖಪಟ್ಟಣಂನಲ್ಲಿ ಆಲ್ ಇಂಡಿಯ ಕ್ರೀಡಾಕೂಟಕ್ಕೆ ಪೇದೆ ಕೆ.ಆರ್.ಹುಲಿರಾಜ ಆಯ್ಕೆ
- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸುದ್ದಿದಿನ,ಬಳ್ಳಾರಿ: ಉದ್ಯೋಗದೊಂದಿಗೆ ಆರೋಗ್ಯದ ದೃಷ್ಟಿಯಿಂದ ಪ್ರತಿನಿತ್ಯ ಒಂದು ತಾಸಿನ ಕಾಲ ದೇಹದಂಡನೆ ಮಾಡಿದರೇ ಕರ್ತವ್ಯ ನಿರ್ವಹಿಸಲು ಅನುಕೂಲಕರವಾಗುತ್ತದೆ ಎಂದು ವಿಶಾಲಪಟ್ಟಣಂ ಆಲ್ ಇಂಡಿಯಾ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆಯಾದ ಪೇದೆ ಕೆ.ಆರ್ ಹುಲಿರಾಜ ತಿಳಿಸಿದರು.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಬೊಮ್ಮಗಟ್ಟ ಗ್ರಾಮದ ತಂದೆ ಕೆ.ರಮೇಶ್, ತಾಯಿ ಲಕ್ಷ್ಮೀ ಅವರ ಮೊದಲನೇ ಮಗ ಕೆ.ಆರ್ ಹುಲಿರಾಜ, ವೃತ್ತಿಯಲ್ಲಿ ಕೆ.ಎಸ್.ಆರ್.ಟಿ.ಸಿ ಪೇದೆ, ಪತ್ನಿ ಸವಿತಾ ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ ಉದ್ಯೋಗಿ, ಇಬ್ಬರು ಮಕ್ಕಳು ಇದ್ದಾರೆ.
ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸದ ಜೊತೆಗೆ ಖೋ-ಖೋ, ಓಟ, ವಾಲಿಬಾಲ್, ಕ್ರಿಕೆಟ್ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಜೊತೆಗೆ ಬಳ್ಳಾರಿ ಡಯಟ್ ನಲ್ಲಿ ಡಿ.ಎಡ್. ಪದವಿ ಪಡೆದು ನಂತರ ಬಿ.ಎ. ಪದವಿಯನ್ನು ಕುವೆಂಪು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ.
ಪೇದೆಯಾಗಿ ಆಯ್ಕೆ
2014ನೇ ಮಾರ್ಚ್ 3ನೇ ತಾರೀಖು ಬೆಂಗಳೂರಿನ ಕೆ.ಎಸ್.ಆರ್.ಟಿ.ಸಿ.ಯಲ್ಲಿ ಪೇದೆಯಾಗಿ ಆಯ್ಕೆಯಾಗಿ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಎರಡು ವರ್ಷಗಳ ಕಾಲ ತರಬೇತಿ ಪೂರ್ಣಗೊಳಿಸಿದ್ದಾರೆ.
ಬೆಂಗಳೂರಿನಲ್ಲಿ 6 ವರ್ಷಗಳ ಕಾಲ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸಿ ನಂತರ ಪ್ರಸ್ತುತ ಚಿತ್ರದುರ್ಗ ಜಿಲ್ಲೆಯ ಚಳ್ಳಕೇರೆ ತಾಲೂಕಿನ ಡಿಪೋದಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
800,1500 ಮೀಟರ್ ಓಟದ ಸ್ಪರ್ಧೆ ಆಯ್ಕೆ
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗಿ, ನಂತರ ರಾಜ್ಯ ಮಟ್ಟದಲ್ಲಿ 800 ಮೀಟರ್ ಹಾಗೂ 1500 ಮೀಟರ್ ಓಟದಲ್ಲಿ ದ್ವೀತಿಯ ಸ್ಥಾನ ಪಡೆದುಕೊಂಡು, 2024ನೇ ಸಾಲಿನ ಡಿಸೆಂಬರ್ 6, 7 ಹಾಗೂ 8 ರಂದು ನಡೆಯುವ ಆಲ್ ಇಂಡಿಯಾ ರೋಡ್ ಟ್ರಾನ್ಸ್‌ಪೋರ್ಟ್ ಕಾರ್ಪೋರೇಷನ್ ಲಿಮಿಟೆಡ್ ಅಥ್ಲೆಟಿಕ್ ಮೀಟ್, ಪಾರ್ಟ್ ಸೇಡಿಯಂ, ವಿಶಾಖಪಟ್ಟಣಂನಲ್ಲಿ ನಡೆಯುವ ಅಥ್ಲೆಟಿಕ್ಸ್ ಗೆ ಆಯ್ಕೆಯಾಗಿ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.
ಇಲಾಖೆ ಪ್ರೋತ್ಸಾಹ
ASRTU ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುವ ನಿಗಮದ ಆಟಗಾರರಿಗೆ ಅಭ್ಯಾಸ ಮಾಡಲು ವೇತನ ಸಹಿತ ರಜೆ ಹಾಗೂ ಕ್ರೀಡಾ ಸಾಮಗ್ರಿ ಕೊಟ್ಟಿದ್ದಾರೆ .ASRTU ವತಿಯಿಂದ ದೇಶದ ಎಲ್ಲಾ ರಸ್ತೆ ಸಾರಿಗೆ ನಿಗಮಗಳ ನೌಕರರಿಗೆ ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ವಿಶಾಖಪಟ್ಟಣಂನಲ್ಲಿ ಆಯೋಜಿಸಲಾಗಿದೆ. ರಾಜ್ಯದ ಹಾಗೂ ಜಿಲ್ಲೆಯ ಇಲಾಖೆಯ ಅಧಿಕಾರಿಗಳಿಗೆ ಪೇದೆ ಕೆ.ಆರ್. ಹುಲಿರಾಜ್ ರಿಗೆ ಧನ್ಯವಾದಗಳನ್ನು ತಿಳಿಸಿದರು.
ಒಟ್ಟಾರೆಯಾಗಿ ASRTU Athletics ಡಿಸೆಂಬರ್-2024 ಕ್ರೀಡಾಕೂಟವನ್ನು ಡಿಸೆಂಬರ್ 06 ರಿಂದ 8 ವರೆಗೆ ವಿಶಾಖಪಟ್ಟಣಂನಲ್ಲಿ ಆಯೋಜಿಸಿದೆ. ಅದರಲ್ಲಿ ಬಳ್ಳಾರಿ ಜಿಲ್ಲೆಯ ನಿವಾಸಿ ಪೇದೆ ಕೆ.ಆರ್ ಹುಲಿರಾಜ ಭಾಗವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಈ ಸಮಯದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ತಂದೆ ತಾಯಿ, ಪೋಷಕರು ಹಾಗೂ ಸ್ನೇಹಿತರು ಶುಭಕೋರಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243