ದಿನದ ಸುದ್ದಿ
ದಾವಣಗೆರೆ | ಆಟೋರಿಕ್ಷಾ – ಟ್ಯಾಕ್ಸೀ ಚಾಲಕರಿಗೆ ಸರ್ಕಾರದಿಂದ ಪರಿಹಾರ ಧನ : ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ: ಕೋವಿಡ್-19 ಹಿನ್ನೆಲೆ ರಾಜ್ಯಾದ್ಯಂತ ಲಾಕ್‍ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಸಂಬಂಧಿಸಿದಂತೆ ಆಟೋರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ರೂ. 5,000 ಗಳ ಪರಿಹಾರ ಧನವನ್ನು ನೀಡಲು ಮುಂದಾಗಿದ್ದು, ಈ ವಾಹನಗಳ ಚಾಲಕರಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿಯೇ ಸಲ್ಲಿಸಬೇಕು. ಆಟೋರಿಕ್ಷಾ, ಟ್ಯಾಕ್ಸೀ ಚಾಲನೆ ಮಾಡಲು ನೀಡಿರುವ ಅನುಜ್ಞಾ ಪತ್ರ, ಮತ್ತು ಬ್ಯಾಡ್ಜ್ ಹೊಂದಿರುವವರು ಹಾಗೂ ವಾಹನ, ನೋಂದಣಿ ಸಂಖ್ಯೆ, ಈ ಮೂರು ಅಂಶಗಳು ಅನನ್ಯವಾಗಿರುವವರು ಮಾತ್ರ ಅರ್ಜಿ ಸಲ್ಲಿಸಬಹುದು.
ಫಲಾನುಭವಿಗಳು ಆಟೋರಿಕ್ಷಾ/ಟ್ಯಾಕ್ಸಿ ಚಾಲಕರಾಗಿದ್ದು ದಿನಾಂಕ: 24-03-2020 ಕ್ಕೆ ಚಾಲ್ತಿಯಲ್ಲಿರುವ ಚಾಲನಾ ಅನುಜ್ಞಾ ಪತ್ರ ಮತ್ತು ಸುಸ್ಥಿತಿ ಪ್ರಮಾಣ ಪತ್ರ( fitness certificate) ವಿವರಗಳನ್ನು ಸೇವಾ ಸಿಂಧು ಪೋರ್ಟಲ್‍ನಲ್ಲಿ ನಮೂದಿಸಬೇಕು.
ಆಟೋರಿಕ್ಷಾ/ ಟ್ಯಾಕ್ಸೀ ಚಾಲಕರ ಆಧಾರ ಕಾರ್ಡ್, ಬ್ಯಾಂಕ್ ಖಾತೆ ವಿವರ, ಐಎಫ್‍ಎಸ್‍ಸಿ ಕೋಡ್, ಎಂಐಸಿಆರ್ ಕೋಡ್ ತಪ್ಪದೇ ಪೋರ್ಟಲ್‍ನಲ್ಲಿ ನಮೂದಿಸಬೇಕು. ಚಾಲಕರ ವಾಹನ ನೋಂದಣಿ ಸಂಖ್ಯೆ ನಮೂದಿಸಬೇಕು ಹಾಗೂ ಆಟೋರಿಕ್ಷಾ/ಟ್ಯಾಕ್ಸಿ ಚಾಲಕರು ತಮ್ಮ ದೈನಂದಿನ ಉದ್ಯೋಗ ನಡೆಸಲಾಗದೇ ಆದಾಯ ಕಳೆದುಕೊಂಡ ಬಗ್ಗೆ ಪೋರ್ಟಲ್‍ನಲ್ಲಿ ಸ್ವಯಂ ಘೋಷಣೆ ಪತ್ರವನ್ನು ನಮೂದಿಸಬೇಕು ಎಂದು ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243