ನೆಲದನಿ
ಅಯೋಧ್ಯೆ ತೀರ್ಪು : ಗೆದ್ದಿದ್ದು ಧರ್ಮವಲ್ಲ, ಸೋತಿದ್ದು ಅನ್ಯಾಯವಲ್ಲ..!
- ಡಾ.ಕೆ.ಎ.ಓಬಳೇಶ್
ಭಾರತದ ನೆಲದಲ್ಲಿ ಸನಾತನವಾದಿಗಳ ಅಸಮಾನತೆಯ ಸಿದ್ಧಾಂತಕ್ಕೆ ಧಕ್ಕೆಯಾದಾಗಲೆಲ್ಲ ತನ್ನ ಅಸ್ತಿತ್ವದ ಉಳಿವಿಗಾಗಿ ಒಂದಿಲ್ಲೊಂದು ತಂತ್ರಗಳನ್ನು ರೂಪಿಸುತ್ತಲೇ ಬಂದಿದ್ದಾರೆ. ಇಂತಹ ತಂತ್ರಗಾರಿಯನ್ನು ಹುಡುಕುತ್ತ ಹೋದರೆ ಪುರಾಣಗಳ ಕಾಲದಿಂದಲೇ ಇದರ ಕುರುಹುಗಳು ದೊರೆಯುತ್ತವೆ. ಇದಕ್ಕೆ ಪೂಕರವಾಗಿ ನಿರ್ಮಾಣವಾಗಿದ್ದೆ ಬಾಬರಿ ಮಸಿದಿಯ ದ್ವಂಸ ಪ್ರಕರಣ. ಈ ಬಾಬರಿ ಮಸಿದಿ ಪ್ರಕರಣ ಇವರಿಗೆ ಒಂದು ನೆಪ ಮಾತ್ರ. ವಾಸ್ತವವಾಗಿ ಇವರಿಗೆ ರಾಮನ ಮೇಲೆ ಎಳ್ಳಷ್ಟು ಕಾಳಜಿ ಇಲ್ಲ.
ಆದರೆ ಇವರಿಗೆ ಬೇಕಾಗಿರುವುದು ಅಸಮಾನತೆಯ ವರ್ಣಾಶ್ರಮದ ಬೇರುಗಳು. ಸನಾತನವಾದದ ಈ ಅಸಮಾನತೆಯ ಬೇರುಗಳು ಬ್ರಿಟಿಷರಿಂದ ಸ್ವಾತಂತ್ರ್ಯ ಲಭಿಸುವವರೆಗೂ ಭದ್ರವಾಗಿದ್ದವು. ಈ ನಡುವೆ ಬುದ್ಧನ ಕಾಲದಿಂದಲೂ ಈ ವರ್ಣಾಶ್ರಮದ ಬೇರುಗಳಿಗೆ ಧಕ್ಕೆಯಾದಗಲೆಲ್ಲ ಏನೆಲ್ಲಾ ತಂತ್ರಗಳನ್ನು ಮಾಡಿ, ಬಣ್ಣ ಬದಲಾಯಿಸಿಕೊಂಡು ತಮ್ಮ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದ್ದಾರೆ ಎಂಬುದಕ್ಕೆ ಚರಿತ್ರೆಯಲ್ಲಿ ಸಾಕಷ್ಟು ನಿದರ್ಶನಗಳು ಕಂಡುಬರುತ್ತವೆ.
ಆದರೆ ಅದನ್ನು ಇಲ್ಲಿ ಚರ್ಚಿಸುವುದಕ್ಕೆ ಅವಕಾಶವಿಲ್ಲ. ಆದರೆ ಭಾರತದ ನೆಲದಲ್ಲಿ ವೈದಿಕತೆಯ ವಿರುದ್ಧ ಸಮರ ಸಾರಿದ ಎಲ್ಲ ಅವೈದಿಕ ಶ್ರಮಣಧಾರೆಗಳನ್ನು ಸನಾತನವಾದಿಗಳುವೈದಿಕೀಕರಣಗೊಳಿಸಿರುವುದು ಮಾತ್ರ ಸತ್ಯ. ಇದಕ್ಕೆ ನಿದರ್ಶನವಾಗಿ ಸಮಾನತೆಯ ಜೀವಪರ ಮೌಲ್ಯಗಳನ್ನು ಎತ್ತಿಹಿಡಿದ ಬುದ್ಧ, ಬಸವಣ್ಣನಂತಹ ದಾರ್ಶನಿಕರು ಇಂದು ದೇವರಾಗಿ ಪೂಜೆಗೊಳ್ಳುತ್ತಿದ್ದಾರೆ. ಆದರೆ ಈ ಎಲ್ಲಾ ದಾರ್ಶನಿಕರ ಜೀವಪರ ನಿಲುವುಗಳನ್ನು ತಿಂದು ಜೀರ್ಣಿಸಿಕೊಂಡಿದ್ದ ಸನಾತನವಾದಿಗಳಿಗೆ ನುಂಗಲಾರದ ತುತ್ತಾಗಿದ್ದು ಮಾತ್ರ ಬಾಬಾಸಾಹೇಬ್ ಅಂಬೇಡ್ಕರ್ ನೀಡಿದ ಅತ್ಯಮೂಲ್ಯವಾದ ಸಂವಿಧಾನ.
ಭಾರತವನ್ನು ಬ್ರಿಟಿಷರ ದಾಸ್ಯದಿಂದ ಬಿಡಿಸಿಕೊಂಡು ಮತ್ತೇ ಮನುವಾದಿ ಭಾರತವನ್ನು ನಿರ್ಮಿಸಬೇಕು ಎಂಬುದು ಸನಾತನವಾದಿಗಳ ಆಶಯವಾಗಿತ್ತು. ಆದರೆ ಬಾಬಾಸಾಹೇಬ ಕನಸ್ಸಿನ ಪ್ರಬುದ್ಧ ಭಾರತವು ಮನುವಾದಿಗಳಿಗೆ ಸಹಿಸದ ತುತ್ತಾಗಿತ್ತು. ಅಷ್ಟೇ ಅಲ್ಲದೇ ಶತ ಶತಮಾನಗಳಿಂದ ಕಾಪಾಡಿಕೊಂಡು ಬಂದಿದ್ದ ತಮ್ಮ ಅಸಮಾನತೆಯ ಗೊಡ್ಡು ಸಂಪ್ರದಾಯಗಳಿಗೆ ಬಾಬಾಸಾಹೇಬರು ತಿಲಾಂಜಲಿಯನ್ನು ಇಟ್ಟು ಸಮಾನತೆ ನಾಡಿಗಾಗಿ ಶ್ರಮಿಸಿದರು.
ಸಂವಿಧಾನದ ಜಾರಿಯಿಂದ ತಮಗೆ ಅಸ್ತಿತ್ವವಿಲ್ಲವೆಂದು ತಿಳಿದ ಮನುವಾದಿಗಳು ಕೋಮುವಾದವನ್ನು ಹುಟ್ಟಿಹಾಕುವ ಮೂಲಕ ಸಾಮಾನ್ಯ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನಕ್ಕೆ ಮುಂದಾದರು. ಹಿಂದೂ-ಮುಸಲ್ಮಾನ್-ಕ್ರೈಸ್ತರಲ್ಲಿ ವಿಷಬೀಜ ಬಿತ್ತುವ ತಂತ್ರಗಳಿಗೆ ಮುಂದಾದರು. ಇಂತಹ ಸಂದರ್ಭದಲ್ಲಿ ಇವರಿಗೆ ಸಿಕ್ಕಿದ್ದೆ ಬಾಬರಿ ಮಸಿದಿ. ತಮ್ಮದಲ್ಲದ ಜಾಗದಲ್ಲಿ ರಾತ್ರೋರಾತ್ರಿ ರಾಮನ ವಿಗ್ರಹ ಸ್ಥಾಪನೆ ಮಾಡಿದ ಸನಾತನವಾದಿಗಳು ಒಂದಿಲ್ಲ ಒಂದು ರೀತಿಯಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಲೆ ಬಂದರು.
ಕೊನೆಗೆ ರಾಮ ಇದೇ ಜಾಗದಲ್ಲಿ ಜನ್ಮತಳೆದಿದ್ದ, ಈ ಹಿಂದೆ ಇಲ್ಲಿ ರಾಮ ಮಂದಿರವಿತ್ತು. ಬಾಬರ್ ಅದನ್ನು ದ್ವಂಸ ಮಾಡಿ ಮಸಿದಿ ನಿರ್ಮಾಣ ಮಾಡಿದ್ದಾನೆ ಎಂಬ ಕಟ್ಟುಕಥೆಗಳು ನಿರ್ಮಾಣವಾದವು. ನಂತರ ಕೋಮುವಾದಿಗಳ ತಂತ್ರಕ್ಕೆ ಬಲಿಯಾಗಿ ಮಸಿದಿಯು ನೆಲಸಮವಾಯಿತು. ಅಂದಿನಿಂದ ಇಂದಿನವರೆಗೂ ಒಂದಿಲ್ಲ ಒಂದು ರೀತಿಯಲ್ಲಿ ಕೋಮುಗಲಭೆಗಳು ನಡೆಯುತ್ತಲೆ ಇದ್ದವು. ಕೋರ್ಟಿನಲ್ಲಿ ಯಾರ ಪರವಾಗಿಯೂ ಯಾರ ವಿರುದ್ಧವಾಗಿಯೂ ತೀರ್ಪು ನೀಡಲಾಗದ ನ್ಯಾಯಾಲಯವು ಈ ಪ್ರಕರಣವನ್ನು ಮುಂದೂಡುತ್ತಲೆ ಬರಲಾಗಿತ್ತು. ನ್ಯಾಯಾಲಯವು ಹೀಗೆ ಸಮಯವನ್ನು ಮುಂದೂಡುವುದಕ್ಕೆ ಕಾರಣವು ಇತ್ತು.
ಸನಾತನವಾದಿಗಳು ಹುಸಿ ದೇಶಭಕ್ತಿ ಹಾಗೂ ದೇಶಪ್ರೇಮದ ಅಡಿಯಲ್ಲಿ ಸೃಷ್ಟಿಸಿದ ಈ ಪ್ರಕರಣವನ್ನೇ ತನ್ನ ಬಂಡವಾಳ ಮಾಡಿಕೊಂಡ ಸಂಘಪರಿವಾರದ ರಾಜಕೀಯ ಮುಖವಾದ ಬಿ.ಜೆ.ಪಿ ಸರ್ಕಾರವು ತನ್ನ ರಾಜಕೀಯ ವೈಭೋಗಕ್ಕೆ ಈ ಪ್ರಕರಣವನ್ನು ಬಳಸಿಕೊಂಡಿತು. ಈ ಪ್ರಕರಣವನ್ನು ಬಿ.ಜೆಪಿ ಸರ್ಕಾರವು ಎಷ್ಟರ ಮಟ್ಟಿಗೆ ಬಳಸಿಕೊಂಡಿತು ಎಂದರೆ ದೇಶದ ಆರ್ಥಿಕತೆ ಬೆತ್ತಲಾಗಿ, ನಿರುದ್ಯೋಗ ಗಗನ ಮುಟ್ಟಿದರೂ, ಜಿ.ಎಸ್ಟಿಯಂತಹ ತೆರಿಗೆಗಳು ಸಾಮಾನ್ಯ ಜನರು ತಿನ್ನುವ ಅನ್ನವನ್ನು ಕಸಿದುಕೊಂಡರು ಜನರು ಮಾತ್ರ ಮೋದಿಗೆ ಜೈಕಾರ ಹಾಕುವುದು ತಪ್ಪಲಿಲ್ಲ.
ಇದಕ್ಕೆ ಕಾರಣ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರಾಮ ಮಂದಿರವನ್ನು ಕಟ್ಟುತ್ತದೆ ಎಂಬ ಆಶಾ ಭಾವನೆಯಾಗಿತ್ತು. ಆದರೆ ಮೋದಿ ಸರ್ಕಾರ ಇದನ್ನೇ ಬಂಡವಾಳ ಮಾಡಿಕೊಂಡು ಎರಡನೇ ಭಾರಿ ಅಧಿಕಾರ ಹಿಡಿಯುವ ಸಂದರ್ಭಕ್ಕಾಗಲೇ ಭಾರತೀಯರನ್ನು ಬೆತ್ತಲೆಗೊಳಿಸಿಯಾಗಿತ್ತು. ಈ ಸಂದರ್ಭದಲ್ಲಿ ಜನರು ತಮ್ಮ ಸರ್ಕಾರವನ್ನು ವಿರೋಧಿಸದಂತೆ ಬಾಯಿ ಮುಚ್ಚಿಸುವ ತಂತ್ರವಾಗಿ ಅಯೋಧ್ಯ ತೀರ್ಪು ಹಿಂದುಗಳ ಪರವಾಗಿ ಬರುವಂತೆ ನೋಡಿಕೊಂಡರು.
ಆದರೆ ಸರ್ವೋಚ್ಚ ನ್ಯಾಯಾಲಯ ನೀಡಿದೆ ಎನ್ನುವ ಕಾರಣಕ್ಕಾಗಿ ಎಲ್ಲರೂ ಈ ತೀರ್ಪಿಗೆ ತಲೆಭಾಗಿದರೇ ಹೊರತು, ಇದಕ್ಕೆ ಬಹುತೇಕ ಬುದ್ಧಿಜೀವಿಗಳು ಅಸಮಾಧಾನವನ್ನು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ ಹಲವಾರು ನಿವೃತ್ತ ನ್ಯಾಯಾಧೀಶರು ಕೂಡ ಈ ತೀರ್ಪಿನ ಬಗ್ಗೆ ಸಂವಿಧಾನಿಕ ಚೌಕಟ್ಟಿನಲ್ಲಿ ವಿರೋಧವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರಮುಖ ಕಾರಣವೆಂದರೆ ಧರ್ಮದ ಹೆಸರಿನ ಮೇಲೆ ಹೊರಬಂದ ತೀರ್ಪಿನಲ್ಲಿ ನಿಜವಾದ ಧರ್ಮ ಸೋತಿತ್ತು. ಅಧರ್ಮ ತಲೆ ಎತ್ತಿ ನಿಂತಿತ್ತು.
ಚರಿತ್ರೆಯ ಪುಟಗಳಲ್ಲಿ ಒಬ್ಬ ರಾಜ ತನ್ನ ಧರ್ಮದ ಸಂಕೇತವಾಗಿ ನಿರ್ಮಾಣ ಮಾಡಿದ ಧಾರ್ಮಿಕ ಕೇಂದ್ರವು ನಮ್ಮ ಕಣ್ಣ ಮುಂದೆಯೇ ಇದೆ. ಆದರೆ ಇದನ್ನು ಕೆಡವಿರುವುದು ಅಕ್ಷಮ್ಯ ಅಪರಾಧ ಎನ್ನುವುದು ಕೂಡ ನ್ಯಾಯಾಲಯಕ್ಕೆ ಸ್ಪಷ್ಟವಾಗಿ ಗೊತ್ತಿದೆ. ಹೀಗಿದ್ದರೂ ತನ್ನ ತೀರ್ಪಿನಲ್ಲಿ ಮಸಿದಿಯನ್ನು ಕೆಡವಿದ್ದು ಅಪರಾಧ ಎಂದು ಬಿಂಬಿಸಿದರೂ ಕೂಡ, ತೀರ್ಪು ಬಂದಿದ್ದು ಕಟ್ಟು ಕಥೆಯನ್ನು ಕಟ್ಟಿದವರ ಪರವಾಗಿಯೇ.
ನ್ಯಾಯಲಯ ನೀಡಿದ ಈ ತೀರ್ಪು ನಿಜವಾದ ನ್ಯಾಯಧರ್ಮಕ್ಕೆ ಮಾಡಿದ ಅಪಚಾರದಂತಿದೆ.ಅಯೋಧ್ಯೆಯಲ್ಲಿ ಮಸಿದೆ ಇತ್ತು ಎಂಬುದು ನಮ್ಮ ಕಣ್ಣ ಮುಂದಿನ ಸತ್ಯ. ಆದರೆ ಅಲ್ಲಿ ರಾಮಜನ್ಮ ತಳೆದಿದ್ದ ಎಂಬುದು ಕೇವಲ ಕಟ್ಟು ಕಥೆಯಾಗಿದೆ. ನ್ಯಾಯಾಲಯಕ್ಕೆ ಕಟ್ಟುಕಥೆಗಳು ಸಾಕ್ಷ್ಯಗಳಾಗಲು ಸಾಧ್ಯವೇ ಇಲ್ಲ. ಆದರೆ ರಾಜಕೀಯ ಪ್ರೇರಿತವಾದ ಕಾರಣದಿಂದಾಗಿ ಚರಿತ್ರೆಯ ಕುರುಹುಗಳನ್ನು ಕಡೆಗಣಿಸಿ, ದಂತಕಥೆಗೆ ನ್ಯಾಯ ಕಲ್ಪಿಸಿದ್ದು ಮಾತ್ರ ಅನ್ಯಾಯಕ್ಕೆ ಸಿಕ್ಕ ಜಯ ಎಂಬುದರಲ್ಲಿ ಎರಡು ಮಾತಿಲ್ಲ.
ಹಿಂದೂಗಳ ಪರವಾದ ತೀರ್ಪು ಬಂದಾಯ್ತು ನಿಜ. ಆದರೆ ಹಿಂದೂಧರ್ಮದಲ್ಲಿ ಮನೆ ಮಾಡಿಕೊಂಡಿದ್ದ ಎಲ್ಲಾ ಅನಿಷ್ಟಗಳು ರಾಮಮಂದಿರ ನಿರ್ಮಾಣದಿಂದ ದೂರವಾಗುತ್ತವೆ ಎಂದು ಆಶಾಭಾವನೆಯನ್ನು ತಳೆಯೊಣವೇ ಹಾಗಾದರೆ..! ಇಲ್ಲ, ನಿಜವಾದ ಸಮಸ್ಯೆಗಳು ಎದುರಾಗುವುದೇ ಇಲ್ಲಿ.
ಹಿಂದುತ್ವವನ್ನು ಕಾಪಾಡುತ್ತೇವೆ ಎಂದು ಹೇಳುತ್ತಲೇ ರಾಜಕಿಯ ಚುಕ್ಕಾಣಿ ಹಿಡಿದಿರುವ ಪಕ್ಷವು ದೇಶವನ್ನೇ ದಿವಾಳಿತನಕ್ಕೆ ತಳ್ಳುತ್ತಿದೆ.ದೀನ ದಲಿತರು ಧರ್ಮದ ಹೆಸರಿನಲ್ಲಿ ಬಲಿ ಪಶುಗಳಾಗುತ್ತಿದ್ದಾರೆ. ದೀನ ದಲಿತರ ಹೆಣ್ಣುಮಕ್ಕಳಿಗೆ ಅಭದ್ರತೆ ಎದ್ದು ಕಾಡುತ್ತಿದೆ. ನಿರುದ್ಯೋಗ ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಮಾನವ ಹಕ್ಕುಗಳು ಉಲ್ಲಂಘನೆಯಾಗುತ್ತಿವೆ. ಇದಕ್ಕೆ ಕಾಶ್ಮೀರವೇ ಜ್ವಲಂತ ಸಾಕ್ಷಿಯಾಗಿದೆ.
ಇಷ್ಟೆಲ್ಲ ಸಂಕಷ್ಟದ ನಡುವೆಯೂ ಮೋದಿಯ ಜೈಕಾರ ಜ್ವಾಲೆ ಮಾತ್ರ ಮುಗಿಲು ಮುಟ್ಟುತ್ತಿದೆ. ಆ ಜ್ವಾಲೆ ಮುಂದೆ ಕೂಗುವವರು ಹಿಂದೆ ತಮ್ಮನ್ನು ಸುಡುತ್ತದೆ ಎಂಬ ಅರಿವಿಲ್ಲದೆ ನಿಂತಿದ್ದಾರೆ. ಮುಂದೊಂದು ದಿನ ಈ ಪರಿಸ್ಥಿತಿಯು ಸಾಮಾನ್ಯ ಜನರನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆಯೋ ಗೊತ್ತಿಲ್ಲ. ಆದರೆ ಒಂದಂತು ಸತ್ಯ, ಸರ್ವರು ಸಮಾನರೆಂದು ಸಾರಿದ ಭಾರತದ ಸಂವಿಧಾನದ ಆಶಯಗಳನ್ನು ಒಂದೊಂದಾಗಿಯೇ ಸಡಿಲಗೊಳಿಸುವ ಕಾರ್ಯವಂತೂ ನಿಧಾನವಾಗಿ ಸಾಗುತ್ತಲೆ ಇದೆ.
ಇದಕ್ಕೆ ದಮನಿತ ಸಮುದಾಯದ ಪ್ರಬಲರೂ ಬೆಂಬಲವಾಗಿ ನಿಂತಿರುವುದು ಮತ್ತೊಂದು ದುರಂತವಾಗಿದೆ. ಈ ಎಲ್ಲರದ ನಡುವೆ ಧರ್ಮ ಸೋತು, ಅಧರ್ಮ ತಾಂಡವವಾಡುತ್ತಿದೆ. ಮುಂದೊಂದು ಇಂತಹ ಅಪಾಯಕಾರಿ ತೀರ್ಪು ಭಾರತೀಯರೆಲ್ಲರನ್ನು ಸಮಾನವಾಗಿ ಕಾಣುವಂತಹ ಸಂವಿಧಾನವನ್ನೇ ಬಲಿ ತೆಗೆದುಕೊಳ್ಳುವ ಸಂದರ್ಭ ನಮ್ಮ ಮುಂದಿದೆ. ಇದಕ್ಕೆ ನಿದರ್ಶನವಾಗಿ ಅಯೋಧ್ಯೆ ತೀರ್ಪು ನಮ್ಮ ಮುಂದಿದೆ.
ಯಾರು ಕಂಡಿರದ, ನೋಡಿರದ ಕಾಲದಲ್ಲಿ ರಾಮ ಜನಿಸಿದ ಎಂಬ ಕಟ್ಟುಕಥೆಗೆ ಮಹತ್ವ ನೀಡಿ, ನಮ್ಮ ಕಣ್ಣ ಮುಂದೆ ನಡೆದ ಮಸಿದಿಯನ್ನು ಮುಚ್ಚಿ ಹಾಕಲಾಯಿತು. ಮುಂದೊಂದು ದಿನ ಇದೇ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಬಾಬಾಸಾಹೇನ್ ಅಂಬೇಡ್ಕರ್ ಅವರು ಮನುವಾದವನ್ನು ತುಳಿದು ಸಂವಿಧಾನ ರಚಿಸಿದ್ದಾರೆ.
ಇದರಿಂದ ಹಿಂದುಗಳಿಗೆ ಮತ್ತು ಹಿಂದುತ್ವದ ಘನತೆಗೆ ಧಕ್ಕೆಯಾಗಿದೆ. ಆದ್ದರಿಂದ ನಮಗೆ ಸಂವಿಧಾನ ಬೇಡ ಮನುವಾದ ಬೇಕು ಎಂಬ ವಾದವು ನ್ಯಾಯಾಲಯದ ಮೆಟ್ಟಲೇರಿದರೂ ಆಶ್ಚರ್ಯಪಡಬೇಕಿಲ್ಲ. ಆಗ ದೇಶದ ಚುಕ್ಕಾಣಿಯು ಇಂತಹ ಕೋಮುವಾದಗಳ ಕೈಯಲ್ಲಿದ್ದರೆ ನ್ಯಾಯಾಲಯದ ತೀರ್ಪು ಯಾವುದರ ಪರವಾಗಿ ಬರುತ್ತದೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.
ಸುದ್ದಿದಿನ.ಕಾಂ|ವಾಟ್ಸಾಪ್|9980346243