ಬಹಿರಂಗ

ಬಂಜಾರರು ಮತ್ತು ಮುಸ್ಲಿಮರ ಐತಿಹಾಸಿಕ ಸಾಂಸ್ಕೃತಿಕ ಸಂಬಂಧಗಳು

Published

on

ಸಾಂದರ್ಭಿಕ ಚಿತ್ರ
  • ಸುರೇಶ್ ಎನ್ ಶಿಕಾರಿಪುರ

ಲಂಬಾಣಿ ಯುವಕರೂ ಮುಸ್ಲಿಮರ ಬಗ್ಗೆ ಸಹಾನುಭೂತಿಯಿಂದ ಇರಬೇಕು. ಲಂಬಾಣಿಗರ ಜನಾಂಗಿಕ ಇತಿಹಾಸವನ್ನು ತಲತಲಾಂತರದಿಂದ ಕಾಪಿಟ್ಟುಕೊಂಡು ಬಂದವರು ಅದೇ ಸಮುದಾಯದ ಢಾಡಿಗಳು. ‘ಢಾಡಿ’ ಬಂಜಾರರ ಒಂದು ಉಪಪಂಗಡ. ಇಸ್ಲಾಂ ಧರ್ಮ ಆಚರಿಸುವ ಬಂಜಾರಾ ವೃತ್ತಿ ಗಾಯಕರು.

ಢಾಡಿ ಬಂಜಾರಾ ಎಂದೇ ಹೆಸರಾಗಿರುವ ಇವರು ಇಸ್ಲಾಮ್ ಧರ್ಮದ ಪ್ರಭಾವಕ್ಕೊಳಗಾಗಿ ಮುಸ್ಲಿಮರಾಗಿಯೂ ಬಂಜಾರರ ನಡುವೆಯೇ ಬಾಳುತ್ತಾ ತಾಂಡಾದಿಂದ ತಾಂಡಾಕ್ಕೆ ಸಂಚರಿಸುತ್ತಾ ಸಾರಂಗಿ ಎಂಬ ಇಂಪಾದ ವಾದ್ಯ ನುಡಿಸುತ್ತಾ ಬಂಜಾರರ ಇತಿಹಾಸ ಸಂಸ್ಕೃತಿಯನ್ನು ಪರಿಚಯಿಸುತ್ತಾ ಜೀವಿಸುತ್ತಾರೆ. ತಾವು ಇಸ್ಲಾಮಿನಲ್ಲಿದ್ದರೂ ಮುಸ್ಲಿಮರ ಸಂಪರ್ಕ ಇವರಿಗಿಲ್ಲ.

ಢಾಡಿಗಳು ಢಾಡಿಗಳಲ್ಲೇ ವೈವಾಹಿಕ ಸಂಬಂಧಗಳನ್ನು ನಡೆಸುತ್ತಾ ತಲತಲಾಂತರದಿಂದ ಬಂಜಾರರ ಜೊತೆಗೇ ಇದ್ದಾರೆ. ಇನ್ನೊಂದು ಮುಖ್ಯ ಸಂಗತಿ ಬಂಜಾರರು ಹಿಂದೂಗಳಲ್ಲ. ಇತರೆ ಇತರೆ ಧರ್ಮಗಳ ಪ್ರಭಾವಕ್ಕೆ ಒಳಗಾಗಿ ಢಾಡಿ ಬಂಜಾರಾ ಸಿಖ್ ಬಂಜಾರರು ಎಂಬ ಪಂಗಡಗಳಾದವು ಬಿಟ್ಟರೆ ಅವರಲ್ಲಿ ಸಾಂಸ್ಕೃತಿಕ ಭಾಷಿಕ ಐಖ್ಯತೆ ಈಗಲೂ ದಟ್ಟವಾಗಿದ್ದು ಹಿಂದೂ ಧರ್ಮದಿಂದ ಪ್ರತ್ಯೇಕವಾದ ಸಂಸ್ಕೃತಿ ಅವರದಾಗಿದೆ.

ಬಂಜಾರರ ಇತಿಹಾಸ ಉಳಿದಿರೋದೇ ಈ ಢಾಡಿ ಮತ್ತು ಭಾಟ್ ಎಂಬೆರೆಡು ಬಂಜಾರಾ ಮುಸ್ಲಿಮ್ ವೃತ್ತಿ ಗಾಯಕರಿಂದ. ಲಕೀಶಾ ಬಂಜಾರಾ ಮಖಾನ್ ಷಾ ಲುಭಾನ ಮೊದಲಾದ ದೊಡ್ಡ ದೊಡ್ಡ ವ್ಯಾಪಾರಿಗಳು ಮೊಘಲ್ ದೊರೆಗಳ ಕಾಲದಲ್ಲಿ ಬದುಕಿದ್ದವರು. ಅವರು ಬಹುದೊಡ್ಡ ಸಂಚಾರಿ ವ್ಯಾಪಾರಿ ಸಮುದಾಯವಾಗಿದ್ದು ಅಂದಿನ ಮೊಘಲ್ ಸಾಮ್ರಾಜ್ಯದಲ್ಲಿ ಪ್ರಭುತ್ವ ಅವರ ವ್ಯಾಪಾರ ವಹಿವಾಟಿಗೆ ರತ್ನಗಂಬಳಿ ಹಾಸಿತ್ತು.

ಲಕೀಷಾ ಬಂಜಾರ ಷಹಜಹಾನ್ ಮತ್ತು ಔರಂಗಜೇಬನ ಕಾಲದ ಬಹು ದೊಡ್ಡ ವ್ಯಾಪಾರಿ. ಆತ ಕೆಂಪು ಕೋಟೆಯ ನಿರ್ಮಾಣಕ್ಕೆ ಬೇಕಾದ ಕೆಂಪು ಕಲ್ಲುಗಳನ್ನು ಒದಗಿಸಿದ್ದನೆಂದು ಹೇಳಲಾಗುತ್ತದೆ. ಗುರು ತೇಗ್ ಬಹದ್ದೂರ್ ಅವರು ಔರಂಗಜೇಬನಿಂದ ಹತ್ಯೆಯಾದಾಗ ಅವರ ಮೃತದೇಹವನ್ನು ಹೊತ್ತೊಯ್ದು ಅಂತ್ಯ ಸಂಸ್ಕಾರ ಮಾಡಿದಾತ ಇದೇ ಲಕೀಶಾ ಬಂಜಾರಾ. ಶಹಜಹಾನನ ಕಾಲದಲ್ಲಿ ಅನ್ಯೂನ್ಯವಾಗಿದ್ದ ಸಂಬಂಧ ಔರಂಗಜೇಬನ ಕಾಲದಲ್ಲಿ ಹಳಸಿ ಬಂಜಾರರು ಸಿಖ್ ಧರ್ಮದ ಬಹು ದೊಡ್ಡ ಅನುಯಾಯಿಗಳಾಗಿ ಸಿಖ್ಯ ಬಂಜಾರಾ ವರ್ಗವೇ ಸೃಷ್ಠಿಯಾಯಿತು.

ಆದರೆ ಅನೇಕ ಮುಸ್ಲಿಮ್ ದೊರೆಗಳು ನವಾಬರು ಯುದ್ಧ ಕಾಲದಲ್ಲಿ ಸರಕು ಸರಂಜಾಮು ಗೂಢಚರ್ಯೆ ಮುಂತಾದವುಗಳಿಗಾಗಿ ಲಂಬಾಡಿಗಳನ್ನೇ ನಂಬಿದ್ದರು ಆಶ್ರಯಿಸಿದ್ದರು. ಮಹಾ ಸಾಹಸಿಗಳು ಸ್ವಾಭಿಮಾನಿಗಳು ಆಗಿದ್ದ ಬಂಜಾರರು ಎಂತಹ ಗುಡ್ಡ ಬೆಟ್ಟ ಕಾಡು ಕಣಿವೆ ಇದ್ದರೂ ಸರಿ ಸಕಾಲಕ್ಕೆ ಸೇನೆಗಳಿಗೆ ಆಹಾರ ಮದ್ದು ಗುಂಡು ಮೊದಲಾದ ಪೂರಕ ಸಾಮಗ್ರಿಗಳನ್ನು ತಮ್ಮ ಹೇರೆತ್ತಿ‌ನ ಬಂಡಿಗಳ ಮೂಲಕ ಸಾಗಿಸಿ ಒದಗಿಸುತ್ತಿದ್ದರು.

ಹಿಂದೂ ರಾಜರೂ ಲಭಾಣಿಗಳ ಸಹಾಯ ಸಹಕಾರ ಹೇರಳವಾಗಿ ಪಡೆದಿದ್ದಾರೆ. ಒಂದು ವಿಶಿಷ್ಟ ಸಂಗತಿ ಎಂದರೆ ಗೋಲ್ಕೊಂಡವನ್ನು ರಾಜಧಾನಿಯನ್ನು ಮಾಡಿಕೊಂಡು ಆಳಿದ ಬರೀದ್ ಷಾಹಿ ದೊರೆ ಸುಪ್ರಸಿದ್ದ ಗಜಲ್ ಕವಿ ಕುಲಿ ಕುತುಬ್ ಷಹ ಬಂಜಾರಾ ಸುಂದರಿ ಭಾಗಾವತಿ ಎಂಬಾಕೆಯನ್ನು ಮದುವೆಯಾಗಿದ್ದ. ಆಕೆಯನ್ನು ಅಪಾರವಾಗಿ ಪ್ರೇಮಿಸುತ್ತಿದ್ದ ಆತ ತನ್ನ ಗಜಲ್ ಗಳಲ್ಲಿ ಭಾಗಾವತಿಯ ಮೇಲಿನ ತನ್ನ ಅನುರಾಗದ ಹೊಳೆ ಹರಿಸಿದ್ದಾನೆ.

ಕುಲಿ ಕುತುಬ್ ಷಹ ಭಾರತದ ಗಜಲ್ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ತನ್ನ ಪ್ರೀತಿಯ ಮಡದಿ ಭಾಗಾವತಿಯ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ ಕುಲಿ ಕುತುಬ್ ಷಹ ಗೋಲ್ಕೊಂಡದ ಸುಂದರವೂ ಸುಪ್ರಸಿದ್ದವೂ ಆದ ಕೋಟೆಯ ಧ್ವಾರವೊಂದಕ್ಕೆ ಬಂಜಾರಾ ಬಾಗಿಲು ಎಂದೇ ನಾಮಕರಣ ಮಾಡಿದ್ದಾನೆ. ಅದು ಈಗಲೂ ಅದೇ ಹೆಸರಿನಿಂದ ಕರೆಯಲ್ಪಡುತ್ತದೆ. ಈಗಿನ ಹೈದರಾಬಾದ್ ಗೋಲ್ಕೊಂಡದಿಂದ ಹನ್ನೊಂದು ಕಿಲೋ ಮೀಟರ್ ದೂರದಲ್ಲಿದೆ. ಹೈದರಾಬಾದಿನ ಮೊದಲ ಹೆಸರು ಭಾಗ್ಯನಗರ. ಕುತುಬ್ ಷಹನ ಹಿಡಿತದಲ್ಲಿದ್ದ ಈ ಪ್ರದೇಶಕ್ಕೆ ಆತನೇ ತನ್ನ ನಲ್ಲೆ ಭಾಗಾವತಿಯ ಹೆಸರಿಟ್ಟನೆಂದು ಐತಿಹ್ಯವಿದೆ. ಆ ಭಾಗ್ಯನಗರವೇ ಇಂದಿನ ಹೈದರಾಬಾದ್.

ಈಗ ಹೈದರಾಬಾದಿಗೆ ಹೊಂದಿಕೊಂಡಂತಿರುವ ಬಂಜಾರ ಹಿಲ್ಸ್ ನ ಕತೆ ನಿಮಗೆ ಗೊತ್ತಿರಲಿಕ್ಕಿಲ್ಲ. ಆಗ ಕಾಡು ತುಂಬಿದ ಬೆಟ್ಟಗಳ ಪ್ರದೇಶ ಬಂಜಾರರ ನೆಲೆಯಾಗಿತ್ತು. ಅಲ್ಲಿ ನಿಜಾಮರ ವಂಶದ ಕೆಲವೇ ಕೆಲವು ಪ್ರತಿಷ್ಟಿತ ಕುಟುಂಬಗಳು ವಾಸಿಸುತ್ತಿದ್ದವು. ಅದು ಬಂಜಾರರ ನೆಲೆಯಾಗಿದ್ದರಿಂದ ನಿಜಾಮರು ಅದಕ್ಕೆ ಬಂಜಾರಾ ಹಿಲ್ಸ್ ಎಂದೇ ಕರೆದಿದ್ದಾರೆ. ಅಲ್ಲಿ ಬೇಟೆ ಮೊದಲಾದ ವಿನೋದಗಳಲ್ಲಿ ನಿಜಾಮರ ವಂಶದ ಭವ್ಯ ಕಟ್ಟಡಗಳಿದ್ದವು.

1927 ರಲ್ಲಿ ನಿಜಾಮರ ಮಂತ್ರಿಯಾಗಿದ್ದ ನವಾಬ್ ಮೆಹದಿ ನವಾಜ್ ಜಂಗ್ ಎಂಬುವವರು ತಮ್ಮದೊಂದು ಸುಂದರ ಭವ್ಯವಾದ ಮಹಲನ್ನು ಕಟ್ಟಿಸಿ ಅದಕ್ಕೆ ಬಂಜಾರಾ ಭವನ ಎಂದೇ ನಾಮಕರಣ ಮಾಡಿದರು. ನಿಜಾಮರ ವಂಶೀಯರಿಂದ ಅದಕ್ಕೆ ನವಾಬರ ಹೆಸರನ್ನಿಡಬೇಕೆಂಬ ಸೂಚನೆ ಬಂದರೂ ಆ ಬೆಟ್ಟ ಪ್ರದೇಶದ ಮೂಲ ನಿವಾಸಿಗಳಾದ ಬಂಜಾರರ ನೆನಪಿಗಾಗಿ ಅವರ ಹೆಸರೇ ಇರಬೇಕೆಂದು ನಿಜಾಮರ ಸೂಚನೆಯನ್ನೂ ನವಾಬ್ ಮೆಹದಿ ಜಂಗ್ ನಿರ್ಲಕ್ಷಿಸಿ ಅವರ ನಿವಾಸಕ್ಕೆ ಬಂಜಾರಾ ಭವನ ಎಂಬ ಹೆಸರನ್ನೇ ನಿಲಿಸಿದರು.

ಚರಿತ್ರೆಯಲ್ಲಿ ಒಳಿತು ಕೆಡುಕುಗಳು ಕಾಲ ಸಂದರ್ಭದ ಒತ್ತಡಗಳಿಂದ ಸೃಷ್ಟಿಯಾದವು. ಮುಸ್ಲಿಮ್ ದೊರೆಗಳ ಜೊತೆ ಸಂಘರ್ಷ ಸಂಬಂಧ ಎರಡೂ ಇಟ್ಟುಕೊಂಡಿದ್ದ ಬಂಜಾರರನ್ನು ಮೊಘಲರಾದಿಯಾಗಿ ಯಾವುದೇ ದೊರೆಗಳು ಅಪರಾಧಿ ಬುಡಕಟ್ಟು ಎಂದು ತೀರ್ಮಾನಿಸಲಿಲ್ಲ. ಬಂಜಾರರ ಜನಾಂಗಿಕ ಆಚರಣೆ ಪದ್ಧತಿಗಳನ್ನು ಮುಸ್ಲಿಮ್ ದೊರೆಗಳು ಹತ್ತಿಕ್ಕಲಿಲ್ಲ. ಮುಸ್ಲಿಮ್ ದೊರೆಯೊಬ್ಬನಿಂದ ಹಾಗೊಂದು ಕರಾರು ಪತ್ರವನ್ನೇ ಅವರು ಪಡೆದುಕೊಂಡಿದ್ದರು.

ಅದು ಕೆಲವು ವಿಚಾರಗಳಿಂದ ತಾವು ಆ ದೊರೆಯಿಂದ ಪಡೆದ ರಿಯಾಯತಿಯಾಗಿತ್ತು. ಲಂಬಾಣಿಗಳ ಬದುಕು ಮೂರಾ ಬಟ್ಟೆಯಾದದ್ದು ಬ್ರಿಟೀಷರಿಂದ. ಬ್ರಿಟಿಷರು 1871 ರಲ್ಲಿ ಜಾರಿಗೆ ತಂದ ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ (ಅಪರಾಧಿ ಬುಡಕಟ್ಟುಗಳ ಕಾಯ್ದೆ) ಇಂದ. ಯಾವ ಮುಸ್ಲಿಮ್ ರಾಜನೂ ಇಂತಹದ್ದೊಂದು ಘೋರ ಕಾನೂನು ಜಾರಿಗೆ ತಂದು ಬಂಜಾರರಾದಿಯಾಗಿ ಯಾವ ಬಡುಕಟ್ಟುಗಳನ್ನೂ ಕತ್ತಲಿಗೆ ತಳ್ಳಲಿಲ್ಲ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.

ಹಿಂದುತ್ವದ ಹೆಸರಲ್ಲಿ ಒಂದು ಸಮುದಾಯದ ವಿರುದ್ಧ ಈ ಸಮುದಾಯಗಳ ಯುವಕರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ, ಈ ತಳ ಸಮುದಾಯಗಳ ಶಿಕ್ಷಣ ಉದ್ಯೋಗ ಆರ್ಥಿಕ ಸಬಲೀಕರಣ ಸಾಮಾಜಿಕ ಸಾಂಸ್ಕೃತಿಕ ಏಳಿಗೆಗೆ ಎಳ್ಳು ನೀರು ಬಿಡುತ್ತಿರುವ, ಸ್ವಾತಂತ್ರ್ಯಾ ಪೂರ್ವದಲ್ಲಿ ಬ್ರಿಟಿಷರ ಗುಲಾಮರಾಗಿದ್ದುಕೊಂಡು ಈ ತಳ ಸಮುದಾಯಗಳನ್ನು ಇನ್ನಿಲ್ಲದಂತೆ ಸುಲಿದು ಶೋಷಿಸಿದ ಕ್ರಿಮಿನಲ್ ಗಳ ಮಾತಿಗೆ ಮರುಳಾಗದೆ; ಶತಮಾನಗಳಿಂದ ಬೆಸೆದುಕೊಂಡಿರುವ ಸಾಂಸ್ಕೃತಿಕ ಕೊಂಡಿಗಳನ್ನು ಇನ್ನಷ್ಟು ಗಟ್ಟಿಯಾದ ಬೆಸುಗೆ ಹಾಕಿ ಭದ್ರಪಡಿಸಿಕೊಂಡು ಈ ದೇಶದ ಸಂವಿಧಾನ, ಸಹಬಾಳ್ವೆ, ಸಹೋದರತ್ವದ ಬದುಕಿಗೆ ನಾಂದಿಯಾಗಬೇಕಾದ ಜವಾಬ್ದಾರಿ ನಮ್ಮದಾಗಿದೆ. ಈಗ ಹಿಂದುತ್ವದ ಬೆಂಕಿ ಹಚ್ಚುತ್ತಿರುವವರು ಯಾವತ್ತೂ ಈ ದೇಶದ ಸ್ವಾತಂತ್ರ ಸಮಗ್ರತೆ ಏಕತೆಯ ಪರವಾಗಿ ಇದ್ದವರಲ್ಲ ಎಂಬುದನ್ನು ಸದಾ ನೆನಪಿಟ್ಟುಕೊಳ್ಳಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version