ಬಹಿರಂಗ

ಭೂಪೇನ್ ಹಝಾರಿಕಾ ಮತ್ತು ಭಾರತರತ್ನ

Published

on

ಭೂಪೇನ್ ಹಝಾರಿಕಾ ಅವರ ಗಾಯನದ ಒಂದು ಶೈಲಿ

ನೆನ್ನೆ ಭಾರತ ರತ್ನ ಪಡೆದಿರುವ ದೇಶದ ಅದ್ಭುತ ಸಂಗೀತಗಾರ, ಅಸ್ಸಾಂ ರಾಜ್ಯದ ಭುಪೇನ್ ಹಜಾರಿಕಾ ನನ್ನ ಇಷ್ಟದ ವ್ಯಕ್ತಿಗಳಲ್ಲಿ ಒಬ್ರು. ಬದುಕಿನುದ್ದಕ್ಕೂ ಆದರ್ಶಗಳನ್ನು ತುಂಬಿಕೊಂಡು ದೇಶದಲ್ಲಿ ಜನಪರ ಸಂಸ್ಕೃತಿಯನ್ನು ಕಟ್ಟಲು ಹೆಸಗಿದವರು.ನೀವು ರುಡಾಲಿ ಸಿನಿಮಾದ ಅವರ ಹಾಡುಗಳು ಕೇಳಿದರೆ ಅವರೆಂತಹ ಅದ್ಭುತ ಸಂಗೀತ ಮಾಂತ್ರಿಕರಾಗಿದ್ದರು ಎಂಬುದು ತಿಳಿಯುತ್ತದೆ.

ಅವು ನಿಜಕ್ಕೂ ಒಂದು ಬಗೆಯ ಕಂಪನ ಮೂಡಿಸುತ್ತವೆ. ಅದರಲ್ಲೂ ‘ದಿಲ್ ಹೂಂ ಹೂಂ ಕರೇ….’ ಎಂಬ ಹಾಡಂತೂ ಕೇಳಿಯೇ ಅನುಭವಿಸಬೇಕು. ‘ನಿನ್ನ ಎರಡೂ ಬದಿಗಳಲ್ಲಿ ಬಡಜನರ ಹಾಹಾಕಾರವೇ ತುಂಬಿರುವಾಗ, ಓ ಗಂಗಾ ಅದು ಹೇಗೆ ನೀನು ಇಷ್ಟು ಪ್ರಶಾಂತವಾಗಿ ಹರಿಯುತ್ತಿದ್ದೀಯ?’ ಎಂದು ಕೇಳುವ ಅವರ ಪ್ರಸಿದ್ಧ ‘ಗಂಗಾ ಬೆಹತಿ ಹೇ ಕ್ಯೂಂ’ ಎಂಬ ಅತ್ಯಂತ ಅರ್ಥಗರ್ಭಿತವಾದ ಹಾಡನ್ನು ನಾನು ಸಾವಿರ ಸಲ ಕೇಳಿರಬಹುದು. ಅದರ ಭಾವ ತೀವ್ರತೆಯನ್ನು ಗಾಢವಾಗಿ ಅನುಭವಿಸಿರಬಹುದು. ಭೂಪೇನ್ ಅವರ ನೂರಾರು ಹಾಡುಗಳನ್ನು ಸಂಗ್ರಹಿಸಿದ್ದೇನೆ. ಕೇಳಿ ಮನತಣಿಸಿಕೊಂಡಿದ್ದೇನೆ.

60-70ರ ದಶಕದಲ್ಲಿ ಭೂಪೇನ್ ಹಜಾರಿಕಾ ಒಬ್ಬ ಜನರ ನಡುವಿನ ಕಲಾವಿದರಾಗಿದ್ದವರು. ಇಪ್ಟಾದಂತಹ ಸಾಂಸ್ಕೃತಿಕ ಚಳುವಳಿಯೊಂದಿಗೆ ನಿಕಟವಾಗಿದ್ದವರು. ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಶಾಸಕರಾಗಿಯೂ ಆಯ್ಕೆಯಾಗಿದ್ದವರು.

ಆದರೆ ಅವರು ತಮ್ಮ ಬದುಕಿನ ಕಡೆಗಾಲದಲ್ಲಿ ತಾವು ಬದುಕಿನುದ್ದಕ್ಕು ನಂಬಿದ ಆದರ್ಶಗಳಿಗೆ ಬೆನ್ನು ತಿರುಗಿಸಿ, ಅದೇನೋ ಅರುಳು ಮರುಳು ಕವಿದು 2004ರಲ್ಲಿ ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಿದರು. ಆದರೆ ಕಾಂಗ್ರೆಸ್ ಅಭ್ಯರ್ಥಿ ಕೃಪ್ ಚಲಿಹಾ ಎದುರು ಸೋಲನುಭವಿಸಿದರೆನ್ನುವುದು ಬೇರೆ ಮಾತು.

ಈಗ ಅವರಿಗೆ ಮರಣೋತ್ತರ ‘ಭಾರತ ರತ್ನ’ ಲಭಿಸಿರುವುದು ಅವರು ತಮ್ಮ ಜೀವನವಿಡೀ ಬದುಕಿದ ಗಟ್ಟಿ ಆದರ್ಶಗಳಿಗಿಂತಲೂ ಅವರು ಕಡೆಗಾಲದಲ್ಲಿ ಎಡವಿ ಬಿದ್ದ ಕಾರಣಕ್ಕೆ ಎಂಬುದು ಅವರೊಂದಿಗೆ ಭಾರತ ರತ್ನ ಪಡೆದ ಇನ್ನಿಬ್ಬರನ್ನು ನೋಡಿದಾಗ ಸ್ಪಷ್ಟವಾಗುವ ಸಂಗತಿ.ಸಂಭ್ರಮಿಸೋಣ ಎಂದರೂ ಸಂಕಟ ಸಂಭ್ರಮಿಸದೇ ಇರೋಣ ಎಂದರೂ ಸಂಕಟ.

ಹರ್ಷಕುಮಾರ್ ಕುಗ್ವೆ

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version