ರಾಜಕೀಯ
ಬಿಜೆಪಿ, ಕಾಂಗ್ರೆಸ್, ಆರೆಸ್ಸೆಸ್ ನ ಎರಡು ಮುಖಗಳು ಮತ್ತು ಮುಸ್ಲಿಮರು
ಭಯಮುಕ್ತ, ಹಸಿವು ಮುಕ್ತ, ಸದೃಢ ಸಮಾಜದ ನಿರ್ಮಾಣ ಕಾಂಗ್ರೆಸ್ ನ ಈ ಬಾರಿಯ ಚುನಾವಣೆಯ ತಲೆಬರಹ. ಈ ಕುರಿತು ಬ್ಯಾನರ್ ಗಳು, ಭಿತ್ತಿಪತ್ರಗಳು ಎಲ್ಲೊಂದರಲ್ಲಿ ರಾರಾಜಿಸುತ್ತಿದೆ. ಅಹಿಂದ ಮಂತ್ರ ಸದಾ ಜಪಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಜನರಲ್ಲಿ ಅದರಲ್ಲೂ ಮುಸ್ಲಿಮರಲ್ಲಿ ಭೀತಿಯ ಗಂಟೆ ಬಡಿದು ರಾಜಕೀಯ ನಡೆಸುತ್ತಿದೆ.
ಧರ್ಮ ರಾಜಕೀಯ, ಜಾತಿ ರಾಜಕೀಯ, ಹೆಣ ರಾಜಕೀಯ, ಹತ್ಯಾ ರಾಜಕಾರಣಗಳಿಗೆ ರಾಜ್ಯದಲ್ಲಿ ಕೊಂಚ ತೆರೆ ಬಿದ್ದರೆ, ಇತ್ತ ಭೀತಿಯ ರಾಜಕೀಯ ಟ್ರೆಂಡ್ ಪ್ರಾರಂಭವಾಗಿದೆ. ಕಳೆದ 5 ವರ್ಷಗಳಲ್ಲಿ ರಾಜ್ಯದಲ್ಲಿ ಹರಿದ ರಕ್ತಗಳಿಗೆ- ಕಾಂಗ್ರೆಸ್ ಬಿಜೆಪಿಯೆಡೆಗೆ, ಬಿಜೆಪಿ ಕಾಂಗ್ರೆಸ್ ನೆಡೆಗೆ ಬೊಟ್ಟು ಮಾಡಿದರೆ, ಇವೆರಡರ ಮಧ್ಯೆ ಇರುವ ಆರೆಸ್ಸೆಸ್ ಮಾತ್ರ ಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಬೆಂಬಲವನ್ನು ಕಾಂಗ್ರೆಸ್ ಮತ್ತು ಬಿಜೆಪಿಗೆ ಮಾಡಿ ಮುಗಿಸಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಆರೆಸ್ಸೆಸ್ ನ ಎರಡು ಮುಖಗಳು. ಬಿಜೆಪಿಯವರು ಮುಸ್ಲಿಮರನ್ನು ಬಹಿರಂಗವಾಗಿ ವಿರೋಧಿಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಮುಸ್ಲಿಮರ ಅಧಃಪತನಕ್ಕೆ ದೇಶದಲ್ಲಿ ಕಾರಣವಾಗಿದೆ. ಈ ಬಗ್ಗೆ ಅವಲೋಕಿಸಿದರೆ ಬಿಜೆಪಿಗಿಂತಲೂ ಕಾಂಗ್ರೆಸ್ ಮುಸಲ್ಮಾನರಿಗೆ ಅತ್ಯಂತ ಅಪಾಯಕಾರಿ.
ಬಿಜೆಪಿ ಮತ್ತು ಕಾಂಗ್ರೆಸ್ ಮುಸ್ಲಿಮರನ್ನು ಇಂದು ಪುಟ್ಬಾಲ್ ರೀತಿಯಲ್ಲಿ ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಗೆ ಮುಸ್ಲಿಮರು ಕೇವಲ ಮತಬ್ಯಾಂಕ್ ಅಷ್ಟೆ. ಇಂದು ದೇಶದ ಮುಸ್ಲಿಮರಲ್ಲಿ ಬಿಜೆಪಿ, ಆರೆಸ್ಸೆಸನ್ನು ತೋರಿಸಿ ಭಯವನ್ನು ತೋರಿಸಿ, ಭೀತಿಯನ್ನು ಉಂಟುಮಾಡಿ ಹೊಡೆದು ಆಳುವ ರಾಜಕೀಯ ಕಾಂಗ್ರೆಸ್ ಮಾಡುತ್ತಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶದಲ್ಲಿ ಮುಸ್ಲಿಮರನ್ನು ಇಬ್ಭಾಗಗೊಳಿಸಿ, ಭಾರತದ ವಿಭಜನೆಗೆ ಕಾಂಗ್ರೆಸ್ ಕಾರಣವಾಯಿತು. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ದೇಶದಲ್ಲಿ ಹಿಂದೂ- ಮುಸ್ಲಿಮರ ಮಧ್ಯೆ ಭೀತಿ ಸೃಷ್ಟಿಸಿ ಆಂತರಿಕ ಅಭದ್ರತೆಯನ್ನು ಸದ್ದಿಲ್ಲದೆ ಮಾಡುತ್ತಿದೆ ಎಂದರೆ ತಪ್ಪಾಗಲಾರದು.
ಮುಸ್ಲಿಮರ ಅಸುರಕ್ಷೆತೆಯನ್ನು ಬಂಡವಾಳ ಮಾಡಿಕೊಂಡ ಕಾಂಗ್ರೆಸ್. ನಿಜವಾಗಿಯೂ ಜನರಲ್ಲಿ ಭಯವನ್ನು, ಭೀತಿಯನ್ನು ಉಂಟುಮಾಡಿದೆ. ಬಿಜೆಪಿಯನ್ನು ತೋರಿಸಿ, ರಾಜಕೀಯ ಲಾಭ ಪಡೆಯುವುದೇ ಕಾಂಗ್ರೆಸ್ ನ ಪ್ರಮುಖ ತಂತ್ರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶದಲ್ಲಿ ಗೋಹತ್ಯೆ ನಿಷೇಧ ಮಾಡುತ್ತಾರೆ, ಮುಸ್ಲಿಮರಿಗೆ ರಕ್ಷಣೆ ಇಲ್ಲ. ಮುಸ್ಲಿಮರ ಹತ್ಯೆ ನಡೆಯುತ್ತದೆ. ಹಾಗಾಗಿ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ಬಾರದ ರೀತಿಯಲ್ಲಿ ತಡೆದು ಮುಸಲ್ಮಾನರನ್ನು ರಕ್ಷಿಸಿಕೊಳ್ಳಬೇಕು. ಅದಕ್ಕಾಗಿ ಕಾಂಗ್ರೆಸ್ಸನ್ನು ಗೆಲ್ಲಿಸಬೇಕು ಎಂದು ಜನರನ್ನು ಬೆದರಿಸಿ ರಾಜಕೀಯ ಮಾಡುತ್ತಿದ್ದು, ಬಿಜೆಪಿಗೆ ಪರ್ಯಾಯ ಕಾಂಗ್ರೆಸ್ ಎನ್ನುವ ಭ್ರಮೆಯನ್ನು ಮುಸ್ಲಿಮರಲ್ಲಿ ಉಂಟು ಮಾಡುವ ಮೂಲಕ ಮುಸ್ಲಿಮರು ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯದಂತೆ ತಡೆಹಿಡಿದಿದ್ದಾರೆ. ದೇಶದಲ್ಲಿ 172 ಮಿಲಿಯನ್ ಮುಸ್ಲಿಮರಿದ್ದು ಅವರ ರಾಜಕೀಯ ಪ್ರಾಶಸ್ತ್ಯವನ್ನು ಸೀಮಿತಗೊಳಿಸಿ ಅವರ ರಾಜಕೀಯ ಬೆಳವಣಿಗೆಯನ್ನು ತಡೆ ಹಿಡಿದಿದೆ.
60 ವರ್ಷಗಳ ಕಾಲ ದೇಶದಲ್ಲಿ ಕಾಂಗ್ರೆಸ್ ದೇಶದ ದಲಿತರ, ಹಿಂದುಳಿದವರ, ಮುಸಲ್ಮಾನರ, ಕ್ರೈಸ್ತರ ಅಭಿವೃದ್ಧಿ ಮಾಡಿ ಅಧಿಕಾರ ಪಡೆದದ್ದಲ್ಲ. ಆರೆಸ್ಸೆಸ್ ನ ಕೋಲು, ಚಡ್ಡಿಗಳನ್ನು ತೋರಿಸಿ ಬೆದರಿಸಿ ಅದು ನಿರಂತರ ಅಧಿಕಾರವನ್ನು ಪಡೆಯಿತು. ಮನುವಾದದ ಮೃದು ಸಿದ್ದಾಂತಗಳು ಕಾಂಗ್ರೆಸ್ ನ ಜೀವಾಳವಾಗಿದೆ. ಹಾಗಾಗಿ ಬಿಜೆಪಿ ದೇಶದ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ನೇರ ವಿರೋಧಿಯಾಗಿದೆ. ಕಾಂಗ್ರೆಸ್ ನಾನು ಬಿಜೆಪಿಯಿಂದ ರಕ್ಷಿಸುತ್ತೇನೆಂದು ಹೇಳಿ ಬಳಿಕ ಬೆನ್ನಿಗೆ ಚೂರಿ ಹಾಕಿದ ಪಕ್ಷವಾಗಿದೆ. ಇವೆರಡರ ಮೂಲ ಉದ್ದೇಶ ಒಂದೇ ಆಗಿದೆ. ಆದಿವಾಸಿಗಳ ಬಳಿಕ ಎರಡನೇ ದರ್ಜೆಯ ಜೀವನವನ್ನು ಮುಸ್ಲಿಮರು ನಡೆಸುತ್ತಿದ್ದಾರೆ. ಅಂದರೆ ದಲಿತರಿಗಿಂತಲೂ ಮುಸ್ಲಿಮರು ಆರ್ಥಿಕವಾಗಿ, ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ. ಲಕ್ಷಾಂತರ ರೂ. ಖರ್ಚುಮಾಡಿ ಮುಸ್ಲಿಮರ ಕಣ್ಣಿಗೆ ಮಣ್ಣೆರೆಚಲು ಸಾಚಾರ್ ಕಮಿಟಿ ವರದಿಯನ್ನು ಮಾತ್ರ ಸರಕಾರ ಸಿದ್ಧಪಡಿಸಿದೆಯೇ ಹೊರತು ಅದರಲ್ಲಿ ಸೂಚಿಸಿರುವ ತಕ್ಷಣ ವರದಿ ಜಾರಿ ಮಾಡಬೇಕೆಂಬುವುದನ್ನು ಯುಪಿಎ ಸರಕಾರ ಮಾಡಿಲ್ಲ. ಕಾಂಗ್ರೆಸ್ ಸರಕಾರವಿರುವ ಯಾವ ರಾಜ್ಯದಲ್ಲೂ ಮಾಡಿಲ್ಲ. ನನೆಗುದಿಗೆ ಬಿದ್ದ ಸಾಚಾರ್ ಕಮಿಟಿ ವರದಿಯನ್ನು ಕಾಂಗ್ರೆಸ್ ಸರಕಾರ ಜಾರಿಗೆ ತಂದಿಲ್ಲ, ಅದನ್ನು ಕೇಂದ್ರ ಸರಕಾರವೇ ಮಾಡಬೇಕೆಂದಲ್ಲ, ರಾಜ್ಯ ಸರಕಾರವು ಜಾರಿಗೆ ತರಬಹುದು.
ದೇಶದಲ್ಲಿ 25% ರಷ್ಟು 6-14 ವರ್ಷದವರೆಗಿನ ಮುಸ್ಲಿಂ ಮಕ್ಕಳು ಶಾಲೆಯ ಬಾಗಿಲನ್ನೇ ಕಂಡಿಲ್ಲ. ಮುಸ್ಲಿಮರಿಗೆ ಸಾಮಾಜಿಕ ಭದ್ರತೆಯನ್ನು ನೀಡಿಲ್ಲ. ಮುಸ್ಲಿಮರಿಗೆ ಸಿಗಬೇಕಾದ ರಾಜಕೀಯ, ಸಾಮಾಜಿಕ ಭದ್ರತೆ 60 ವರ್ಷಗಳಲ್ಲಿ ಕಾಂಗ್ರೆಸ್ ಕಲ್ಪಿಸಿಲ್ಲ. ಅಂಕಿ ಅಂಶಗಳನ್ನು ನೋಡಿದರೆ ದೇಶದಲ್ಲಿ ವಿವಿಧ ಉನ್ನತ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುವ ಮುಸ್ಲಿಮರ ಶೇಕಡಾವಾರು ಪಾಲುದಾರಿಕೆ 2%-3% ಗಳಿಗೆ ಸೀಮಿತವಾಗಿದೆ. ಆರ್ಥಿಕವಾಗಿ ಅತ್ಯಂತ ದುರ್ಬಲರಾಗಿರುವ ಮುಸ್ಲಿಮರು ಶಿಕ್ಷಣ, ಮೂಲಸೌಕರ್ಯ, ರಾಜಕೀಯ ಪ್ರಾತಿನಿಧ್ಯ ಎಲ್ಲದರಿಂದಲೂ ವಂಚಿತರಾಗಿದ್ದಾರೆ.
ಅಹಿಂದ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರಕಾರ ಬಜೆಟ್ ನಲ್ಲಿ ಯೋಜನೆಗಳನ್ನು ಜಾರಿಗೆ ತರುತ್ತದೆ ಹೊರತು ಅದು ಯಾವ ಕಟ್ಟ ಕಡೆಯ ಫಲಾನುಭವಿಗಳಿಗೂ ತಲುಪುವುದಿಲ್ಲ. ಅಹಿಂದ ಎನ್ನುವುದು ಒಂದು ಅಲೆ, ಬಲವಂತದ ರಾಜಕಾರಣ ಅಷ್ಟೇ. ಈಗಿರುವುದು ಸಹಕಾರ ರಾಜಕಾರಣವೇ ಹೊರತು ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ರಾಜಕಾರಣ ಅಲ್ಲ . ದೇಶದಲ್ಲಿ ದಲಿತ, ಹಿಂದುಳಿದ ವರ್ಗದವರು, ಮುಸ್ಲಿಂ, ಕ್ರಿಶ್ಚಿಯನ್ನರು ಒಗ್ಗಟ್ಟಾಗದಂತೆ ನೋಡಿಕೊಳ್ಳುವ ಹುನ್ನಾರಗಳು ಕೂಡ ಕಾಂಗ್ರೆಸ್ ನಿಂದ ನಡೆಯುತ್ತಿದೆ.
ಕಾಂಗ್ರೆಸ್ ಆಡಳಿತದ ಕರ್ನಾಟಕ ಇಂದು ಕೋಮುಗಲಭೆಯಲ್ಲಿ ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಅಪರಾಧಗಳಲ್ಲಿ 2ನೇ ಸ್ಥಾನದಲ್ಲಿ ಇವೆ. ಇನ್ನು ಜೆಡಿಎಸ್ ಗೆದ್ದರೆ ಬಿಜೆಪಿ ಗೆದ್ದಂತೆ ಎಂದು ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ಹೊರತು ಪಡಿಸಿ ಬೇರೆ ಎಲ್ಲಾ ಪಕ್ಷಗಳು ಮುಸ್ಲಿಮರ ವಿರೋಧಿಯಾಗಿದೆ ಎಂಬ ಭಾವನಾತ್ಮಕ ಬ್ಲ್ಯಾಕ್ ಮೇಲ್ ಮಾಡುತ್ತಿದೆ. ಎಸ್ ಡಿಪಿಐ, ಎಮ್ ಐ ಎಮ್, ಬಿಎಸ್ಪಿ ಇಂತಹ ಯಾವುದೇ ಪಕ್ಷಗಳ ಕಡೆ ಜನರು ವಾಲದಂತೆ ಬೆದರಿಕೆ ರಾಜಕೀಯವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಮುಸ್ಲಿಮರ ಸರಣಿ ಹತ್ಯೆ, ಗುಜರಾತ್ ಹತ್ಯಾಕಾಂಡ, ನುಸ್ರತ್ ಜಹಾನ್ ನಕಲಿ ಎನ್ ಕೌಂಟರ್, ಬಾಬರಿ ಮಸೀದಿ ಅನ್ಯಾಯ, ಮುಸ್ಲಿಂ ವಿರೋಧಿ ಕಾನೂನು ಜಾರಿಗೊಳಿಸಿ ವಿಚಾರಣೆಯ ನೆಪದಲ್ಲಿ ಖಾಕಿಗಳು ದೇಶದಲ್ಲಿ ಅಮಾಯಕ ಮುಸ್ಲಿಮರನ್ನು ಜೈಲಿಗೆ ತಲ್ಲಿದ್ದು ಸತ್ಯ.
ದೇಶದಲ್ಲಿ ರೈಲ್ವೇ ಇಲಾಖೆ ಬಳಿಕ ಅತ್ಯಧಿಕ ಭೂಮಿಯನ್ನು ವಕ್ಫ್ ಇಲಾಖೆ ಹೊಂದಿದ್ದು, ಮುಸ್ಲಿಮರ ಹೆಸರಿನಲ್ಲಿ ನೂರಾರು ಪೂರ್ವಿಕರು ದೇವರ ಹೆಸರಿನಲ್ಲಿ ವಕ್ಫ್ ಮಾಡಿದ ಭೂಮಿಗಳಿವು. ಇಡೀ ದೇಶದಲ್ಲಿ 4 ಲಕ್ಷಕ್ಕೂ ಅಧಿಕ ಎಕರೆ ಭೂಮಿಯನ್ನು ವಕ್ಫ್ ಇಲಾಖೆ ಹೊಂದಿದೆ. ಈ ಭೂಮಿ ಮುಸ್ಲಿಮರಿಗೆ ಸದ್ಬಳಕೆಯಾಗಿದ್ದರೆ, ಹಂಚಿಕೆಯಾಗಿದ್ದರೆ ಇಂದು ದೇಶದಲ್ಲಿ ಮುಸ್ಲಿಮರು ಈ ರೀತಿ ದಯಾನೀಯ ಪರಿಸ್ಥಿತಿಗೆ ತಲುಪುತ್ತಿರಲಿಲ್ಲ. ಆದರೆ ಈ ಆಸ್ತಿ ಯಾರದೋ ಪಾಲಾಗಿದೆ. ಸಾವಿನೂಟದಂತೆ ಇದನ್ನು ಕಂಡ ಕಂಡವರು ತಿಂದು ತೇಗುತ್ತಿದ್ದಾರೆ. ಬಾಬರಿ ಮಸೀದಿಯ 2 ಎಕ್ರೆ ಭೂಮಿಗೆ ಹೋರಾಟ ಮಾಡುವ ಜನರಿಗೆ ಈ ಅನ್ಯಾಯದ ಪರಿವೆಯೇ ಇಲ್ಲ. ಯಾಕೆಂದರೆ ಇದನ್ನು ತಿಂದು ತೇಗಿರುವುದು ರಾಜಕೀಯ ನಾಯಕರು, ಉದ್ಯಮಿಗಳು, ಇದರಲ್ಲಿ ರಾಜಕೀಯ ಮಾಡಲು ಸಾಧ್ಯವಿಲ್ಲ.
ಕಾಂಗ್ರೆಸ್ ನ ಆಡಳಿತದಲ್ಲೇ ದೇಶದ ಭವ್ಯ ಬಾಬರಿ ಮಸೀದಿ ಧ್ವಂಸಗೊಂಡಿದ್ದು, ಇಂದಿಗೂ ಇದು ಕಾಂಗ್ರೆಸ್ ನ ಪ್ರಮುಖ ರಾಜಕೀಯ ಅಸ್ತ್ರವಾಗಿದೆ. ಅಲ್ಲದೇ, ಚರಿತ್ರೆಯ ಪುಟಗಳಲ್ಲಿ ದೇಶದಲ್ಲಿನ ಕೋಮು ದ್ವೇಷಕ್ಕೆ ದಲಿತ, ಹಿಂದುಳಿದ ವರ್ಗಗಳ, ಕ್ರೈಸ್ತರ, ಮುಸ್ಲಿಮರ ಭಾವ್ಯಕ್ಯತೆಗೆ ಬೆಂಕಿ ಇಟ್ಟ ಚರಿತ್ರೆಯಾಗಿದೆ. ರಾಜ್ಯ ಕಾಂಗ್ರೆಸ್ ಆಡಳಿತದಲ್ಲಿ 15 ಲಕ್ಷ ಕೋಟಿ ರೂ. ಮೌಲ್ಯದ ವಕ್ಫ್ ಅವ್ಯವಹಾರ ಹೊರಬಂದಿತ್ತು. ಈ 15 ಲಕ್ಷ ಕೋಟಿಯನ್ನು ರಾಜ್ಯದ ಮುಸ್ಲಿಮರ ಕಲ್ಯಾಣಕ್ಕಾಗಿ ಉಪಯೋಗಿಸಿದ್ದರೆ, ದೆಹಲಿ ಹೈಕೋರ್ಟ್ ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಾಜಿಂದರ್ ಸಿಂಗ್ ಸಾಚಾರ್, ಮುಸ್ಲಿಂ ಸಮುದಾಯದಲ್ಲಿ ಕೆಲವರಿಗೆ ಅಗತ್ಯ ಸೌಲಭ್ಯವು ಸಿಕ್ಕಿಲ್ಲ ದಲಿತರಿಗಿಂತ ಕೆಲ ಮುಸ್ಲಿಮರು ಹಿಂದುಳಿದಿದ್ದಾರೆ ಅವರ ಮೇಲೆ ಕಾಳಜಿ ಇಲ್ಲ. ಕಾಳಜಿ ಇದ್ದಿದ್ದರೆ ಸಾಚಾರ್ ವರದಿ ಜಾರಿಗೊಳಿಸಲಿ ಎಂದು ಹೇಳುವ ಅನಿವಾರ್ಯತೆ ಬರುತ್ತಿರಲಿಲ್ಲ. ಇನ್ನು ಲೆಕ್ಕಕ್ಕಿಲ್ಲದ ಅಲ್ಪಸಂಖ್ಯಾತರ ಇಲಾಖೆ, ಜನಸಾಮಾನ್ಯನಿಗೆ ಇದರ ಉಪಯೋಗವೇನು ಎಂದು ಯಾರಿಗೂ ತಿಳಿದಿಲ್ಲ, ಶಾದಿಭಾಗ್ಯ, ಭ್ರಷ್ಟರ ಭಾಗ್ಯವಾಗಿದೆ. ಅಲ್ಪಸಂಖ್ಯಾತರ ಇಲಾಖೆ ಬಡವರಿಗೆ, ವಿದ್ಯಾರ್ಥಿಗಳಿಗೆ ಕೈಗೆಟಕದಾಗಿದೆ. ಇಲ್ಲಿ ಮಧ್ಯವರ್ತಿಗಳು, ಅಧಿಕಾರಿಗಳದ್ದೇ ರಾಜ್ಯಭಾರವಾಗಿದೆ.
–ಸಿದ್ದಿಕ್ ನೆಲ್ಲಿಗುಡ್ಡೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243