ರಾಜಕೀಯ
ಬೊಮ್ಮಾಯಿ, ಬಿಎಸ್ ವೈ ಅವರಿಂದ ದಲಿತರಿಗೆ ಅವಮಾನ : ಡಿ. ಬಸವರಾಜ್ ಆರೋಪ
ಸುದ್ದಿದಿನ,ದಾವಣಗೆರೆ: ದಲಿತರ ಮನೆಗೆ ಊಟ ಹಾಗೂ ಉಪಾಹಾರಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಹೋಗುವುದೇ ದಲಿತರಿಗೆ ಮಾಡಿದ ದೊಡ್ಡ ಅಪಮಾನ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧೀಜಿಯವರ ನಂತರ ದೇಶದಲ್ಲಿ ನಡೆಯುತ್ತಿರುವ ಬಹುದೊಡ್ಡ ಯಾತ್ರೆ ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ. ಈ ಯಾತ್ರೆಗೆ ಸೇರುತ್ತಿರುವ ಜನ ಸಾಗರವನ್ನು ನೋಡಿ ಬಿಜೆಪಿಗೆ ನಡುಕ ಉಂಟಾಗಿದೆ. ಬಿಜೆಪಿ ನಾಯಕರು ತಲೆ ಕೆಟ್ಟವರಂತೆ ಹೇಳಿಕೆ ನೀಡುವ ಮೂಲಕ ಜನರ ಮುಂದೆ ಬೆತ್ತಲೆಯಾಗಿದ್ದಾರೆ ಎಂದು ಕಿಡಿಕಾರಿದರು.
ನ್ಯಾಯಾಲಯದಿಂದ ವಿಚಾರಣೆಗೆ ದಿನಕ್ಕೊಂದು ಆದೇಶ ಪಡೆಯುತ್ತಿರುವ ಬಿ. ಎಸ್. ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಪುರೋಹಿತ ಶಾಹಿ ಆಧಾರಿತ ಹಿಂದೂ ಧರ್ಮದ ಸನಾತನಿಗಳಾದ ಬಿಜೆಪಿ ನಾಯಕರು ದಲಿತರನ್ನು ಮನುಷ್ಯರೆಂದೇ ಪರಿಗಣಿಸಿಲ್ಲ . ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪನವರು – ದಲಿತರ ಮನೆಗೆ ಭೇಟಿ ನೀಡಿದ್ದೇವೆ ಎನ್ನುವುದೇ ದಲಿತರಿಗೆ ಮಾಡುವ ದೊಡ್ಡ ಅವಮಾನವೆಂದು ಹೇಳಿದರು.
ಬ್ರಾಹ್ಮಣರು, ವೀರಶೈವರು, ಒಕ್ಕಲಿಗರ ಮನೆಗಳೂ ಸೇರಿದಂತೆ ಮೇಲ್ಮಾತಿಯ ಮನೆಗಳಿಗೆ ಭೇಟಿ ನೀಡುವಾಗ ಇದೇ ಅಬ್ಬರದ ಪ್ರಚಾರ ಮಾಡಿ ಹೋಗುವರೇ ? ಇದು ದಲಿತರನ್ನು ಇನ್ನೂ ಅಸ್ಪೃಶ್ಯರೆಂದು ಜಗತ್ತಿಗೆ ಸಾರುವ ನೀಚ ಮನಸ್ಥಿತಿಯನ್ನು ಬಿಜೆಪಿ ನಾಯಕರು ಹೊಂದಿದ್ದಾರೆ. ಅಧಿಕಾರಿಗಳನ್ನು ಮೊದಲೇ ಕಳುಹಿಸಿ ರೆಡ್‌ಲೇಬಲ್ , ಕಣ್ಣ ದೇವನ್ , ಚಹ ಪುಡಿ ತಂದಿಡಲು ಎರಡು ಹೊತ್ತಿನ ಊಟಕ್ಕೂ ಗತಿಯಿಲ್ಲದ ಕುಟುಂಬಗಳಿಗೆ ತಾಕೀತು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವಾಗ ಹುಷಾರಾಗಿರಬೇಕು. ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿದರೆ ಜನರೇ ತಕ್ಕ ಉತ್ತರ ನೀಡುತ್ತಾರೆ ಎಂದರು.
ಭಾರತ್ ಜೋಡೊ ಯಾತ್ರೆಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದೆ. ಇದು ಬಿಜೆಪಿಗರಿಗೆ ನಡುಕ ಹುಟ್ಟಿಸಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ಬಿಜೆಪಿಯ ಜನಸಂಕಲ್ಪ ಯಾತ್ರೆ ಯಾಕೆ ನಡೆಸುತ್ತಿದ್ದಾರೆ. ಅಭಿವೃದ್ಧಿ ಮಾಡದೇ ಇಂತ ಯಾತ್ರೆ ನಡೆಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243