ನೆಲದನಿ

ನೂರು ಉತ್ತರ ; ಸಾವಿರ ಪ್ರಶ್ನೆಗಳನ್ನು ಹೊತ್ತಿರುವ ‘ಗೂಡೆ’ ಪುಸ್ತಕ..!

Published

on

  • ಪರಶುರಾಮ್. ಎ

ದು ಕ್ರಾಂತಿಕಾರಿ ಕವಿ ಲಕ್ಷ್ಮಣ್ ಜೀ 2013ರಲ್ಲಿ ಪ್ರಕಟಿಸಿದ ರಾಜ್ಯದ ಹಲವು ಪತ್ರಿಕೆಗಳಿಗೆ ರಚಿಸಿದ್ದ ಲೇಖನಗಳ ಸಂಗ್ರಹ ಪುಸ್ತಕವೇ “ಗೂಡೆ”. ಈ ಪುಸ್ತಕ ಒಟ್ಟು 47 ಲೇಖನಗಳನ್ನು ಹೊಂದಿದೆ. ಈಗಿನ ಕಾಲದವರಿಗೆ ‘ಗೂಡೆ’ ಎಂಬುದರ ಅರ್ಥವೇ ಗೊತ್ತಿಲ್ಲ.

“ ನಮ್ಮ ಜನಾಂಗದ ಮದುವೆಗಳಲ್ಲಿ ಮುಹೂರ್ತಕ್ಕೆ ಬೇಕಾದ ಬಾಸಿಂಗ, ಕನ್ನಡಿ, ಅಕ್ಕಿ, ಬೆಲ್ಲ, ಹೂವು, ಅರಿಶಿಣ, ಕುಂಕುಮ, ಕಡ್ಡಿ, ಕರ್ಪೂರ, ಕಾಯಿ, ಬಾಳೆಹಣ್ಣು, ಹೊಸಬಟ್ಟೆಗಳನ್ನೆಲ್ಲಾ ಇದರಲ್ಲಿಟ್ಟು ಹೊತ್ತು ತರುತ್ತಿದ್ದರು ಮತ್ತೂ ಇದು ಗೌಡರುಗಳ ಮನೆಯಲ್ಲಿ ಹಲವು ಹಬ್ಬ ನಾಮಕರಣ ತಿಥಿ ಸಮಾರಂಭಗಳಲ್ಲಿ ಸಿಹಿ,ಖಾರ ಅಡುಗೆ ಮಾಡಿದಾಗ ದಲಿತರಿಗೆ ಅನ್ನ ಸಾರು ಇತ್ಯಾದಿ ಆಹಾರಾದಿಗಳನ್ನು ನೀಡುವುದನ್ನು ತರುವ ಸಲುವಾಗಿಯೂ ಈ ‘ಗೂಡೆ ’ ಹೆಚ್ಚು ಬಳಕೆಯಲ್ಲಿತ್ತು ಎಂದು ಇದರರ್ಥ ಲೇಖಕರೆ ತಿಳಿಸಿದ್ದಾರೆ.

ಒಂದು ಕಡೆ ಹಸಿವು ನೀಗಿಸುತ್ತಿದ್ದ ಗೂಡೆ ಮತ್ತೊಂದು ಕಡೆ ನಮ್ಮ ಸಂಪ್ರದಾಯಗಳನ್ನು ಮೆರೆಸುತ್ತಿದ್ದ ಗೂಡೆ ಎಂಬುದಾಗಿ ಉಲ್ಲೇಖಿಸಿದ್ದಾರೆ. ನನಗೆ ನನ್ನ ತಾಯಿಯು ಗೌಡರ ಮನೆಯಿಂದ ಪಡೆದ ಆಹಾರ ಹೊತ್ತು ತರುವ ನೆನಪಿನ ಜೊತೆ ಜೊತೆಯಲ್ಲೆ ಸದಾ ನೆನಪಾಗುತ್ತದೆ ಈ ‘ಗೂಡೆ’. ಇದು ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆಯ ಸಂಕೇತ ಎಂದು ತಿಳಿಸಿದ್ಧಾರೆ. ಇಂತಹ ಕಾರ‍್ಯಗಳಿಗೆ ಬಳಸುವ ‘ಗೂಡೆ’ ಎಂಬ ಹೆಸರನ್ನು ಲೇಖಕರು ತಮ್ಮ ಪುಸ್ತಕಕ್ಕೆ ಬಳಸಿರುವುದು ಈಗೀನ ಸಮುದಾಯಕ್ಕೆ ಪರಿಚಯವಾಗಲಿ ಎಂದು ಸಹ ಇರಬಹುದು. ಗೂಡೆ ಹೆಚ್ಚು ದಲಿತರ ಮನೆಗಳಲ್ಲಿ ಬಳಸುವ ವಸ್ತು ಅದರಲ್ಲೂ ಮದುವೆ ಸಮಯದಲ್ಲಿ ಇದಕ್ಕೆ ಪ್ರಾಶಸ್ತ್ಯ ವಿದೆ.

ಪೇಜಾವರಶ್ರೀಗಳಿಗೆ ಆಹ್ವಾನದಿಂದ ಹಿಡಿದು ಕೆಲವು ದಾರ್ಶನಿಕತೆಯ ವಿಶ್ಲೇಷಣೆ ಬೂಟಾಟಿಕೆಯನ್ನು ಎತ್ತಿ ತೋರಿಸಿವೆ. ಹಿಂದೂ ಸಮಾಜದಲ್ಲಿನ ಕ್ರೌರ್ಯವನ್ನು ತಮ್ಮ ಪುಸ್ತಕದುದ್ದಕ್ಕೂ ಪ್ರಸ್ತುತ ಪಡಿಸುತ್ತಾ ಅಲ್ಲಲ್ಲಿ ತಮ್ಮ ವಿಚಾರವಂತಿಕೆಯಿಂದ ಅದರ ಶೋಷಣೆಯನ್ನು ತಿಳಿಸಿ,ಅವುಗಳ ವಿನಾಶಕ್ಕೆ ಪರಿಹಾರ ಸೂಚಿಸುತ್ತಾ ಬಂದಿದ್ದಾರೆ.

ಹಾವಾಡಿಗರ ಸಮಸ್ಯೆ ಗಿಳಿಶಾಸ್ತ್ರದವರ ಮೇಲಿನ ಪ್ರಾಣಿ ದಯಾ ಸಂಘದ ಹಿಂಸಾಚಾರ, ಪೋಲೀಸರ ದೌರ್ಜನ್ಯ ಕಾನೂನಿನ ದುರುಪಯೋಗ ಪಡಿಸಿಕೊಂಡು ಮಾನವೀಯತೆ ಮರೆಯುವ ಪ್ರಾಣಿ ದಯಾ ಸಂಘದವರಿಗೆ “ನಿಮ್ಮ ಮನೆಗೆ ಹಾವು ಬಂದರೆ ಪ್ರಾಣಿ ದಯಾ ಸಂಘದವರು ಬರ್ತಾರ?” ಲಕ್ಷ್ಮಣ್ ಜೀಯವರ ಪ್ರಶ್ನೆಗೆ ಉತ್ತರ ನೀಡುವುದು ಬಹಳ ಕಷ್ಟದ ಕೆಲಸವೇ! ‘ದಯಾ’ ಇಲ್ಲದ ಸಂಘದವರಿಗೆ ‘ಶಾಸ್ತ್ರ‘ಗೊತ್ತಾ? ಎಂಬ ಲೇಖನದಲ್ಲಿ ಗಿಳಿಶಾಸ್ತ್ರವೆಂಬುದು ಒಂದು ಕುಲಕಸುಬು ಆದ್ದರಿಂದ ಜೀವನ ನಡೆಸುವ ಕುಟುಂಬಗಳಿಗೆ ಪ್ರಾಣಿ ದಯಾ ಸಂಘ ಕಾನೂನು, ಪೋಲಿಸ್ ಖಾಯಿದೆ ಇವೆಲ್ಲವೂ ಅವರ ಕಸುಬಿಗೆ ಹೇಗೆ ಉರುಳಾಗಿ ಪರಿಣಮಿಸಿದೆ ಎಂದು ಚಿತ್ರಿತವಾಗಿದೆ.

ಒಂದೊಂದು ಲೇಖನವು ಸಹ ಹಲವು ವಿಷಯಗಳನ್ನು ಲೇಖಕರು ಎಷ್ಟು ಸೂಕ್ಷ್ಮವಾಗಿ ಹಾಗೂ ವರ್ತಮಾನದಲ್ಲಿನ ಹಲವು ಘಟನೆಗಳಿಗೆ ಪ್ರತಿಕ್ರಿಯಿಸುತ್ತ ತಮ್ಮ ವಿಚಾರ ಮಂಡಿಸಿದ್ದಾರೆ, ಅಲ್ಲದೆ ಅವುಗಳನ್ನು ಪ್ರಶ್ನಿಸಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರ ದೊರಕುವುದು ಕಷ್ಟ ಸಾಧ್ಯವಾಗಿದೆ. ತತ್ವಪದ ನಾರಾಯಣಪ್ಪ, ಇಸ್ಮಾಯಿಲ್ ನಂತಹ12 ವರ್ಷದ ಮುಸ್ಲಿಂ ಬಾಲಕನ ಬದುಕಿನ ವ್ಯಕ್ತಿ ಚಿತ್ರವನ್ನು ಸಹ ಅವರ ಬದುಕಿನ ಸಂಧಿಗ್ಧತೆ ಸರ್ಕಾರ ಅವರಿಗೆ ನೀಡಬೇಕಾದ ಸವಲತ್ತುಗಳ ಕೋರಿಕೆ, ಕಡೆಗಣಿಸಲ್ಪಟ್ಟಂತಹ ವ್ಯಕ್ತಿ ಸಮುದಾಯಗಳನ್ನು ಪರಿಗಣಿಸುವಂತೆ ಲೇಖಕರು ನೀಡುವ ಮಾರ್ಗದರ್ಶನ. ಸರ್ಕಾರ ಮತ್ತು ಜನರ ನಡುವಿನ ಇಂಥವರ ಬದುಕಿನ ಚಿತ್ರಣ ಈ ಪುಸ್ತಕದಲ್ಲಿದೆ.

ಒಟ್ಟಿನಲ್ಲಿ ಹೇಳಬೇಕಾದರೆ “ಗೂಡೆ” ಪುಸ್ತಕದಲ್ಲಿನ 47 ಲೇಖನಗಳು ಒಂದೊಂದು ವಿಚಾರವು ನಮ್ಮ ಸಮಾಜಕ್ಕೆ ಹಿಡಿದ ಕನ್ನಡಿಯಂತಿವೆ. ಸರ್ಕಾರಕ್ಕೆ ಸವಾಲು ಎಸೆಯುತ್ತಾ ಹಲವು ಪ್ರಶ್ನೆಗಳನ್ನು ಮುಂದಿಡುತ್ತಾ ಸಾಗುತ್ತವೆ. ಉತ್ತರ ಕೊಡುವುದಾಗಲೀ ಹುಡುಕುವುದಾಗಲೀ ಕಷ್ಟವೇ!.

ಲೇಖನಗಳು ಓದುಗನ ವಿಚಾರವನ್ನು ವಿಸ್ತಾರಗೊಳಿಸುತ್ತಾ ಸಮಾಜದಲ್ಲಿನ ಹಲವು ಪ್ರಶ್ನೆಗಳಿಗೆ ಉತ್ತರ, ವಿಶ್ಲೇಷಣೆ ವಿವರಣೆ ನೀಡುತ್ತಾ ಸಾಗುವುದರಿಂದ ಓದುಗನ ಜ್ಞಾನ ವಿಸ್ತರಣೆಯಾಗುವುದರಲ್ಲಿ ಸಂಶಯವಿಲ್ಲ!.

ಒಟ್ಟಾರೆ ಕ್ರಾಂತಿಕಾರಿ ಕವಿ ಲಕ್ಷ್ಮಣ್ ಜೀ ಯವರ ‘ಗೂಡೆ’ ಪುಸ್ತಕವು ನೂರು ಉತ್ತರ, ಸಾವಿರ ಪ್ರಶ್ನೆಗಳನ್ನು ಹೊತ್ತಿರುವುದು ಈ ಪುಸ್ತಕ ಓದಿದವನ ಮನಸ್ಸಿಗೆ ಹಾಗೂ ಸಮಾಜಕ್ಕೆ ದೊರೆಯುವುದಂತೂ ಖಂಡಿತಾ. ಒಬ್ಬ ವಿಚಾರವಂತಿಕೆಯ ಹರಡುವಿಕೆಯಲ್ಲಿ ಈ ಪುಸ್ತಕ ಹೆಚ್ಚು ಮನನೀಯವೂ ಗೌರವಾರ್ಹವೂ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version