ಅಂತರಂಗ

ವಿಮರ್ಶೆ | ಮೇಘದೂತದಲ್ಲಿ ಕಾವ್ಯ ಪ್ರತಿಮೆ

Published

on

ಪೂರ್ವಸೂರಿಗಳೊಡನೆ’ ಪುಸ್ತಕ ಆಯ್ದ ಉಪನ್ಯಾಸಗಳ ಒಂದೇ ಕಟ್ಟು,ಇವುಗಳಲ್ಲಿ ಮೊದಲ ನಾಲ್ಕು ಸೀತಾ ಪರಿತ್ಯಾಗಕ್ಕೆ ಸಂಬಂಧಿಸಿವೆ, ಐಯ್ದನೆಯ ಹಾಗೂ ಕಡೆಯ ಉಪನ್ಯಾಸ ‘ಮೇಘದೂತದಲ್ಲಿ ಕಾವ್ಯ ಪ್ರತಿಮೆ’ ಎಂಬುದು.

ಮೂರ್ತಿರಾಯರು ಇವನ್ನು ಉಪನ್ಯಾಸ- ಭಾಷಣ ಎಂದು ಕರೆದಿದ್ದಾರೆ. ಈ ಉಪನ್ಯಾಸಗಳಲ್ಲಿರುವುದು ಪ್ರಾಯೋಗಿಕ ವಿಮರ್ಶೆಗೆ ಹತ್ತಿರವಾಗಿ ನಿಲ್ಲುವ ಸಾಹಿತ್ಯ, ಸಂವಾದ,(ಲೇಖಕರು ಶ್ರೇಷ್ಟ ಸಾಹಿತ್ಯ ಕೃತಿಗಳ ಸತತಾಭ್ಯಾಸದತ್ತವಾದ ಬುದ್ದಿ ಭಾವಗಳಿಂದ ಉದ್ದೀಪನಗೊಂಡವರು)
ಮೂರ್ತಿರಾಯರು ಮೇಘದೂತದಲ್ಲಿ ಬರುವ ಪ್ರತಿಮೆಗಳ ಸ್ವರೂಪ ಮತ್ತು ಯಶಸ್ವಿಯತೆಯನ್ನು ಸಂಗ್ರಹವಾಗಿ ಪ್ರಾಯೋಗಿಕ ವಿಮರ್ಶೆ ಮಾದರಿಯಲ್ಲಿ ವಿವೇಚಿಸುತ್ತಾರೆ.

ಮೇಘದೂತದಲ್ಲಿ ಪ್ರತಿಮೆಗಳು “ಸಮಯರೂಪಕಗಳ ನೆರವು ಪಡೆದು ಹೊಂದದಿರುವ ಅಂಶಗಳನ್ನು ಹೊಂದಿದೆ, ಒಗಟನ್ನು ಬಿಡಿಸಿ ಚಮತ್ಕಾರದಲ್ಲಿ ಮುಗಿಯುವಂಥವೂ ಇವೆಯೆಂಬುದನ್ನು ಮೊದಲು ತೋರಿಸುತ್ತಾರೆ, ಆಮೇಲೆ ಅದಕ್ಕಿಂತ ಆಕರ್ಷಕವಾದ, ಕಾವ್ಯೋಚಿತ ಹೊಳಪಿರುವ ಪ್ರತಿಮೆಗಳನ್ನು ಚರ್ಚಿಸುತ್ತಾರೆ ” ಆದರೂ ಇದನ್ನು ಉತ್ತಮ ದರ್ಜೆಯ ಕವಿತೆಗಳೆನ್ನಲಾಗುವುದಿಲ್ಲ, ಇದರಲ್ಲಿ ಕ್ಲಿಷೆಯ ಕಳಂಕವಿದೆ, ಇಲ್ಲಿರುವ ಚಿತ್ರಗಳು ಒಂದಾನೊಂದು ಕಾಲದಲ್ಲಿ ಹೊಚ್ಚಹೊಸ ಕಳೆಯಿಂದ ಮೆರೆದಿದ್ದಿರಬೇಕು, ಈ ಬಳಕೆಯಿಂದ ಮಂಡಿಸಲಾಗಿದೆ, ಕಾಳಿದಾಸ ಯಾರ ಟಂಕಸಾಲೆಯಲ್ಲೊ ಮುದ್ರಿತವಾದ, ಸ್ವಲ್ಪ ಸಮೆದೊ ಇರುವ ನಾಣ್ಯವನ್ನು ಬಳಸಿ ಅಷ್ಟರಲ್ಲೇ ತೃಪ್ತನಾಗಿದ್ದಾನೆ,ತಾನೆ ನಾಣ್ಯವನ್ನು ಎರೆಹೊಯ್ದು ರೂಪಿಸಿಲ್ಲ. ದೊಡ್ಡ ಕವಿಯಾದವನೊಬ್ಬ ಸೋಮಾರಿತನಕ್ಕೆ ತುತ್ತಾಗಿದ್ದಾಗ ಬರೆದ ಕಾವ್ಯಗಳು ಎನಿಸುತ್ತವೆ ಎಂದು ಮೂರ್ತಿರಾಯರು ನಿಲುವನ್ನು ತಾಳುವರು.

ಮತ್ತೆ ಮುಂದುವರಿದು ಮತ್ತೊಂದು ಹಂತದಲ್ಲಿ ” ತಂತಿಯನ್ನು ಮೀಟಿದಾಗ ಆ ನಾಧ ಹಿಂದೆ ಅನುರಣನ ಹೊರಡುವಂತೆ ಕಾಳಿದಾಸನ ಚಿತ್ರದಿಂದ ಅನುಚಿತ್ರ ಹೊರಡುವ ಪ್ರತಿಮೆಗಳನ್ನು ಗುರುತಿಸಲಾಗಿದೆ” ಕೊನೆಯಲ್ಲಿ ” ಇನ್ನೂ ಹೆಚ್ಚು ರಸಸಂಪತ್ತುಗಳು ಅರ್ಥದ ದೃಷ್ಟಿಯಿಂದಲೂ ಪ್ರತಿಮೆ ಸೃಷ್ಟಿ ವಿಧಾನದ ದೃಷ್ಟಿಯಿಂದಲೂ ಹೆಚ್ಚು ಆಸಕ್ತಿಯನ್ನು ಕೆರಳಿಸುವ ಸಂಕೀರ್ಣ ಪ್ರತಿಮೆಗಳನ್ನು ವಿಷ್ಲೇಷಿಸುತ್ತಾರೆ, ಗೌರಿಯ ಹುಬ್ಬು ಗಂಟ್ಟಿಕ್ಕಿದ ಮುಖವನ್ನು ನೋಡಿ ಹಾಸ್ಯಮಾಡಿ ದೊರೆ ನಗುವನು ನಗುತ್ತಾ ಚಂದ್ರಕಿರಣ ಸ್ಪರ್ಶದಿಂದಾಗಿ ಹೊಳೆಯುವ ಅಲೆಗೈಗಳಿಂದ ಶಿವನ ಜುಟ್ಟನ್ನು ಜಗ್ಗಿಸಿದವಳು ಆ ಗಂಗೆ- ಎಂದು ಯಕ್ಷನು ಮೇಘಕ್ಕೆ ಹೇಳುವ ಪರಿಚಯದ ಮಾತುಗಳ ಸೊಗಸು ಸ್ವಾರಸ್ಯಗಳನ್ನು ವಿವರಿಸುತ್ತಾರೆ.

” ಕಾಳಿದಾಸನ ಇತರ ಕಾವ್ಯಗಳಲ್ಲೂ , ನಾಟಕಗಳಲ್ಲೂ, ಶಿವನ ಪ್ರಸ್ತಾಪ ಬರುತ್ತದೆಯಷ್ಟೆ, ಅವುಗಳ ಆಧಾರದ ಮೇಲೆ ಅವನಿಗೆ ಶಿವನ ವಿಷಯದಲ್ಲಿ ಅಪರಿಮಿತವಾದ ಭಕ್ತಿಯಿತ್ತು ಎಂದು ಧಾರಾಳವಾಗಿ ಹೇಳಬಹುದು, ಶಿವ ಅವನಿಗೆ ಇಷ್ಟ ದೈವ, ವಿಶ್ವದಲ್ಲಿ ಅತ್ಯುನ್ನತವಾದುದ್ದರ ಭವ್ಯವಾದ ಪ್ರತೀಕ ಮುಖ್ಯವಾಗಿ ಶಿವ ಕಾಮನನ್ನು ಸುಟ್ಟವನು ಇಷ್ಟಾದರೂ ಕವಿ ಅವನನ್ನು ಈ ಸಂದರ್ಭದ ಮಟ್ಟಿಗೆ ಇಳಿಸಿ ಗಂಗೆಯನ್ನು ಏರಿಸಿದ್ದಾನೆ, ಶಿವ ಪಾರ್ವತಿಯರು ವಾಕ್ಕು ಮತ್ತು ಅರ್ಥ ಇವೆರಡರಲ್ಲಿ ಅಭಿನ್ನವಾದವರು, ಆದರೆ ಕಾಳಿದಾಸ ಪ್ರತಿಭೆಯ ಆಜ್ಞೆಗೆ ಮಣಿದು ಆ ಅಭಿನ್ನತೆಯನ್ನು ಒಡೆದದ್ದರಿಂದಾಗಿ ಚಿತ್ರ ಮತ್ತಷ್ಟು ಕಂಗೊಳಿಸುತ್ತದೆ, ದೈವಿಕವಾದದ್ದಕ್ಕೂ ಮಾನವೀಕವಾದದ್ದಕ್ಕೂ ಇರುವ ಅಂತರ ಕಡಿಮೆಯಾಗಿ ಆ ದಿವ್ಯ ದಂಪತಿಗಳು ನಮಗೆ ಹತ್ತಿರವಾಗುತ್ತಾರೆ”.

ಮೇಘದೂತದಲ್ಲಿ ಕಾವ್ಯ ಪ್ರತಿಮೆಗಳ ಆಯಾಮಗಳನ್ನು ತಿಳಿಸಿ ಬರೆಯುತ್ತಾರೆ, “ಮನಃಶಾಸ್ತ್ರ ಎಷ್ಟೇ ಮುಂದುವರೆದಿದ್ದರೂ ಅಜಾಗ್ರುತ ಮನಸ್ಸಿನ ಕ್ರಿಯೆಯನು ವಿಷ್ಲೇಶಿಸಿ, ವರ್ಗೀಕರಿಸಿ, ಅದರ ವಿವರಗಳನ್ನು ಮನದಟ್ಟು ಮಾಡಿಕೊಡಲಾರರು ಆಂದೋಲನದ ಪುನಃ ಸೃಷ್ಟಿಯನ್ನಂತೂ ಮಾಡಲಾರದು, ಕವಿಯ ಅಂತರಂಗದ ದೃಷ್ಟಿ ಮನಃಶ್ಯಾಸ್ತ್ರ ಪ್ರಕಾರ ತಯಾರು ಮಾಡಬಹುದಾದ ಸಾಧನೆಗಳಿಗಿಂತಲೂ‌ ಶಕ್ತಿಯುತವಾದದ್ದು, ಆದ್ದರಿಂದ ಮಾನವ ಹೃದಯದ ಪರಿಚಯಬೇಕು ಎನ್ನುವವರಿಗೆ ಕಾವ್ಯಾಧ್ಯಯನ ಯಶಸ್ವಿಯಾಗಿ ನೆರವು ಕೊಡಬಲ್ಲದು” (ಹಂಪನಾಗರಾಜಯ್ಯ)
ಹೀಗೆ ಮಾನವೀಯ ನೆಲೆಯ ಗ್ರಹಿಕೆಯಿಂದ ಶೋಧನ ಪ್ರವೃತ್ತಿಯಿಂದ ಉದ್ದೀಪನವಾಗಿರುವ ಕಾರಣದಿಂದ ಎ,ಎನ್ ಮೂರ್ತಿರಾಯರು ಇಲ್ಲಿ ವೈಜ್ಞಾನಿಕವಾಗಿ ಚಿಂತಿಸಿದ್ದಾರೆ.

ಸನಾತನ ಪರಿಸರದ ಬುದ್ದಿಭಾವಗಳು ತಳೆಯಬಹುದಾದ ಪೂರ್ವಗ್ರಹಿಕೆಗಳಾಗಲಿ, ಅತಿಭಾವುಕತೆಯಾಗಲಿ ಇಲ್ಲಿಲ್ಲ, ನಮ್ಮ ಪರಂಪರೆಯಲ್ಲಿ ತಳುಕು ಹಾಕಿಕೊಂಡಿರುವ ಮಿತಿಗಳನ್ನು ನಾವೇ ಪ್ರಶ್ನೆಮಾಡಬಹುದೆ ಎಂಬ ಉದ್ದಟತನವಿಲ್ಲ, ಇಂಗ್ಲೀಷ ಸಾಹಿತ್ಯದ ಓದಿನಿಂದ ಇಲ್ಲಿ ಲೇಖಕರ ವೈಚಾರಿಕ ಪ್ರಖರ ಆಕೃತಿಕವಾಗಿ ಬೆಳಗಿದೆ, ಗಿಡದಿಂದ ಮಗ್ಗುಹುಟ್ಟಿ ತೆಳುಗಾಳಿಗೆ ಅರಳಿ ಮಗಮಗಿಸುವ ಹಾಗೆ ಈ ವಿಮರ್ಶೆಯಲ್ಲಿ ಸಹಜತೆ ಲಾಸ್ಯವಾಡಿದೆ.

– ಸಾಗರಿ (ಪುಷ್ಪಲತ)

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version