ಬಹಿರಂಗ

ಬುದ್ಧ ದಲಿತನಲ್ಲ.‌.!

Published

on

ಈಗಷ್ಟೇ ಸ್ನೇಹಿತರೊಬ್ಬರು “ಸರ್, ಬಾಬಾಸಾಹೇಬ್ ಅಂಬೇಡ್ಕರ್ ರವರು ಬರೆದಿರುವ ‘ಬುದ್ಧ ಅಂಡ್ ಹಿಸ್ ಧಮ್ಮ’ ಕನ್ನಡ ಅನುವಾದ ಓದುವಾಗ ಒಂದಷ್ಟು ಕನ್ ಫ್ಯೂಸ್ ಆಗುತ್ತದೆ. ಕೆಲವು ಮೂಢನಂಬಿಕೆಯ ಅಂಶಗಳಿವೆ, ಕತೆಗಳಿವೆ” ಅಂದರು. ನಿಜ, ಸ್ನೇಹಿತರ ಆ ಮಾತು ಸತ್ಯ. ಆದರೆ ಅಂಬೇಡ್ಕರ್ ರವರು ಆ ಕೃತಿ ಬರೆದಿರುವುದು ತ್ರಿಪಿಟಕಗಳನ್ನು ಆಧರಿಸಿ. ತ್ರಿಪಿಟಕಗಳು ಬರೆಯಲ್ಪಟ್ಟಿರುವುದು 2500 ವರ್ಷಗಳ ಹಿಂದೆ ಅಥವಾ ಆಜೂಬಾಜಿನಲ್ಲಿ. ಅಂದಹಾಗೆ ಅರ್ಥ ಮಾಡಿಕೊಳ್ಳಬೇಕಾದ ಒಂದು ವಿಚಾರ ಬುದ್ಧನ ಕಾಲದಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ, ಅಸ್ಪೃಶ್ಯತೆ ಇರಲಿಲ್ಲ ಎಂಬುದು. ವರ್ಣವ್ಯವಸ್ಥೆ ಇತ್ತು. ಆದರೆ ಅವು ಜಾತಿಗಳಾಗಿ convert ಆಗಿರಲಿಲ್ಲ.

ಹಾಗೆಯೇ ಬುದ್ಧನಗಿಂತ ಮೊದಲು ವೈದಿಕ ಧರ್ಮ ಇತ್ತು, ವೇದಗಳು ಇದ್ದವು. ಹೀಗಿದ್ದರೂ ಬುದ್ಧನ ಕಾಲದಲ್ಲಿ ಶೇಕಡಾ 90 ರಷ್ಟು ಬ್ರಾಹ್ಮಣರು ಬೌದ್ಧ ಧರ್ಮ ಸೇರಿದರು. ಬೌದ್ಧ ಅನುಯಾಯಿಗಳಾದರು. ಬರೀ ಬ್ರಾಹ್ಮಣರಷ್ಟೆ ಅಲ್ಲ ವೈಶ್ಯ, ಕ್ಷತ್ರಿಯ ಎಲ್ಲರೂ ಬೌದ್ಧ ಅನುಯಾಯಿಗಳಾದರು. ಶೂದ್ರ ಸಮುದಾಯ ಇರಲಿಲ್ಲ. ಅಸ್ಪೃಶ್ಯತೆ ಇರಲಿಲ್ಲ. ಆದ್ದರಿಂದ ಈಗಿನ so called ದಲಿತರು ಇರಲೇ ಇಲ್ಲ!

ಅಸ್ಪೃಶ್ಯತೆ ಹುಟ್ಟು ಪಡೆದದ್ದು ಕ್ರಿ.ಶ.400ರ ಸಮಯದಲ್ಲಿ ಗುಪ್ತರ ಆಳ್ವಿಕೆಯಲ್ಲಿ. ಅಂದರೆ ಬುದ್ಧ ಹುಟ್ಟಿದ್ದು ಕ್ರಿ.ಪೂ.600 ಮತ್ತು ಗುಪ್ತರ ಕಾಲ ಕ್ರಿ.ಶ.400 ಈ ಒಂದು ಸಾವಿರ ವರ್ಷಗಳ ನಡುವೆ ಬೌದ್ಧ ಧರ್ಮ ಮತ್ತು ವೈದಿಕ ಧರ್ಮಗಳ ನಡುವೆ ಸಂಘರ್ಷ ನಡೆದಿದೆ. ಇದು ಇತಿಹಾಸದಲ್ಲಿ ದಾಖಲಾಗಿಲ್ಲ. ಈ 1000 ವರ್ಷಗಳ ನಡುವೆ ನಡೆದಿರುವ ಸಂಘರ್ಷದಲ್ಲಿ
ಬೌದ್ಧ ಧರ್ಮಕ್ಕೆ ಅಂಟಿಕೊಂಡೇ ಉಳಿದವರು ಅಸ್ಪೃಶ್ಯರಾದರು ಎಂದು ಅಂಬೇಡ್ಕರರು ಹೇಳುತ್ತಾರೆ.

ಆದ್ದರಿಂದ ಬುದ್ಧನ ಕಾಲದಲ್ಲಿ ದಲಿತರು ಇರಲಿಲ್ಲ, ಅಸ್ಪೃಶ್ಯ ತೆ ಇರಲಿಲ್ಲ. ಅದು ಹುಟ್ಟಿದ್ದು ಬುದ್ಧ ಪರಿನಿರ್ವಾಣ ಅಥವಾ ನಿಧನ ಹೊಂದಿದ 1000 ವರ್ಷಗಳ ನಂತರ. ಹೀಗಿರುವಾಗ ಈಗಿನ ಕಾಲದ ದಲಿತರು ಬುದ್ಧನ ಬಗ್ಗೆ ತಿಳಿದುಕೊಳ್ಳುವಾಗ ಈಗಿನ ಕಾಲದ ತಾರತಮ್ಯ ಮತ್ತು ಸಾಮಾಜಿಕ ವ್ಯವಸ್ಥೆ ಬುದ್ಧನ ಕಾಲದಲ್ಲೂ ಇತ್ತು ಎಂದು ಕಲ್ಪಿಸಿಕೊಂಡು ಓದುವುದು ತಪ್ಪು. ಬದಲಿಗೆ 2000 ಅಥವಾ 2500 ವರ್ಷಗಳ ಹಿಂದೆ ಸಾಮಾಜಿಕ ವ್ಯವಸ್ಥೆ ಮತ್ತು ಜನರ ನಂಬಿಕೆ ಹೇಗಿತ್ತು ಎಂಬುದನ್ನು ಅರ್ಥ ಮಾಡಿಕೊಂಡು ಬುದ್ಧನ ಕುರಿತು ಓದಬೇಕು, ಅಂಬೇಡ್ಕರರ ಬುದ್ಧ ಅಂಡ್ ಹಿಸ್ ಧಮ್ಮ ಓದಬೇಕು. ಆಗ ಬುದ್ಧ ಅರ್ಥ ಆಗುತ್ತಾನೆ. ಇಲ್ಲದಿದ್ದರೆ ಬುದ್ಧನನ್ನೇ ಪ್ರಶ್ನಿಸುವ ಆ ಮೂಲಕ ಅಂಬೇಡ್ಕರನ್ನೇ ಪ್ರಶ್ನಿಸುವ ದಾರ್ಷ್ಟ್ಯ ಅಂತಹವರು ಪ್ರದರ್ಶಿಸಿದ ಹಾಗಾಗುತ್ತದೆ.

ರಘೋತ್ತಮ ಹೊಬ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version