ದಿನದ ಸುದ್ದಿ
ಕೇಂದ್ರ ಸರ್ಕಾರದ 2021-22ರ ಬಜೆಟ್ ವಿಶ್ಲೇಷಣೆ : ಮಿಸ್ ಮಾಡ್ದೆ ಓದಿ
- ಬಿ. ಶ್ರೀಪಾದ ಭಟ್
1. ಕಳೆದ ವರ್ಶದ (2020-21) ಬಜೆಟ್ ವೆಚ್ಚ 34.50 ಲಕ್ಷ ಕೋಟಿ. ಈ ವರ್ಶದ (2021-22) ಬಜೆಟ್ ವೆಚ್ಚ 34.82 ಲಕ್ಷ ಕೋಟಿ. ಅಂದರೆ ಕಳೆದ ವರ್ಶಕ್ಕಿಂತ 0.92% ಮಾತ್ರ ಜಾಸ್ತಿ.
ಕಳೆದ ವರ್ಶ (ಕೋವಿಡ್ ಪೂರ್ವದಲ್ಲಿ ) ಜಿಡಿಪಿ 4% ಇತ್ತು ಮತ್ತು ಕೋವಿಡ್ ನಂತರ ಅದು -7.7% ಗೆ ಕುಸಿಯಿತು.
ಆದರೆ ಈ ಮೋದಿ ಸರಕಾರ ವು ಈ ವರ್ಶದ ಜಿಡಿಪಿ ಗುರಿ 11.1% ಸಾದಿಸುತ್ತೇವೆ ಎಂದು ಜುಮ್ಲಾ ಬಿಡುತ್ತಿದ್ದಾರೆ.
ಅಂದರೆ ಇವರ ಪ್ರಕಾರ ಕಳೆದ ವರ್ಶಕ್ಕೂ ಮತ್ತು ಈ ವರ್ಶಕ್ಕೂ ಬಜೆಟ್ ವೆಚ್ಚ ಕೇವಲ 0.92% ರಶ್ಟು ಹೆಚ್ಚಾಗಿದೆ, ಆದರೆ ಜಿಡಿಪಿ ಮಾತ್ರ 142% ಹೆಚ್ಚಾಗುತ್ತದೆ! ಇದು ಹೇಗೆ ಎಂದು ಪ್ರಶ್ನಿಸುವವನೇ ಮೂರ್ಖ!!! ವಿತ್ತೀಯ ಕೊರತೆ 6.6% ಎಂದು ಅಂದಾಜಿಸಿದ್ದಾರೆ. ಇದಕ್ಕೆ ನೇರವಾಗಿ ಕೋವಿಡ್ ಸಾಂಕ್ರಾಮಿಕ ಕಾಯಿಲೆಯನ್ನು ಹೊಣೆಗಾರಿಕೆ ಮಾಡಿರುವುದು ಸರಕಾರವು ತನ್ನ ವೈಫಲ್ಯದಿಂದ ನುಣಿಚಿಕೊಂಡಂತೆ.
2. ಶೇ. 1% ಪ್ರಮಾಣದಲ್ಲಿರುವ ಅತಿ ಶ್ರೀಮಂತರಿಗೆ ಶೇ. 2% ಪ್ರಮಾಣದ ಸಂಪತ್ತು ತೆರಿಗೆ ವಿದಿಸಿ ಆ ಮೂಲಕ ನೇರ ತೆರಿಗೆ ಸಂಗ್ರಹಿಸಬಹುದಾಗಿತ್ತು. ಆದರೆ ಈ ಕುರಿತು ಪ್ರಸ್ತಾಪವೇ ಇಲ್ಲ. ಬದಲಿಗೆ ಈ ಬಾರಿಯ ಬಜೆಟ್ ನ ಪ್ರಕಾರ ಪರೋಕ್ಷ ತೆರಿಗೆ ಪ್ರಮಾಣ ಮತ್ತಶ್ಟು ಹೆಚ್ಚಲಿದ್ದು , ನೇರ ತೆರಿಗೆ ಪ್ರಮಾಣ ಪರೋಕ್ಷ ತೆರಿಗೆಗಿಂತ ತುಂಬಾ ಕಡಿಮೆಯಾಗಲಿದೆ.
ಅಂದರೆ ಅತಿ ಶ್ರೀಮಂತರು ಮತ್ತಶ್ಟು ಶ್ರೀಮಂತರಾಗುತ್ತಾರೆ, ಬಡವರು ಮತ್ತಶ್ಟು ಬಡವರಾಗುತ್ತಾರೆ. ಯಾವುದೇ ದೇಶದ ಪರೋಕ್ಷ ತೆರಿಗೆಯು ನೇರ ತೆರಿಗೆಗಿಂತ ಹೆಚ್ಚಾಗಿದ್ದರೆ ಆ ದೇಶವೆಂದೂ ಉದ್ದಾರವಾಗುವುದಿಲ್ಲ. ಭಾರತವೂ ಸಹ.
3. ಈ ಬಜೆಟ್ ನ ಪ್ರಸ್ತಾಪದ ಪ್ರಕಾರ ರೈಲ್ವೆ, ಅರಣ್ಯ, ಕೃಶಿ ಇತ್ಯಾದಿ ಸರಕಾರಿ ಇಲಾಖೆಗಳ ಜಮೀನು ಖಾಸಗಿಯವರ ಪಾಲಾಗಲಿದೆ. ಬಡವರ ಬದುಕು ಮತ್ತಶ್ಟು ಹದಗೆಡಲಿದೆ.
4. 2018ರ ಹಣಕಾಸು ವರ್ಶದಲ್ಲಿ ಶಿಕ್ಷಣ, ಆರೋಗ್ಯ ಒಳಗೊಂಡಂತೆ 42 ಸೆಸ್ ಗಳನ್ನು ಜಡಿದ ಮೋದಿ ಸರಕಾರ ಆ ಮೂಲಕ 2.5 ಲಕ್ಷ ಕೋಟಿಯನ್ನು ಸಂಗ್ರಹ ಮಾಡಿತ್ತು. ಆದರೆ ಆ ಮೊತ್ತವನ್ನು ಮರಳಿ ಸಂಬಂದಪಟ್ಟ ಇಲಾಖೆಗಳ ಅಬಿವೃದ್ದಿಗೆ ವೆಚ್ಚ ಮಾಡಲೇ ಇಲ್ಲ. ಉದಾಹರಣೆಗೆ ಸ್ವಚ್ಚ ಭಾರತ ಸೆಸ್ ಎಂದು ಪಡೆದ ಹಣದ 4891 ಕೋಟಿ ಹಣವನ್ನು ಆ ಉದ್ದೇಶಕ್ಕೆ ಬಳಸಲಿಲ್ಲ.
2011ರಿಂದ ರಸ್ತೆ ಸೆಸ್ ಎಂದು ಹಣ ಪಡೆದು 72,726 ಕೋಟಿ ಮೊತ್ತವನ್ನು ಮರಳಿ ಆ ಉದ್ದೇಶಕ್ಕೆ ಬಳಸಲಿಲ್ಲ. 2007 ರಿಂದ 2018ರ ವರೆಗೆ ಸೆಕೆಂಡರಿ ಮತ್ತು ಉನ್ನತ ಶಿಕ್ಷಣದ ಸೆಸ್ ಎಂದು ಬಾಚಿಕೊಂಡ 1 ಲಕ್ಷ ಕೋಟಿ ರೊಕ್ಕವನ್ನು ಮರಳಿ ಶಿಕ್ಷಣಕ್ಕೆ ವೆಚ್ಚ ಮಾಡಲೇ ಇಲ್ಲ. ಹಾಗಿದ್ದರೆ ಆ ಹಣ ಎಲ್ಲಿ ಹೋಯಿತು? ಕೇಳುವರಾರು? ಹೇಳುವರಾರು? ಇದು ಹಗಲು ದರೋಡೆ.
ಈ ಬಾರಿ ಕೃಶಿ ಸೆಸ್ ಎಂದು ಅನೇಕ ತೆರಿಗೆಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಅದರ ಹಣೆಬರಹವೂ ಸಹ ಅಶ್ಟೇನೆ. ಕೃಶಿ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹವಾಗುತ್ತದೆ, ಆದರೆ ಕೃಶಿಗೆ ನಯಾ ಪೈಸೆ ವೆಚ್ಚ ಮಾಡುವುದಿಲ್ಲ. ಇಂತಹ ವಂಚನೆ ಬೇರೆಲ್ಲಿಯೂ ಕಂಡು ಬರುವುದಿಲ್ಲ
5. ಬಂಡವಾಳ ಹಿಂತೆಗೆತ ( disinvestment) ಕ್ಕೆ 1.75 ಲಕ್ಷ ಕೋಟಿ ಗುರಿಯನ್ನು ಪ್ರಸ್ತಾಪಿಸಿದ್ದಾರೆ. ಒಂದು ಸಾರ್ವಜನಿಕ ಬ್ಯಾಂಕ್, ಎರಡು ವಿಮಾ ಕಂಪನಿಗಳನ್ನು ಖಾಸಗೀಕರಣಗೊಳಿಸಲಾಗುವುದು.
6. ವಿಮಾ ವಲಯದಲ್ಲಿನ ವಿದೇಶಿ ಬಂಡವಾಳ ಹೂಡಿಕೆಯನ್ನು (ಎಫ್ ಡಿಐ) ಯನ್ನು ಶೇ. 49 ರಿಂದ
ಶೇ. 74ಕ್ಕೆ ಏರಿಸಲಾಗಿದೆ. ಆತ್ಮ ಬರ್ಬಾದ್.
7. ‘ಯುಜಿಸಿ’ ರದ್ದುಗೊಳಿಸಿ ‘ಉನ್ನತ ಶಿಕ್ಷಣ ಆಯೋಗ’ (HEC) ರಚಿಸಲು ಈ ವರ್ಶ ಚಾಲನೆ. ಶಿಕ್ಷಣದ ಕೇಂದ್ರೀಕರಣಕ್ಕೂ ಚಾಲನೆ. ಇನ್ನು ವಿಶ್ವ ವಿದ್ಯಾಲಯಗಳ ಧನ ಸಹಾಯ ಮತ್ತು ಅನುದಾನವು ನೇರವಾಗಿ ಕೇಂದ್ರ ಶಿಕ್ಷಣ ಇಲಾಖೆಯ ಸುಪರ್ದಿಗೆ ಹೋಗುತ್ತದೆ. ಅಲ್ಲಿಗೆ ಕತೆ ಮುಗೀತು.
8. ಮುಂದಿನ 6 ವರ್ಶಗಳಲ್ಲಿ ದಲಿತ ಸಮುದಾಯದ ವಿದ್ಯಾರ್ಥಿಗಳಿಗಾಗಿ 35,219 ಕೋಟಿ ಹಣ ವೆಚ್ಚ ಮಾಡಲಾಗುವುದು ಎಂದು ಬಜೆಟ್ ಘೋಶಣೆ ಮಾಡಿದ್ದಾರೆ. ಇದು ಎಂತಹ ವಂಚನೆ, ಮರೆಮೋಸವೆಂದರೆ :
ಮೊದಲಿಗೆ ಇದು 1944ರಿಂದ ಜಾರಿಯಲ್ಲಿರುವ ಪ.ಜಾತಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಯೋಜನೆ. ಇದರಲ್ಲಿ ಹೊಸದೇನೂ ಇಲ್ಲ.
ದೇಶದಾದ್ಯಂತ ಸುಮಾರು 57 ಲಕ್ಷ ಪ.ಜಾತಿ ವಿದ್ಯಾರ್ಥಿಗಳಿದ್ದಾರೆ ಎಂದು ಅಂದಾಜಿಸಿದರೆ ಒಬ್ಬ ವಿದ್ಯಾರ್ಥಿಗೆ ಪ್ರತಿ ವರ್ಶ 10,000 ರೂ, ಪ್ರತಿ ತಿಂಗಳು 858 ರೂ. ದೊರಕುತ್ತದೆ. ಈ ಕೇವಲ ಹಣದಿಂದ ಆ ವಿದ್ಯಾರ್ಥಿಗೆ ಯಾವ ಆರ್ಥಿಕ ಅನುಕೂಲವೂ ದೊರಕುವುದಿಲ್ಲ. ಮತ್ತು ಈ ಹಣವನ್ನು ಕೇಂದ್ರ ಮತ್ತು ರಾಜ್ಯಗಳು 60:40 ಅನುಪಾತದಲ್ಲಿ ಕೊಡಬೇಕು. ರಾಜ್ಯ ಎಂದಿಗೂ ಕೊಡುವುದಿಲ್ಲ, ಹಾಗಾಗಿ ಕೇಂದ್ರವೂ ಕೊಡುವುದಿಲ್ಲ.
ಇದು ದಲಿತರಿಗೆ ಮಾಡುವ ವಂಚನೆಯಲ್ಲವೇ?
1. ಶಿಕ್ಷಣವು ಸಂವಿದಾನದ ಶೆಡ್ಯೂಲ್ 7ರ (ಅನುಚ್ಚೇದ 246) ಸಮವರ್ತಿ ಪಟ್ಟಿ ( concurrent list) ಯಲ್ಲಿ ಬರುತ್ತದೆ. (ಎಂಟ್ರಿ 25)
2. ರಾಜ್ಯದ ಪಟ್ಟಿಯಲ್ಲಿನ
(list 2) ಎಂಟ್ರಿ 32ರ ಅನುಸಾರ
‘ಪಟ್ಟಿ 1 ( ಕೇಂದ್ರದ ಪಟ್ಟಿ) ಯಲ್ಲಿರುವ ಸಂಸ್ಥೆಗಳನ್ನು ಹೊರತುಪಡಿಸಿ ವಿಶ್ವವಿದ್ಯಾಯಗಳನ್ನು ಒಳಗೊಂಡಂತೆ ಮಿಕ್ಕ ಸಂಸ್ಥೆಗಳ ಸಂಯೋಜನೆ, ನಿಯಂತ್ರಣ ರಾಜ್ಯದ ವ್ಯಾಪ್ತಿಯಲ್ಲಿ ಬರುತ್ತದೆ’.
ಮೇಲಿನ ಎರಡೂ ಎಂಟ್ರಿಗಳ ಪ್ರಕಾರ ಶಿಕ್ಷಣವು ರಾಜ್ಯಕ್ಕೆ ಸಂಬಂದಪಟ್ಟ ವಿಶಯವಾಗಿದೆ.
ಆದರೆ 2021-22ರ ಕೇಂದ್ರ ಬಜೆಟ್ ನಲ್ಲಿ ನಾಲ್ಕು ವಿಬಿನ್ನ ಕೌನ್ಸಿಲ್ ಗಳನ್ನೊಳಗೊಂಡ ‘ಉನ್ನತ ಶಿಕ್ಷಣ ಆಯೋಗ’ ವನ್ನು ಸ್ಥಾಪಿಸುವುದಾಗಿ ಏಕಪಕ್ಷೀಯವಾಗಿ ಘೋಶಿಸುವುದು ಮೇಲೆ ಪ್ರಸ್ತಾಪಿಸಿದ ಸಂವಿದಾನದ ನೀತಿಸಂಹಿತೆಗೆ ವಿರುದ್ದವಾಗಿದೆ. ಶಿಕ್ಷಣದ ವಿಶಯದಲ್ಲಿ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಬೇಕಿತ್ತು. ಆದರೆ ಕೇಂದ್ರ ಸರಕಾರವು ಇಲ್ಲಿ ಸಂವಿದಾನವನ್ನು ಉಲ್ಲಂಘಿಸಿದೆ.
2. ಬಜೆಟ್ ನಲ್ಲಿ 15,000 ಶಾಲೆಗಳನ್ನು ಸಂಪೂರ್ಣವಾಗಿ ಸದೃಡಗೊಳಿಸಲಾಗುವುದು ಎಂದು ಹೇಳಿದ್ದಾರೆ. ಸ್ವಾತಂತ್ರ್ಯ ಬಂದು 73 ವರ್ಶಗಳ ನಂತರವೂ ಕೇವಲ 15,000 ಶಾಲೆಗಳನ್ನು ಮಾತ್ರ ಬಲಪಡಿಸುವಲ್ಲಿಗೆ ಸರಕಾರವು ಸೀಮಿತಗೊಂಡಿರುವುದು ಎಂತಹ ದುರಂತದ ಸಂಗತಿ!!
3. ಸೇನೆಯಲ್ಲಿ ನೇಮಕಾತಿಗಾಗಿ 100 ಸೈನಿಕರ ಶಾಲೆಗಳನ್ನು ಆರಂಬಿಸುವುದಾಗಿ ಬಜೆಟ್ ನಲ್ಲಿ ಹೇಳಿದ್ದಾರೆ.ಬವಿಶ್ಯದ ತಲೆಮಾರು ಗಳನ್ನು ರೂಪಿಸುವ ನೆರೆಹೊರೆ ಶಾಲಾ ವ್ಯವಸ್ಥೆ, ಸಮಾನ ಶಿಕ್ಷಣದ ಕುರಿತು ಒಂದೂ ಮಾತನಾಡದೆ, ಕೇವಲ ಸೈನಿಕರನ್ನು ತಯಾರಿಸುವುದು ಸರಕಾರದ ಆದ್ಯತೆಯಾದರೆ ಆ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನಿಮ್ಮ ಊಹೆಗೆ ಬಿಡುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243