ಭಾಮಿನಿ
ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ AGE@73..!
- ಆಕಾಶಪ್ರಿಯ
ಬಸ್ಸಿನಲ್ಲಿ ಸಿಕ್ಕವರು, ನನ್ನೀ ಬದುಕಿನ ಮಹಾಕಾವ್ಯಕ್ಕೊಂದು ಪುಟವಾದವರು, ಸ್ಮೃತಿಪಟಲಕ್ಕೊಂದು ಅಚ್ಚಳಿಯದ ನೆನಪಾದವರು ನೂರಾರು ಜೀವಗಳು. ನನ್ನದಲ್ಲದ ಊರಿನ, ನನ್ನವರಲ್ಲದ ಜನರ ನಡುವೆಯೂ ನನ್ನವರೆನಿಸಿದವರೂ, ಒಂದೊಮ್ಮೆ ಪಯಣದಲ್ಲಿ ಜೊತೆಯಾದವರು ಮನದೊಳಗೆ ಜೀವಂತವಾಗಿ ಬರಹಕ್ಕೆ ಅಕ್ಷರವಾಗಿದ್ದಾರೆ. ಅನುಭವದ ವಿಸ್ತರಣೆಗೆ ಕಾರಣರಾಗಿದ್ದಾರೆ. ಆಗಾಗ ಕಾಡಿದ್ದಾರೆ, ಅಪರೂಪಕ್ಕೆ ಕೆಲವರು ಸಂತಸದ ಕಣ್ಣಿನ ಹನಿಗಳಾಗಿದ್ದಾರೆ. ಹಲವರು ನಗುವಿನ ರುವಾರಿಗಳಾಗಿದ್ದಾರೆ. ಮತ್ತೆ ಕೆಲವರು ನನ್ನನ್ನೇ ಮೌನಿಯಾಗಿಸಿದ್ದಾರೆ. ಕೆಲವರಂತೂ ಮರೆತಷ್ಟೂ ನೆನಪಾಗಿದ್ದಾರೆ. ಅಂತದೇ ಆತ್ಮೀಯರಲ್ಲದ ಆತ್ಮೀಯರ ಜೊತೆಗಿನ ಒಂದು ಪಯಣದ ಕಥೆ ಈ ” ಲಾಸ್ಟ್ ಸ್ಟಾಪ್ ಬಸ್ನಲ್ಲಿ ಸಿಕ್ಕ AGE@73”
ನಾನು ನನ್ನ ಗೆಳತಿ ಸರ್ಕಾರಿ ಬಸ್ನಲ್ಲಿ ಎಲ್ಲಿಯೋ ಹೊರಟ್ಟಿದ್ದೆವು. ನಾವು ಇಳಿಯಬೇಕಾದ್ದು ಲಾಸ್ಟ್ ಸ್ಟಾಪ್ ಆಗಿದ್ದ ಕಾರಣ, ಬಸ್ನಲ್ಲಿ ಸೀಟ್ ಸಿಕ್ಕ ತಕ್ಷಣ ಖುಷಿಯಿಂದ ಕುತ್ಕೊಂಡೆವು. ನಂತರ ನೆಕ್ಸ್ಟ್ ಸ್ಟಾಪ್ನಲ್ಲಿ ಒಬ್ರು ಅಂಕಲ್ ಹತ್ತಿದ್ರು. ಸೀದಾ ನಮ್ಮ ಸೀಟ್ ಹತ್ರ ಬಂದು ಇದು ಸೀನಿಯರ್ ಸಿಟಿಜನ್ ಸೀಟ್ ಏಳಿ ಮೇಲೆ ಅಂತ ಆರ್ಡರ್ ಮಾಡಿದ್ರು.
ಸರಿ ಅಂತ ಪಕ್ಕದಲ್ಲಿ ಕೂತಿದ್ದ ಫ್ರೆಂಡ್ ಸೀಟ್ ಬಿಟ್ಟು ನಿಂತ್ಕೊಂಡ್ರು. ಆ ಅಂಕಲ್ಗೆ ಮನಸ್ಸಲ್ಲೇ ಇಬ್ರೂ ಬೈಕೊಂಡಿದ್ದೇನು ಸುಳ್ಳಲ್ಲ. ಯಾಕಂದ್ರೆ ಜೊತೆಗೆ ಮಾತಾಡ್ತಾ ಆರಾಮಾಗಿ ಹೋಗ್ತಿದ್ವು, ಇವ್ರು ಬಂದು ಎದ್ದೇಳಿಸಿದ್ರಲ್ಲ ಅಂತ ಸ್ವಲ್ಪ ಕೋಪ ಬೇಜಾರು ಎರಡು ಒಟ್ಟೊಟ್ಟಿಗೆ ಬಂತು. ಸಾಮಾನ್ಯವಾಗಿ ಬಸ್ ಫ್ರೆಂಟ್ ಅಲ್ಲಿ ಮಹಿಳೆಯರಿಗೆ ಹಿಂಬದಿ ಗಂಡಸರಿಗೆ ಸೀಟ್ಸ್ ಇರತ್ತೆ, ಬಟ್ ಇವ್ರು ಯಾಕೆ ಫ್ರೆಂಟ್ ಸೀಟ್ ಗೆ ಬಂದು ಸೀಟ್ ಬಿಡುಸ್ಕೊಂಡ್ರು….. ಘಾಟಿ ಮನುಷ್ಯ ಅನಿಸುತ್ತೆ!, ವಾದ ಬೇಡ ಅಂತ ಸುಮ್ಮನಾದ್ವಿ.
ಬಸ್ ಸ್ವಲ್ಪ ದೂರ ಕ್ರಮಿಸಿತ್ತು. ಒಬ್ಳೆ ಸುಮ್ನೆ ಕೂರೋಕೆ ಬೇಜಾರು, ಸೋ ಕಿವಿಗೆ ಇಯರ್ ಫೋನ್ ಸಿಕ್ಕಿಸಿ ಹಾಡು ಕೇಳ್ತಿದ್ದೆ. ಬಸ್ ಮುಂದೆ ಸಾಗ್ತಿತ್ತು, ನಿಧಾನವಾಗಿ ಅಂಕಲ್ ಮಾತು ಶುರುಮಾಡಿದ್ರು. ಇದು ಸೀನಿಯರ್ ಸಿಟಿಜನ್ ಸೀಟ್, ಯಾರು ಇಲ್ಲ ಅಂದ್ರೆ ಕುತ್ಕೋಳಿ… ಆದ್ರೆ ಯಾರಾದ್ರೂ ಸೀನಿಯರ್ ಸಿಟಿಜನ್ ಬಂದ್ರೆ ಅವ್ರಿಗೆ ಸೀಟ್ ಬಿಟ್ಕೊಡ್ಬೇಕು. ಬಸ್ನವ್ರು ಕೂಡ ಸರಿಯಾಗಿ ಬೋರ್ಡ್ ಹಾಕಿಲ್ಲ ರೂಲ್ಸ್ ಫಾಲೋ ಮಾಡಲ್ಲ, ರೂಲ್ಸ್ಬ್ರೇಕ್ ಮಾಡಿದ್ರೆ 5 ಸಾವಿರ ದಂಡ ಬೀಳುತ್ತೆ ಗೊತ್ತಾ ಅಂತ ಹೇಳುದ್ರು. ನಾನು ಹೂ ಗುಡುತ್ತಿದ್ದೆ. ಯಾಕೋ ಅವ್ರು ಮಾತಾಡುವಾಗ ನಾನು ಇಯರ್ ಫೋನ್ ಹಾಕೋಳೋದು ಸಭ್ಯತೆ ಅಲ್ಲ ಅಂತ ನನ್ ಮನ್ಸು ನನ್ನೇ ಗುರಾಯುಸ್ತು. ಇಯರ್ ಫೋನ್ ತೆಗ್ದೆ. ನಾನು ಅಂಕಲ್ ಜೊತೆ ಮಾತಿಗಿಳಿದೆ.
ನನ್ ಬಗ್ಗೆ ಕೇಳಿದ್ರು ಹೇಳ್ದೆ. ಆಮೇಲೆ ಅವ್ರು ಮಾತಡಿದ್ರು. ಅದ್ಯಾಕೋ ಹಿರಿಜೀವಗಳು ಮನಸ್ಸಿಗೆ ತುಂಬಾ ಹತ್ರ ಆಗ್ತಾರೆ ನಂಗೆ. ಹಿರಿಯರು ಮಾತಾಡುವಾಗ ಮನಸ್ಸಿಟ್ಟು ಕೇಳ್ಬೇಕು ಅನಿಸುತ್ತೆ. ನಿಮಗೆ ಗೊತ್ತಾ ಅವ್ರು ಅಂಕಲ್ ಅಂತ ಹೇಳ್ದೆ ಅಲ್ವಾ ಆಕ್ಚುಲಿ ಅವರ ವಯಸ್ಸು 73 ! ಹೆಸರು ಸೂರ್ಯನಾರಾಯಣ. ಎಕ್ಸ್ ಗವರ್ನಮೆಂಟ್ ಎಂಪ್ಲೋಯ್ . ಅಗ್ರಿಕಲ್ಚರ್ ಡಿಪಾರ್ಟ್ಮೆಂಟ್ ನಲ್ಲಿ ಸೇವೆ ಸಲ್ಲಿಸಿ ಈಗ ರಿಟೇರ್ಡ್ ಆಗಿದ್ದೀನಿ ಬೇಟಾ ಅಂದ್ರು. ನಾನು ಹೋ ಹೌದ ಅಂದೆ.
ನಂತ್ರ ಅವ್ರೇ ಮಾತು ಮುಂದುವರೆಸಿ ನಂಗೆ ಲಾಯರ್ ಆಗ್ಬೇಕು ಅಂತ ತುಂಬಾ ಆಸೆ ಇತ್ತು ಬೇಟಾ ನಾನು ಓದೋ ಟೈಮ್ನಲ್ಲಿ ಎಲ್ಲರ ಹತ್ರ ಹೇಳ್ಕೊಂಡು ಬರ್ತಿದೆ ನಾನ್ ಲಾಯರ್ ಆಗ್ತೀನಿ ಅಂತ …..ಹಾಗ್ ಹೇಳುವಾಗ ಅವ್ರ ಮುಖದಲ್ಲಿ ಆ ಹುಮ್ಮಸ್ಸು ನೋಡ್ಬೇಕಿತ್ತು ಒಂದು ಕ್ಷಣ ಸ್ಕೂಲ್ ಡೇಸ್ ಹಾಗೇ ಅವ್ರ ಕಣ್ಮುಂದೆ ಬಂತು ಅನಿಸುತ್ತೆ..ನಾನು ಕೇಳ್ದೇ ಯಾಕೆ ವಕೀಲರೇ ಆಗ್ಬೇಕು ಅನ್ಕೊಂಡ್ರಿ ಅಂತ.. ಅದುಕ್ಕೆ ಅವ್ರು ನನಗೆ ಅನ್ಯಾಯ ಸಹಿಸೋಕಾಗಲ್ಲ, ನಾನು ಲಾಯರ್ ಆಗಿ ನ್ಯಾಯ ಕೊಡುಸ್ಬೇಕು ಅನ್ನೋದೆ ನನ್ನ ಗುರಿಯಾಗಿತ್ತು ಅದ್ಕೆ ಅಂದ್ರು. ಆಮೇಲೆ ಏನ್ ಮಾಡೋದು ಬೇಟಾ ಅನ್ಕೋಳೋದೆ ಒಂದು ಆಗೋದೆ ಇನ್ನೊಂದು ಅಂದ್ರು. ನಾನು ಹೌದು ಅದಂತೂ ನಿಜ ಬಿಡಿ ಅಂದೆ.
ನಾನು ಈ ಮುತ್ತಿನ ನಗರಿಗೆ ಕಾಲಿಟ್ಟು 50 ವರ್ಷ ಕಳೆದಿದೆ. ನಾನ್ ಇಲ್ಲಿಗೆ ಬಂದಾಗ ಲಕ್ಷದಷ್ಟಿದ್ದ ಜನಸಂಖ್ಯೆ ಈಗ ನೋಡು ಕೋಟಿ ದಾಟಿದೆ ಅಂದ್ರು …. ಎಲ್ಲೇ ಹೋದ್ರು ಟ್ರಾಫಿಕ್ ಕಿರಿಕಿರಿ ಕಷ್ಟ ಬೇಟಾ ಅಂದ್ರು. ಈಗ ಗರ್ವನ್ಮೆಂಟ್ ಜಾಬ್ ತಗೋಳೋದು ನಮ್ಮ ಕಾಲದಷ್ಟು ಸುಲಭವಲ್ಲ ಅಂದ್ರು. ಹೌದು ಅಂಕಲ್ ಜನಸಂಖ್ಯೆ ಜಾಸ್ತಿಯಾಗಿ, ಕಾಂಪಿಟೇಶನ್ ಜಾಸ್ತಿ ಆಗಿದೆ ಏನ್ ಮಾಡೋಕಾಗಲ್ಲ ಅಂದೆ.
ಹೀಗೆ ಮಾತು ಮುಂದುವರಿತಾ ಫ್ಯಾಮಿಲಿ ಬಗ್ಗೆ ಕೇಳಿದ್ರು. ಹೇಳ್ದೆ. ತಕ್ಷಣ ಆ ಅಂಕಲ್ ನಂಗೆ ಅಪ್ಪ ಅಮ್ಮ ಇಬ್ರೂ ಇಲ್ಲ ಬೇಟಾ.. ನಂಗೆ 14 ನೇ ವಯಸ್ಸಿದ್ದಾಗಲೇ ತಂದೆ ತೀರ್ಕೊಂಡ್ರು, ಆಮೇಲೆ 36 ನೇ ವಯಸ್ಸಲ್ಲಿ ತಾಯಿ ತೀರ್ಕೊಂಡ್ರು. ಈಗಲೂ ಅಮ್ಮ ನೆನೆದಾಗೆಲ್ಲಾ ಕಣ್ಣಲ್ಲಿ ನೀರ್ ಬರುತ್ತೆ ಬೇಟಾ ಅಂದಾಗ ಅವ್ರ ಕಣ್ಣಾಲಿ ಒದ್ದೆಯಾಗಿತ್ತು. ಯಾವತ್ತೂ ತಂದೆ-ತಾಯಿನಾ ನೋಯಿಸಬಾರದು ಬೇಟಾ ನಮಗೋಸ್ಕರ ಅವ್ರು ಎಷ್ಟೆಲ್ಲಾ ಕಷ್ಟ ಪಡ್ತಾರೆ ಗೊತ್ತಾ ಅಂದ್ರು. ನಾನು ಹೂ ಅಂಕಲ್ ಅಂದೆ.
ನನ್ ಹೆಂಡ್ತಿ ಕೂಡ 56 ವರ್ಷ ಇರುವಾಗ ನನ್ನ ಒಂಟಿ ಮಾಡಿ ಮಧ್ಯರಾತ್ರಿನೇ ಬಿಟ್ಟು ಹೊರಟೋದ್ಲು. ಅವಳಿರ್ಬೇಕಿತ್ತು ಬೇಟಾ. ಅಪ್ಪ -ಅಮ್ಮ ದೇವ್ರಗಿಂತ ಮಿಗಿಲು. ಅವ್ರನ್ನ ಬಿಟ್ರೆ ಹೆಂಡ್ತಿನೇ ಗ್ರೇಟ್. ಗಂಡ ,ಮನೆ, ಮಕ್ಳು ಸಂಸಾರ ಎಲ್ಲಾ ನೋಡ್ಕೋತಾಳೆ . ಅವಳ ತರ ನಾವ್ ಕೆಲ್ಸ್ ಮಾಡೋಕಾಗಲ್ಲ, ಪ್ರತಿದಿನ ಅವಳ ನೆನಪು ಬರುತ್ತೆ ಬೇಟಾ ಅವ್ಳು ಮಧ್ಯರಾತ್ರಿ 12 : 30 ಗೆ ಹಾರ್ಟ್ ಅಟ್ಯಾಕ್ ಆಗಿ ಹೋಗಿಬಿಟ್ಲು ಅಂತ ಅತ್ರು. ಈ ಇಳಿವಯಸ್ಸಲ್ಲೂ ಜೊತೆಗೆ ಬದುಕಿ ಅಗಲಿದ ಜೀವ ನೆನೆದು ಅವ್ರು ಕಣ್ಣೀರಿಟ್ಟಾಗ ಏನ್ ಹೇಳ್ಬೇಕು ಅಂತಾನೇ ಗೊತ್ತಾಗಲಿಲ್ಲ ನಂಗೆ.
ನಾನು ಮಕ್ಳು ಬಗ್ಗೆ ಕೇಳ್ದೆ ಇಬ್ರು ಮಕ್ಳು ಒಬ್ಲು ಮಗಳು , ಒಬ್ಬ ಮಗ. ಮದುವೆ ಆಗಿದೆ ನಾನು ಮಗನ ಮನೇಲಿ ಇದ್ದೀನಿ ಅಂದ್ರು. ಆದ್ರೆ ರೀಸೆಂಟ್ ಆಗಿ ಅಳಿಯ ಕೂಡ ತೀರ್ಕೊಬಿಟ್ಟಾ ಅಂದ್ರು. ಹೌದಾ ಏನಾಗಿತ್ತು ಅಂದೆ ನಿಂಗೆ ಹೇಳ್ಬಾರ್ದು ಆದ್ರೂ ಹೇಳ್ತೀನಿ ಬೇಟಾ… ಅವ್ನು ಐಟಿ ಉದ್ಯೋಗಿ ಆದ್ರೂ ದಿನಾ ಕುಡಿತಾ ಇದ್ದ. ಲಿವರ್ ಡ್ಯಾಮೇಜ್ ಆಗಿತ್ತು. 2 ತಿಂಗಳ ಹಿಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡುಸ್ತೆ ಡಾಕ್ಟರ್ ಇನ್ನೊಂದು ಆಪರೇಶನ್ ಆಗ್ಬೇಕು ಅಂದ್ರು 40 ಲಕ್ಷ ಖರ್ಚಾಗುತ್ತೆ ಅಂದ್ರು. ನನ್ ಪೆನ್ಷನ್ ದುಡ್ಡು ಅದು ಇದು ಎಲ್ಲಾ ಸೇರಿ ಆಪರೇಶನ್ ಮಾಡಿಸೋಕೆ ರೆಡಿ ಮಾಡ್ಕೋತ್ತಿದ್ದೊ.
ಆದ್ರೆ ಅಷ್ಟರಲ್ಲಿ ಅವನು ಸತ್ತು ಹೋದ ಅಂತ ಬೇಜಾರಲ್ಲಿ ಹೇಳಿದ್ರು.. ನನ್ ಮಗಳು ನೋಡಿದ್ರೆ, ಮೊಮ್ಮಕ್ಕಳನ್ನು ನೋಡಿದ್ರೆ ಪಾಪ ಅನಿಸುತ್ತೆ ಬೇಟಾ, ನಾವೆಷ್ಟೇ ಪ್ರೀತಿ ತೋರಿಸಿದ್ರೂ ಮಗಳಿಗೆ ಗಂಡನ ಪ್ರೀತಿ ಕೊಟ್ಟಂಗೆ ಆಗುತ್ತಾ, ಮಕ್ಕಳಿಗೆ ತಂದೆಯ ಪ್ರೀತಿ ತುಂಬೋಕಾಗಲ್ಲ, ನೆನೆಸ್ಕೊಂಡ್ರೆ ತುಂಬಾ ಬೇಜಾರಾಗುತ್ತೆ ಬೇಟಾ ಅಂದ್ರು. ಯಾರೂ ಇಂಥ ಕೆಲ್ಸ ಮಾಡ್ಬಾರ್ದು, ಕುಡಿಬಾರದು,ಹೆಂಡ್ತಿ ಮಕ್ಕಳ ಬಗ್ಗೆ ಯೋಚ್ನೆ ಮಾಡ್ಬೇಕು ಅಂತ ಅವ್ರು ಹೇಳುವಾಗ ನಿಜ ಅದ್ರಿಂದ ಅವ್ರ ಮಗಳು, ಫ್ಯಾಮಿಲಿ ಅದೆಷ್ಟು ನೋವು ಅನುಭವಿಸ್ತಿದ್ದಾರೆ ಅನ್ನೋದು ಅವ್ರ ಮಾತುಗಳಲ್ಲೇ ಗೊತ್ತಾಗ್ತಿತ್ತು.
ಇನ್ನು ಮಗ ಖಾಸಗಿ ಕಂಪೆನಿ ಉದ್ಯೋಗಿ, ಬ್ಯುಸಿ, ಇನ್ನು ಮೊಮ್ಮಕ್ಕಳು ಸ್ಕೂಲು, ಕಾಲೇಜು… ನಂಗೆ ರಿಟೇರ್ಡ್ ಆಗಿದೆ ನೋಡು ನಾನು ಫ್ರೀ….ನಾನೋ ದಿನಕ್ಕೆ 12 ನ್ಯೂಸ್ ಪೇಪರ್ ಒದ್ತೀನಿ, ಬುಕ್ಸ್ ಒದ್ತೀನಿ, ಅದ್ರಲ್ಲೇ ಇಡೀ ದಿನ ಕಳೀತೀನಿ, ತಿಂಗಳಿಗೆ 2000 ದಷ್ಟು ಬರೀ ಪೇಪರ್,ಬುಕ್ ಬಿಲ್ಲೇ ಆಗುತ್ತೆ, ನ್ಯೂಸ್ ಪೇಪರ್ ಓದದೇ ಹೋದ್ರೆ ನಂಗ್ ಸಮಾಧಾನನೇ ಆಗಲ್ಲ ಬೇಟಾ ಅಂದ್ರು.
ಅದ್ಕೆ ನಾನು ಎಷ್ಟೇ ಆದ್ರೂ ಲಾಯರ್ ಆಗಬೇಕು ಅನ್ಕೋಂಡಿದ್ದೋರಲ್ವೆ ನೀವು ಅಂತ ಛೇಡಿಸಿದೆ, ಅವ್ರೂ ನಕ್ಕು. ಹೌದು ಬೇಟಾ ನಾನ್ ಲಾಯರ್ ಆಗ್ಬೇಕಿತ್ತು. ಆಗಿದ್ದಿದ್ರೆ ಈಗ ಹೈಕೋರ್ಟ್ ಅಲ್ಲಿ ಇರ್ತಾ ಇದ್ದೆ ಅಂತ ಮನಸಾರೆ ನಕ್ರು. ಓದ್ಬೇಕು ಬೇಟಾ , ಪ್ರಪಂಚದ ಆಗು-ಹೋಗುಗಳನ್ನು ತಿಳ್ಕೋಬೇಕು, ಓದಿಲ್ಲಾ ಅಂದ್ರೆ ಪ್ರಾಣಿಗಳ ತರ ಆಗಿಬಿಡ್ತೀವಿ ಅವಕ್ಕೂ ನಮಗೂ ಏನೂ ವ್ಯತ್ಯಾಸ ಇರಲ್ಲ ಅಂದ್ರು ತೆಲುಗು,ಇಂಗ್ಲಿಷ್,ಹಿಂದಿಯನ್ನು ನಿರರ್ಗಳವಾಗಿ ಮಾತಾಡಬಲ್ಲ ಅವ್ರು 73 ರ ಹರೆಯದ ತಾತ ಅಲ್ಲ ಅಂಕಲ್!
ಇನ್ನು ನಿಮ್ಮ ಜೊತೆ ಹುಟ್ಟಿದವ್ರು ಯಾರಿಲ್ವಾ ಅಂತ ಕೇಳ್ದೆ. ಒಮ್ಮೆಲೆ ಅವರ ಮುಖ ಅರಳಿತು . ನಾವ್ 9 ಜನ ಮಕ್ಕಳು, ಎಲ್ರೂ ಇದ್ದೀವಿ. ಆಂಧ್ರ, ವಿಜಯವಾಡ, ಸಿಂಗಾಪುರ್, ಹೀಗೆ ಎಲ್ರೂ ಒಂದೊಂದು ಕಡೆ ಇದ್ದೀವಿ, ವರ್ಷಕ್ಕೆ ಒಂದು ಸಲ ತಂದೆ-ತಾಯಿ ಕಾರ್ಯ ಮಾಡುವಾಗ ಎಲ್ರೂ ಒಂದುಕಡೆ ಸೇರ್ತೀವಿ ಅಂದ್ರು.
ಇಷ್ಟೆಲ್ಲಾ ಮಾತಾಡೋ ಅಷ್ಟರಲ್ಲಿ ಅವ್ರು ಇಳಿಯುವ ಸ್ಟಾಪ್ ಬಂತು. ಹೋಗುವಾಗ ಬೈ ಬೇಟಾ ಖುಷ್ ರಹೋ, ದಿನ ಮಾತಾಡೋಕೆ ಯಾರೂ ಸಿಗಲ್ಲ, ಹೀಗೆ ಯಾರಾದ್ರೂ ಸಿಕ್ಕಿದ್ರೆ ಜರ್ನಿ ಮಾಡಿದ್ದೇ ಗೊತ್ತಾಗಲ್ಲ, ಒಬ್ರೆ ಇದ್ರಂತೂ ಇನ್ನೂ ಸ್ಟಾಪ್ ಬಂದಿಲ್ವಾ ಅನಸುತ್ತೆ. ಈಗ ನೋಡು ನಾವಿಬ್ರೂ ಮಾತಾಡ್ಕೊಂಡು ಬಂದಿದ್ಕೆ ಸ್ಟಾಪ್ ಬಂದಿದ್ದೆ ಗೊತ್ತಾಗಿಲ್ಲ ಅಂತ ನಕ್ರು. ಆಗ ನಾನು, ಬಸ್ ಹತ್ತುವಾಗ ಸಿಟ್ಟು ಮಾಡ್ಕೊಂಡು, ವಾದ ಮಾಡಿ ನಮ್ ಜೊತೆ ಸೀಟ್ ಬಿಡುಸ್ಕೊಂಡು ಕೂತ ಅದೇ ಸೂರ್ಯನಾರಾಯಣ್ ಅಂಕಲ್ ಬಸ್ ಇಳಿವಾಗ ಖುಷಿ-ಖುಷಿಯಾಗಿ ಇಳಿದಿದ್ದು ಕಂಡು ಒಂದು ಕ್ಷಣ ಖುಷಿಯಿಂದ ಮೌನಿಯಾದೆ.
ಆಗ ಅನಿಸಿದ್ದು, ಒಬ್ಬ ವ್ಯಕ್ತಿ ಅವನ ವ್ಯಕ್ತಿತ್ವನಾ ಒಂದೇ ಸಲ ಅಳೆಯೋಕೆ ಆಗಲ್ಲ. ಬರೀ ಯಾವುದೋ ಒಂದು ಘಟನೆಯಿಂದ ಒಂದು ಮಾತಿಂದ ಅವರು ಸರಿ ಇಲ್ಲ, ಹಾಗೇ ಹೀಗೆ ಅಂತ ಯಾವತ್ತೂ ಜಡ್ಜ್ ಮಾಡ್ಬಾರ್ದು, ಪ್ರತಿಯೊಬ್ಬರು ಮನಸ್ಸಲ್ಲೂ ಅವ್ರದೇ ಆದ ನೋವಿರುತ್ತೆ. ಮನದಾಳದ ಮಾತುಗಳನ್ನು ಕೇಳೋ ಯಾವುದೋ ಒಂದು ಜೀವನಾ ಆ ಕಂಗಳು ಹುಡುಕ್ತಿರುತ್ತೆ. ಒಂದು ವೇಳೆ ನಿಮಗೆ ಯಾವುದಾದರೂ ಹಿರಿಜೀವದ ಜೀವನದ ಅನುಭವನಾ, ಅಥವಾ ಅವ್ರ ನೋವನ್ನ ಕೇಳಿಸಿಕೊಳ್ಳೋ ಅವಕಾಶ ಸಿಕ್ರೆ ಅದಕ್ಕೆ ನೀವೂ ಕಿವಿಯಾಗಿ . ಯಾಕಂದ್ರೆ 73 ವರ್ಷಗಳ ತುಂಬು ಜೀವನ ನಡೆಸಿರೋರು ಅವ್ರಷ್ಟು ವಯಸ್ಸಿನವರೆಗೂ ಖಂಡಿತ ನಾವು ಬದ್ಕೋಕ್ಕಾಗಲ್ಲ, ಹಂಗಿದೆ ನಮ್ ಜೀವಿತಾವಧಿ ದರ , ಅಂತದ್ದರಲ್ಲಿ ಇಂತವರ ಅನುಭವಗಳೆ ನಮಗೆ ಮಾರ್ಗದರ್ಶನ ಆಗ್ಬೋದು, ಸ್ಫೂರ್ತಿ ಆಗಬಹುದು.
ಅಂದಹಾಗೇ ಅಂಕಲ್ ಒಟ್ಟಿಗಿನ ಇಷ್ಟೂ ಸಂಭಾಷಣೆ ನಡೆದಿದ್ದು, ಹಿಂದಿಯಲ್ಲಿ. ಆ ಭಾಷೇನೆ ನನಗೆ ಒಂದು ವಿಭಿನ್ನ ವ್ಯಕ್ತಿತ್ವದ ಪರಿಚಯ ಆಗೋಕೆ, ಬದುಕಿನ ಒಂದು ಅವಿಸ್ಮರಣೀಯ ಅನುಭವ ಆಗೋಕೆ ಕಾರಣ ಆಗಿದ್ದು, ನನ್ನ ನೆನಪಿನ ಬುತ್ತಿಗೊಂದು ಹೊಸ ವ್ಯಕ್ತಿಯ ಸೇರ್ಪಡೆಯಾಗುವಂತೆ ಮಾಡಿದ್ದು. ಒಂದು ವೇಳೆ ಯಾವುದೋ ಒಂದೇ ಭಾಷೆಯ ವ್ಯಾಮೋಹಕ್ಕೆ ಒಳಗಾಗಿ ಬೇರೆ ಭಾಷೆಗಳನ್ನ ತಿರಸ್ಕಾರ ಮಾಡಿದ್ರೆ ಬಹುಶಃ ಬದುಕಲ್ಲಿ ಏನನ್ನೋ ಮಿಸ್ ಮಾಡ್ಕೋತ್ತಿವಿ ಅನಿಸುತ್ತೆ. ಹಾಗಾಗಿ ನಂಗೆ ಯಾವುದೇ ಬೇರೆ ಭಾಷೆ ಕಲಿಕೆ ಬಗ್ಗೆ ಎಂದಿಗೂ ತಕರಾರಿಲ್ಲ. ಸೋ ಯಾರ ಮುಲಾಜಿಲ್ಲದೇ ಹೇಳ್ತೀನಿ, ಇಂಗ್ಲಿಷ್, ಹಿಂದಿಯನ್ನೂ ಸಮಾನಾಗಿ ಪ್ರೀತಿಸುವ, ಗೌರವಿಸುವ ನಾನೊಬ್ಬಳು ಅಪ್ಪಟ ಕನ್ನಡತಿ.
ಸುದ್ದಿದಿನ.ಕಾಂ|ವಾಟ್ಸಾಪ್|9980346243