ದಿನದ ಸುದ್ದಿ

ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಲಸಿಕೆ ನೀಡಿಕೆ ಹೆಚ್ಚಿಸಲು ಕೇಂದ್ರ ಸರಕಾರ ಸೂಚನೆ

Published

on

ಸುದ್ದಿದಿನ ಡೆಸ್ಕ್ : ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಲಸಿಕೆ ನೀಡಿಕೆಯ ವೇಗ ಕಡಿಮೆಯಾಗುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಕಳವಳ ವ್ಯಕ್ತಪಡಿಸಿದ್ದು, ಲಸಿಕೆ ನೀಡಿಕೆಯ ವೇಗವನ್ನು ಗಣನೀಯವಾಗಿ ಹೆಚ್ಚಿಸಬೇಕೆಂದು ಸೂಚಿಸಿದೆ.

ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರಿಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳ ಮತ್ತು ರಾಷ್ಟ್ರೀಯ ಆರೋಗ್ಯ ಅಭಿಯಾನ ನಿರ್ವಹಣೆ ನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಕೋವಿಡ್ ಲಸಿಕೆ ನೀಡಿಕೆ ಸ್ಥಿತಿಗತಿಯನ್ನು ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಭೂಷಣ್, ಕೋವಿಡ್-19 ಲಸಿಕೆ ಅಭಿಯಾನ ತೀವ್ರಗೊಳಿಸುವ ಅಗತ್ಯತೆ ಕುರಿತು ಒತ್ತಿ ನುಡಿಯುತ್ತಾ, ಈ ವರ್ಷದ ಜೂನ್-ಜುಲೈನಲ್ಲಿ ಎರಡು ತಿಂಗಳ ಅವಧಿಯ ಹರ್ ಘರ್ ದಸ್ತಕ್ ಅಭಿಯಾನ – 2.0ಆಯೋಜಿಸಬೇಕೆಂದು ಸೂಚಿಸಿದರು.

ವೃದ್ಧಾಶ್ರಮಗಳು, ಕಾಲೇಜುಗಳು, ಸೆರೆಮನೆಗಳನ್ನು ಲಸಿಕೆ ವ್ಯಾಪ್ತಿಗೆ ತರುವುದು ಈ ಅಭಿಯಾನದ ಉದ್ದೇಶ. ಕೆಲವು ರಾಜ್ಯಗಳಲ್ಲಿ ವಿದೇಶ ಪ್ರವಾಸ ಕೈಗೊಳ್ಳಲು ಬಯಸುವ ಹಾಗೂ ಎರಡನೇ ಡೋಸ್‌ನ 90ದಿನಗಳ ನಂತರ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಯಸುವವರನ್ನು ಉದ್ದೇಶಿತ ವಿದೇಶ ಪ್ರವಾಸದ ಪುರಾವೆ ಕೇಳಲಾಗುತ್ತಿರುವ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.

ಇದಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ಡೋಸ್ ಪಡೆಯಲು ಬಯಸುವವರನ್ನು ವಿದೇಶ ಪ್ರವಾಸದ ಯಾವುದೇ ದಾಖಲೆ ಒದಗಿಸಬೇಕೆಂದು ಯಾವುದೇ ಸಂದರ್ಭದಲ್ಲ್ಲೂ, ಯಾವುದೇ ಕೋವಿಡ್-19 ಲಸಿಕಾ ಕೇಂದ್ರ ಅಥವಾ ರಾಜ್ಯ ಸರ್ಕಾರ ಒತ್ತಾಯಿಸಬಾರದೆಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ಹೇಳಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version