ದಿನದ ಸುದ್ದಿ

ಬಾಗಲಕೋಟೆ | ಸಿಇಟಿ ಪರೀಕ್ಷೆ ಬರೆದ ಓರ್ವ ಸೋಂಕಿತ ವಿದ್ಯಾರ್ಥಿ

Published

on

ಸುದ್ದಿದಿನ,ಬಾಗಲಕೋಟೆ: ವೃತ್ತಿಪರ ಕೋರ್ಸಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ನಡೆಸಲಾಗುವ ಸಿಇಟಿ ಪರೀಕ್ಷೆಗಳು ಗುರುವಾರದಿಂದ ಎರಡು ದಿನಗಳ ಕಾಲ ಜಿಲ್ಲೆಯಲ್ಲಿ ಅಗತ್ಯ ಸಿದ್ದತೆಗಳೊಂದಿಗೆ ಆರಂಭವಾಗಿದ್ದು, ಜಿಲ್ಲೆಯ ಓರ್ವ ಕೊರೊನಾ ಸೋಂಕಿತ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಪಾಜಿಟಿವ್ ದೃಡಪಟ್ಟ ವಿದ್ಯಾರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ ಹಿನ್ನಲೆಯಲ್ಲಿ ಬಾಗಲಕೋಟೆ ನವನಗರದಲ್ಲಿರುವ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ಸ್ಥಾಪಿಸಲಾದ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾಗಿರಿ 5ನೇ ಕ್ರಾಸಿನ ಓರ್ವ ವಿದ್ಯಾರ್ಥಿ ಸಿಇಟಿ ಪರೀಕ್ಷೆ ಬರೆದಿದ್ದಾರೆ.

ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಕರೆತಂದು ಸುರಕ್ಷಿತವಾಗಿ ಅವರಿಗೆ ಪರೀಕ್ಷೆ ಬರೆಯಲು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವ್ಯವಸ್ಥೆ ಮಾಡಲಾಗಿತ್ತು.

ಗುರುವಾರ ಎರಡು ಅವಧಿಯಲ್ಲಿ ಪರೀಕ್ಷೆ ನಡೆಸಲಾಗಿದ್ದು, ಬೆಳಗಿನ ಅವಧಿಯಲ್ಲಿ ನಡೆದ ಜೀವಶಾಸ್ತ್ರ ಪರೀಕ್ಷೆಯಲ್ಲಿ ನೋಂದಣಿಯಾದ ಒಟ್ಟು 6038 ವಿದ್ಯಾರ್ಥಿಗಳ ಪೈಕಿ 5281 ವಿದ್ಯಾರ್ಥಿಗಳು ಹಾಜರಾಗಿ 757 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ.

ಗಣಿಶಾಸ್ತ್ರ ವಿಷಯ ಪರೀಕ್ಷೆಗೆ ಒಟ್ಟು 6038 ವಿದ್ಯಾರ್ಥಿಗಳ ಪೈಕಿ 5605 ವಿದ್ಯಾಥಿಗಳು ಹಾಜರಾಗಿ 433 ವಿದ್ಯಾರ್ಥಿಗಳು ಗೈರು ಹಾಜರಾಗಿರುತ್ತಾರೆ. ಬೆಳಗಿನ ಅವಧಿಯಲ್ಲಿ ಎರಡು ಮಧ್ಯಾಹ್ನದ ಅವಧಿಯಲ್ಲಿ 3 ಕಂಟೈನ್‍ಮೆಂಟ್ ಝೋನ್‍ನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿತ್ತು ಎಂದು ಉಪನಿರ್ದೇಶಕ ಶಶಿಧರ ಪೂಜಾರಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version