ದಿನದ ಸುದ್ದಿ
ರಾಜ್ಯ ಸರ್ಕಾರ ಬಸವ ಪಥದಲ್ಲಿ ಮುನ್ನಡೆಯುತ್ತಿದೆ : ಸಿಎಂ ಬಸವರಾಜ ಬೊಮ್ಮಾಯಿ
ಸುದ್ದಿದಿನ,ಬೆಂಗಳೂರು : ಬಸವ ವೇದಿಕೆ ಆಯೋಜಿಸಿದ್ದ ಬಸವ ಜಯಂತಿ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವಶ್ರೀ ಮತ್ತು ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿಂದು ಪ್ರದಾನ ಮಾಡಿದರು.
ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಪದ್ಮಶ್ರೀ ಡಾ. ನಾಗೇಂದ್ರ ಅವರಿಗೆ ಬಸವಶ್ರೀ ಪ್ರಶಸ್ತಿ, ಬೀದರ್‌ನ ಬಸವ ಸೇವಾ ಪ್ರತಿಷ್ಠಾನದ ಡಾ. ಗಂಗಾಂಬಿಕಾ ಅವರಿಗೆ ವಚನ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ವಸತಿ ಸಚಿವ ವಿ. ಸೋಮಣ್ಣ, ಮೈಸೂರಿನ ಸುತ್ತೂರು ಶಿವರಾತ್ರಿ ದೇಶೀಕೇಂದ್ರ ಶ್ರೀಗಳು, ಬಸವ ವೇದಿಕೆ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಯಕವೇ ಕೈಲಾಸವೆಂಬ ತತ್ವವು ಎಂದೆಂದಿಗೂ ಪ್ರಸ್ತುತ. ದುಡಿಯುವ ವ್ಯಕ್ತಿಯನ್ನು ಗೌರವಿಸುವ ಕಾರ್ಯ ನಿರಂತರವಾಗಿ ಮುಂದುವರಿಯಬೇಕು ಎಂಬ ಪರಿಕಲ್ಪನೆಯನ್ನು ಬಸವಣ್ಣನವರು ಹೊಂದಿದ್ದರು. ಅವರ ತತ್ವಾದರ್ಶಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಎಂದು ಹೇಳಿದರು.
ಬಸವ ವೇದಿಕೆ ಹಲವಾರು ಗಣ್ಯರನ್ನು ಗುರುತಿಸಿ, ಗೌರವಿಸುತ್ತಿದ್ದು, ಈ ಸಂಸ್ಥೆಯ ಕಾರ್ಯ ಪ್ರಶಂಸನೀಯ. ಮುಂದಿನ ವರ್ಷ ಬಸವಶ್ರೀ ಪ್ರಶಸ್ತಿ ದೆಹಲಿಯಲ್ಲಿ ಪ್ರದಾನ ಮಾಡುವ ಅವಕಾಶ ದೊರೆಯಲಿ ಎಂದು ಮುಖ್ಯಮಂತ್ರಿ ಹಾರೈಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243