ದಿನದ ಸುದ್ದಿ
ದಾವಣಗೆರೆ | ಈರುಳ್ಳಿ ಲಾರಿಯಲ್ಲಿ ಹೋಗಿ ಬಂದವರಿಗೆ ಸೋಂಕಿನ ಲಕ್ಷಣಗಳಿವೆ : ಎಸ್ಪಿ ಹನುಮಂತರಾಯ
ಸುದ್ದಿದಿನ, ದಾವಣಗೆರೆ : ಸೊಂಕಿನ ಮೂಲದ ಕುರಿತು ಮುಖ್ಯವಾಗಿ ಹಾಸನ, ಚಿತ್ರದುರ್ಗ, ಬಳ್ಳಾರಿ ಹಾಗೂ ಬಾಗಲಕೋಟೆಗೆ ಗೂಡ್ಸ್ ವಾಹನದಲ್ಲಿ ಹೋಗಿ ಬಂದಂತಹವರ ಮಾಹಿತಿ ಸಿಕ್ಕಿದೆ. ಈರುಳ್ಳಿ ತುಂಬಿದ ಲಾರಿಗಳಲ್ಲಿ ಹೋಗಿ ಬಂದವರಿಗೆ ಲಕ್ಷಣ ಕಂಡುಬಂದಿದೆ. ಅದನ್ನು ಕೂಲಂಕಂಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನೂ ಸ್ಪಲ್ಪ ಸಮಯ ಬೇಕಾಗಿದೆ. ವೈದ್ಯಾಧಿಕಾರಿಗಳ ಸಹಾಯದಿಂದ ವಿಚಾರಣೆ ಮಾಡಿ ಕೂಡಲೇ ಪತ್ತೆ ಹಚ್ಚಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ತಿಳಿಸಿದರು.
ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ತಂಡದೊಂದಿಗೆ ಸೀಲ್‍ಡೌನ್ ಪ್ರದೇಶವಾದ ಜಾಲಿನಗರದಲ್ಲಿ ಡ್ರೋನ್ ಪರಿವೀಕ್ಷಣೆ ಮತ್ತು ಸರ್ವೇಕ್ಷಣಾ ತಂಡದ ತಪಾಸಣೆ ಕಾರ್ಯ ಪರಿಶೀಲಿಸಲು ಭೇಟಿ ನೀಡಿ ಬಳಿಕ ಅವರು ಮಾತನಾಡಿದರು.
ಈಗಾಗಲೇ 5 ಕಂಟೈನ್‍ಮೆಂಟ್ ಜೋನ್‍ಗಳನ್ನು ಸೀಲ್‍ಡೌನ್ ಮಾಡಲಾಗಿದೆ. ಎಲ್ಲ ಕಡೆಯಲ್ಲಿಯೂ ಸ್ಟೀಲ್ ಬ್ಯಾರಿಕೇಡ್ ಬಳಸಿ ನಿಯಂತ್ರಣ ಮಾಡಲಾಗಿದೆ. ಈ ಕಂಟೈನ್‍ಮೆಂಟ್ ಜೋನ್‍ಗೆ ಸಂಬಂಧಿಸಿದಂತೆ ತಲಾ ಐವರು ಕಮಾಂಡರ್ ಮತ್ತು ಇನ್‍ಸ್ಪೆಕ್ಟರ್ ನೇಮಕ ಮಾಡಲಾಗಿದೆ. ಈ ಐವರು ಇನ್‍ಸ್ಪೆಕ್ಟರ್‍ಗಳು ಆ ಏರಿಯಾದಲ್ಲಿ ಬಿಗಿ ಬಂದೊಬಸ್ತ್ ಮಾಡಿಕೊಳ್ಳುತ್ತಾರೆ.
ಆ ಏರಿಯಾಕ್ಕೆ ಹೋಗಲು ಮತ್ತು ಬರಲು ಒಂದೇ ಗೇಟ್ ತೆರೆಯಲಾಗಿದ್ದು, ಅಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಜನರಿಗೆ ಬೇಕಾದಂತಹ ಎಲ್ಲಾ ಅಗತ್ಯ ವಸ್ತು ಹಾಗೂ ಔಷಧಗಳನ್ನು ಅಲ್ಲಿಯೇ ಸರಬರಾಜು ಮಾಡುವಂತೆ ನೋಡಿಕೊಳ್ಳಲಾಗಿದೆ ಎಂದರು.
ಜ್ವರ ಇದ್ದವರು ಮನೆಯಲ್ಲಿಯೇ ಇರುವ ಹಿನ್ನೆಲೆ ಕಾರ್ಯಾಚರಣೆ
ಈ 5 ಕಂಟೈನ್‍ಮೆಂಟ್ ಜೋನ್‍ಗಳಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಸರ್ವೇಕ್ಷಣಾಧಿಕಾರಿಗಳು ಮನೆ ಮನೆಗೆ ಹೋಗಿ ಸಾರಿ ಹಾಗೂ ಐಎಲ್‍ಐ ಲಕ್ಷಣ ಇರುವವರನ್ನು ಪತ್ತೆ ಮಾಡಿ ಅವರ ಗಂಟಲು ದ್ರವ ಸಂಗ್ರಹಿಸಿ ಚಿಕಿತ್ಸೆ ಹಾಗೂ ಐಸೋಲೇಟ್ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದೆ.
ಜೊತೆಗೆ ಕೆಲವರು ಜ್ವರ ಇದ್ದವರು ಮಾತ್ರೆ ತೆಗೆದುಕೊಂಡು ಮನೆಯಲ್ಲಿಯೇ ಇರುವ ಬಗ್ಗೆ ಮಾಹಿತಿ ಬಂದಿದೆ.ಅದರ ಆಧಾರದ ಮೇಲೆ ಈ ಕಾರ್ಯಚರಣೆ ಮಾಡಲಾಗಿದ್ದು, ಆ ಮೂಲಕ ಲಕ್ಷಣ ಇರುವವರನ್ನು ನಾವು ಚಿಕಿತ್ಸೆಗೆ ಒಳಪಡಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಾಗರಿಕರ ಸಲಹೆ ಮೇರೆಗೆ ಸಮಯ ಜಾರಿ
ಜನರು ಅನಾವಶ್ಯಕ ಸಂಚರಿಸದೆ ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆವರೆಗಿನ ಅವಧಿಯಲ್ಲಿ ತಮಗೆ ಏನು ಬೇಕು ಅದನ್ನು ತೆಗೆದುಕೊಂಡು ಮನೆಯಲ್ಲಿಯೇ ಇರಬೇಕು. ಇಡೀ ದಿನ ಸಮ್ಮನೆ ಸುತ್ತಾಡುವುದನ್ನು ನಿಯಂತ್ರಿಸಲು ಬಹಳ ಅಚ್ಚುಕಟ್ಟಾಗಿ ಜಿಲ್ಲೆಯ ನಾಗರಿಕರ ಸಲಹೆ ಮೇರೆಗೆ ಈ ಸಮಯ ಜಾರಿ ಮಾಡಲಾಗಿದೆ. ಸೋಂಕು ಹರಡವುದನ್ನು ನಿಯಂತ್ರಿಸುವ ವಿಶ್ವಾಸವಿದೆ. ಈ ಹಿನ್ನೆಲೆಯಲ್ಲಿ ಗಂಭೀರ ಪರಿಸ್ಥಿತಿ ಆಗಿರುವುದರಿಂದ ಇನ್ನೂ 20 ದಿನ ನಾಗರಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243