ರಾಜಕೀಯ

ಕೋವಿಡ್ 19 | ‘ರಾಷ್ಟ್ರೀಯ ವಿಪ್ಪತ್ತು’ ಎಂದು ಘೋಷಿಸುವಂತೆ ಕೆಪಿಸಿಸಿ ಮನವಿ : ಕೆಪಿಸಿಸಿ ಸಲ್ಲಿಸಿದ :ಮನವಿ ಪತ್ರ’ ಮಿಸ್ ಮಾಡ್ದೆ ಓದಿ

Published

on

ಸುದ್ದಿದಿನ,ಬೆಂಗಳೂರು : ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಕೆಪಿಸಿಸಿ ವತಿಯಿಂದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಮನವಿ ಪತ್ರ ಸಲ್ಲಿಸಿದರು.

ಕೆಪಿಸಿಸಿ ಸಲ್ಲಿಸಿದ ಮಾನವಿ ಪತ್ರದಲ್ಲಿನ ಅಂಶಗಳು

  1. WHO ಮಾರ್ಗಸೂಚಿಯ ಪ್ರಕಾರ ಕೊರೋನಾ ರೋಗ ನಿಯಂತ್ರಣಕ್ಕೆ ಪ್ರಾಥಮಿಕವಾಗಿ 10 ಲಕ್ಷ ಜನಸಂಖ್ಯೆಗೆ 10 ಸಾವಿರ ಜನರನ್ನು ಪರೀಕ್ಷೆಗೆ ಒಳಪಡಿಸಬೇಕಾಗಿರುತ್ತದೆ. ಆದರೆ ಇಲ್ಲಿಯವರೆಗೂ ನಮ್ಮ ರಾಜ್ಯದಲ್ಲಿ ಹಾಗೂ ರಾಷ್ಟ್ರದಲ್ಲಿ ಪ್ರತಿ 10 ಲಕ್ಷಕ್ಕೆ ಕೇವಲ 152 ಜನರನ್ನು ಪರೀಕ್ಷೆಗೆ ಒಳಪಡಿಸಿದ್ದರೂ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಒಟ್ಟು 12 ಲಕ್ಷ ಕಿಟ್‌ಗಳ ಅಗತ್ಯವಿದ್ದು, ಈಗ ಕೇವಲ 2,27,000 ಕಿಟ್‍ಗಳಿವೆ, 5,46,721 ಎನ್-95 ಮಾಸ್ಕ್‌ಗಳು ಮತ್ತು 2,79,999 ಹೈಡ್ರಾಕ್ಸಿಕ್ಲೋರಾಕ್ಸಿನ್ ಮಾತ್ರೆಗಳಿವೆ. ಇವು ಯಾವುದಕ್ಕೂ ಸಾಲುವುದಿಲ್ಲ ಎಂಬಂತಾಗಿದೆ. ರಾಜ್ಯದಲ್ಲಿರುವ 18 ಕೊರೊನಾ ಪರೀಕ್ಷೆ ಲ್ಯಾಬ್‍ಗಳಲ್ಲಿ 9 ಲ್ಯಾಬ್‍ಗಳು ಬೆಂಗಳೂರಿನಲ್ಲಿಯೇ ಇವೆ.
  2. ವಿಶ್ವವ್ಯಾಪಿಯಾಗಿ ಹರಡಿರುವ ಕೊರೊನಾ ರೋಗವನ್ನು “ರಾಷ್ಟ್ರೀಯ ವಿಪತ್ತು” ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಲು ಮತ್ತು ಕೊರೋನಾ ರೋಗ ನಿವಾರಣೆ ಹಾಗೂ ಲಾಕ್‍ಡೌನ್ ಅವಧಿಯಲ್ಲಿ ಜನರ ಸಂಕಷ್ಟಕ್ಕೆ ಎಲ್ಲಾ ರೀತಿಯ ಆರ್ಥಿಕ ಹಾಗೂ ಇನ್ನಿತರ ಸಹಾಯ ನೀಡಲು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಬೇಕು. ಲಾಕ್‍ಡೌನ್ ಅವಧಿಯಲ್ಲಿ ಎಲ್ಲಾ ಅಸಂಘಟಿತ ವಲಯದ ಕಾರ್ಮಿಕರು, ಕೂಲಿಕೆಲಸಗಾರರು ಹಾಗೂ ಬಡವರಿಗೆ ತಲಾ ಪ್ರತಿ ತಿಂಗಳು ಕನಿಷ್ಠ 10 ಕೆ.ಜಿ. ಅಕ್ಕಿ, ಹಾಲು, 2 ಲೀಟರ್ ಅಡುಗೆ ಎಣ್ಣೆ, ತರಕಾರಿ ಮುಂತಾದ ಅಗತ್ಯ ಪದಾರ್ಥಗಳನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
  3. ಕೊರೋನಾ ರೋಗ ಹರಡುವಿಕೆಯಲ್ಲಿ ಧರ್ಮವನ್ನು ಎಳೆದುಕೊಂಡು, ಒಂದು ಕೋಮಿನ ಜನರನ್ನು ಗುರಿಯಾಗಿಸಿ ಅವರ ವಿರುದ್ಧ ಅಪಪ್ರಚಾರ ಮಾಡುವವರ ಮೇಲೆ ಕ್ರಮ ಜರುಗಿಸಿದ ಪೊಲೀಸ್ ಅಧಿಕಾರಿಗಳನ್ನೇ ವರ್ಗಾವಣೆ ಮಾಡಿರುವುದು ಖಂಡನೀಯ. ತಕ್ಷಣ ಸರ್ಕಾರ ತನ್ನ ನಿರ್ಧಾರ ಬದಲಿಸಿ, ಕೋಮುಪ್ರಚೋದನೆ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಲಾಕ್‍ಡೌನ್ ಅವಧಿಯಲ್ಲಿ ಸರ್ಕಾರದಿಂದ ಹಂಚಿಕೆ ಮಾಡುತ್ತಿರುವ ಆಹಾರ ಪದಾರ್ಥಗಳ ಕಿಟ್ ಮೇಲೆ ಆಡಳಿತ ಪಕ್ಷದ ನಾಯಕರುಗಳು ತಮ್ಮ ಪಕ್ಷದ ಚಿನ್ಹೆ ಹೊಂದಿರುವ ಲೇಬಲ್‍ಗಳನ್ನು ಅಂಟಿಸಿ ಮತದಾರರನ್ನು ಓಲೈಸಿಕೊಳ್ಳುವ ಹೀನ ರಾಜಕೀಯ ಪ್ರವೃತ್ತಿಯನ್ನು ತೋರುತ್ತಿದ್ದಾರೆ. ಇಂತಹ ಸರ್ಕಾರಿ ಸೌಲಭ್ಯಗಳ ದುರುಪಯೋಗವನ್ನು ತಡೆಯಬೇಕು.
  4. ಲಾಕ್‍ಡೌನ್ ಅವಧಿಯಲ್ಲಿ ನರೇಗಾ ಯೋಜನೆಯನ್ನು ಸ್ಥಗಿತಗೊಳಿಸಿದ ಕಾರಣ ನೋಂದಾಯಿತ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ, ಹಾಗಾಗಿ ಇವರಿಗೆ ಲಾಕ್‍ಡೌನ್ ಅವಧಿಯ ದಿನಗೂಲಿಯನ್ನು ಬ್ಯಾಂಕ್ ಖಾತೆಗಳಿಗೆ ಸರ್ಕಾರ ಜಮಾ ಮಾಡಬೇಕು ಮತ್ತು ಕೂಡಲೇ ನರೇಗಾ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರಿಗೆ ಕೆಲಸಕ್ಕೆ ಅವಕಾಶ ಮಾಡಿಕೊಡಬೇಕು. ಜೀವ ಮತ್ತು ಜೀವನವನ್ನು ಉಳಿಸಿ, ಬೆಳೆಸಲು, ಹದಗೆಟ್ಟಿರುವ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಕೂಡಲೇ ರಾಜಕೀಯ ತಜ್ಞರು, ಆರ್ಥಿಕ ತಜ್ಞರು, ಉದ್ಯಮಿಗಳು, ಕಾರ್ಮಿಕ ಸಂಘಟನೆಗಳ ನಾಯಕರಗಳನ್ನು ಒಳಗೊಂಡಿರುವ ಕಾರ್ಯಪಡೆಯನ್ನು ರಚಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು.
  5. ಕೊರೊನಾ ರೋಗದ ಕಾರಣದಿಂದ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ. ಈ ಆತಂಕವನ್ನು ದೂರ ಮಾಡಲು ಸರ್ಕಾರ ಕೂಡಲೇ ವಿದ್ಯಾರ್ಥಿಗಳಿಗೆ ಮುಂದಿನ ತರಗತಿಗಳ ಹಾಗೂ ಪರೀಕ್ಷೆ ದಿನಾಂಕಕ್ಕೆ ಸಂಬಂಧಪಟ್ಟ ಸೂಕ್ತ ಮಾಹಿತಿ ನೀಡಬೇಕು.

ಈ‌ ಎಲ್ಲಾ ಅಂಶಗಳನ್ನು ಒಳಗೊಂಡಿದೆ ಕೆಪಿಸಿಸಿ ಮನವಿ ಪತ್ರ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version