ದಿನದ ಸುದ್ದಿ
ಕೊರೊನಾ ರೋಗಿಗಳನ್ನು ಗುಣಪಡಿಸಲು ನಮ್ಮಲ್ಲಿ ಉತ್ತಮ ವೈದ್ಯಕೀಯ ತಂಡವಿದೆ : ಸಾರ್ವಜನಿಕರು ಭಯಪಡಬೇಡಿ : ಜಿಲ್ಲಾಧಿಕಾರಿ
ಸುದ್ದಿದಿನ, ದಾವಣಗೆರೆ : ಕೊರೋನಾ ಸೋಂಕಿಗೆ ಸಾರ್ವಜನಿಕರು ಯಾವುದೇ ರೀತಿಯಲ್ಲಿ ಭಯ ಪಡಬಾರದು. ನಮ್ಮ ಸರ್ವೇಕ್ಷಣಾ ತಂಡ ಬಹಳ ಕ್ರೀಯಾಶೀಲವಾಗಿ ಕೆಲಸ ಮಾಡುತ್ತಿದೆ. ಎಪಿಸೆಂಟರ್ ಭಾಗದ ಸುತ್ತಮುತ್ತಲಿನ ಪ್ರತಿಯೊಂದು ಬೀದಿ ಬೀದಿಯ ಮನೆಗಳಲ್ಲಿನ ಜನರ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಕೊರೊನಾದಿಂದ ಗುಣಮುಖರಾದ ಮೂವರನ್ನು ಬುಧವಾರ ಆಸ್ಪತ್ರೆಯಿಂದ ಸಂತಸದಿಂದ ಬೀಳ್ಕೊಡುವ ಸಂದರ್ಭದಲ್ಲಿ ಅವರು ಮಾತನಾಡಿದರು.
ಸಾಕಷ್ಟು ಕೊರೊನಾ ರೋಗಿಗಳನ್ನು ಗುಣಮುಖರನ್ನಾಗಿಸಿ ಆಸ್ಪತ್ರೆಯಿಂದ ಶೀಘ್ರವೇ ಬಿಡುಗಡೆ ಮಾಡಿ ಕಳುಹಿಸುವ ವಿಶ್ವಾಸವಿದೆ. ಜಿಲ್ಲೆಯಲ್ಲಿ ವೈದ್ಯಕೀಯ ತಂಡ ಸೇರಿದಂತೆ ಪ್ರತಿಯೊಬ್ಬರು ಉತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ.
ವಿಶೇಷವಾಗಿ ಮೇಯರ್ ಅವರು ನಮಗೆ ಕೈಜೋಡಿಸಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ಎಲ್ಲ ಪ್ರಯತ್ನ ಹಾಗೂ ಕೆಲಸಗಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಈ ಸಫಲತೆಗೆ ಕಾರಣರಾದ ಎಲ್ಲರಿಗೂ ಧನ್ಯವಾದ ತಿಳಿಸಲು ಇಷ್ಟಪಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243