ಲೋಕಾರೂಢಿ

ಜಗದ ಭದ್ರತೆ, ಶಾಂತಿಗೆ  ಹೊಸ ಸವಾಲು  ಸೈಬರ್  ಟೆರರಿಸಂ!

Published

on

ಘಟನೆ 1…

ದಿನಬೆಳಗಾದರೆ ಇರಾಕ್ನಲ್ಲಿ ಐಸಿಸ್ ಉಗ್ರರು ನಡೆಸುತ್ತಿದ್ದ ರಕ್ತಪಾತದ ಬಗ್ಗೆ ಸುದ್ದಿ ಬರುತ್ತಿದ್ದ ದಿನಗಳವು. ಇದ್ದಕ್ಕಿದ್ದಂತೆ ಐಸಿಸ್ ಟ್ವಿಟರ್ ಖಾತೆಯನ್ನು ಭಾರತದಿಂದ ನಿರ್ವಹಿಸಲಾಗುತ್ತಿದೆ ಎನ್ನುವ ವಿದೇಶಿ ವಾಹಿನಿಯ ಸುದ್ದಿ ಕೇಳಿ ಭಾರತ ಬೆಚ್ಚಿ ಬಿದ್ದಿತ್ತು. ಕೊನೆಯಲ್ಲಿ ಐಸಿಸ್ನೊಂದಿಗೆ ನಂಟು ಹೊಂದಿದ್ದ ಮೆಹ್ದಿ ಮಸೂರ್ ಬಿಸ್ವಾಸ್ನನ್ನು ಬೆಂಗಳೂರಿನಲ್ಲಿ ಬಂಧಿಸಲಾಯಿತು.

ಘಟನೆ 2…

2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕರು ದಾಳಿ ನಡೆಸಿ ಮಾರಣಹೋಮ ನಡೆಸಿದರು. ಆಗ ಅವರು ಬಳಸಿದ್ದು ಸ್ಯಾಟಲೈಟ್ ಫೆÇೀನ್, ಜಿಪಿಎಸ್ ಹಾಗೂ ಗೂಗಲ್ ಅರ್ಥ್.

ಘಟನೆ 3…

ಅದೊಂದು ಪ್ರಖ್ಯಾತ ಕಂಪನಿ. ತನ್ನ ಉತ್ಪನ್ನಗಳ ಬಗೆಗಿನ ರಹಸ್ಯವನ್ನು ಬಹು ಜತನದಿಂದ ಕಾಪಾಡಿಕೊಂಡು ಬಂದಿತ್ತು. ಆದರೆ ಯಾವ ಮಾಹಿತಿಗಳನ್ನು ರಹಸ್ಯವಾಗಿ ಕಾಪಾಡಿಕೊಂಡು ಬರಲಾಗಿತ್ತೋ, ಅವೆಲ್ಲವು ಸೋರಿಕೆಯಾಗಿವೆ ಎನ್ನುವ ಆಘಾತಕಾರಿ ವಿಷಯ ಕಂಪನಿಗೆ ತಡವಾಗಿ ತಿಳಿದುಬಂತು.

ಮೊದಲೆರಡು ಘಟನೆಗಳನ್ನು ಗಮನಿಸಿದಾಗ ಭಯೋತ್ಪಾದಕರು ಅಂತರ್ಜಾಲದ ಪರಿಣಾಮಕಾರಿ ಬಳಕೆ ಮಾಡಿಕೊಂಡಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇದು ಸೈಬರ್ ಟೆರರಿಸಂಗೆ ಉತ್ತಮ ಉದಾಹರಣೆ. ಇನ್ನು ಮೂರನೆ ಘಟನೆಯ ವಿಷಯಕ್ಕೆ ಬಂದರೆ, ತಮ್ಮ ಎದುರಾಳಿ ಕಂಪನಿಗೆ ಹಾನಿಯನ್ನುಂಟುಮಾಡಲು ಅದರ ಪ್ರತಿಸ್ಪರ್ಧಿ ಕಂಪನಿ ಅಂತರ್ಜಾಲದ ಮೂಲಕ ಮಾಹಿತಿಗಳನ್ನು ಕದ್ದು ನೋಡಿತ್ತು. ಇದನ್ನು ಇನ್‍ಫಾರ್ಮೇಷನ್ ವಾರ್‍ಫೇರ್ ಅಥವಾ ‘ಮಾಹಿತಿ ಯುದ್ಧ’ ಎಂದು ಕರೆಯಲಾಗುತ್ತದೆ.

ಮಾಹಿತಿ ಯುದ್ಧ

ಅಂತರ್ಜಾಲದ ಮೂಲಕ ಎಸಗುವ ಯಾವುದೇ ಅಪರಾಧಗಳನ್ನು ಇನ್‍ಫಾರ್ಮೇಷನ್ ವಾರ್‍ಫೇರ್ ಎನ್ನಲಾಗುತ್ತದೆ. ಇದರಡಿ ಬರುವ ಸೈಬರ್ ಟೆರರಿಸಂ ಇಂದು ಜಾಗತಿಕ ಮಟ್ಟದಲ್ಲಿ ತಲೆನೋವಾಗಿ ಪರಿಣಮಿಸಿದೆ. ಭಯೋತ್ಪಾದನೆಯನ್ನೇ ಮುಖ್ಯ ಉದ್ದೇಶವಾಗಿಟ್ಟುಕೊಂಡು ಅಂತರ್ಜಾಲದಲ್ಲಿ ನಡೆಸುವ ಅಪರಾಧಗಳಿಗೆ ಸೈಬರ್ ಟೆರರಿಸಂ ಎನ್ನಲಾಗುತ್ತದೆ.

ಒಂದು ದೇಶವನ್ನು ಗುರಿಯಾಗಿಸಿಕೊಂಡು ಸೈಬರ್ ಟೆರರಿಸಂ ನಡೆಸುವ ಭಯೋತ್ಪಾದಕರ ಮೂಲ ಉದ್ದೇಶ ದೇಶವನ್ನು ಬಲಹೀನಗೊಳಿಸುವುದು. ಇದರಿಂದಾಗಿ ದೇಶವೊಂದು ಸಾಮಾಜಿಕವಾಗಿ, ಆರ್ಥಿಕವಾಗಿ ಜೊತೆಗೆ ಮಾನಸಿಕವಾಗಿಯೂ ಬಲಹೀನಗೊಳ್ಳುತ್ತದೆ. ಇಂದು ಹಲವಾರು ದೇಶಗಳಿಗೆ ತಂತ್ರಜ್ಞಾನವೇ ಬೆನ್ನೆಲುಬಾಗಿದೆ. ಇಂತಹ ಸಂದರ್ಭದಲ್ಲಿ ಅಂತರ್ಜಾಲದ ಮೂಲಕ ತಂತ್ರಜ್ಞಾನಕ್ಕೇ ಹೊಡೆತ ನೀಡುವ ಕಾರ್ಯಯೋಜನೆ ಭಯೋತ್ಪಾದಕರದು.

ಅನಕ್ಷರಸ್ಥರು ಎಂಬ ಭ್ರಮೆ

ಇತ್ತೀಚಿನ ವರ್ಷಗಳವರೆಗೂ ಭಯೋತ್ಪಾದಕರು ಸುಶಿಕ್ಷಿತರಲ್ಲ ಎಂದೇ ನಂಬಲಾಗುತ್ತಿತ್ತು. ಆದರೆ ಇಂದು ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿರುವವರು ವಿದ್ಯಾವಂತರು ಎನ್ನುವುದು ಆಘಾತಕಾರಿ ಸಂಗತಿ. ಅದರಲ್ಲೂ ಸಿಕ್ಕಿಬಿದ್ದಿರುವವರಲ್ಲಿ ಬಹುತೇಕ ಜನ ಉನ್ನತ ಮಟ್ಟದ ವ್ಯಾಸಂಗ ಮಾಡಿದವರೇ.

2008ರ ಮುಂಬೈ ದಾಳಿಯಲ್ಲಿ ಜಿಪಿಎಸ್ ಹಾಗೂ ಸ್ಯಾಟಲೈಟ್ ಫೋನ್ ಬಳಸುವ ಮೂಲಕ ತಂತ್ರಜ್ಞಾನ ಬಳಕೆಯಲ್ಲಿ ತಾವೇನೂ ಕಡಿಮೆಯಿಲ್ಲ ಎಂದು ಭಯೋತ್ಪಾದಕರು ನಿರೂಪಿಸಿದ್ದರು. ಇನ್ನು ಅದಕ್ಕಿಂತಲೂ ಹಿಂದೆ ಹೋದರೆ 1998ರಲ್ಲಿ ಶ್ರೀಲಂಕಾದಲ್ಲಿ ತಮಿಳ್ ಟೈಗರ್ಸ್ ಸಂಘಟನೆ ಅಂತರ್ಜಾಲ ಬಳಕೆ ಮಾಡಿದ ಕುರಿತು ದಾಖಲೆಗಳಿವೆ. ತಮಿಳ್ ಟೈಗರ್ಸ್ ಹಾಗೂ ಅದರ ಸಹವರ್ತಿಗಳ ನಡುವೆ ದಿನವೊಂದಕ್ಕೆ 800 ಇಮೇಲ್‍ಗಳು ಹರಿದಾಡುತ್ತಿದ್ದವು.

ಇಂದು ಜಗತ್ತಿನಾದ್ಯಂತ ಸೈಬರ್ ಟೆರರಿಸಂ ತನ್ನ ಕಬಂದಬಾಹುವನ್ನು ಚಾಚಿದೆ. ಪ್ರತಿಯೊಂದು ರಾಷ್ಟ್ರವೂ ಒಂದಿಲ್ಲ ಒಂದು ರೀತಿಯಲ್ಲಿ ಬೆದರಿಕೆಗೆ ಒಳಪಟ್ಟಿದೆ. ಭಾರತದತ್ತ ಮುಖಮಾಡಿರುವ ಭಯೋತ್ಪಾದಕರು ಸೈಬರ್ ಟೆರರಿಸಂ ಅನ್ನೇ ಮುಖ್ಯವಾಗಿರಿಸಿಕೊಂಡು ಕಾರ್ಯಾಚರಣೆಗೆ ಮುಂದಾಗಿವೆ. ಇನ್ನು ಇಸ್ರೇಲ್ಗೆ ಹಮಾಸ್ ಹಾಗೂ ಹೆಸ್ಬೊಲ್ಲಾದಂತಹ ಸಂಘಟನೆಗಳಿಂದ ಬೆದರಿಕೆ ಬರುತ್ತಿವೆ.

ಇತ್ತೀಚಿನ ದಿನಗಳಲ್ಲಿ ಭಯೋತ್ಪಾದಕರು ಮಾಹಿತಿಗಳನ್ನು ಚಿತ್ರರೂಪದಲ್ಲಿ ಇಮೇಲ್ ಮೂಲಕ ಕಳುಹಿಸಿ ಸಂವಹನ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ ಅದು ಯಾವುದೋ ಚಿತ್ರದಂತಿರುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಅದರಲ್ಲಿ ಮಾಹಿತಿ ಇರುವುದು ಕಂಡುಬರುತ್ತದೆ. ಇಂತಹ ಚಿತ್ರ ಬರೆಯಲು ಅಂತರ್ಜಾಲದಲ್ಲಿ ಸಾಕಷ್ಟು ಉಚಿತ ಸಾಧನಗಳು ಸಿಗುತ್ತವೆ.

ಇನ್ನೊಂದು ಉಪಾಯವೂ ಭಯೋತ್ಪಾದಕರ ಚಾಣಾಕ್ಷತೆಗೆ ಹಿಡಿದ ಕೈಗನ್ನಡಿಯಂತಿದೆ. ಇಮೇಲ್‍ಗಳನ್ನು ಬರೆದು ಕಳುಹಿಸದೆ ಡ್ರಾಫ್ಟ್‍ನಲ್ಲಿ ಸೇವ್ ಮಾಡುವುದು. ನಂತರ ಪಾಸ್‍ವರ್ಡ್‍ಗಳನ್ನು ನೀಡುವ ಮೂಲಕ ಉಗ್ರರು ಮಾಹಿತಿ ರವಾನಿಸುತ್ತಾರೆ. ಸಂಬಂಧಿಸಿದವರು ಖಾತೆ ತೆರೆದು ಡ್ರಾಫ್ಟ್‍ನಲ್ಲಿರುವ ಸಂದೇಶ ಓದಿಕೊಳ್ಳುತ್ತಾರೆ. ಇದರಿಂದಾಗಿ ಇಮೇಲ್ ರವಾನೆಯ ಮೇಲೆ ಕಣ್ಣಿಡುವವರಿಗೆ ಮಣ್ಣು ಮುಕ್ಕಿಸುವ ಉಪಾಯ ಭಯೋತ್ಪಾದಕರದು.

ಇದನ್ನು ಓದಿ: ಚುನಾವಣೆಯ ಹೊಸ್ತಿಲಲ್ಲಿ ಮಾಲೀಕ-ಸೇವಕ

ಸೈಬರ್ ಭಯೋತ್ಪಾದಕರ ಕಾರ್ಯವೈಖರಿ

ಸೈಬರ್ ಭಯೋತ್ಪಾದಕರಿಗೆ ಗಣಕಯಂತ್ರಕ್ಕೆ ಸಂಬಂಧಿಸಿದ ಅತ್ಯುನ್ನತ ಮಟ್ಟದ ತಂತ್ರಜ್ಞಾನಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಅಥವಾ ಕಂಪ್ಯೂಟರ್ ಕ್ಷೇತ್ರದ ನಿಪುಣರನ್ನು ಭಯೋತ್ಪಾದಕ ಸಂಘಟನೆಗಳು ತಂಡಕ್ಕೆ ಸೇರಿಸಿಕೊಳ್ಳುತ್ತವೆ. ಯಾವುದೇ ಒಂದು ದೇಶವನ್ನು ಗುರಿಯಾಗಿಸಿಕೊಂಡ ನಂತರ ಮೊದಲು ದೇಶದ ಆರ್ಥಿಕ ವಲಯದ ಮೇಲೆ ಹಿಡಿತ ಸಾಧಿಸುವುದು ವಿಧ್ವಂಸಕರ ಆಶಯವಾಗಿರುತ್ತದೆ. ಹೀಗಾಗಿ ಅವರ ಪ್ರಥಮ ಹಂತದ ದಾಳಿ ನಡೆಯುವುದು ಆಯಾ ದೇಶಗಳ ಉದ್ಯಮ ಹಾಗೂ ಗಣಕೀಕೃತ ವ್ಯವಸ್ಥೆಯ ಮೇಲೆ. ಗಣಕಯಂತ್ರದಲ್ಲಿ ಕಾರ್ಯ ನಿರ್ವಹಿಸಲು ಉಪಯೋಗಿಸುವ ಆಪರೇಟಿಂಗ್ ಸಿಸ್ಟಂನಲ್ಲಿರುವ ದೌರ್ಬಲ್ಯವನ್ನು ಸೈಬರ್ ಭಯೋತ್ಪಾದಕರು ಮೊದಲು ಪತ್ತೆಹಚ್ಚುತ್ತಾರೆ. ನಂತರ ನೆಟ್ವರ್ಕ್ನಲ್ಲಿರುವ ದುರ್ಬಲ ಭದ್ರತೆಯನ್ನು ಉಪಯೋಗಿಸಿಕೊಂಡು ದುರುದ್ದೇಶಪೂರಿತವಾದ ಸಂಕೇತವನ್ನು ಅದರಲ್ಲಿ ಹರಿಬಿಡುತ್ತಾರೆ. ಇದರಿಂದಾಗಿ ವ್ಯವಸ್ಥೆಯಲ್ಲಿರುವ ಮಾಹಿತಿಗಳು ನಾಶವಾಗುತ್ತವೆ ಅಥವಾ ಸೋರಿಕೆಯಾಗುತ್ತದೆ.

ಇದು ಒಂದು ರೀತಿಯದಾದರೆ, ಮಾನಸಿಕವಾಗಿ ಅವರು ನಡೆಸುವ ದಾಳಿ ಇನ್ನೂ ಅಪಾಯಕಾರಿ. ಯುವಕರನ್ನು ತಮ್ಮ ಸಿದ್ಧಾಂತದೆಡೆಗೆ ಆಕರ್ಷಿಸಿ, ಹಣ, ಆಸ್ತಿಯ ಆಮಿಷ ಒಡ್ಡಲಾಗುತ್ತದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಾ ಆಂತರಿಕ ಕಲಹ ಉಂಟುಮಾಡಲು ಪ್ರಯತ್ನಿಸಲಾಗುತ್ತದೆ.

ಇನ್ನುಳಿದಂತೆ ಜಿಪಿಎಸ್, ಸ್ಯಾಟಲೈಟ್ ಫೋನ್ ಮೊದಲಾದವುಗಳ ಬಳಕೆಯೂ ಭಯೋತ್ಪಾದಕರು ತಮ್ಮ ಚಟುವಟಿಕೆಗಳಿಗೆ ಅಂತರ್ಜಾಲವನ್ನು ಸಮರ್ಥವಾಗಿ ಬಳಸಿಕೊಳ್ಳುವ ರೀತಿಯನ್ನು ತೋರಿಸುತ್ತದೆ.

ಭಾರತಕ್ಕೆ ಸವಾಲು

 ಭಾರತದಲ್ಲಿ ಈಗ ಎಲ್ಲ ಯೋಜನೆಗಳನ್ನು ಆಡಳಿತಕ್ಕೆ ಒಳಪಡಿಸಲಾಗುತ್ತಿದೆ. ಜೊತೆಗೆ ಬ್ಯಾಂಕುಗಳ ವಹಿವಾಟು ಕೂಡ ಹೆಚ್ಚಾಗಿ ಅಂತರ್ಜಾಲದ ಮೂಲಕವೇ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕಾದ್ದು ಅತ್ಯಗತ್ಯ. ಸೈಬರ್ ಅವಘಡ ತಪ್ಪಿಸಲು ಅನೇಕ ಸಂಸ್ಥೆಗಳು ಭಾರತದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಇದೆಲ್ಲದರ ನಡುವೆ ನಾಗರಿಕರಲ್ಲಿ ಅಂತರ್ಜಾಲ ಭದ್ರತೆಯ ಬಗ್ಗೆ ಇರುವ ಮಾಹಿತಿ ಕೊರತೆಯು ಆಂತರಿಕ ಭದ್ರತೆಗೆ ಅತಿದೊಡ್ಡ ಸವಾಲಾಗಿದೆ. ಸೈಬರ್ ಟೆರರಿಸಂಗೆ ತುತ್ತಾದಲ್ಲಿ ಅದಕ್ಕೆ ಸ್ಪಂದಿಸಲು ಬೇಕಾದ ಅರ್ಹತೆಯುಳ್ಳವರ ಕೊರತೆಯಿದೆ. ಅದಕ್ಕೆ ತಕ್ಕುದಾದ ತರಬೇತಿ ನೀಡುವವರ ಕೊರತೆಯೂ ಇದೆ. ದುರ್ಬಲ ಮಾಹಿತಿ ಮತ್ತು ತಂತ್ರಜ್ಞಾನ ಕಾಯಿದೆ, ಇ-ಮೇಲ್ ಅಕೌಂಟ್ ಕುರಿತು ಯಾವುದೇ ನಿಯಮಾವಳಿಗಳು ಇಲ್ಲದಿರುವುದು ದೇಶವನ್ನು ಸೈಬರ್ ಭಯೋತ್ಪಾದಕರಿಗೆ ಸುಲಭ ತುತ್ತಾಗುವಂತೆ ಮಾಡುತ್ತವೆ.

ಸೈಬರ್ ಟೆರರಿಸಂ ವಿರುದ್ಧ ಹೋರಾಡಲು ಉನ್ನತ ಮಟ್ಟದ ಯೋಜನೆಗಳು ಹಾಗೂ ಸಿದ್ಧತೆಗಳು ಬೇಕಾಗುತ್ತವೆ. ಸಾಮಾಜಿಕವಾಗಿ, ಆರ್ಥಿಕವಾಗಿ ದೇಶವನ್ನು ಕಾಪಾಡಲು ಉನ್ನತ ಮಟ್ಟದ ತಯಾರಿ ನಡೆಸಬೇಕು. ಮಾಹಿತಿ ಸಂಗ್ರಾಹಕದಲ್ಲಿನ ಲೋಪಗಳನ್ನು ಖುದ್ದಾಗಿ ಕಂಡುಹಿಡಿದು ಅವುಗಳನ್ನು ಸರಿಪಡಿಸುವತ್ತ ಹಾಗೂ ಭದ್ರತೆ ನೀಡುವತ್ತ ಗಮನ ನೀಡಬೇಕು. ಇದೆಲ್ಲವನ್ನೂ ತೂಗಿಸಿಕೊಂಡು ಹೋಗುವ ಕಾರ್ಯತಂತ್ರ ರೂಪಿಸಬೇಕು. ಮಾಹಿತಿ ಭದ್ರತೆಗೆ ಸೂಕ್ತ ಕ್ರಮ ಕೈಗೊಂಡು ಕಾಲಕಾಲಕ್ಕೆ ನವೀಕರಿಸುತ್ತಿರಬೇಕು.

ಅಂತರ್ಜಾಲ ಮಾಧ್ಯಮದಿಂದಾಗಿ ದೇಶ-ದೇಶಗಳ ನಡುವೆ ಅಂತರ ಕಡಿಮೆಯಾಗಿದೆ. ಅಂತರ ಕಡಿಮೆಯಾದಂತೆ ಆತಂಕವೂ ಹೆಚ್ಚತೊಡಗಿದೆ. ಬಾಹ್ಯವಾಗಿ ಭಯೋತ್ಪಾದನೆ ಹೆಚ್ಚಿದಂತೆ ಸೈಬರ್ ಭಯೋತ್ಪಾದಕರೂ ಅತಿ ವೇಗವಾಗಿ ಹುಟ್ಟಿಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಭದ್ರತೆಯ ಕಡೆ ಗಮನ ಹರಿಸಬೇಕಿದೆ. ಜೊತೆಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸೈಬರ್ ಟೆರರಿಸಂ ವಿರುದ್ಧ ಸೆಣೆಸಲು ಸಕಲ ರೀತಿಯಲ್ಲೂ ಸಜ್ಜಾಗಬೇಕಿದೆ.

ಸೈಬರ್ ಟೆರರಿಸಂ ವಿರುದ್ಧ ದೇಶದಲ್ಲಿರುವ ಸಂಸ್ಥೆಗಳು

  • ನ್ಯಾಶನಲ್ ಇನ್ಫಾರ್ಮೆಟಿಕ್ ಸೆಂಟರ್ (ಎನ್ಐಸಿ)
  • ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ
  • ನ್ಯಾಶನಲ್ ಇನ್ಫಾರ್ಮೇಶನ್ ಸೆಕ್ಯುರಿಟಿ ಅಶುರನ್ಸ್ ಪ್ರೋಗ್ರಾಮ್ (ಎನ್ಐಎಸ್ಎಪಿ)
  • ಇಂಡೋಯುಎಸ್ ಸೈಬರ್ ಸೆಕ್ಯೂರಿಟಿ ಫೋರಂ

English summary: Cyber ​​Terrorism is a new challenge for world security and peace

(ಲೇಖಕರು: ಕಿರಣ್ ಭೈರುಂಬೆ. ಮೊಬೈಲ್:9482133340 ಇಮೇಲ್ : kiranbhat23@gmail.com) 

Leave a Reply

Your email address will not be published. Required fields are marked *

Trending

Exit mobile version