ಬಹಿರಂಗ
ದಲಿತ ಚಳುವಳಿಯ ಮುಂದೆ ಮತ್ತೊಂದು ಸವಾಲು
- ಮೂಲ: ಬದ್ರಿನಾರಾಯಣ್(ಹಿಂದೂ ಜುಲೈ 14), ಅನುವಾದ: ನಾ ದಿವಾಕರ
ಕೋವಿದ್ 19 ಬದಲಾಗುತ್ತಿರುವ ಸಮಾಜದ ಲಕ್ಷಣಗಳನ್ನು ಗ್ರಹಿಸಲು ನಮ್ಮನ್ನು ಪ್ರೇರೇಪಿಸುತ್ತಿದೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಕೊರೋನಾ ಪಿಡುಗು ಸಾಮಾಜಿಕವಾಗಿ ಆರ್ಥಿಕವಾಗಿ ನಿರ್ಲಕ್ಷಿಸಲ್ಪಟ್ಟವರನ್ನು ಕುರಿತ ಸಂಕಥನದ ದಿಕ್ಕನ್ನೇ ಬದಲಿಸಿದೆ. ದಲಿತರ ಸಮಸ್ಯೆಗಳು ಈ ಸಂಕಥನದ ಒಂದು ಭಾಗವಾಗಿದ್ದರೂ ಕೋವಿದ್ 19 ನಿಂದ ಉಲ್ಬಣಿಸುತ್ತಿರುವ ಆರ್ಥಿಕ ಸಮಸ್ಯೆಗಳು ಮತ್ತು ವ್ಯತ್ಯಯಗಳ ಸುತ್ತಲಿನ ವ್ಯಾಪಕ ಚರ್ಚೆಯಲ್ಲಿ ಇದು ಮುಳುಗಿಹೋಗಿದೆ.
ಕೋವಿದ್ 19 ಸಂದರ್ಭದಲ್ಲಿ ನಿರ್ಲಕ್ಷಿತ ಸಮುದಾಯಗಳ ಬಗ್ಗೆ ನಡೆಯುತ್ತಿರುವ ರಾಜಕೀಯ ಸಂಕಥನಗಳಲ್ಲಿ ಎರಡು ಪ್ರಮುಖ ಬದಲಾವಣೆಯಾಗಿರುವುದನ್ನು ಗಮನಿಸಬಹುದು. ಲಾಕ್ ಡೌನ್ ಪರಿಣಾಮವಾಗಿ ದೇಶದ ಬಡ ಜನತೆ, ವಲಸೆ ಕಾರ್ಮಿಕರು ತೀವ್ರ ಸಂಕಷ್ಟಕ್ಕೊಳಗಾದ ನಂತರ ರಾಜಕೀಯ ಸಂಕಥನಗಳಲ್ಲಿ ಇವರ ಸಮಸ್ಯೆಗಳೇ ಕೇಂದ್ರ ಬಿಂದು ಆಗುತ್ತಿದೆ.
ಎರಡನೆಯದಾಗಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ನಿರ್ಲಕ್ಷಿತ ಸಮುದಾಯಗಳ ಸ್ಥಾನಮಾನ ಮತ್ತು ರಕ್ಷಣೆ ಪ್ರಧಾನವಾಗಿ ಚರ್ಚೆಗೊಳಗಾಗುತ್ತಿದೆ. ಆದರೆ ನಿರ್ಲಕ್ಷಿತ ಸಮುದಾಯಗಳು, ಬಡ ಜನತೆ ಮತ್ತು ದುರ್ಬಲ ವರ್ಗಗಳ ಬಗ್ಗೆ ನಡೆಯುತ್ತಿರುವ ವ್ಯಾಪಕ ಚರ್ಚೆಯಲ್ಲಿ ದಲಿತರ ಸಮಸ್ಯೆಗಳು ನೇಪಥ್ಯಕ್ಕೆ ಸರಿದಿವೆ.
ಸಮಕಾಲೀನ ಚರ್ಚೆಗಳಲ್ಲಿ ವರ್ಗ ಆಧಾರಿತ ಪರಿಭಾಷೆ ಹೆಚ್ಚಾಗುತ್ತಿದೆ. ಜಾತಿ ಆಧಾರಿತ ಸಮಸ್ಯೆಗಳು ಬಹುತೇಕ ಮಾಯವಾಗಿದೆ ಅಥವಾ ಇತರ ಸಮಸ್ಯೆಗಳಲ್ಲಿ ಸಮ್ಮಿಳಿತವಾಗಿ ಚರ್ಚೆಗೊಳಗಾಗುತ್ತಿದೆ. ಈ ಹೊಸ ಬದಲಾವಣೆ ಮತ್ತು ಪಲ್ಲಟಗಳೊಡನೆ ಪರಿಣಾಮಕಾರಿಯಾಗಿ ಹೊಂದಿಕೊಳ್ಳುವ ನಿಟ್ಟಿನಲ್ಲಿ ಬಹುಜನ ಸಮಾಜ ಪಕ್ಷದ ಮಾಯಾವತಿ ಮತ್ತು ಭೀಮ್ ಆರ್ಮಿಯ ಆಝಾದ್ ವಿಫಲರಾಗಿದ್ದಾರೆ.
ಈ ಹೊಸ ಚರ್ಚೆಗಳಲ್ಲಿ ತಮ್ಮ ರಾಜಕೀಯ ನೆಲೆಗಳನ್ನು ಅಳವಡಿಸಿಕೊಂಡು ಮುಂದುವರೆಯಲು ಇಬ್ಬರೂ ನಾಯಕರು ವಿಫಲರಾಗಿದ್ದಾರೆ. ಈ ಹಂತದಲ್ಲಿ ಇಬ್ಬರೂ ನಾಯಕರು ತಮ್ಮ ಸಂಪೂರ್ಣ ಜಾತಿ ಆಧಾರಿತ ಪರಿಭಾಷೆಯನ್ನು ಬದಿಗೊತ್ತಿ ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ರಾಜಕೀಯ ಸಂಕಥವನ್ನು ಮುಂದುವರೆಸಬೇಕಿದೆ. ವಲಸೆ ಕಾರ್ಮಿಕರಲ್ಲಿ ಅಪಾರ ಸಂಖ್ಯೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರು ಇದ್ದಾರೆ.
ಅದರೆ ಉತ್ತರ ಭಾರತದ ದಲಿತ ನಾಯಕರು ಈ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗಿಲ್ಲ. ವಲಸೆ ಕಾರ್ಮಿಕರಲ್ಲಿ ಬಹುಪಾಲು ಜನರು ದಲಿತ ಮತ್ತು ಒಬಿಸಿ ವರ್ಗಗಳಿಗೇ ಸೇರಿದರವಾಗಿರುವುದರಿಂದ ತಮ್ಮ ಜಾತಿ ಪ್ರಧಾನ ಕ್ಷೇತ್ರಗಳಲ್ಲಿ ವರ್ಗ ಪರಿಭಾಷೆಗಳಾದ ಕಾರ್ಮಿಕರು ಮತ್ತು ಬಡ ಜನರು ಎನ್ನುವುದನ್ನು ಹೇಗೆ ಬಳಸುವುದು ಎನ್ನುವ ಗೊಂದಲ ಇಬ್ಬರೂ ನಾಯಕರನ್ನು ಕಾಡುತ್ತಿದೆ.
ಈ ಗೊಂದಲದ ಫಲವಾಗಿ ಇಬ್ಬರೂ ದಲಿತ ನಾಯಕರು ತಮ್ಮ ವಾದ ಮಂಡಿಸಲು ಹೆಣಗಾಡುತ್ತಿರುವುದು ಸ್ಪಷ್ಟವಾಗುತ್ತಿದೆ. ರಾಜಕೀಯ ಚರ್ಚೆಗಳಲ್ಲಿ ಕಂಡುಬರುತ್ತಿರುವ ಈ ಪಲ್ಲಟಗಳು ಕೊರೋನೋತ್ತರ ಸಂದರ್ಭದಲ್ಲಿ ಹೀಗೆಯೇ ಮುಂದುವರೆಯುವ ಸಾಧ್ಯತೆಗಳೂ ಇದ್ದು , ಇನ್ನೂ ಹಲವು ವರ್ಷಗಳ ಕಾಲ ನಿರ್ಲಕ್ಷಿತ ಸಮುದಾಯಗಳ ಸಮಸ್ಯೆಗಳು ಹೆಚ್ಚಾಗುತ್ತಲೇ ಹೋಗುವುದರಿಂದ ಈ ಚರ್ಚೆಯೂ ಹೀಗೆಯೇ ಮುಂದುವರೆಯುತ್ತದೆ.
ಉತ್ತರ ಭಾರತದ ದಲಿತ ಚಳುವಳಿಗಳಲ್ಲಿ ಜನರನ್ನು ಕ್ರೋಢೀಕರಿಸುವ ಸಂದರ್ಭದಲ್ಲಿ ಜಾತಿ ಆಧಾರಿತ ದ್ವಿಮಾನ ಪ್ರಶ್ನೆಗಳನ್ನೇ ಪ್ರಧಾನವಾಗಿ ಪರಿಗಣಿಸಲಾಗುತ್ತದೆ. ಆದರೆ ಬದಲಾದ ರಾಜಕೀಯ ಸನ್ನಿವೇಶಕ್ಕೆ ಸ್ಪಂದಿಸುವಲ್ಲಿ ವೈಫಲ್ಯ ಎದ್ದುಕಾಣುತ್ತದೆ. ಕಾನ್ಷಿರಾಮ್ ನೇತೃತ್ವದ 1990ರ ದಶಕದ ಬಹುಜನ ಚಳುವಳಿಯ ಕಾಲದಿಂದಲೂ ಈ ನಾಯಕರು ತಮ್ಮ ವಾಕ್ ಸರಣಿಯನ್ನಾಗಲೀ, ರಾಜಕೀಯ ನಡೆನುಡಿಯನ್ನಾಗಲೀ ಬದಲಿಸಿಯೇ ಇಲ್ಲ.
ಇಂದು ದಲಿತ ಮತ್ತು ಬಹುಜನ ಚಳುವಳಿ ಕಾರ್ಯಸೂಚಿಯ ಕೊರತೆ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಕೊರತೆಯನ್ನು ಎದುರಿಸುತ್ತಿದೆ.
ಈಡೇರಿಸಲಾರದ ಭರವಸೆಗಳನ್ನೇ ಮತ್ತೆ ಮತ್ತೆ ಘೋಷಿಸುತ್ತಲೇ , ಹೊಸ ಘೋಷಣೆಗಳನ್ನು ಹುಟ್ಟುಹಾಕುವುದರಿಂದ ಈ ಚಳುವಳಿಗಳ ಬೆಂಬಲಿಗರಲ್ಲಿ ಮತ್ತು ಕಾರ್ಯಕರ್ತರಲ್ಲಿ ಭ್ರಮನಿರಸನ ಉಂಟಾಗುತ್ತಿದೆ.
ಮತ್ತೊಂದೆಡೆ ಉತ್ತರ ಭಾರತದ ದಲಿತ ಚಳುವಳಿ ನಾಯಕತ್ವದ ಬಿಕ್ಕಟ್ಟಿನಿಂದ ಬಳಲುತ್ತಿದೆ.
ಚಳುವಳಿ ಮತ್ತು ಪಕ್ಷದ ನಡುವಿನ ಕರುಳಿನ ಕೊಂಡಿ ಶಿಥಿಲವಾಗಿರುವುದರಿಂದ ಈ ಬಿಕ್ಕಟ್ಟು ದಿನೇ ದಿನೇ ಉಲ್ಬಣಿಸುತ್ತಿದೆ. ಉತ್ತರಪ್ರದೇಶ, ಬಿಹಾರ, ಪಂಜಾಬ್ ಮತ್ತು ರಾಜಸ್ಥಾನ ಈ ರಾಜ್ಯಗಳಲ್ಲಿ ದಲಿತ ಚಳುವಳಿಗಳ ಹಕ್ಕೊತ್ತಾಯಗಳು ದಲಿತ-ಬಹುಜನ ಚುನಾವಣಾ ರಾಜಕಾರಣದ ಗುಂಪುಗಳಿಗೆ, ಪಕ್ಷಗಳಿಗೆ ಸೀಮಿತವಾಗಿದೆ. ಜಿಗ್ನೇಶ್ ಮೆವಾನಿ ಮತ್ತು ಆಝಾದ್ ಅವರ ನೇತೃತ್ವದ ಪರ್ಯಾಯ ಸಾಮಾಜಿಕ ಚಳುವಳಿಗಳೂ ಸಹ ಇದೇ ಚುನಾವಣಾ ರಾಜಕಾರಣದ ಸುಳಿಗೆ ಸಿಲುಕಿವೆ.
1990ರ ಬಹುಜನ ಚಳುವಳಿಯ ಸಂದರ್ಭದಲ್ಲಿ ದಲಿತ ಚಳುವಳಿ ಮತ್ತು ಬಹುಜನ ಪಕ್ಷ ಎರಡೂ ಸಹ ಪರಸ್ಪರ ಸಹಯೋಗದೊಂದಿಗೆ ಮುನ್ನಡೆಯಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಬಹುಜನ ಸಾಮಾಜಿಕ ಚಳುವಳಿಯಿಂದಲೇ ರೂಪುಗೊಂಡ ಬಹುಜನ ಸಮಾಜ ಪಕ್ಷ ಕ್ರಮೇಣ ಗೋಪುರಾಕಾರದಲ್ಲೇ ಬೆಳೆಯುತ್ತಾ ಹೋಯಿತು.
ಮಾಯಾವತಿ ನಾಯಕತ್ವದಲ್ಲಿ ಪಕ್ಷ ದಲಿತ ಚಳುವಳಿಯೊಡನೆ ಸಂಪರ್ಕವನ್ನೇ ಕಡೆದುಕೊಂಡಿದೆ. ಬಹುಜನ ಸಮಾಜ ಪಕ್ಷದಲ್ಲಿ ವಿವಿಧ ದಲಿತ-ಬಹುಜನ ಸಮುದಾಯಗಳ ನಾಯಕರು ಹೊರಹೊಮ್ಮುವುದು ಸಾಧ್ಯವಾಗಲೇ ಇಲ್ಲ. ಇದರ ಪರಿಣಾಮ ಸಾಮಾಜಿಕ ತಳಹದಿಯ ವ್ಯಾಪ್ತಿ ಕಡಿಮೆಯಾಗುತ್ತಾ ಹೋಗುವುದೇ ಅಲ್ಲದೆ ದಲಿತ ಚಳುವಳಿಯೂ ದುರ್ಬಲವಾಗುತ್ತಲೇ ಇದೆ.
ಹಾಗಾಗಿ ಒಂದೆಡೆ ಬಹುಜನ ಚಳುವಳಿಯು ಅಪಾರ ಸಂಖ್ಯೆಯಲ್ಲಿರುವ ಬಹುಜನ-ದಲಿತ ಸಮುದಾಯದ ಜನರಿಗೆ ರಾಜಕೀಯ ಆಕಾಂಕ್ಷೆಗಳನ್ನು ಹೊಂದಲು ಅವಕಾಶ ನೀಡಿದರೆ ಮತ್ತೊಂದೆಡೆ ಹೊಸ ನಾಯಕತ್ವ ಬೆಳೆಯಲು ಇದ್ದ ಅವಕಾಶಗಳನ್ನು ಹೊಸಕಿ ಹಾಕುವ ಮೂಲಕ ವಿವಿಧ ಹಂತಗಳಲ್ಲಿ ಇರಬಹುದಾದ ರಾಜಕೀಯ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿದೆ.
ತನ್ಮೂಲಕ ಕಾರ್ಯಕರ್ತರ ಉತ್ಸಾಹಕ್ಕೆ ತಣ್ಣೀರೆರಚಿರುವುದೇ ಅಲ್ಲದೆ ಪಕ್ಷ ಮತ್ತು ಚಳುವಳಿಯ ಸಹಜ ಬೆಳವಣಿಗೆಗೆ ಕಡಿವಾಣ ಹಾಕಿದೆ. ದಲಿತ ಚಳುವಳಿ ನಿರಂತರವಾಗಿ ಹೊಸ ಸವಾಲುಗಳನ್ನು ಎದುರಿಸುತ್ತಲೇ ಇದೆ. ಆದರೆ ಇದರ ನಾಯಕರು ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ತಮ್ಮ ರಾಜಕೀಯ ಪರಿಭಾಷೆಯನ್ನು ಮತ್ತು ವಿಧಾನಗಳನ್ನು ಬದಲಾಯಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.
ಅಂಬೇಡ್ಕರ್ ಸಿದ್ಧಾಂತದ ಪ್ರಭಾವದಿಂದ ಮತ್ತು ದಲಿತ ಬಹುಜನ ಚಳುವಳಿಗಳ ಪ್ರಭಾವದಿಂದ ದಲಿತ ಗುಂಪುಗಳ ಒಂದು ವರ್ಗದಲ್ಲಿ ರಾಜಕೀಯ ಜಾಗೃತಿ ಮತ್ತು ದಲಿತ ಪ್ರಜ್ಞೆಯನ್ನು ರೂಪಿಸಲಾಗಿತ್ತು. ಏತನ್ಮಧ್ಯೆ ದಲಿತ ಸಮುದಾಯದೊಳಗೆ ಹಿಂದುತ್ವ ನಾಯಕರ ಹಸ್ತಕ್ಷೇಪದ ಪರಿಣಾಮವಾಗಿ ದಲಿತರಲ್ಲಿ ಅತ್ಯಂತ ನಿರ್ಲಕ್ಷ್ಯಕ್ಕೊಳಗಾದವರನ್ನು ಹಿಂದುತ್ವ ರಾಜಕಾರಣದಲ್ಲಿ ಪಳಗಿಸಲು ಸಾಧ್ಯವಾಗಿದೆ.
ಈಗ ಕೋವಿದ್ 19 ದಲಿತ ಚಳುವಳಿಗೆ ಹೊಸ ಸವಾಲುಗಳನ್ನು ತಂದೊಡ್ಡಿದೆ. ಜಾತಿ ಆಧಾರಿತ ಅಸ್ಮಿತೆಗಳು ದಲಿತ ಚಳುವಳಿಗಳ ಸಂಕಥನಗಳಿಗೆ ಸೈದ್ಧಾಂತಿಕ ಭೂಮಿಕ ಒದಗಿಸಿದ್ದವು, ಆದರೆ ಈಗ ಸಮಸ್ಯೆಗಳು ಜಾತಿ ಮತ್ತು ಧರ್ಮವನ್ನು ಮೀರಿ ಮುನ್ನಡೆದಿದೆ. ಇದು ಹೊಸ ಸವಾಲನ್ನು ತಂದೊಡ್ಡಿದೆ.ಈ ಸವಾಲು ತಾತ್ಕಾಲಿಕವೇ ಇರಬಹುದು ಆದರೆ ಇದು ದಲಿತ ರಾಜಕಾರಣದ ಕ್ರಿಯಾತ್ಮಕ ಪರಿವರ್ತನೆಗೆ ಎಡೆಮಾಡಿಕೊಡುತ್ತದೆ. ಬದಲಾದ ಸನ್ನಿವೇಶಗಳಿಗೆ ಹೊಂದಿಕೊಂಡು ಮುನ್ನಡೆಯಲು ದಲಿತ ಚಳುವಳಿಗಳು ಹೊಸ ಸಾಮಾಜಿಕ ತಂತ್ರಗಾರಿಕೆಗಳನ್ನು ರೂಪಿಸಿಕೊಳ್ಳುವುದು ಅತ್ಯವಶ್ಯ.
ಸುದ್ದಿದಿನ.ಕಾಂ|ವಾಟ್ಸಾಪ್|9980346243