ದಿನದ ಸುದ್ದಿ
ದಾವಣಗೆರೆ | ಆಸ್ಪತ್ರೆಗಳ ಎದುರು ಬೆಡ್ ಸ್ಥಿತಿಗತಿ ಬೋರ್ಡ್‍ನಲ್ಲಿ ಪ್ರದರ್ಶಿಸಲಿ : ಜಿ.ಎಂ.ಸಿದ್ದೇಶ್ ಕಿಡಿ
ಸುದ್ದಿದಿನ, ದಾವಣಗೆರೆ : ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳಲ್ಲಿ ಶೇ. 75 ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿ ಸರ್ಕಾರಕ್ಕೆ ಮೀಸಲಿಡುವಂತೆ ಆದೇಶ ಹೊರಡಿಸಲಾಗಿದೆ. ಎಬಿಎಆರ್‍ಕೆ ಯೋಜನೆಯಡಿ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಸರ್ಕಾರಿ ವೈದ್ಯರು ಶಿಫಾರಸು ಮಾಡಿರುವ ರೋಗಿಗಳಿಗೂ ಬೆಡ್ ನೀಡುತ್ತಿಲ್ಲ, ಮೀಸಲಿರುವ ಬೆಡ್‍ಗಳಲ್ಲಿ ಖಾಸಗಿ ಆಸ್ಪತ್ರೆಯವರೇ ರೋಗಿಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ, ಅಲ್ಲದೆ ಹೆಚ್ಚಿನ ಶುಲ್ಕವನ್ನೂ ವಿಧಿಸುತ್ತಿದ್ದಾರೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗಳು ಎಬಿಎಆರ್‍ಕೆ ಯೋಜನೆಯಡಿ ರೋಗಿಗಳನ್ನು ದಾಖಲಿಸಿ ಉಚಿತ ಚಿಕಿತ್ಸೆ ನೀಡಬೇಕು, ಸಂಬಂಧಪಟ್ಟ ಶುಲ್ಕವನ್ನು ನಿಯಮಾನುಸಾರ ಎಬಿಎಆರ್‍ಕೆ ಯೋಜನೆಯಡಿ ಪಡೆದುಕೊಳ್ಳಬೇಕು. ಆರೋಗ್ಯ ಇಲಾಖೆ ಅಧಿಕಾರಿಗಳು ಇದನ್ನು ಪರಿಶೀಲಿಸುತ್ತಿಲ್ಲ ಏಕೆ?. ಹೀಗಾದಲ್ಲಿ ಸರ್ಕಾರ ಆದೇಶ ಹೊರಡಿಸಿ ಏನು ಪ್ರಯೋಜನ ಎಂದರು.
ಇದನ್ನೂ ಓದಿ | ದಾವಣಗೆರೆ | 10 ಕೆಎಲ್ ಆಕ್ಸಿಜನ್ ಘಟಕ ಮಂಜೂರು
ಸಚಿವರು ಪ್ರತಿಕ್ರಿಯಿಸಿ, ಕೋವಿಡ್ ಸೋಂಕಿತರಿಗೆ ಬೆಡ್ ದೊರೆಯುತ್ತಿಲ್ಲ, ಚಿಕಿತ್ಸೆ ಸಿಗುತ್ತಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ. ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಕ್ಕಾಗಿ ಮೀಡಲಿರುವ ಬೆಡ್‍ಗಳು, ಆಕ್ಸಿಜನ್, ವೆಂಟಿಲೇಟರ್ ಸೇರಿದಂತೆ ಎಲ್ಲ ವ್ಯವಸ್ಥೆಯ ವಿವರವನ್ನು ಬೋರ್ಡ್‍ನಲ್ಲಿ ಪ್ರದರ್ಶಿಸಬೇಕು ಎಂದು ಕಳೆದ ಬಾರಿ ಸಭೆ ನಡೆಸಿದ ಸಂದರ್ಭದಲ್ಲಿಯೂ ಸೂಚನೆ ನೀಡಲಾಗಿತ್ತು.
ಇದನ್ನು ಪಾಲಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ನಾಳೆಯಿಂದಲೇ ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆಗಳ ಎದುರು ಬೆಡ್‍ಗಳ ಸ್ಥಿತಿಗತಿ ವಿವರವುಳ್ಳ ಮಾಹಿತಿಯನ್ನು ಬೋರ್ಡ್‍ನಲ್ಲಿ ಪ್ರದರ್ಶಿಸಬೇಕು. ಇದನ್ನು ಡಿಹೆಚ್‍ಒ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243