ದಿನದ ಸುದ್ದಿ
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಗಿತ್ತೆ ಮಾಧವ್ ವಿಠ್ಠಲ್ ರಾವ್ ರವರಿಗೆ ಕರವೇ(ಪ್ರವೀಣ ಶಟ್ಟಿ ಬಣ) ಮನವಿ ಸಲ್ಲಿಸಿತು.
ಜಲ್ಲಾಧ್ಯಕ್ಷ ಜಮ್ನಳ್ಳಿ ನಾಗರಾಜ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಗಳಲ್ಲಿ ಬಡ ಕುಟುಂಬಗಳ ಮಕ್ಕಳೇ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು, ಸದರಿ ಮಕ್ಕಳಿಗೆ ವಸತಿ ಶಾಲೆಯಲ್ಲಿ ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸದೇ ಇರುವುದರಿಂದ ಮಕ್ಕಳು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.
ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಇರುವುದಿಲ್ಲ. ಅಲ್ಲದೇ ಮಕ್ಕಳಿಗೆ ಸರಿಯಾಗಿ ಊಟದ ವ್ಯವಸ್ಥೆ ಸಮರ್ಪಕವಾಗಿರುವುದಿಲ್ಲ, ಶೌಚಾಲಯ ಸೌಕರ್ಯಗಳಿರುವುದಿಲ್ಲ, ಮಕ್ಕಳ ಮೇಲ್ವಿಚಾರಣೆಗೆ ವಾರ್ಡನ್‌ಗಳು ರಾತ್ರಿ ಸಮಯದಲ್ಲಿ ಸ್ಥಳದಲ್ಲಿರುವುದಿಲ್ಲ, ಅಲ್ಲದೇ ವಿದ್ಯುತ್ ತೊಂದರೆಯಾದರೆ ಮಕ್ಕಳಿಗೆ ಯು.ಪಿ.ಎಸ್. ಸೌಲಭ್ಯವಿಲ್ಲದೇ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಸಿ.ಇ.ಒ ಮಾತನಾಡಿ, ಸಧ್ಯದಲ್ಲೇ ಅಧಿಕಾರಿಗಳ ಸಭೆ ಕರೆಯಲಾಗಿದ್ದು ಈ ವಿಷಯದ ಬಗ್ಗೆ ಚರ್ಚೆ ನಡಿಸಿ ಸೂಕ್ತ ತೀರ್ಮಾನ ಕೈಗೂಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಜಮ್ನಳ್ಳಿ ನಾಗರಾಜ್, ಜಿಲ್ಲಾ ಕಾರ್ಯಧ್ಯಕ್ಷ ಸೈಯದ್ ನಜೀರ್, ನಾಗರಾಜ್ ಆದಾಪುರ್, ಸಂಘಟನಾ ಕಾರ್ಯದರ್ಶಿ ಸಂತೋಷ್ ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾ ಎಂ, ನಗರ ಘಟಕ ಅಧ್ಯಕ್ಷ ಅನೂಪ್ ಇಜಾರಿ, ಮಹಿಳಾ ಗೌರವಾಧ್ಯಕ್ಷೆ ವನಜ ಕರಿಯಪ್ಪ, ಉತ್ತರ ವಲಯದ ಯುವ ಘಟಕದ ಅಧ್ಯಕ್ಷ ಶಿವಕುಮಾರ ಬಿ ಬಿ, ನಾಗರಾಜ ಆಥಪುರ್, ಶಬ್ರಿನ್ ತಾಜ್, ಬಸವರಾಜ ಎಸ್, ಬಸವರಾಜ್ ಪಿ, ಮಂಜುಳಾ ಆರ್, ನಾಗರಾಜ್ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243