ದಿನದ ಸುದ್ದಿ
ದಾವಣಗೆರೆ | ಲಾಕ್ ಡೌನ್ ಉಲ್ಲಂಘನೆ ; 2431 ಬೈಕ್ ಸೀಜ್ : ಎಸ್ಪಿ ಹನುಮಂತರಾಯ
ಸುದ್ದಿದಿನ,ದಾವಣಗೆರೆ : ಲಾಕ್‍ಡೌನ್ ವೇಳೆ ಅನಾವಶ್ಯಕವಾಗಿ ಓಡಾಡಿದ್ದ 2431 ಬೈಕ್‍ಗಳನ್ನು ಸೀಜ್ ಮಾಡಲಾಗಿದ್ದು, ಲಾಕ್‍ಡೌನ್ ಉಲ್ಲಂಘಿಸಿದವರ ಮೇಲೆ 12 ಪ್ರಕರಣ ದಾಖಲಿಸಲಾಗಿದೆ. 23 ಅಬಕಾರಿ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಅವರು ಮಾಹಿತಿ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಕೊರೊನಾ ರೋಗ ನಿಯಂತ್ರಣ ಕುರಿತ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಲಾಕ್‍ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಒಟ್ಟು 22 ಚೆಕ್‍ಪೋಸ್ಟ್ ಸ್ಥಾಪಿಸಿದ್ದು, ಅದರಲ್ಲಿ ಜಿಲ್ಲೆಯೊಳಗೆ 11 ಹಾಗೂ ಜಿಲ್ಲೆಯು ಗಡಿ ಭಾಗದಲ್ಲಿ 11 ನಿರ್ಮಿಸಲಾಗಿದೆ. ಆರೋಗ್ಯ ಇಲಾಖೆಯೊಂದಿಗೆ ಸೇರಿ ಬರುವವರನ್ನು ತಡೆದು ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಕೋವಿಡ್ ಲಕ್ಷಣ ಕಂಡುಬಂದಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಮೂಲಭೂತ ದಿನನಿತ್ಯದ ಅವಶ್ಯಕ ವಸ್ತುಗಳನ್ನು ಸಾಗಿಸುವ ಟ್ರಕ್ ಹಾಗೂ ಲಾರಿ ಡ್ರೈವರ್‍ಗಳ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ಮುಖ್ಯವಾದ ಚನ್ನಗಿರಿ, ಹೊನ್ನಾಳಿ ಹಾಗೂ ಹರಿಹರ ಹೈವೈಗಳಲ್ಲಿನ ಡಾಬಾಗಳನ್ನು ಪರಿಶೀಲಿಸಿ 21 ಡಾಬಾಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಇಲ್ಲಿ ಪಾರ್ಸಲ್ ಮಾತ್ರ ಒದಗಿಸಲಾಗುತ್ತಿದೆ. ಜೊತೆಗೆ ಅವಶ್ಯಕವಾದ ವಸ್ತು ಸಾಮಾಗ್ರಿಗಳನ್ನು ಸಾಗಿಸಲು ವಿವಿಧ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸಲಾಗಿದ್ದು, ಪಾಸ್‍ಗಳನ್ನು ಕೊಡಲಾಗಿದೆ ಎಂದರು.
ಹೊರ ರಾಜ್ಯದ ಕಾರ್ಮಿಕರು ಹಾಗೂ ವಲಸೆ ಕಾರ್ಮಿರಿಗೆ ಕಾರ್ಮಿಕ ಇಲಾಖೆಯೊಂದಿಗೆ ಸೇರಿ ಊಟ, ವಸತಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಜೊತೆಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. ಅಲ್ಲದೆ ದೆಹಲಿಯ ಪ್ರವಾಸ ಹಿನ್ನೆಲೆ ಹೊಂದಿದ್ದ ಜಿಲ್ಲೆಯ 42 ಜನರು 14 ದಿನ ಹಾಗೂ 28 ದಿನ ಕ್ವಾರಂಟೈನ್ ಪೂರ್ಣಗೊಳಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡಿದ್ದಾರೆ. ಇವರ ಪರೀಕ್ಷೆ ನೆಗೆಟಿವ್ ಬಂದಿದೆ. ಸಾವರ್ಜನಿಕರ ಕ್ಷೇಮಾಭಿವೃದ್ಧಿಗೆ ಜಿಲ್ಲಾಡಳಿತದೊಂದಿಗೆ ಸೇರಿ ಪೊಲೀಸ್ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243