ದಿನದ ಸುದ್ದಿ
ದಾವಣಗೆರೆ ವಿವಿಯಲ್ಲಿ ರಂಗೇರಿತು ‘ಕನ್ನಡ ಹಬ್ಬ’
ಸುದ್ದಿದಿನ,ದಾವಣಗೆರೆ : ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಶನಿವಾರ ಕನ್ನಡದ ಕಂಪು ಎಲ್ಲೆಡೆ ಹರಡಿತ್ತು. ಇಡೀ ಆವರಣದ ತುಂಬ ಹಳದಿ-ಕೆಂಪು ಬಣ್ಣದ ಬಾವುಟಗಳ ಹಾರಾಟ, ತಳಿರು ತೋರಣಗಳ ವಿಶೇಷ ಅಲಂಕಾರ ಕನ್ನಡದ ಹಬ್ಬದ ವಾತಾವರಣ ಸೃಷ್ಟಿಸಿತ್ತು.
ವಿಶೇಷ ಅಲಂಕೃತ ಟ್ರಾಕ್ಟರ್‍ನಲ್ಲಿ ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯೊಂದಿಗೆ ಆರಂಭವಾದ ಹಬ್ಬದ ಆಚರಣೆ ಸುಮಾರು ಮೂರು ತಾಸು ನಡೆಯಿತು. ಕನ್ನಡದ ಹಾಡುಗಳಿಗೆ ವಿದ್ಯಾರ್ಥಿಗಳು ದಣಿವರಿಯದೆ ಕುಣಿದು ಕುಪ್ಪಳಿಸಿದರು. ವೈವಿಧ್ಯಮಯ ಹಾಡುಗಳಿಗೆ ಹೆಜ್ಜೆ ಹಾಕಿ ರಾಜ್ಯೋತ್ಸವಕ್ಕೆ ಮೆರುಗು ನೀಡಿದರು.
‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು… ಹಾಡು ಶುರುವಾಗುತ್ತಿದ್ದಂತೆ ವಿದ್ಯಾರ್ಥಿಗಳ ಕುಣಿತವೂ ಆರಂಭವಾಯಿತು. ತಲೆಗೆ ಕಟ್ಟಿದ ಹಳದಿ-ಕೆಂಪು ಬಣ್ಣದ ಪಟ್ಟಿಯನ್ನು ತಲೆಗೆ ಕಟ್ಟಿಕೊಂಡವರು ಕೆಲವರು, ಕೊರಳಲ್ಲಿ ಸುತ್ತಿಕೊಂಡು ಕುಣಿದರು ಮತ್ತಷ್ಟು ಜನರು. ಹುಡುಗರ ಜೊತೆಗೆ ಪೈಪೋಟಿ ನಡೆಸುವಂತೆ ಹುಡುಗಿಯರೂ ಕುಣಿದರು. ಕುಣಿತದ ಜೊತೆಗೆ ಸೆಲ್ಫೀಗೂ ಫೋಸು ಕೊಟ್ಟ ವಿದ್ಯಾರ್ಥಿಗಳು, ವಿಡಿಯೊ ಚಿತ್ರೀಕರಣ ಮಾಡಿಕೊಂಡು ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದರು.
ಕನ್ನಡ ನಾಡಿನ ಹಿರಿಮೆ ಗರಿಮೆಯನ್ನು ಬಿಂಬಿಸುವ ಸಿನಿಮಾ ಹಾಡು, ಜನಪದ ಗೀತೆಗಳಿಗೆ ಕುಣಿತ, ಜಯಘೋಷಗಳಿಂದ ವಿದ್ಯಾರ್ಥಿಗಳಲ್ಲಿದ್ದ ಸಂಭ್ರಮವನ್ನು ತಡೆಯಲು ಸಾಧ್ಯವಾಗಲಿಲ್ಲ. ಹಾಡಿನ ತಾಳಕ್ಕೆ ಹಾಕಿದ ಹೆಜ್ಜೆ ಆವರಣದಲ್ಲಿ ಹೊಸ ಸಾಂಸ್ಕøತಿಕ ಆಯಾಮ ನೀಡಿತು. ವಿದ್ಯಾರ್ಥಿಗಳೊಂದಿಗೆ ವಿಶ್ವವಿದ್ಯಾನಿಲಯದ ಬೋಧಕ, ಬೋಧಕೇತರ ಸಿಬ್ಬಂದಿಯೂ ಕುಣಿದರು.
ಇದಕ್ಕೂ ಮುನ್ನ ಕನ್ನಡ ಅಧ್ಯಯನ ವಿಭಾಗದ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮವನ್ನು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ನಾಡದೇವಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉತ್ಸವಕ್ಕೆ ಚಾಲನೆ ನೀಡಿದರು. ಪರೀಕ್ಷಾಂಗ ಕುಲಸಚಿವೆ ಪ್ರೊ. ಅನಿತಾ ಎಚ್.ಎಸ್., ಹಣಕಾಸು ಅಧಿಕಾರಿ ಪ್ರೊ. ಗೋಪಾಲ ಎಂ. ಅಡವಿರಾವ್, ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ. ಮಹಾಬಲೇಶ್ವರ, ಪ್ರೊ. ಶಿವಕುಮಾರ ಕಣಸೋಗಿ, ಡಾ. ಅಶೋಕಕುಮಾರ ಪಾಳೇದ, ರಾಜಕುಮಾರ, ಪೊಲೀಸ್ ಅಧೀಕ್ಷಕ ದೇವರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243