ದಿನದ ಸುದ್ದಿ
ದಾವಣಗೆರೆ | ಭ್ರಷ್ಟಾಚಾರದಲ್ಲಿ ಪುರುಷರನ್ನು ಮೀರಿಸಿದ ಮಹಿಳೆಯರು.!
ಸುದ್ದಿದಿನ,ದಾವಣಗೆರೆ:ಸಮಾನತೆ ಪಡೆದ ಮಹಿಳೆಯರು ಸದ್ಯ ಎಲ್ಲ ರಂಗಗಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ರ್ದುದೈವದ ಸಂಗತಿ ಎಂದರೆ ಪುರಷರನ್ನು ಮೀರಿ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಉಪಲೊಕಾಯಕ್ತನಾಗಿ ನಿಯುಕ್ತಿಯಾದ ಮೇಲೆ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಸಾಕಷ್ಟು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ನೋವಿನಿಂದ ನ್ಯಾ.ಬಿ.ವೀರಪ್ಪ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ, ಗುರುವಾರ ಕರ್ನಾಟಕ ಲೋಕಾಯುಕ್ತ ವತಿಯಿಂದ ಆಯೋಜಿಸಲಾದ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ವೇಲಾ.ಡಿ.ಕೆ. ಮಾತನಾಡಿ, ಲೋಕಾಯುಕ್ತದಲ್ಲಿ ಅಪರ ನಿಬಂಧಕರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸಾಕಷ್ಟು ಪ್ರಕರಣಗಳಲ್ಲಿ ಅಧಿಕಾರಿಗಳು ಕೆಳ ಹಂತದ ಸಿಬ್ಬಂದಿ ನೀಡುವ ವರದಿಗಳಿಗೆ ಕಣ್ಣು ಮುಚ್ಚಿ ಸಹಿ ಮಾಡುತ್ತಾರೆ. ಒಂದು ಕುಟುಂಬಕ್ಕೆ ವಿವಿಧ ರೀತಿಯಲ್ಲಿ ಜೀವಂತ ಸದಸ್ಯರ ಪ್ರಮಾಣ ಪತ್ರ, ವಂಶವೃಕ್ಷದಂತಹ ಪ್ರಮಾಣ ಪತ್ರಗಳ ನೀಡಿರುವುದು ಸಹ ವಿಚಾರಣೆ ವೇಳೆ ಕಂಡುಬಂದಿದೆ. ಇಂತಹ ಪ್ರಮಾಣ ಪತ್ರಗಳ ದುರಪಯೋಗದಿಂದ ಅನರ್ಹರು ಸರ್ಕಾರದ ಸವಲತ್ತುಗಳನ್ನು ಪಡೆಯುತ್ತಾರೆ. ಅಧಿಕಾರಿಗಳು ಪ್ರಮಾಣ ಪತ್ರಗಳನ್ನು ನೀಡುವಾಗ ಪರಿಶೀಲನೆ ಮಾಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ವಾಗತ ಭಾಷಣ ನೆರವೇರಿಸಿ, ಪ್ರಾಸ್ತಾವಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಭ್ರಷ್ಟಾಚಾರ ಸೂಚ್ಯಂಕದಲ್ಲಿ 180 ರಾಷ್ಟ್ರಗಳ ಪೈಕಿ ಭಾರತ 85ನೇ ಸ್ಥಾನದಲ್ಲಿದೆ. ರಾಜಕೀಯ ಇಚ್ಚಾಶಕ್ತಿ ಕೊರತೆ, ನೀತಿ ನಿರೂಪಣೆಯಲ್ಲಿ ದೋಷವಿರುವ ಕಾರಣ ಇಂದಿಗೂ ಸಣ್ಣ ಹಾಗೂ ಬೃಹತ್ ಪ್ರಮಾಣದಲ್ಲಿ ಭ್ರಷ್ಟಾಚಾರಗಳು ನಡೆಯುತ್ತಿವೆ. ಕೆಲಸಕ್ಕೆ ಸೇರುವಾಗ ಸಂವಿಧಾನ ಬದ್ದವಾಗಿ ಕರ್ತವ್ಯ ನಿರ್ವಹಿಸುವ ಪ್ರಮಾಣ ಸ್ವೀಕರಿಸಿರುತ್ತೇವೆ. ಇದನ್ನು ಗಮನದಲ್ಲಿ ಇರಿಸಿಕೊಂಡು ಸಾರ್ವಜನಿಕರಿಗೆ ಪಾರದರ್ಶಕ ಹಾಗೂ ತ್ವರಿತವಾಗಿ ಸೇವೆಗಳ ಲಭಿಸುವಂತೆ ಕೆಲಸ ನಿರ್ವಹಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ಬಹುತೇಕ ಅಧಿಕಾರಿ ಹಾಗೂ ಸಿಬ್ಬಂದಿ ಮಧ್ಯಮ ವರ್ಗ ಹಾಗೂ ಗ್ರಾಮೀಣ ಹಿನ್ನಲೆಯಿಂದ ಸರ್ಕಾರಿ ಕೆಲಸಕ್ಕೆ ಬಂದಿದ್ದೇವೆ. ಜನರು ನಮ್ಮಿಂದ ಉತ್ತಮ ಸೇವೆ ನಿರೀಕ್ಷಿಸುತ್ತಾರೆ. ತ್ವರಿತವಾಗಿ ಸ್ಪಂದಿಸಿ, ನಿಮ್ಮ ಹಂತದಲ್ಲಿಯೇ ಜನರ ಸಮಸ್ಯೆಗಳನ್ನು ಪರಿಹರಿಸುವುದು ಉತ್ತಮ. ಇದರ ಬದಲು ಸಾರ್ವಜನಿಕರು ಮೇಲಿನ ಹಂತಕ್ಕೆ ದೂರು ನೀಡಿ, ಮೇಲಿನವರಿಂದ ನಿರ್ದೇಶನ ಪಡೆದು ಕೆಲಸ ನಿರ್ವಹಿಸುಂತೆ ಆಗಬಾರದು. ಲೋಕಾಯುಕ್ತರ ಭೇಟಿಯನ್ನು ಧನಾತ್ಮಕವಾಗಿ ಸ್ವೀಕರಿಸಿ ಕೆಲಸ ಮಾಡುವಂತೆ ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಜರುಗಿದ ಭಯೋತ್ಪಾದಕ ದಾಳಿಯಲ್ಲಿ ಮೃತರಾದ ನಾಗರಿಕರ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತದ ಅಪರ ನಿಬಂಧಕರಾದ ಕೆ.ಎಂ.ರಾಜಶೇಖರ್, ಅರವಿಂದ.ಎನ್.ವಿ., ಮಿಲನ.ವಿಎನ್., ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಪೂರೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243