ದಿನದ ಸುದ್ದಿ
ಶಿವಮೊಗ್ಗದ ಅಲೆಮಾರಿಗಳಿಗೆ ನೆಲೆಗೊಳಿಸಲು ಸಂಕಲ್ಪ
ಸುದ್ದಿದಿನ, ಶಿವಮೊಗ್ಗ: ಕಳೆದ ಆಗಸ್ಟ್15 ರಂದು ಶಿವಮೊಗ್ಗದ ಬೈಪಾಸ್ ಪಕ್ಕದಲ್ಲಿರುವ ಅಲೆಮಾರಿ ಕುಟುಂಬಗಳು ತಮಗೊಂದು ನೆಲೆ, ಇರಲೊಂದು ಸೂರು ಕೊಡಸಲು ಸಹಕರಿಸಬೇಕೆಂದು ನಾಗರಿಕ ಸಮಾಜದ ಪ್ರತಿನಿಧಿಗಳಲ್ಲಿ, ಪ್ರಗತಿಪರರಲ್ಲಿ ‘ನಿರಂತರ’ ದ ಸಹಾಯದೊಂದಿಗೆ ಕೇಳಿಕೊಂಡಿದ್ದರು.
ಇದಕ್ಕೆ ಸ್ಪಂದಿಸಿದ ಹಲವರು ಅಂದು ಈ ಅಲೆಮಾರಿಗಳ ಜೊತೆ ನಿಲ್ಲುವ ಭರವಸೆ ನೀಡಿ ಅದರಂತೆ ಶಿವಮೊಗ್ಗದ ಜಿಲ್ಲಾ ಅಧಿಕಾರಿಗಳಾದ ದಯಾನಂದ ಅವರನ್ನು ಭೇಟಿ ಮಾಡಿ ಅಲೆಮಾರಿಗಳ ಸ್ಥಿತಿಯನ್ನು ತಿಳಿಸಿ, ಮನವಿ ಮಾಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ, ಅಂದೇ ರಾಜ್ಯ ಅಲೆಮಾರಿ ಕೋಶದ ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆಯ ದಿನಾಂಕ ನಿಗದಿ ಮಾಡಿದ್ದರು.
ಅದರಂತೆ ಆ 29ರಂದು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ಜರುಗಿತು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಅಲೆಮಾರಿ ಕೋಶದ ನೋಡಲ್ ಅಧಿಕಾರಿ ಶ್ರೀ ಬಾಲಗುರಿಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ತಹಶಿಲ್ದಾರರು, ಕ್ಷೇತ್ರ ಅಧಿಕಾರಿಗಳು, ಅಲೆಮಾರಿಗಳ ಪ್ರತಿನಿಧಿಗಳು, ನಿರಂತರ ದ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಸಭೆಯಲ್ಲಿ, ಬೈಪಾಸ್ ಅಲೆಮಾರಿ ಕ್ಯಾಂಪ್ ಒಳಗೊಂಡಂತೆ ಜಿಲ್ಲೆಯಲ್ಲಿ ಟೆಂಟ್ ಜೋಪಡಿಗಳಲ್ಲಿ ಗಳಲ್ಲಿ ವಾಸಿಸಿತ್ತಿರುವ ಅಲೆಮಾರಿಗಳಿಗೆ ಆದ್ಯತೆಯ ಮೇರೆಗೆ ಜಾಗ ಮತ್ತು ಮನೆಗಳನ್ನು ನೀಡುವ ನಿಟ್ಟಿನಲ್ಲಿ ಕೂಡಲೇ ಕೆಲಸ ಪ್ರಾರಂಭಿಸಲು, ಅರ್ಹರ ಪಟ್ಟಿ ತಯಾರಿಸಲು ಜಿಲ್ಲಾಧಿಕಾರಿಗಳು ತಿಳಿಸಿದರು. ಬೈಪಾಸ್, ಹಕ್ಕಿಪಿಕ್ಕಿ ಕ್ಯಾಂಪ್ ಅಂಬೇಡ್ಕರ್ ನಗರ, ಶಿರಾಳಕೊಪ್ಪ ಸಿಂದೋಳ್ಳು ಕ್ಯಾಂಪ್, ತೀರ್ಥಹಳ್ಳಿ ಕುರುವಳ್ಳಿಯಲ್ಲಿರುವ ದೊಂಬರ ಕ್ಯಾಂಪ್, ಶಿಕಾರಿಪುರ ಹಕ್ಕಿಪಿಕ್ಕಿಕ್ಯಾಂಪ್ ಗಳ ಟೆಂಟ್ ಗಳಲ್ಲಿ ಇರುವ ಅಲೆಮಾರಿಗಳಿಗೆ ಆದ್ಯತೆಯ ಮೇಲೆ ಜಾಗ, ಮನೆ ನೀಡಬೇಕು ಎಂದು ನೋಡಲ್ ಅಧಿಕಾರಿಗಳು ತಿಳಿಸಿದರು.
ಹಾಗೆಯೇ ಪರಿಶಿಷ್ಟ ಅಲೆಮಾರಿಗಳಾದ ಶಿಂದೊಳ್ಳು, ಶಿಲ್ಲೆಕ್ಯಾತರಿಗೆ ಸಂಬಂಧಿಸಿದಂತೆ ತಹಶಿಲ್ದಾರರು ಜಾತಿ ಪ್ರಮಾಣ ಪತ್ರವನ್ನು ಕೂಡಲೇ ನೀಡಬೇಕು, ಈ ವಿಷಯದಲ್ಲಿ ಇರುವ ಗೊಂದಲವನ್ನು ಪರಿಹರಿಸಿಕೊಳ್ಳಬೇಕು ಎಂದೂ ನೋಡಲ್ ಅಧಿಕಾರಿಗಳು ತಿಳಿಸಿದರು. ಇನ್ನು ಶೀಘ್ರದಲ್ಲೇ ಮತ್ತೊಮ್ಮೆ ಪ್ರಗತಿ ಪರಿಶೀಲನೆ ಸಭೆ ನಡೆಸುವುದಾಗಿಯೂ, ಅಷ್ಟರಲ್ಲಿ ಮೇಲಿನ ಕೆಲಸಗಳಿಗೆ ಚಾಲನೆ ನೀಡುವಂತೆ ತಿಳಿಸಲಾಯಿತು.
ಕಳೆದ 15-20 ಇದಕ್ಕೆ ಮುನ್ನ ಬೆಳಿಗ್ಗೆ 8 ಗಂಟೆಗೆ ನೋಡಲ್ ಅಧಿಕಾರಿಗಳು ಬೈಪಾಸ್ ಅಲೆಮಾರಿ ಕ್ಯಾಂಪಿಗೆ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ದಯಾನಂದ್ ಅವರೊಂದಿಗೆ ಮತ್ತು ನಿರಂತರ ದ ಸದಸ್ಯರೊಂದಿಗೆ ಭೇಟಿ ನೀಡಿ ಬಂದಿದ್ದರು.
ನಿರಂತರ ಸಂಘಟನೆಯು ಶಿವಮೊಗ್ಗದ ನತದೃಷ್ಟ ಅಲೆಮಾರಿಗಳ ಸಮಸ್ಯೆಗಳಿಗೆ ಧ್ವನಿಯಾಗಿದ್ದು ಅನೇಕ ಸಲ ಮೆರವಣಿಗೆ, ಧರಣಿಗಳ ಮೂಲಕ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿತ್ತು. ಹಿಂದೆಯೂ ಕೆಲವು ಅಧಿಕಾರಿಗಳು ಸ್ಪಂದಿಸಿದ್ದರೂ ಯಾವುದೇ ತಾರ್ಕಿಕ ಅಂತ್ಯ ಕಂಡಿರಲಿಲ್ಲ. ಈಗ ಮಾನ್ಯ ಜಿಲ್ಲಾಧಿಕಾರಿಗಳು ಅಲೆಮಾರಿಗಳ ಮನವಿಗೆ ಸ್ಪಂದಿಸಿ ಕ್ರಮಕ್ಕೆ ಮುಂದಾಗಿರಿವುದನ್ನು ನಿರಂತರ, ಶಿವಮೊಗ್ಗ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದಲ್ಲದೇ , ಜಿಲ್ಲಾಧಿಕಾರಿಗಳು, ನೋಡಲ್ ಅಧಿಕಾರಿಗಳು ಮತ್ತು ಅಲೆಮಾರಿಗಳ ನೋವಿಗೆ ತಕ್ಷಣದಲ್ಲಿ ಸ್ಪಂದಿಸಿದ್ದಾರೆ ಎಂದು ಅನಿಲ್ ಕುಮಾರ್ ಟಿ, ವಕೀಲರು ಜಾರ್ಜ್ ಸಾಲ್ಡಾನಾ, ಪತ್ರಕರ್ತರು, ಹೋರಾಟಗಾರರು ತಿಳಿಸಿದ್ದಾರೆ.