ದಿನದ ಸುದ್ದಿ
ದೇವನಗರಿ ರೈಲು ನಿಲ್ದಾಣಕ್ಕೆ ‘ವಿಶ್ವಗುರು ಬಸವಣ್ಣ’ ಎಂದು ಹೆಸರಿಡಬೇಕು : ಶಿವು ಕುರ್ಕಿ ಆಶಯ
ಸುದ್ದಿದಿನ,ದಾವಣಗೆರೆ : ಹೈಟೆಕ್ ರೈಲ್ವೇ ನಿಲ್ದಾಣದ ನವೀಕರಣ ಕಾರ್ಯ ಮುಗಿಯುತ್ತ ಬರುತ್ತಿದೆ. ಕನ್ನಡಿಗರು ಅದಕ್ಕೊಂದು ಸೂಕ್ತ ಹೆಸರು ಇಡಬೇಕಿದೆ ಎಂದು ಗ್ರಂಥಸರಸ್ವತಿ ಪ್ರತಿಭಾರಂಗದ ಅಧ್ಯಕ್ಷರಾದ ಆರ್. ಶಿವಕುಮಾರಸ್ವಾಮಿ ಕುರ್ಕಿ ಆಶಯ ವ್ಯಕ್ತ ಪಡಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ಈಗಾಗಲೆ ಉತ್ತರ ಕರ್ನಾಟಕದ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಸ್ವಾತಂತ್ರ ಹೋರಾಟಗಾರ ಸಂಗೊಳ್ಳಿ ರಾಯಣ್ಣನ ಹೆಸರು ಹಾಗೂ ದಕ್ಷಿಣ ಕರ್ನಾಟಕದ ಬೆಂಗಳೂರು ನಿಲ್ದಾಣಕ್ಕೆ ನಾಡಪ್ರಭು ಕೆಂಪೇಗೌಡರ ಹೆಸರಿಡಲಾಗಿದೆ.
ಕರ್ನಾಟಕದ ಹೃದಯ ಭಾಗ ದಾವಣಗೆರೆ ರೈಲ್ವೇ ನಿಲ್ದಾಣಕ್ಕೆ ಕನ್ನಡ ನಾಡು-ನುಡಿ-ಸಂಸ್ಕೃತಿಯನ್ನು ಹನ್ನೆರಡನೆಯ ಶತಮಾನದಲ್ಲೇ ಬೆಳೆಸಲು ಅನುಭವ ಮಂಟಪ ಕಟ್ಟಿ ಶೋಷಿತವರ್ಗಕ್ಕೆ ಹೆಗಲೇಣಿಯಾಗಿ, ಮಾತರಿಯದವರಿಗೆ ನುಡಿಯುವಂತೆ, ಹೆದ್ದಾರಿಯಲ್ಲಿ ನಡೆಯುವಂತೆ, ಅನುಭಾವದ ಗಣಿಯಂತಹ ವಚನಗಳ ರಚಿಸುವಂತೆ ಮಾಡಿ ಎಂದಿದ್ದಾರೆ.
ಇದನ್ನೂ ಓದಿ | ದಾವಣಗೆರೆ | ಫೆ. 24ರಂದು ಸಾಹಿತ್ಯ – ಸಾಂಸ್ಕೃತಿಕ ಸಮ್ಮಿಲನ
ಪ್ರಭುತ್ವವ ದೂರತಳ್ಳಿ ಶರಣತ್ವ ಮೈಮನಗಳಲ್ಲಿ ಹೊತ್ತು, ಇವನಾರವ ಇವನಮ್ಮವ ಎನ್ನದೆ, ದೇಶ, ಭಾಷೆ, ಜಾತಿ, ಧರ್ಮ, ಲಿಂಗ, ವಯೋಭೇದ ಎಣಿಸದೆ ಎಲ್ಲ ವರ್ಗಗಳ ಜನಸಮೂಹವನ್ನು ಕೂಡಲಸಂಗಮದಲ್ಲಿ ಲೀನಗೊಳಿಸಿ ಜಗತ್ತಿಗೇ ಸಾಮರಸ್ಯದ ಪಾಠಕಲಿಸಿ ಶರಣರನ್ನಾಗಿಸಿ, ಬಿದ್ದವರ ಬಾಳುಬೆಳಗಿಸಿದ ‘ವಿಶ್ವಗುರು ಬಸವಣ್ಣ’ ನವರ ಹೆಸರು ಇಡುವುದು ಸಮಯೋಚಿತ, ನ್ಯಾಯಸಮ್ಮತ ಹಾಗೂ ಪ್ರಶ್ನಾತೀತವಾದುದು ಎಂಬದು ನನ್ನ ಸದಾಭಿಪ್ರಾಯ.
ಅಲ್ಲದೆ ಈವರೆಗೂ ಬಸವಣ್ಣನವರ ಹೆಸರನ್ನು ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಬೇಕಾಗಿತ್ತು. ಆದರೂ ಸಹ ಕರ್ನಾಟಕದ ಸಮಸ್ತ ಜನತೆ ಈ ಮಹತ್ಕಾರ್ಯಕ್ಕೆ ಮುಂದಾಗದಿರುವುದು ಶೋಚನೀಯವೇ ಸರಿ.
ಅಲ್ಲದೆ; ನಮ್ಮ ನಾಡುನುಡಿಗೆ ನಾಡಿಮಿಡಿತ ಹೃದಯಬಡಿತ ಆಗಿರುವ ದಾವಣಗೆರೆಯನ್ನು ರಾಜ್ಯದ ರಾಜಧಾನಿ ಮಾಡಲು ಹೋರಾಟ ನಡೆಸದೇ ಸುಮ್ಮನಿರುವುದೂ ವಿಷಾದನೀಯ.
ಈಗ ನಮ್ಮೆಲ್ಲರ ಮುಂದೆ ಬಂದಿರುವ ರಾಷ್ಟ್ರಮಟ್ಟದ ರೈಲ್ವೇ ನಿಲ್ದಾಣಕ್ಕೆ ಬಸವಣ್ಣನವರ ಹೆಸರು ಇಡಲು ಒಕ್ಕೊರಲಿನಿಂದ ಇಡೀ ಕನ್ನಡ ಜನತೆ ಧ್ವನಿಗೂಡಿಸಬೇಕಿದೆ. ಬಹುಶಃ ಯಾರೊಬ್ಬರೂ ಇದಕ್ಕೆ ವಿರೋಧಿಸಲಾರರು.ನನ್ನ ಈ ಸದಾಶಯವೇ ತಮ್ಮೆಲ್ಲರ ದೃಢಸಂಕಲ್ಪವಾಗಲಿ ಎಂದು ಕನ್ನಡ ಜನತೆಯಲ್ಲಿ ವಿನಂತಿಸಿಕೊಳ್ಳುತ್ತೇನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243