ದಿನದ ಸುದ್ದಿ
ಕಾರಂತರು ಸಾಯಲಿ ಎಂದು ಬಯಸಿದ್ದ ಅಮಿನ್ ಮಟ್ಟು ಕೊಟ್ಟ ಸಮರ್ಥನೆ ಏನು ಗೊತ್ತಾ?
ಸುದ್ದಿದಿನ ಡೆಸ್ಕ್: ಹುಬ್ಬಳ್ಳಿಯ ಈದ್ಗಾ ಮೈದಾನ ವಿವಾದದಲ್ಲಿ ಆರೆಸ್ಸೆಸ್ ಅನ್ನು ಸಮರ್ಥಿಸಿಕೊಂಡಾಗ ಜ್ಞಾನಪೀಠ ಪುರಸ್ಕೃತ ಸಾಹಿತಿ ಶಿವರಾಮ ಕಾರಂತರು ಸಾಯಲಿ ಎಂದು ಬಯಸಿದ್ದೆ ಎಂಬುದಾಗಿ ವಿಮರ್ಶಿಸಿದ್ದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರು ತಮ್ಮ ವಾದವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.
ಕಾರಂತರ ಕುರಿತು ತಮಗಿರುವ ಪ್ರೀತಿ, ಹಾಗೂ ಮನಸ್ಸಿನಲ್ಲಿದ್ದ ಅವರ ಬಿಂಬ ಒಡೆದುಹೋದಾಗ ಆದ ನೋವು ಎಲ್ಲವನ್ನೂ ಈ ಪೋಸ್ಟ್ ನಲ್ಲಿ ಬರೆದಿದ್ದಾರೆ. ಅವರು ಬರೆದಿರುವ ಫೇಸ್ ಬುಕ್ ಪೋಸ್ಟ್ ಗೆ ಮೆಚ್ಚುಗೆಯ ಕಮೆಂಟ್ ಗಳು ವ್ಯಕ್ತವಾಗುತ್ತಿವೆ. ಆ ಪೋಸ್ಟ್ ಹೀಗಿದೆ.
ಶಿವರಾಮ ಕಾರಂತರು ನನ್ನ ಮೊದಲ ವೈಚಾರಿಕ ಗುರು. ನಾನು ಎನ್.ನರಸಿಂಹಯ್ಯ ಅವರ ಪತ್ತೇದಾರಿ ಕಾದಂಬರಿಗಳಿಂದ ನೇರವಾಗಿ ಕಾರಂತರ ಕಾದಂಬರಿಗಳಿಗೆ ಗ್ರಾಜುವೇಟ್ ಆದವನು. ಸಾಹಿತ್ಯದ ವಿದ್ಯಾರ್ಥಿಯಲ್ಲದ ನಾನು ಪಿಯುಸಿ ಮುಗಿಸುವಷ್ಟರಲ್ಲಿ ಅವರ ಅಲ್ಲಿಯವರೆಗಿನ ಎಲ್ಲ ಕೃತಿಗಳನ್ನು ಓದಿಮುಗಿಸಿದವನು. ನನ್ನೊಳಗಿನ ವೈಚಾರಿಕ ಸ್ಪಷ್ಟತೆಗೆ ಮೊದಲು ಕಾರಣರಾದವರು ಕಾರಂತರು. ಅಂಬೇಡ್ಕರ್, ಲೋಹಿಯಾ, ಗಾಂಧೀಜಿ, ಕುವೆಂಪು, ಲಂಕೇಶ್ ನನಗೆ ಸಿಕ್ಕಿದ್ದು ನಂತರದ ದಿನಗಳಲ್ಲಿ. ಆದರೆ ಇವರನ್ನು ಓದಲು ಪ್ರೇರಣೆ ನೀಡಿದವರು ಕಾರಂತರು.
ಕಾರಂತರು ಘೋಷಿಸಿಕೊಳ್ಳದೆ ಇದ್ದರೂ ಅವರ ಕೃತಿಗಳಲ್ಲಿ ವೈಚಾರಿಕತೆಯ ಒಂದು ಒಳ ಹರಿವು ಇರುತ್ತಿತ್ತು. ಅದನ್ನು ಅವರು ಒಂದು Statement ರೀತಿ ಹೇಳದೆಯೇ ನಮ್ಮೊಳಗೆ ವೈಚಾರಿಕತೆಯನ್ನು ಬಿತ್ತುತ್ತಾ ಹೋದವರು. ಈ ಮೂಲಕವೇ ನನ್ನಂತಹವರಿಗೆ ಓದಿನ ಪಯಣದ ದಾರಿಯನ್ನು ತಿಳಿಸಿಕೊಟ್ಟವರು.
ಇದನ್ನು ಹಿಂದೊಮ್ಮೆ ಬರೆದಿದ್ದೆ, ನಾನು ಓದಲು ತರುತ್ತಿದ್ದ ಕಾದಂಬರಿಗಳನ್ನು ಓದತೊಡಗಿದ್ದ ನಿವೃತ್ತ ಜೀವನ ಕಳೆಯುತ್ತಿದ್ದ ನನ್ನ ತಂದೆ, ಕೊನೆಯ ದಿನಗಳಲ್ಲಿ ದೇವರು-ಧರ್ಮದ ಬಗ್ಗೆ ನನ್ನಂತೆಯೇ ಮಾತನಾಡತೊಡಗಿದ್ದರು.
ಕಾರಂತರು ನನ್ನೊಳಗೆ ವೈಚಾರಿಕತೆಯ ಕಿಡಿ ಹಚ್ಚಿದ್ದರೆ, ತಾನೇ ಬದಲಾಗುವ ಮೂಲಕ ನನ್ನ ನಿಲುವು ಸರಿ ಎಂದು endorse ಮಾಡಿದವರು ನನ್ನ ತಂದೆ.
ಆದ್ದರಿಂದ ಕಾರಂತರ ಬಗ್ಗೆ ಯಾರಾದರೂ ಬೈದರೆ ನನ್ನ ತಂದೆಗೆ ಬೈದಷ್ಟೇ ಕೋಪ ಬರ್ತಿತ್ತು. ‘ಬಾಳ್ವೆಯ ಬೆಳಕು’ ಬಗ್ಗೆ ಸ್ನೇಹಿತರ ಜತೆ _ಹಲವುಸುತ್ತಿನ ಜಗಳವಾಡಿದ್ದೆ.
ನನ್ನ ವಿದ್ಯಾರ್ಥಿ ಜೀವನದಲ್ಲಿ ನನ್ನೊಳಗೆ ಅಚ್ಚೊತ್ತಿದ್ದ ಎರಡು ಬಿಂಬಗಳು, ಕಾರಂತರದ್ದು ಮತ್ತು ನನ್ನ ತಂದೆಯದ್ದು. ನನ್ನೊಳಗಿನ ಆ ಎರಡು ಬಿಂಬಗಳನ್ನು ನಾನು ಪ್ರೀತಿಸುತ್ತಾ ಬಂದವನು. ಆ ಬಿಂಬಗಳು ಛಿದ್ರಗೊಳ್ಳುವುದನ್ನು ನನಗೆ ಸಹಿಸಲಾಗುತ್ತಿರಲಿಲ್ಲ.
ಕಾರಂತರು ಮೊದಲಿನಿಂದಲೂ ಕಮ್ಯುನಿಷ್ಟರ ಟೀಕಾಕಾರರಾಗಿದ್ದರು. ಈ ವಿಷಯದಲ್ಲಿ ಅವರ ಕೆಲವು ಭಿನ್ನಾಭಿಪ್ರಾಯಗಳು ನನ್ನದೂ ಆಗಿದ್ದವು.
ಆದರೆ…
ಬಾಬರಿ ಮಸೀದಿ ಧ್ವಂಸದ ಘಟನೆಯನ್ನು ಅವರು ಬೆಂಬಲಿಸತೊಡಗಿದಾಗ ನನ್ನೊಳಗಿನ ಕಾರಂತರ ಬಿಂಬ ಅಲುಗಾಡತೊಡಗಿತ್ತು.
ಈದ್ಗಾ ಮೈದಾನದ ವಿವಾದದ ಸಂದರ್ಭದಲ್ಲಿ ಕಾರಂತರು ಧಾರವಾಡಕ್ಕೆ ಬಂದಿದ್ದರು. ಅವರನ್ನು ಧಾರವಾಡ ವಿಶ್ವವಿದ್ಯಾಲಯದ ಗೆಸ್ಟ್ ಹೌಸ್‌ನಲ್ಲಿ ನಾನು ಸಂದರ್ಶನ ಮಾಡಿದ್ದೆ. ಆಗ ಅವರು ಈದ್ಗಾ ಮೈದಾನ ವಿವಾದದ ಹಿಂದಿನ ಕೋಮುವಾದಿ ಅಜೆಂಂಡಾದ ಅರಿವಿಲ್ಲದಂತೆ ಸಂಘ ಪರಿವಾರವನ್ನು ಸಮರ್ಥಿಸಿಕೊಂಡು ಮಾತನಾಡಿದ್ದು ಕೇಳಿ ಆಘಾತಕ್ಕೀಡಾಗಿದ್ದೆ. ನನ್ನೊಳಗೆ ಕಟ್ಟಿಕೊಂಡಿದ್ದ ಕಾರಂತರ ಬಿಂಬ ಛಿದ್ರಗೊಳ್ಳುತ್ತಿತ್ತು. ನನ್ನ ಕೈ ಹಿಡಿದು ಮುನ್ನಡೆಸುತ್ತಾ ಬಂದಿದ್ದ ವೈಚಾರಿಕ ಕಾರಂತರು ಇಲ್ಲವಾದರಲ್ಲಾ ಎಂಬ ನೋವು ನನ್ನನ್ನು ತಿನ್ನತೊಡಗಿತ್ತು. ವೈಚಾರಿಕ ಕಾರಂತರು ಶಾಶ್ವತವಾಗಿ ಉಳಿಯಬೇಕಾದರೆ, ಕೋಮುವಾದದ ಸಮರ್ಥಕ ಕಾರಂತರು ಅಳಿಯಬೇಕು ಎಂದು ಒಂದು ಕ್ಷಣ ನನಗನಿಸಿದ್ದು ನಿಜ. ಈ ಅಳಿವು-ಉಳಿವು ದೈಹಿಕವಾದುದಲ್ಲ, ಅದು ಬರವಣಿಗೆಯ ಅಳಿವು-ಉಳಿವಿಗೆ ಸಂಬಂಧಿಸಿದ್ದು.
ಆದರೆ ಕಾರಂತರು ನನ್ನೊಳಗಿನ ಅವರ ಬಿಂಬವನ್ನು ಶಾಶ್ವತವಾಗಿ ಛಿದ್ರಗೊಳ್ಳಲು ಬಿಡಲಿಲ್ಲ. ಯಾಕೆಂದರೆ ಅವರು ತಾನು ಬರೆದುದನ್ನೇ disown ಮಾಡುವಂತೆ ಬರೆಯಲಿಲ್ಲ. ಸಾಹಿತಿ ತನ್ನ ಕೃತಿಗಳ ಮೂಲಕ ಬದುಕುತ್ತಾನೆ. ಲೇಖಕ ಕಾಲವಾದ ನಂತರವೂ ಬರವಣಿಗೆ ಉಳಿಯುತ್ತದೆ, ಅದಕ್ಕೆ ಸಾವಿರುವುದಿಲ್ಲ.
ಶಿವರಾಮ ಕಾರಂತರು ಈಗ ಬದುಕಬೇಕಿತ್ತು. ೧೯೭೫ರಲ್ಲಿ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಪದ್ಮ ಭೂಷಣ ಪ್ರಶಸ್ತಿಯನ್ನು ವಾಪಸು ಮಾಡಿದವರು ಕಾರಂತರು. ಅವರು ಬದುಕಿದ್ದರೆ ಈಗಿನ ಅಘೋಷಿತ ತುರ್ತು ಪರಿಸ್ಥಿತಿ ವಿರುದ್ದ ಅವರೇ ಮೊದಲು ದನಿ ಎತ್ತುತ್ತಿದ್ದರೇನೋ?