ದಿನದ ಸುದ್ದಿ

ಕನ್ನಡಕ್ಕೆ ಭದ್ರವಾದ ಬೇರುಗಳಿವೆ : ಡಾ.ದೊಡ್ಡರಂಗೇಗೌಡ

Published

on

ಸುದ್ದಿದಿನ,ಬಳ್ಳಾರಿ: ಸೂರ್ಯ ಚಂದ್ರರಿರುವವರೆಗೆ ಕನ್ನಡ ಬಾಳುತ್ತೆ, ಭೂಮಿ ಬಾನು ಇರುವರೆಗೆ ಕನ್ನಡ ಬದುಕುತ್ತೆ, ನದಿಗಳಿರುವವರೆಗೆ ಕನ್ನಡ ಹೊಳೆಯುತ್ತೆ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು.

ಕನ್ನಡ ವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಅವರು ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕನ್ನಡ ಭಾಷೆಗೆ ಊಹೆಗೂ ಮೀರಿದ ಪ್ರಾಚೀನತೆಯಿದೆ ಕನ್ನಡ ಭಾಷೆಯು ಭದ್ರವಾದ ಬೇರುಗಳನ್ನು ಹೊಂದಿದೆ. ಗ್ರೀಕ್ ನಾಟಕದಲ್ಲಿ ಕನ್ನಡ 6 ಪದಗಳು ಕಂಡುಬಂದಿದ್ದು ಈಜಿಪ್ತ್‍ನಲ್ಲಿ ಕನ್ನಡ ಭಾಷೆಯ ಕುರುಹುಗಳನ್ನು ಕಾಣಬಹುದು. ಈಜಿಪ್ತ್‍ನಲ್ಲಿ ಹರಗಣ ಎಂಬ ನಗರವಿದೆ.

ಇದನ್ನೂ ಓದಿ | ದಾವಣಗೆರೆ : ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹರಗಣ ಎಂಬುದು ಕನ್ನಡದ ಪದವಾಗಿದೆ. ಹಲ್ಮಿಡಿ ಶಾಸನಕ್ಕಿಂತ ಪೂರ್ವದಿಂದಲೂ ಕನ್ನಡ ಭಾಷೆ ಬಳಕೆಯಲ್ಲಿರುವುದು ತಿಳಿದು ಬಂದಿದೆ. ಪ್ರಾಚೀನ ಕಾಲದಿಂದಲೂ ಲಿಪಿಯನ್ನು ಹೊಂದಿರುವ ಕನ್ನಡ ಭಾಷಾ ಬಳಕೆಯು ಪ್ರಸ್ತುತ ದಿನಗಳಲ್ಲಿ ಕಡಿಮೆಯಾಗುತ್ತಿದ್ದು, ಕಂಗ್ಲೀಷ್ ಬಳಕೆ ಹೆಚ್ಚುತ್ತಿದೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಕಾನ್ವೆಂಟ್‍ಗಳು ತಲೆ ಎತ್ತಿವೆ. ಕನ್ನಡ ಭಾಷೆ ಅಪಾಯದ ಅಂಚಿನಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸ.ಚಿ. ರಮೇಶ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಯುವಜನತೆ ಮನಸ್ಸು ಮಾಡಿದರೆ ಕನ್ನಡ ಅನ್ನದ ಭಾಷೆಯಾಗಬಲ್ಲದು. ಕನ್ನಡದ ಜೊತೆಗೆ ಇತರೆ ಭಾಷೆಗಳನ್ನು ಕಲಿತು ಭಾಷಾಂತರದ ಪ್ರಕಿಯೆಯಲ್ಲಿ ತೊಡಗಿದರೆ ಸಾಕಷ್ಟು ಅವಕಾಶಗಳಿವೆ.

ಚಲನಚಿತ್ರ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುವ ಡಾ.ದೊಡ್ಡ ರಂಗೇಗೌಡ ಅವರ ಸಿನಿಮಾ ಗೀತ ಸಾಹಿತ್ಯವು ಮನುಷ್ಯ-ಮನುಷ್ಯರ ನಡುವಿನ ಸಂಬಂಧ ಬೆಸೆಯುವಲ್ಲಿ, ಜೀವನ ಮಾರ್ಗದರ್ಶನ ನೀಡುವಲ್ಲಿ, ಜ್ಞಾನ ಹಾಗೂ ವಿಸ್ತಾರ ಮಾಡುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದು ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಎ.ಸುಬ್ಬಣ್ಣ ರೈ ಅವರು ಸ್ವಾಗತಿಸಿದರು. ಶೈಕ್ಷಣಿಕ ಉಪಕುಲಸಚಿವರಾದ ಡಾ.ಎಸ್.ವೈ.ಸೋಮಶೇಖರ ಅವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಉಪ ಕುಲಸಚಿವರಾದ ಡಾ.ಎ.ವೆಂಕಟೇಶ, ವಿವಿಧ ವಿಭಾಗದ ಡೀನರು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version