ಭಾಮಿನಿ
ವರದಕ್ಷಿಣೆ ಹೆಸರಲ್ಲಿ ಹೆಣ್ಣಿನ ವ್ಯಾಪಾರ ; ಕೊನೆ ಎಂದು ?
ಆಕೆ ಬಸ್ಸಿನಲ್ಲಿ ಕುಳಿತು ಫೋನಿನಲ್ಲಿ ಯಾರೊಂದಿಗೊ ಮಾತನಾಡುತ್ತಾ ತುಂಬಾ ಅಳುತ್ತಿದ್ದಳು. ದೇವರಿಗೆ ಶಾಪ ಹಾಕುತ್ತಿದ್ದಳು. ಬಸ್ ನಲ್ಲಿದ್ದ ವ್ಯಕ್ತಿಯೊಬ್ಬ ಕೇಳಿಯೇ ಬಿಟ್ಟ. ಏನಮ್ಮಾ ನಿಂದು. ಇದು ಪಬ್ಲಿಕ್ ಬಸ್ ಎಲ್ಲರಿಗೂ ಡಿಸ್ಟರ್ಬ್ ಆಗ್ತಿದೆ ನೀನ್ ಮಾತಾಡ್ತಿರೋದು ಎಂದು ರೇಗಿದ. ಅದಕ್ಕೆಆಕೆ ನಿಮಗೇನು ಗೊತ್ತು ಸ್ವಾಮಿ ಹೆಣ್ಣೆತ್ತವರ ಸಂಕಟ ! ಎಂದಳು. ಅಷ್ಕಕ್ಕೂ ಆಕೆ ಮಾತನಾಡುತ್ತಿದ್ದಿದ್ದು ತನ್ನ ಅಳಿಯನೊಂದಿಗೆ. ನನ್ನ ಮಗಳಿಗೆ ಏನೂ ಮಾಡ್ಬೇಡ. ಹೇಗಾದ್ರೂ ಮಾಡಿ ನಿನ್ ಕೇಳಿದಷ್ಟು ದುಡ್ಡುಕೊಡ್ತೀನಿ ಅಂತಿದ್ಲು.
ಇದು ಆಕೆಯೊಬ್ಬಳ ಗೋಳಲ್ಲ. ಎಷ್ಟೋ ಹೆತ್ತ ಕರುಳಗಳ ನೋವಿನ ಕೂಗು. ಈಕೆ ಆ ಕೂಗಿಗೆ ದನಿಯಾದಳು ಅಷ್ಟೇ. ಹೌದು ಸಂಪ್ರದಾಯಸ್ಥ ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ಮದುವೆ ಎಂಬುದು ಒಂದು ಮಹತ್ವಪೂರ್ಣ ಆಚರಣೆ. ಸಂಸ್ಕೃತಿ- ಸಂಸ್ಕಾರ , ಶಾಸ್ತ್ರ- ಸಂಪ್ರದಾಯಗಳ ನೆಲೆಗಟ್ಟಿನಲ್ಲಿ ಹೆಣ್ಣುಗಂಡಿನ ಸಂಬಂಧಗಳನ್ನು ಗಟ್ಟಿಗೊಳಿಸುವ, ಆರೋಗ್ಯಪೂರ್ಣ ಚೌಕಟ್ಟಿನೊಳಗೆ ಹೆಣ್ಣು-ಗಂಡುಗಳನ್ನು ಒಂದಾಗಿಸುವ ಒಂದು ಭಾವನಾತ್ಮಕ ನಂಟು. ಆದರೆ ಅಂದಿನಿಂದ ಇಂದಿನವರೆಗೂ ವರದಕ್ಷಿಣೆ ಎಂಬ ಪೆಡಂಭೂತದ ಸುಳಿಗೆ ಸಿಲುಕಿ ಈ ಆಚರಣೆ ಅರ್ಥ ಕಳೆದುಕೊಳ್ಳುತ್ತಿದೆಯಾ..! ಅವಸರದ ಮದುವೆಗಳಿಂದ ಹಿಡಿದು ಆಡಂಬರದ ಮದುವೆಗಳವರೆಗೂ ಎಲ್ಲರೂ ಮದುವೆ ಎಂದರೆ ಸಂಭ್ರಮಿಸುವವರೇ… ಆದರೆ ಈ ಸಂಭ್ರಮದ ಹಿಂದಿನ ಹೆತ್ತ ಕರುಳಿನ ನೋವು, ದುಡಿವ ಕೈಗಳ ಬೆವರ ಹನಿ ಯಾರ ಕಣ್ಣಿಗೂ ಕಾಣುತ್ತಿಲ್ಲ, ಅಥವಾ ಕಂಡರೂ ಈ ಸಮಾಜ ಕಣ್ಣಿದ್ದೂ ಕುರುಡಾದಂತಿದೆ.
ಅಷ್ಟಕ್ಕೂ ಈ ವರದಕ್ಷಿಣೆ ಎಂದರೇನು? ಮದುವೆ ಸಮಯದಲ್ಲಿ ವಧುವಿನ ಕಡೆಯವರು ವರನ ಕಡೆಯವರಿಗೆ ಉಡುಗೊರೆ ರೂಪದಲ್ಲಿ ನೀಡುವ ಹಣ,ಒಡವೆ. ವಾಹನ ಇತ್ಯಾದಿ ವಸ್ತುಗಳು.ಆದರೆ ಇವು ಪ್ರೀತಿಯಿಂದ ನೀಡುತ್ತಿದ್ದ ಉಡುಗೊರೆಗಳಾಗಿ ಉಳಿದಿಲ್ಲ, ಬದಲಾಗಿ ವಸೂಲಿ ಮಾಡುವ ಮಾರ್ಗಗಳಾಗಿವೆ.ಈ ಪುರುಷ ಪ್ರಧಾನ ಸಾಮಾಜಿಕ ವ್ಯವಸ್ಥೆಯಲ್ಲಿ ಬಹಳ ಹಿಂದಿನಿಂದಲೂ ಹೆಣ್ಣನ್ನು ಶೋಷಿಸುತ್ತಾ ಬರಲಾಗ್ತಿದೆ. ಈ ಹಾದಿಯಲ್ಲಿ ವರದಕ್ಷಿಣೆ ಎಂಬುದು ಹೆಣ್ಣನ್ನು ಶೋಷಿಸುತ್ತಿರುವ ರಾಜಮಾರ್ಗ ಎಂದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ವರದಕ್ಷಿಣೆಗಾಗಿ ಹೆಣ್ಣು ಮಕ್ಕಳನ್ನು ಬಲಿ ಕೊಡುತ್ತಿರುವ ಈ ಸಮಾಜವನ್ನು ನೆನೆಸಿಕೊಂಡರೆ ಅಸಹ್ಯವಾಗುತ್ತದೆ. ತಾಯಿ, ತಂಗಿ, ಮಡದಿ ಅಂತೆಲ್ಲಾ ಹಾಡಿ ಹೊಗಳುವ ಈ ಸಮಾಜವೇ ದುಡ್ಡಿಗಾಗಿ ಅವಳನ್ನು ಮಾನಸಿಕವಾಗಿ ದೈಹಿಕವಾಗಿ ಹಿಂಸಿಸುತ್ತಿರುವುದು ದುರಂತವೇ ಸರಿ. ವಿಷಾದದ ಸಂಗತಿಯೆಂದರೆ ಅನ್ನದಾತ ಕೂಡ ಈ ವರದಕ್ಷಿಯ ಸಾಮಾಜಿಕ ಪಿಡುಗಿಗೆ ಪರೋಕ್ಷವಾಗಿ ಬಲಿಯಾಗುತ್ತಿರುವುದು. ಮಗಳ ಮದುವೆಗೆಂದು ಸಾಲ ಮಾಡಿ, ಕೊನೆಗೆ ಸಾಲದ ಹೊರೆ ಹೊರಲಾಗದೇ ತಾನೇ ಆತ್ಮಹತ್ಯೆಗೆ ಶರಣಾಗುತ್ತಿರುವುದನ್ನು ನೆನೆಸಿಕೊಂಡರೆ ಕರುಳು ಕಿತ್ತು ಬರುತ್ತದೆ.
ಭಾರತದಲ್ಲಿ ಪ್ರತೀ ಗಂಟೆಗೆ ಒಂದು ಹೆಣ್ಣು ವರದಕ್ಷಿಣೆ ಕಿರುಕುಳದಿಂದ ಸಾವನ್ನಪ್ಪುತ್ತಿದ್ದಾಳೆ. ಅಲ್ಲದೇ ದೇಶಾದ್ಯಂತ ಪ್ರತಿದಿನ 21 ಮಹಿಳೆಯರು ವರದಕ್ಷಿಣೆಗೆ ಬಲಿಯಾಗುತ್ತಿದ್ದಾರೆ.2009 ರಲ್ಲಿ ASIAN WOMEN’S HUMAN RIGHTS COUNCIL ನೀಡಿದ ವರದಿಯಲ್ಲಿ 15 ರಿಂದ 34 ವರ್ಷ ವಯಸ್ಸಿನ ಒಟ್ಟು 25,000 ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ ಎಂದು ತಿಳಿಸಿತ್ತು National crime records Bureau [ NCRB] ತನ್ನ ವರದಿಯಲ್ಲಿ 2012 ರಲ್ಲಿ ಸುಮಾರು 8,233 ಮಹಿಳೆಯರು ವರದಕ್ಷಿಣೆ ಗೆ ಬಲಿಯಾಗಿದ್ದಾರೆ ಎಂದು ತಿಳಿಸಿತ್ತು…. ಇನ್ನು ಇದೇ ವರ್ಷ ಗಂಡ ಹಾಗೂ ಆತನ ಮನೆಯವರ ವಿರುದ್ಧ ದಾಖಲಾದ ಕುಟುಂಬ ಕಿರುಕುಳ ಪ್ರಕರಣಗಳು 1,06,527 ಇತ್ತು. [ 2011 ರಲ್ಲಿ ಒಟ್ಟು 99,135 ಪ್ರಕರಣಗಳು ದಾಖಲಾಗಿದ್ದವು ] NCRB 2015 ರಲ್ಲಿ ವರದಕ್ಷಿಣೆ ಬಗ್ಗೆ ಬಿಡುಗಡೆ ಮಾಡಿದ ವರದಿಯಲ್ಲಿ ಸುಮಾರು 7,634 ಮಹಿಳೆಯರು ವರದಕ್ಷಿಣೆಗೆ ಬಲಿಯಾಗಿದ್ದಾರೆ ಎಂದು ಅಂಕಿಅಂಶಗಳನ್ನು ನೀಡಿತ್ತು.. 2017 ರ ಮಾರ್ಚ್ ವರೆಗೆ ಅಂದರೆ ಕೇವಲ ಮೂರು ತಿಂಗಳಲ್ಲಿ ದೆಹಲಿಯೊಂದರಲ್ಲೇ 31 ಮಹಿಳೆಯರು ಸಾವನ್ನಪ್ಪಿದ್ದರು ಎಂದು ಪೊಲೀಸ್ ಆಧಿಕಾರಿಯೊಬ್ಬರು ಹೇಳುತ್ತಾರೆ.. ಅಲ್ಲದೇ ಕಳೆದ 5 ವರ್ಷಗಳಲ್ಲಿ ರಾಜಧಾನಿ ದೆಹಲಿಯೊಂದರಲ್ಲೇ ಒಟ್ಟು 715 ವರದಕ್ಷಿಣೆ ಕೇಸ್ ಗಳು ದಾಖಲಾಗಿವೆ… 2016 ರಲ್ಲಿ ಗಂಡನ ವಿರುದ್ಧ ದಾಖಲಾದ ಕಿರುಕುಳಗಳ ಸಂಖ್ಯೆ 3,887…. ದುರಂತ ಎಂದರೆ ವರದಕ್ಷಿಣೆ ಸೇರಿದಂತೆ ದಾಖಲಾದ ಕಿರುಕುಳ ಕೇಸ್ ಗಳು ಶೇ. 93.7 % ಆದರೆ ಅಪರಾಧಿಗಳಿಗೆ ಶಿಕ್ಷೆಯಾದ ಪ್ರಮಾಣ ಶೇ.34.7 % ರಷ್ಟು ಮಾತ್ರ. ಇದು ನಮ್ಮ ಕಾನೂನು ಮತ್ತು ನ್ಯಾಯಾಂಗದ ಕಾರ್ಯಗತಿಯ ವೇಗವನ್ನು ಬಿಂಬಿಸುತ್ತೆ ಅಲ್ಲವೇ… ಎಲ್ಲ ಆರೋಪಿಗಳಿಗೂ ಶಿಕ್ಷೆಯಾಗಲು ಇನ್ನು ಅದೆಷ್ಟೋ ಹೆಣ್ಣು ಮಕ್ಕಳು ಜೀವ ತೆರಬೇಕೋ ಏನೋ..!
ವರದಕ್ಷಿಣೆ ವಿರುದ್ಧದ ಕಾನೂನುಗಳನ್ನು ನೊಡುತ್ತಾ ಹೋದರೆ ಈ ಪಿಡುಗನ್ನು ಶಾಸನಾತ್ಮಕವಾಗಿ ನಿವಾರಣೆ ಮಾಡಲು ಭಾರತ ಸರ್ಕಾರ 1961 ರಲ್ಲಿ ವರದಕ್ಷಿಣೆ ನಿಷೇಧ ಕಾನೂನನ್ನು ಜಾರಿಗೊಳಿಸಿತು. ಈ ಕಾಯ್ದೆ ಉಲ್ಲಂಘಿಸಿದರೆ 5000 ರೂ ಗಳ ದಂಡ ಇಲ್ಲವೇ 6 ತಿಂಗಳ ಸೆರೆವಾಸ ಇಲ್ಲವೇ ಎರಡನ್ನೂ ಒಟ್ಟಿಗೆ ವಿಧಿಸಬಹುದಾಗಿದೆ.. ಅಲ್ಲದೇ ಈ ಕಾಯ್ದೆಯನ್ನು 1986 ರಲ್ಲಿ ತಿದ್ದುಪಡಿ ಮಾಡಿ ಮತ್ತಷ್ಟು ಕಠಿಣಗೊಳಿಸಲಾಗಿದೆ. ಈ ತಿದ್ದುಪಡಿಯಾದ ಕಾಯ್ದೆ ಪ್ರಕಾರ ವರದಕ್ಷಿಣೆ ಕೊಡುವ ಮತ್ತು ತೆಗೆದುಕೊಳ್ಳುವ ಹಾಗೂ ಕೊಡುವಂತೆ ಒತ್ತಾಯಿಸುವ ವ್ಯಕ್ತಿಗಳಿಗೆ 5 ವರ್ಷಗಳಿಗೂ ಕಡಿಮೆ ಇರದ ಜೈಲು ಶಿಕ್ಷೆ ಮತ್ತು 15000 ರೂ ಗಳಿಗೆ ಕಡಿಮೆ ಇರದ ಹಣವನ್ನು ದಂಡವಾಗಿ ವಿಧಿಸಬಹುದು… ವರದಕ್ಷಿಣೆ ಸಾವು ಪ್ರಕರಣವನ್ನು ಭಾರತ ದಂಡ ಸಂಹಿತೆ [INDIAN PENAL CODE] ಹಾಗೂ ಭಾರತ ಅಪರಾಧ ವಿಚಾರಣಾ ಸಂಹಿತೆಗೆ [ CRIMINAL PROCEDURE CODE] ಸೇರ್ಪಡೆಗೊಳಿಸಲಾಗಿದೆ.ಇವು ಕೇವಲ ಕಾನೂನುಗಳಲ್ಲ. ಆಚರಿಸಿದರೆ ಅಸ್ತ್ರಗಳು.
ಆಧುನಿಕ ಸಮಾಜದಲ್ಲಿ ಬಹುಹಿಂದಿನ ಸಾಮಾಜಿಕ ಸಮಸ್ಯೆಗಳು ಅಂದರೆ ಬಾಲ್ಯ ವಿವಾಹ, ಸತೀ ಸಹಗಮನ, ಮುಂತಾದ ಆಚರಣೆಗಳ ಪ್ರಮಾಣ ಗಣನೀಯವಾಗಿ ಕುಗ್ಗುತ್ತಿದೆ.. ಆದರೆ ವರದಕ್ಷಿಣೆ ಮಾತ್ರ ಇನ್ನು ಅಸ್ತಿತ್ವದಲ್ಲಿರುವುದು, ಅಲ್ಲದೇ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ದುರಂತವೇ ಸರಿ .ಪ್ರಜ್ಞಾವಂತ ಹಾಗೂ ನಾಗರಿಕ ಸಮಾಜ ಕೂಡ ಈ ಪಿಡುಗನ್ನು ಪೋಷಿಸುತ್ತಿರುವುದು ದುರದೃಷ್ಟಕರ. ಎಲ್ಲಿಯವರೆಗೆ ನಾವು ಅದನ್ನು ಪೋಷಿಸುತ್ತಾ ಹೋಗುತ್ತೇಯೋ ಅಲ್ಲಿಯವರೆಗು ಅದು ಬೆಳೆದು ಹೆಮ್ಮರವಾಗಿ ಬಿಡುತ್ತದೆ. ಈ ಸಾಮಾಜಿಕ ಸಮಸ್ಯೆಯನ್ನು ಕೇವಲ ಕಾನೂನು ಮೂಲಕವಲ್ಲದೇ ಜನಜಾಗೃತಿ ಆಧುನಿಕ ಪಚಾರ ಮಾಧ್ಯಮಗಳು,ಸ್ವಯಂ ಸೇವಾ ಸಂಘಟನೆಗಳು ಮತ್ತು ವರದಕ್ಷಿಣೆ ವಿರೋಧಿ ಮಹಿಳಾ ಸಂಘಟನೆಗಳನ್ನು ಪ್ರೋತ್ಸಾಹಿಸುವ ಮೂಲಕ ಈ ವರದಕ್ಷಿಣೆ ಪಿಡುಗನ್ನು ತೊಲಗಿಸಬಹುದು.. ಇನ್ನು ವರದಕ್ಷಿಣೆ ಪಡೆದು ಹೆಚ್ಚಾಗಿರುವುದು ಎಷ್ಟೋ ನಿಜವೋ ಕೊಟ್ಟು ಕೊಟ್ಟು ಹೆಚ್ಚಾಗಿರುವುದು ಅಷ್ಟೇ ನಿಜ. ಹಾಗಾಗಿ ವರದಕ್ಷಿಣೆಯನ್ನು ಕೊಡುವುದನ್ನು ಮೊದಲು ನಿಲ್ಲಿಸಬೇಕು. ಆಗ ಅದಾಗೇ ಈ ವರದಕ್ಷಿಣೆ ಪಿಡುಗು ತೊಲಗುತ್ತದೆ..
ಸುದ್ದಿದಿನ.ಕಾಂ|ವಾಟ್ಸಾಪ್|9986715401